samachara
www.samachara.com
ಭಾಷಾ ಸಮಾನತೆಯ ಹೋರಾಟದ ಸ್ವರೂಪ ಪಡೆದುಕೊಳ್ಳಲಿರುವ 'ಹಿಂದಿ ವಿರೋಧಿ' ಅಭಿಯಾನ
ಸುದ್ದಿ ಸಾರ

ಭಾಷಾ ಸಮಾನತೆಯ ಹೋರಾಟದ ಸ್ವರೂಪ ಪಡೆದುಕೊಳ್ಳಲಿರುವ 'ಹಿಂದಿ ವಿರೋಧಿ' ಅಭಿಯಾನ

'ನಮ್ಮ ಮೆಟ್ರೊ'

ದಲ್ಲಿ ಹಿಂದಿ ಬೇಡ ಎಂದು ಆರಂಭವಾದ ಹೋರಾಟ ಈ ದೇಶಾದ್ಯಂತ ಭಾಷಾ ಸಮಾನತೆಯ ಹೋರಾಟದ ರೂಪವನ್ನು ಪಡೆದುಕೊಳ್ಳುವ ಹಾದಿಯಲ್ಲಿದೆ.

ಇದೇ ಶನಿವಾರ, ಜುಲೈ 15ರಂದು ಬೆಂಗಳೂರಿನ ಸಿಟಾಡೆಲ್ ಹೋಟೆಲ್‌ನಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಭಾಷಾ ಸಮಾನತೆಗಾಗಿ ಹೋರಾಡುತ್ತಿರುವ ನಾನಾ ರಾಜ್ಯಗಳ ಸಂಘಟನೆಗಳ ಪ್ರತಿನಿಧಿಗಳ 'ದುಂಡು ಮೇಜಿ'ನ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಆಯೋಜನೆ ಮಾಡುತ್ತಿದೆ. "ರಾಜಧಾನಿ ಬೆಂಗಳೂರಿನಲ್ಲಿ ನಗರ ಸಾರಿಗೆಯ ಉದ್ದೇಶಕ್ಕಾಗಿ ಆರಂಭವಾಗಿರುವ ನಮ್ಮ ಮೆಟ್ರೋ ನಾಮ ಫಲಕಗಳು, ಸೂಚನಾ ಫಲಕಗಳು, ಪ್ರಕಟಣೆಗಳಲ್ಲಿ ಹಿಂದಿ ಭಾಷೆಯನ್ನು ಬಳಸುವುದರ ವಿರುದ್ಧ ಆರಂಭಿಸಿದ ಕನ್ನಡಿಗರ ಆಂದೋಲನ ಈಗ ನಿರ್ಣಾಯಕ ಹಂತ ತಲುಪಿದೆ. 'ಮಾಡು ಇಲ್ಲವೇ ಮಡಿ' ಎನ್ನುವಂಥ ಸ್ಥಿತಿಯಲ್ಲಿ ನಾವು ಬಂದು ನಿಂತಿದ್ದೇವೆ,'' ಎನ್ನುತ್ತಾರೆ ವೇದಿಕೆಯ ಅಧ್ಯಕ್ಷ ಟಿ. ಎ. ನಾರಾಯಣ ಗೌಡ.

ಹಿಂದಿಯನ್ನು ಕೇಂದ್ರ ಸರಕಾರ ವ್ಯವಸ್ಥಿತವಾಗಿ ಇತರೆ ಭಾಷೆಗಳ ಮೇಲೆ ಹೇರುವ ಪ್ರಯತ್ನವನ್ನು ಮಾಡುತ್ತಿರುವುದು ಸಹಜ ಆಕ್ರೋಶವನ್ನು ಹುಟ್ಟುಹಾಕಿದೆ. ಬೆಂಗಳೂರಿನಲ್ಲಿ ಮೆಟ್ರೊ ನಿಲ್ದಾಣಗಳ ಫಲಕಗಳಲ್ಲಿ ಹಿಂದಿ ಕಾಣಿಸಿಕೊಂಡ ನಂತರ ಭಾಷೆಗಳಿಗೆ ನೀಡುವ ಪ್ರಾಮುಖ್ಯತೆಯ ಕುರಿತು ಚರ್ಚೆಯೊಂದು ಹುಟ್ಟಿಕೊಂಡಿತು. ಜನರ ಅನುಕೂಲಕ್ಕೇ ಆದರೆ, ಬೆಂಗಳೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವಾಸಿಸುವ ತಮಿಳು, ತೆಲಗು ಮಾತನಾಡುವ ಜನರ ಭಾಷೆಯನ್ನು ಫಲಕಗಳಲ್ಲಿ ಹಾಕಬೇಕಿದೆ. ಆದರೆ ಹಿಂದಿಯನ್ನು ಹಾಕುವ ಮೂಲಕ ಪರೋಕ್ಷವಾಗಿ ಹಿಂದಿಯನ್ನು ಹೇರುವ ಕೆಲಸವಾಗುತ್ತಿದೆ ಎಂಬುದು ಒಟ್ಟಾರೆ ಚರ್ಚೆಯ ಸಾರಾಂಶ.

