ವೈದ್ಯರಲ್ಲದವರ ಜತೆ ಮದ್ಯ ಸೇವನೆ ಬೇಡ: ವೈದ್ಯರಿಗೆ ವಿಚಿತ್ರ ಸಲಹೆ ನೀಡಿದ 'ಐಎಂಎ ಪಾಲಿಸಿ'!
ಸುದ್ದಿ ಸಾರ

ವೈದ್ಯರಲ್ಲದವರ ಜತೆ ಮದ್ಯ ಸೇವನೆ ಬೇಡ: ವೈದ್ಯರಿಗೆ ವಿಚಿತ್ರ ಸಲಹೆ ನೀಡಿದ 'ಐಎಂಎ ಪಾಲಿಸಿ'!

ಕರ್ನಾಟಕದಲ್ಲಿ

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣಕ್ಕೆ ತಿದ್ದುಪಡಿ ಮಸೂದೆ ಸಂಬಂಧ ಚರ್ಚೆಗಳು ನಡೆಯುತ್ತಿರುವ ಹೊತ್ತಿಗೇ, ಭಾರತೀಯ ವೈದ್ಯಕೀಯ ಮಹಾ ಸಂಘ (ಐಎಂಎ) ತನ್ನ ಪದಾಧಿಕಾರಿಗಳಿಗೆ ಮದ್ಯ ಸೇವನೆ ಕುರಿತು ವಿಚಿತ್ರ ಎನ್ನಿಸುವಂತಹ ಸಲಹೆಯೊಂದನ್ನು ನೀಡಿದೆ.

ಐಎಂಎ ಅಡಿಯಲ್ಲಿ ಬರುವ ವೈದ್ಯರು, ವೈದ್ಯಕೀಯ ಸೇವೆ ಸಲ್ಲಿಸದೇ ಇರುವ ಹೊರಗಿನವರ ಜತೆಗೆ ಮದ್ಯ ಸೇವನೆ ಮಾಡಬಾರದು ಎಂದು ಸಂಘ ಸಲಹೆ ನೀಡಿದೆ. 'ಆರೋಗ್ಯದ ರಾಯಭಾರಿ'ಗಳಾಗಿ ಎಂಬ ಘೋಷಣೆ ಅಡಿಯಲ್ಲಿ ವೈದ್ಯಕೀಯ ಮಹಾ ಸಂಘ ಪ್ರಕಟಿಸಿರುವ ಈ ತೀರ್ಮಾನವು ಸ್ವತಃ ವೈದ್ಯರಿಗೇ ತಮಾಷೆಯಾಗಿ ಕಾಣಿಸುತ್ತಿದೆ.

"ವೈದ್ಯಕೀಯ ಮಹಾ ಸಂಘ ವೈದ್ಯರಿಗೆ ಕ್ರೀಯಾಶೀಲವಾಗಿ ಸಲಹೆಗಳನ್ನು ನೀಡಲು ಹಲವು ವಿಚಾರಗಳಿವೆ. ಅದೆನ್ನೆಲ್ಲಾ ಬಿಟ್ಟು ಮದ್ಯ ಸೇವನೆ ವಿಚಾರದಲ್ಲಿ ನಿರ್ಬಂಧ ವಿಧಿಸಲು ಹೊರಟಿರುವುದು ತಮಾಷೆಯಾಗಿ ಕಾಣಿಸುತ್ತಿದೆ. ನಾನಂತೂ ಇದನ್ನು ಪಾಲನೆ ಮಾಡಲು ಸಾಧ್ಯವಿಲ್ಲ,'' ಎನ್ನುತ್ತಾರೆ ಬೆಂಗಳೂರು ಮೆಡಿಕಲ್‌ ಕಾಲೇಜಿನ ವೈದ್ಯರೊಬ್ಬರು. ವಿಚಾರದ ಸೂಕ್ಷ್ಮತೆ ಕಾರಣಕ್ಕೆ ತಮ್ಮನ್ನು ತಾವು ಅನಾಮಧೇಯರಾಗಿ ಗುರುತಿಸಿಕೊಳ್ಳಲು ಬಯಸಿದ ಅವರು, "ಮದ್ಯ ಸೇವನೆ ಮಾಡುವುದು ಬಿಡುವುದು ಪ್ರತಿಯೊಬ್ಬರ ವೈಯಕ್ತಿಕ ವಿಚಾರ. ಖಾಸಗಿ ವಿಚಾರಗಳ ಮೇಲೆ ಹೇರಿಕೆ ಮಾಡಲು ಬಂದರೆ ಮನುಷ್ಯರು ಸಹಜವಾಗಿಯೇ ಅದರ ವಿರುದ್ಧ ನಡೆಯನ್ನು ಅನುಸರಿಸುತ್ತಾರೆ,'' ಎಂದರು.

