'ರಾಜಕೀಯ ಹತ್ಯೆ' ಆರೋಪಕ್ಕೆ 'ಜಾಹೀರಾತಿ'ನ ಪ್ರತಿಕ್ರಿಯೆ: ಅರುಣ್ ಜೇಟ್ಲಿ ಭೇಟಿಗೆ ಪಿಣರಾಯಿ ವಿಜಯನ್ ಉತ್ತರ
ಸುದ್ದಿ ಸಾರ

'ರಾಜಕೀಯ ಹತ್ಯೆ' ಆರೋಪಕ್ಕೆ 'ಜಾಹೀರಾತಿ'ನ ಪ್ರತಿಕ್ರಿಯೆ: ಅರುಣ್ ಜೇಟ್ಲಿ ಭೇಟಿಗೆ ಪಿಣರಾಯಿ ವಿಜಯನ್ ಉತ್ತರ

ಎಡಪಂಥೀಯ

ಆಲೋಚನೆಯ ಸಿಪಿಐ (ಎಂ) ಆಡಳಿತ ನಡೆಸುತ್ತಿರುವ ಕೇರಳಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿ ನೀಡುವ ಮೂಲಕ ರಾಷ್ಟ್ರಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ.

ಕೇರಳದಲ್ಲಿ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ' ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಎಡ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು. ಅದಕ್ಕೀಗ ರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಭೇಟಿ ಮಹತ್ವದ ತಿರುವು ನೀಡಿದೆ.

ಸ್ವಾತಂತ್ರ್ಯ ನಂತರ, ವಿಶೇಷವಾಗಿ 70ರ ದಶಕದ ನಂತರ ಕೇರಳದಲ್ಲಿ 'ರಾಜಕೀಯ ವೈಷಮ್ಯ'ದ ಹತ್ಯೆಗಳು ಸದ್ದು ಮಾಡಿಕೊಂಡು ಬಂದಿವೆ. ಸದ್ಯ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತವರು ಜಿಲ್ಲೆ ಕಣ್ಣೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ರಾಜಕೀಯ ವಿರೋಧಿಗಳನ್ನು ಮುಗಿಸಲು 'ಹತ್ಯೆ'ಗಳನ್ನು ಅಸ್ತ್ರವಾಗಿ ಬಳಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗಷ್ಟೆ ಕೇರಳ ಸರಕಾರ ಇವುಗಳಿಗೆ ಪೂರ್ಣವಿರಾಮ ಇಡುವ ನಿಟ್ಟಿನಲ್ಲಿ ಸರ್ವ ಪಕ್ಷಗಳ ಸಭೆಯನ್ನು ಕರೆದಿತ್ತು.