ಹೀಗೆ, ಆರಂಭವಾದ ಹೋರಾಟವನ್ನು ಈಗ ಭಾಷಾ ಸಮಾನತೆಗಾಗಿ, ಹಿಂದಿ ಹೇರಿಕೆಯನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಹೋರಾಟಗಳನ್ನು ಒಂದು ಸೂರಿನ ಅಡಿಯಲ್ಲಿ ತರುವ ಪ್ರಯತ್ನಕ್ಕೆ ನಾಂದಿ ಹಾಡಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಅಳವಡಿಸಲಾಗಿರುವ 22 ಭಾಷೆಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ದೊಡ್ಡ ದನಿಯಲ್ಲಿ ಕೇಳಿ ಬರಲಾರಂಭಿಸಿದೆ.

"ಸಂವಿಧಾನದ 343 ರಿಂದ 351ರವರೆಗಿನ ಪರಿಚ್ಛೇದಗಳು ದೇಶದ ಭಾಷಾ ಬಹುತ್ವದ ವಿರೋಧಿಯಾಗಿದ್ದು, ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮರಣಶಾಸನದಂತಿದೆ. ಹಿಂದಿಯೇತರ ಪ್ರದೇಶಗಳ ಮೇಲೆ ಹಿಂದಿಯನ್ನು ಬಲವಂತವಾಗಿ ಹೇರಲು ಈ ಪರಿಚ್ಛೇದಗಳು ಸುಲಭವಾಗಿ ಅವಕಾಶ ಮಾಡಿಕೊಟ್ಟಿದ್ದು, ಕೇಂದ್ರ ಸರ್ಕಾರ ನೂರಾರು ಕೋಟಿ ರುಪಾಯಿಗಳನ್ನು ಖರ್ಚು ಮಾಡಿ ಎಲ್ಲ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸುತ್ತಿದೆ. ಮೊದಲು ಕೇಂದ್ರ ಸರ್ಕಾರ ತನ್ನ ಇಲಾಖೆಗಳಲ್ಲಿ ಅಧಿಕೃತ ಭಾಷೆಗಳ ಕಾಯ್ದೆಯನ್ನು ಅಳವಡಿಸಿ, ಪ್ರಾದೇಶಿಕ ಭಾಷೆಗಳನ್ನು ಬಗ್ಗುಬಡಿಯುತ್ತಿತ್ತು, ಈಗ ರಾಜ್ಯ ಸರ್ಕಾರದ ಉದ್ಯಮಗಳು, ಇಲಾಖೆಗಳಿಗೂ ಕೇಂದ್ರ ಸರ್ಕಾರ ಹಿಂದಿ ಹೇರಿಕೆಯನ್ನು ಹರಡುತ್ತಾ ಬರುತ್ತಿದೆ. ಅದಕ್ಕೆ ಸ್ಪಷ್ಟ ಉದಾಹರಣೆಯೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ನಡೆಯುತ್ತಿರುವ ಹಿಂದಿ ಹೇರಿಕೆ,'' ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆಯ ಎಸ್‌. ಸಿ. ದಿನೇಶ್ ಕುಮಾರ್.