ಏನಿದು ಸಲಹೆ?: 

ವೈದ್ಯಕೀಯ ಮಹಾ ಸಂಘ ದೇಶದ ಖಾಸಗಿ ಹಾಗೂ ಸರಕಾರಿ ವೈದ್ಯರುಗಳನ್ನು ಸದಸ್ಯರನ್ನಾಗಿ ಹೊಂದಿರುವ ದೊಡ್ಡ ಸಂಸ್ಥೆ. ಇದರ ಅಡಿಯಲ್ಲಿ ಬರುವ ಸದಸ್ಯರಿಗೆ ಸಂಘದ ಕಡೆಯಿಂದ ಇತ್ತೀಚೆಗೆ 'ಆಲ್ಕೋಹಾಲ್ ಪಾಲಿಸಿ' ಹೆಸರಿನಲ್ಲಿ ಕೆಲವು ಸಲಹೆಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾಗಿ, ವೈದ್ಯರುಗಳು ವೈದ್ಯರಲ್ಲದವರ ಜತೆ ಮದ್ಯ ಸೇವನೆಯಲ್ಲಿ ಪಾಲ್ಗೊಳ್ಳಬಾರದು ಎಂದು ಹೇಳಿದೆ. ಜತೆಗೆ, ಮಹಿಳಾ ವೈದ್ಯರಾದರೆ 9 ಮಿಲಿ ಲೀಟರ್, ಪುರುಷ ವೈದ್ಯರಾದರೆ 18 ಮಿಲಿ ಲೀಟರ್ ಮದ್ಯ ಸೇವನೆ ಮಾಡಬಹುದು ಎಂದು ತಿಳಿಸಿದೆ. ಇದಕ್ಕಿಂತ ಹೆಚ್ಚು ಮದ್ಯ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಾನಿಯಾಗುತ್ತದೆ," ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಜುಲೈ 1 (ವೈದ್ಯರ ದಿನಾಚರಣೆ) ಹಾಗೂ ಸೆ. 5 (ಶಿಕ್ಷಕರ) ದಿನಾಚರಣೆಗಳನ್ನು ಮದ್ಯಪಾನ ರಹಿತ ದಿನ (ಡ್ರೈ ಡೇ)ಗಳಾಗಿ ಆಚರಿಸಬೇಕು ಎಂದು ಸಂಘ ಹೇಳಿದೆ.

ಸಂಘದ ಹೊಸ ಮದ್ಯಪಾನ ನಿಯಮಾವಳಿಗಳ ಪ್ರಕಾರ, ವೈದ್ಯರ ಸಭೆಗಳಲ್ಲಿ ಮದ್ಯಪಾನವನ್ನು ನಿಷೇಧಿಸಿದೆ. ಇದರ ಜತೆಗೆ, ಎಲ್ಲಾ ವೈದ್ಯರಿಗೆ ಚಿಕಿತ್ಸೆ ನಂತರ ತಮ್ಮ ರೋಗಿಗಳಿಗೆ 'ಧನ್ಯವಾದ' ಹೇಳುವಂತೆ ಕರೆ ನೀಡಿದೆ. ಇತ್ತೀಚಿನ ಅಧ್ಯಯನದ ಪ್ರಕಾರ ಶೇ. 40ರಷ್ಟು ರೋಗಿಗಳು ವೈದ್ಯರಿಂದ ಧನ್ಯವಾದಗಳನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಇದಕ್ಕೆ ಆಧಾರವಾಗಿ ನೀಡಲಾಗಿದೆ.