ಅದೇ ವೇಳೆಗೆ, ಭಾನುವಾರ ಅರುಣ್ ಜೇಟ್ಲಿ ಕೇರಳ ರಾಜಧಾನಿ ತಿರುವನಂತಪುರಕ್ಕೆ ಭೇಟಿ ನೀಡಿದ್ದಾರೆ. ದಾಳಿಯೊಂದರಲ್ಲಿ ಹತ್ಯೆಗೀಡಾದ ಆರ್ಎಸ್ಎಸ್ ಕಾರ್ಯಕರ್ತನ ಮನೆಯವರಿಗೆ ಸಾಂತ್ವಾನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, "ಇಂತಹ ಹತ್ಯೆಗಳಿಂದ ನಮ್ಮ ಕಾರ್ಯಕರ್ತರನ್ನು ಮಣಿಸಲು ಸಾಧ್ಯವಿಲ್ಲ. ಅವರು ಇನ್ನಷ್ಟು ಗಟ್ಟಿಯಾಗಲಿದ್ದಾರೆ,'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ರಕ್ಷಣಾ ಸಚಿವಾಲಯದ ಹೊಣೆಯನ್ನೂ ಹೊತ್ತುಕೊಂಡಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಕೇರಳಕ್ಕೆ ಭೇಟಿ ನೀಡಿದ ಹೊತ್ತಿನಲ್ಲಿಯೇ ಸಿಪಿಐ (ಎಂ) ಸಂದಸ ಎಂ. ಬಿ. ರಾಜೇಶ್ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಈ ಹಿಂದೆ ರಾಜೇಶ್ 'ರಿಪಬ್ಲಿಕ್ ಟಿವಿ' ಮಾಲೀಕ, ಪತ್ರಕರ್ತ ಅರ್ನಾಬ್ ಗೋಸ್ವಾಮಿಗೆ ಪತ್ರ ಬರೆಯುವ ಮೂಲಕ ಸುದ್ದಿಕೇಂದ್ರಕ್ಕೆ ಬಂದವರು. ಇದೀಗ, ಹಣಕಾಸು ಸಚಿವರಿಗೆ ಪತ್ರ ಬರೆದಿರುವ ಅವರು, "ಕ್ರೈಂ ರೆಕಾರ್ಡ್ ಬ್ಯುರೋ ವರದಿಯ ಪ್ರಕಾರ 2000ದಿಂದ 2017ರ ನಡುವೆ ಕೇರಳದಲ್ಲಿ 86 ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ರಾಜಕೀಯ ವಿರೋಧಿಗಳಿಂದ ಹತ್ಯೆಗೆ ಈಡಾಗಿದ್ದಾರೆ. ಅದೇ ವೇಳೆಯಲ್ಲಿ 65 ಆರ್ಎಸ್ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಕೊಲೆಗೀಡಾಗಿದ್ದಾರೆ. ಈ ಅಂಕಿ ಅಂಶಗಳು ಕೇರಳದಲ್ಲಿ ಏಕಮುಖವಾಗಿ ರಾಜಕೀಯ ಹತ್ಯೆಗಳು ನಡೆಯುತ್ತಿಲ್ಲ ಎಂಬುದನ್ನು ಎತ್ತಿ ತೋರಿಸುತ್ತಿವೆ. ಮೋದಿಜಿ ಗುಜರಾತ್ ಅಥವಾ ಯೋಗಿಜಿ ಉತ್ತರ ಪ್ರದೇಶ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಅತಿ ಹೆಚ್ಚು ಆರ್ಎಸ್ಎಸ್ ಶಾಖೆಗಳು ಕೆಲಸ ಮಾಡುತ್ತಿವೆ. ಇದು ನಮ್ಮಲ್ಲಿ ಸೈದ್ಧಾಂತಿಕ ವಿರೋಧದ ಆಚೆಗೂ ಪ್ರಜಾಪ್ರಭುತ್ವದ ಇವುದಕ್ಕೆ ಸಾಕ್ಷಿ,'' ಎಂದು ಉಲ್ಲೇಖಿಸಿದ್ದಾರೆ. ಇದರ ಜತೆಗೆ, ಕೇರಳ ಸರಕಾರ ಮುಂದಾಗಿರುವ 'ಶಾಂತಿ ಮಾತುಕತೆ'ಗೆ ಸಹಕರಿಸುವಂತೆ ರಾಜೇಶ್ ಮನವಿ ಮಾಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಸುದ್ದಿ ವಾಹಿನಿಯೊಂದು ಕೇರಳವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡುವ ಮೂಲಕ ಭಾರಿ ವಿರೋಧಕ್ಕೆ ಕಾರಣವಾಗಿದೆ. ಕೊನೆಗೆ, ಷರತ್ತುರಹಿತ ಕ್ಷಮಾಪಣೆಯನ್ನೂ ಕೇಳಿದೆ. ಹೀಗೆ, ಕೇರಳದ ರಾಜಕೀಯ ಹತ್ಯೆಯ ಸುತ್ತ ರಾಜಕೀಯ ನಡೆಯುತ್ತಿರುವಾಗಲೇ ಸೋಮವಾರದ ದಿಲ್ಲಿ 'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯ ಆವೃತ್ತಿಯಲ್ಲಿ ಕೇರಳ ಸರಕಾರ ಒಂದು ಪೇಜ್ ಜಾಹೀರಾತು ನೀಡಿದೆ. 'ಕೇರಳ ಯಾಕೆ ನಂ. 1 ರಾಜ್ಯ?' ಎಂಬ ಶೀರ್ಷಿಕೆ ಹೊಂದಿರವ ಜಾಹೀರಾತಿನಲ್ಲಿ, ಕೇರಳ ಹೊಂದಿರುವ ಅಭಿವೃದ್ಧಿಯನ್ನು ಬಿಂಬಿಸುವ ಮಾಹಿತಿ ನೀಡಲಾಗಿದೆ.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮುಂದಿನ ಲೋಕಸಭಾ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ದಕ್ಷಿಣ ಭಾರತದ ಪುಟ್ಟ ರಾಜ್ಯ ಕೇರಳದಲ್ಲಿ ಅಸ್ತಿತ್ವದ ಹುಡುಕಾಟದಲ್ಲಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಅಭಿವೃದ್ಧಿಯ ವಿಚಾರ ಚುನಾವಣೆಯ ಅಸ್ತ್ರವಾಗುವ ಸಾಧ್ಯತೆ ಇಲ್ಲ. ಹೀಗಾಗಿ, ಇಲ್ಲಿ ನಡೆಯುವ ರಾಜಕೀಯ ಹತ್ಯೆಗಳ ಅಸ್ತ್ರಗಳನ್ನು ರಾಷ್ಟಮಟ್ಟದಲ್ಲಿ ಪ್ರಯೋಗಿಸುವ ಕಾರ್ಯತಂತ್ರವನ್ನು ಅನುಸರಿಸಲು ಬಿಜೆಪಿ ತಯಾರಾದಂತಿದೆ. ಕಳೆದ ಕೆಲವು ದಿನಗಳ ಬಿಜೆಪಿ ರಾಷ್ಟ್ರ ನಾಯಕರ ಭೇಟಿ, ಹೇಳಿಕೆಗಳು ಇದನ್ನು ಸ್ಪಷ್ಟಪಡಿಸುತ್ತಿವೆ. ಇದಕ್ಕೆ ಕೇರಳ ತನ್ನ ಅಭಿವೃದ್ಧಿಯ ಅಜೆಂಡಾದ ಮೂಲಕವೇ ಉತ್ತರ ನೀಡಲು ಮುಂದಾಗಿದೆ. ಅದು ಸೋಮವಾರ ನೀಡಿದ ಜಾಹೀರಾತಿನ ರೂಪದಲ್ಲಿ ಎದ್ದು ಕಾಣಿಸುತ್ತಿದೆ. ಮಂಗಳವಾರ ಸಂಸತ್ನಲ್ಲಿ ಅಧಿವೇಶನ ಪುನರಾರಂಭವಾಗಲಿದೆ. ಅಲ್ಲಿಯೂ ಕೂಡ ಕೇರಳದ ಈ ರಾಜಕೀಯ ಹತ್ಯೆಗಳು ಪ್ರತಿಧ್ವನಿಸುವ ಸಾಧ್ಯತೆಗಳಿವೆ.