ರಾಜಕೀಯ ಪರಿಣಾಮಗಳು: 

ಈಗಾಗಲೇ ಕರ್ನಾಟಕ ರಕ್ಷಣಾ ವೇದಿಕೆ ಪ್ರಾದೇಶಿಕ ಭಾಷಾ ರಾಜ್ಯಗಳ ಮುಖಂಡರಿಗೆ ಪತ್ರ ಬರೆದಿದೆ. ಪಶ್ಚಿಮ ಬಂಗಾಲ, ಕೇರಳ, ತಮಿಳುನಾಡು, ಒರಿಸ್ಸಾ, ಆಂಧ್ರ, ತೆಲಂಗಾಣ, ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಭಾಷಾ ಚಳವಳಿಗಳು-ರಾಜಕೀಯ ಸಂಘಟನೆಗಳ ಮುಖ್ಯಸ್ಥರುಗಳಾದ ಸ್ಟಾಲಿನ್, ರಾಜ್ ಠಾಕ್ರೆ, ಉದ್ಧವ್ ಠಾಕ್ರೆ ಮತ್ತಿತರಿಗೆ ಪತ್ರ ಬರೆಯಲಾಗಿದೆ. ರಾಜ್‌ ಠಾಕ್ರೆ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಕೂಡ.

ಬೆಳಗಾವಿ ವಿಚಾರದಲ್ಲಿ ರಾಜ್‌ ಠಾಕ್ರೆ ಆಲೋಚನೆಯ ವಿರುದ್ಧ ಹಾಗೂ ಕಾವೇರಿ ವಿಚಾರ ಬಂದಾಗ ತಮಿಳುನಾಡಿನ ವಿರುದ್ಧ ಹೋರಾಟ ಮಾಡುತ್ತಿದ್ದ ಕನ್ನಡ ಸಂಘಟನೆ  ಹಿಂದಿ ವಿರೋಧಿ ಹೋರಾಟದ ನೆಲೆಯಲ್ಲಿ ಒಂದಾಗುವ ಅಪೂರ್ವ ಅವಕಾಶವೊಂದನ್ನು ಸೃಷ್ಟಿಸುತ್ತಿರುವುದು ಗಮನಾರ್ಹ. ಜತೆಗೆ, ಈ ಬೆಳವಣಿಗೆಯ ರಾಜಕೀಯ ಪರಿಣಾಮಗಳ ಬಗ್ಗೆಯೂ ಪ್ರಶ್ನೆಗಳು ಹುಟ್ಟುತ್ತಿವೆ. "ಸದ್ಯ ನಮಗೆ ಕನ್ನಡವೇ ರಾಜಕೀಯ. ಅದರಾಚೆಗೆ ಸದ್ಯಕ್ಕೆ ಯಾವ ಆಲೋಚನೆಗಳೂ ಇಲ್ಲ. ಹಿಂದಿ ವಿರೋಧಿ ಹೋರಾಟ ಹಾಗೂ ಕೆಲವು ಕಾಯ್ದೆಗಳಿಗೆ ತಿದ್ದುಪಡಿ ತರಲು ದೊಡ್ಡ ಮಟ್ಟದ ಹೋರಾಟ ನಡೆಯಬೇಕು. ಇದಕ್ಕೆ ಮುಖ್ಯಮಂತ್ರಿ ಮಟ್ಟದ ನಾಯಕರೊಬ್ಬರ ಮುಂದಾಳತ್ವದ ಅಗತ್ಯವೂ ಇದೆ. ಆದರೆ ಆ ಸ್ಥಾನವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂದಿ ವಿರೋಧಿ ಹೋರಾಟವನ್ನು ಮುನ್ನಡೆಸಬಲ್ಲರು ಎಂದು ಸದ್ಯಕ್ಕೆ ಅನ್ನಿಸುತ್ತಿದೆ,'' ಎನ್ನುತ್ತಾರೆ ದಿನೇಶ್ ಕುಮಾರ್.

ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ, ಹಿಂದಿ ಫಲಕಗಳ ವಿರೋಧಿಸಿ ಮೆಟ್ರೊ ನಿಗಮದ ವಿರುದ್ಧ ಹುಟ್ಟಿಕೊಂಡ ಹೋರಾಟ ದೇಶಾದ್ಯಂತ ಭಾಷಾ ಸಮಾನತೆಯ ವಿಚಾರದಲ್ಲಿ ತಿರುವು ಪಡೆದುಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ವಾರಾಂತ್ಯದಲ್ಲಿ ನಡೆಯಲಿರುವ ದುಂಡು ಮೇಜಿನ ಸಭೆಯ ಬೆಳವಣಿಗೆಗಳು ಗಮನ ಸೆಳೆಯುತ್ತಿವೆ.