"ವೈದ್ಯರು ಬೋಧನೆ ಮಾಡುವುದು ಮಾತ್ರವಲ್ಲ; ಅದನ್ನು ಕಾರ್ಯರೂಪಕ್ಕೂ ತರಬೇಕು. ರೋಗಿಗಳು ತಮ್ಮ ವೈದ್ಯರನ್ನು ನಂಬಬೇಕು. ಹೀಗಾಗಿ ಮದ್ಯಪಾನದಂತಹ ಚಟಗಳು ವೈದ್ಯರ ಘನತೆಗೆ ಚ್ಯುತಿ ತರುತ್ತವೆ,'' ಎಂದು ಸಂಘದ ಅಧ್ಯಕ್ಷ ಡಾ. ಕೆ. ಕೆ. ಅಗರ್‌ವಾಲ್ ಹೇಳಿದ್ದಾರೆ.

ಈ ಹಿಂದೆ ವೈದ್ಯಕೀಯ ಮಹಾ ಸಂಘ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರು ತಮ್ಮ ರೋಗಿಗಳ ಜತೆ ಸ್ನೇಹಿತರಾಗುವುದರ ಮೇಲೆ ನಿರ್ಬಂಧ ಹೇರಿತ್ತು ಎಂಬುದನ್ನು ಗಮನಿಸಬೇಕಿದೆ.

ರೋಗಿ- ವೈದ್ಯರ ಸಂಬಂಧ: 

ಹಲವು ಕಾರಣಗಳಿಗಾಗಿ ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಆಗಾಗ್ಗೆ ಸುದ್ದಿ ಕೇಂದ್ರಕ್ಕೆ ಬರುತ್ತಲೇ ಇರುತ್ತದೆ. ರೋಗಿಗಳ ಕಡೆಯಿಂದ ವೈದ್ಯರ ಮೇಲೆ ಹಲ್ಲೆಗಳಾಗುವ ಘಟನೆಗಳು ಆಗಾಗ್ಗೆ ವರದಿಯಾಗುತ್ತವೆ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸುವುದರ ವಿರುದ್ಧ ಪ್ರಬಲ ಕಾನೂನು ಜಾರಿಗೆ ಬಂದಿದ್ದರೂ ಇಂತಹ ಘಟನೆಗಳು ನಡೆಯುತ್ತಲೇ ಇವೆ. ಹೀಗಿರುವಾಗಲೇ ಕರ್ನಾಟಕ ಸರಕಾರ 'ವೈದ್ಯಕೀಯ ಸಂಸ್ಥೆಗಳ ಕಾಯ್ದೆ'ಗೆ ತಿದ್ದುಪಡಿ ತರಲು ಮುಂದಾಗಿತ್ತು. ಇದರಲ್ಲಿ ವೈದ್ಯರು ಮತ್ತು ರೋಗಿಗಳು ಹೊಂದಿರುವ ಹಕ್ಕು ಮತ್ತು ಕರ್ತವ್ಯಗಳನ್ನು ನಿರೂಪಿಸಲಾಗಿತ್ತು. ಇದನ್ನು ಖಾಸಗಿ ವೈದ್ಯರು ಸಂಘದ ಅಡಿಯಲ್ಲಿ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಸೂದೆ ಚರ್ಚೆಯಲ್ಲಿದೆ. ಹೀಗಿರುವಾಗಲೇ 'ಆಲ್ಕೋಹಾಲ್‌ ಪಾಲಿಸಿ' ಹೆಸರಿನಲ್ಲಿ ವೈದ್ಯಕೀಯ ಮಹಾ ಸಂಘ ವೈದ್ಯರಲ್ಲದವರ ಜತೆ ವೈದ್ಯರುಗಳು ಮದ್ಯ ಸೇವನೆಯನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದೆ.