ಅಸಾಂಜೆ ಮೇಲಿನ ರೇಪ್ ಕೇಸ್ ಕೈ ಬಿಟ್ಟ ಸ್ವೀಡನ್; ಬ್ರಿಟನ್ ಕೈಯಲ್ಲಿ ವಿಕಿಲೀಕ್ಸ್ ಸಂಸ್ಥಾಪಕನ ಭವಿಷ್ಯ
ಸುದ್ದಿ ಸಾರ

ಅಸಾಂಜೆ ಮೇಲಿನ ರೇಪ್ ಕೇಸ್ ಕೈ ಬಿಟ್ಟ ಸ್ವೀಡನ್; ಬ್ರಿಟನ್ ಕೈಯಲ್ಲಿ ವಿಕಿಲೀಕ್ಸ್ ಸಂಸ್ಥಾಪಕನ ಭವಿಷ್ಯ

ಶುಕ್ರವಾರ ಸ್ವೀಡನ್ ಸರ್ಕಾರಿ ಅಭಿಯೋಜಕರು ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯನ್ ಅಸಾಂಜೆ ಮೇಲಿನ ಅತ್ಯಾಚಾರ ಪ್ರಕರಣವನ್ನು ಕೈಬಿಟ್ಟಿದ್ದಾರೆ. ಈ ಮೂಲಕ ಅಸಾಂಜೆ ಮತ್ತು ಸ್ವೀಡನ್ ಮಧ್ಯೆ ಕಳೆದ 7 ವರ್ಷಗಳಿಂದ ನಡೆಯುತ್ತಿದ್ದ ಕಳ್ಳ ಪೊಲೀಸ್ ಆಟಕ್ಕೆ ಅಂತಿಮ ವಿದಾಯ ಹೇಳಲಾಗಿದೆ.

ಹೀಗಿದ್ದೂ ಈಕ್ವೆಡಾರ್ ರಾಯಭಾರಿ ಕಚೇರಿಯನ್ನು ಜೂಲಿಯನ್ ಅಸಾಂಜೆ ತೊರೆದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಬ್ರಿಟೀಷ್ ಪೊಲೀಸರು ಹೇಳಿದ್ದಾರೆ. 2012ರಿಂದ ಲಂಡನಿನಲ್ಲಿರುವ ಈಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಅವರು ಅಸಾಂಜೆ ಆಶ್ರಯ ಪಡೆದಿದ್ದಾರೆ.

45 ವರ್ಷದ ಅಸಾಂಜೆ 2012ರಲ್ಲಿ ಈಕ್ವೆಡಾರ್ ರಾಯಭಾರಿ ಕಚೇರಿ ಹೊಕ್ಕಿದ್ದರು. ಇನ್ನೇನು ಅತ್ಯಾಚಾರ ಪ್ರಕರಣದಲ್ಲಿ ಸ್ವೀಡನ್ ಗೆ ಗಡಿಪಾರಾಗಲಿದ್ದೇನೆ ಎಂಬ ಭಯದಲ್ಲಿ ಅವರು ಈಕ್ವೆಡಾರ್ ದೂತಾವಾಸ ಕಚೇರಿಯ ಆಶ್ರಯ ಪಡೆದುಕೊಂಡಿದ್ದರು. ಅದಾಗಲೇ ಸ್ವೀಡನಿನಲ್ಲಿ ಅವರು ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ಆರಂಭವಾಗಿತ್ತು. ಇನ್ನೊಂದು ಕಡೆ ಸ್ವೀಡನ್ ಅಸಾಂಜೆಯನ್ನು ಅಮೆರಿಕಾ ಕೈಗೆ ಹಸ್ತಾಂತರಿಸುವ ಸಾಧ್ಯತೆಯೂ ಇತ್ತು. ಅಮೆರಿಕಾದ ಸೇನೆ ಮತ್ತು ರಾಜತಾಂತ್ರಿಕ ಮಾಹಿತಿಗಳನ್ನು 'ವಿಕಿಲೀಕ್ಸ್' ವೆಬ್ಸೈಟಿನಲ್ಲಿ ಪ್ರಕಟಿಸಿದಕ್ಕೆ ಅಮೆರಿಕಾ ಅಸಾಂಜೆಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿತ್ತು.

ಹೀಗೆ ಬ್ರಿಟನ್, ಅಮೆರಿಕಾ, ಸ್ವೀಡನ್ ನಂಥ ಘಟಾನುಘಟಿ ದೇಶಗಳನ್ನು ಎದುರು ಹಾಕಿಕೊಂಡು ಅಸಾಂಜೆಗೆ ಆಶ್ರಯ ನೀಡಿತ್ತು ಪುಟ್ಟ ರಾಷ್ಟ್ರ ಈಕ್ವೆಡಾರ್. ಹಾಗೆ ನೋಡಿದರೆ ಅಸಾಂಜೆ ಭಾರತದ ಆಶ್ರಯವನ್ನೂ ಕೋರಿದ್ದರು; ಆದರೆ ಭಾರತ ಆಶ್ರಯ ನಿರಾಕರಿಸಿತ್ತು.ಹೀಗೆ ಹಲವು ದೇಶಗಳನ್ನು ಒಳಗೊಂಡ ಅಸಾಂಜೆಯ ಸಂಕೀರ್ಣ ಪ್ರಕರಣ ಜಗತ್ತಿನಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದೇ ಒಂದು ದೀರ್ಘ ಕತೆ.

ಇದೀಗ, "ಈ ಪ್ರಕರಣದ ತನಿಖೆಯನ್ನು ಕೈ ಬಿಡಲಾಗಿದೆ," ಎಂದು ಸ್ವೀಡನ್ ಪಬ್ಲಿಕ್ ಪ್ರಾಸಿಕ್ಯೂಷನ್ ನಿರ್ದೇಶಕಿ ಮೆರಿಯಾನ್ ಹೇಳಿದ್ದಾರೆ. "ಪ್ರಕರಣದಲ್ಲಿ ಮುಂದುವರಿಯಬೇಕಾದರೆ ಅಧಿಕೃತವಾಗಿ ಜೂಲಿಯನ್ ಅಸಾಂಜೆಗೆ ಕ್ರಿಮಿನಲ್ ಆರೋಪದ ವಿಚಾರಣೆಯ ಮಾಹಿತಿಗಳನ್ನೆಲ್ಲಾ ನೀಡಬೇಕಾಗುತ್ತದೆ. ಆದರೆ ಇದಕ್ಕೆಲ್ಲಾ ಈಕ್ವೆಡಾರ್ ಸಹಕರಿಸುತ್ತದೆ ಎನ್ನುವ ನಂಬಿಕೆ ಇಲ್ಲ," ಎಂದು ಮೆರಿಯಾನ್ ಹೇಳಿದ್ದಾರೆ.

ಪ್ರಮುಖ ಜಯ

ಸ್ವೀಡನ್ ಅತ್ಯಾಚಾರ ಆರೋಪ ಕೈ ಬಿಡುತ್ತಿದ್ದಂತೆ ಈಕ್ವೆಡಾರ್ ರಾಯಭಾರ ಕಚೇರಿಯ ಬಾಲ್ಕನಿ ಮೇಲೆ ಪ್ರತ್ಯಕ್ಷರಾದ ಅಸಾಂಜೆ, "ಇವತ್ತು ಪ್ರಮುಖ ಜಯ ಸಿಕ್ಕಿದೆ; ಇದು ನನಗೆ ಮಾತ್ರವಲ್ಲ ವಿಶ್ವಸಂಸ್ಥೆಯ ಮಾನವ ಹಕ್ಕುಗಳಿಗೂ ಸಿಕ್ಕಿದ ಜಯ," ಎಂದು ಬಣ್ಣಿಸಿದ್ದಾರೆ.ಕಿಕ್ಕಿರಿದು ತುಂಬಿದ್ದ ವರದಿಗಾರರು ಹಾಗೂ ಭಿತ್ತಿಪತ್ರಗಳನ್ನು ಹಿಡಿದಿದ್ದ ಅವರ ಅಭಿಮಾನಿಗಳನ್ನುದ್ದೇಶಿ ಮಾತನಾಡಿದ ಅಸಾಂಜೆ, "ದಾರಿ ಇನ್ನೂ ದೂರವಿದೆ. ಯುದ್ಧ, ನಿಜವಾದ ಯುದ್ಧ ಈಗಷ್ಟೇ ಆರಂಭವಾಗಿದೆ," ಎಂದು ಹೇಳಿದ್ದಾರೆ. ಮಾತ್ರವಲ್ಲ ವಿಕಿಲೀಕ್ಸ್ ಸರಕಾರದ ಪಾರದರ್ಶಕತೆ ಹಾಗೂ ಡಿಜಿಟಲ್ ಹಕ್ಕುಗಳಿಗಾಗಿ ಮುಂದೆಯೂ ಹೋರಾಡಲಿದೆ ಎಂಬ ಭರವಸೆ ನೀಡಿದ್ದಾರೆ.

ಇನ್ನು "ಅಸಾಂಜೆ ದುಃಸ್ವಪ್ನ ಕೊನೆಯಾಯಿತು," ಎಂದು ಅವರ ವಕೀಲರು ಸ್ವೀಡನ್ನಿನ ತೀರ್ಮಾನವನ್ನು ಸ್ವಾಗತಿಸಿದ್ದಾರೆ.ಇದಾದ ಬೆನ್ನಿಗೆ ಟ್ವಿಟ್ಟರಿನಲ್ಲಿ ಪ್ರತ್ಯಕ್ಷರಾದ ಅಸಾಂಜೆ ತಮ್ಮದೇ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಆದರೆ ಯಾವುದೇ ಕಮೆಂಟ್ ಹಾಕಿಲ್ಲ.

ಇನ್ನೂ ಬಂಧಿಸುತ್ತೇವೆ

ಅಸಾಂಜೆ ಮೇಲಿನ ಆರೋಪಗಳನ್ನು ಕೈ ಬಿಟ್ಟ ಹೊರತಾಗಿಯೂ ಈಕ್ವೆಡಾರ್ ರಾಯಭಾರ ಕಚೇರಿಯಿಂದ ಹೊರಗೆ ಕಾಲಿಟ್ಟಲ್ಲಿ ಅವರನ್ನು ಬಂಧಿಸುವುದಾಗಿ ಬ್ರಿಟನ್ ಪೊಲೀಸರು ಹೇಳಿದ್ದಾರೆ. ಸ್ವೀಡನಿಗೆ ಗಡಿಪಾರು ಮಾಡುವ ಪ್ರಕರಣದಲ್ಲಿ 2012ರ ಜೂನ್ 29ರಂದು ಅಸಾಂಜೆಗೆ ಜಾಮೀನು ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಅವರು ಈ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ," ಎಂದು ಇಂಗ್ಲೆಂಡ್ ಪೊಲೀಸರು ಬಂಧನಕ್ಕೆ ಕಾರಣ ನೀಡಿದ್ದಾರೆ.

"ಈಗ ಪರಿಸ್ಥಿತಿ ಪೂರ್ತಿ ಬದಲಾಗಿದೆ. ಸ್ವೀಡನ್ ಸರಕಾರ ತನ್ನ ತನಿಖೆಯನ್ನು ಮೊಟಕುಗಳಿಸಿದೆ. ಆದರೆ ಸಣ್ಣ ಪುಟ್ಟ ಅಪರಾಧಗಳಿಗೆ ಇನ್ನೂ ಅಸಾಂಜೆ ನಮಗೆ ಬೇಕಾಗಿದ್ದಾರೆ," ಎಂದು ಬ್ರಿಟನ್ ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ ತನ್ನ ವಕೀಲರು ಬ್ರಿಟೀಷ್ ಇಲಾಕೆಗಳ ಜತೆ ಮಾತುಕತೆಗೆ ಕಳುಹಿಸಿರುವ ಅಸಾಂಜೆ, ತಮ್ಮ ಭವಿಷ್ಯದ ದೃಷ್ಟಿಯಿಂದ ಮಾತುಕತೆಗಳನ್ನು ಆರಂಭಿಸುವಂತೆ ತಿಳಿಸಿದ್ದಾರೆ..

ಇನ್ನು ಪ್ರಕರಣದ ಕುರಿತು ಟ್ವೀಟ್ ಮಾಡಿರುವ ವಿಕಿಲೀಕ್ಸ್, "ಅಸಾಂಜೆ ಹಸ್ತಾಂತರಕ್ಕೆ ಅಮೆರಿಕಾದಿಂದ ಯಾವುದಾದರೂ ವಾರಂಟ್ ಬಂದಿದೆಯಾ ಎಂಬ ಪ್ರಶ್ನೆಗೆ ಬ್ರಿಟನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಚೆಂಡು ಬ್ರಿಟನ್ ಅಂಗಳದಲ್ಲಿದೆ," ಎಂದು ಹೇಳಿದೆ.

ಅಸಾಂಜೆ ಮೇಲಿನ ರೇಪ್ ಕೇಸ್ ಕೈ ಬಿಟ್ಟ ಸ್ವೀಡನ್; ಬ್ರಿಟನ್ ಕೈಯಲ್ಲಿ ವಿಕಿಲೀಕ್ಸ್ ಸಂಸ್ಥಾಪಕನ ಭವಿಷ್ಯ

'ಇದೊಂದು ಹಗರಣ'

ಸ್ವೀಡನ್ ಅಸಾಂಜೆ ವಿರುದ್ಧದ ಅತ್ಯಾಚಾರ ಪ್ರಕರಣ ಕೈ ಬಿಡುತ್ತಿದ್ದಂತೆ ಸಂತ್ರಸ್ತೆ ಎನ್ನಲಾದ ಮಹಿಳೆ ಇದೊಂದು ದೊಡ್ಡ ಹಗರಣ ಎಂದು ಕಿಡಿಕಾರಿದ್ದಾರೆ.

ಆಗಸ್ಟ್ 2010ರಲ್ಲಿ ಈ ಪ್ರಕರಣ ದಾಖಲಾಗಿತ್ತು. ದೂರು ನೀಡಿದ ಮಹಿಳೆಯು ಕೆಲವು ದಿನಗಳ ಹಿಂದೆ ನಾನು ಸ್ವೀಡನ್ ರಾಜಧಾನಿ ಸ್ಟಾಕ್ ಹೋಮ್ ನಲ್ಲಿ ನಡೆದ ವಿಕಿಲೀಕ್ಸ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದೆ. ಅಲ್ಲಿ ನಾನು ಅಸಾಂಜೆಯನ್ನು ಭೇಟಿಯಾದೆ ಎಂದಿದ್ದರು. ಇದೀಗ ಇದೇ ಮಹಿಳೆ, ಸ್ವೀಡನ್ ಸಂಸ್ಥೆಗಳು ಪ್ರಕರಣ ಕೈ ಬಿಡುತ್ತಿರುವುದನ್ನು ಕೇಳಿ ಆಘಾತವಾಗಿದೆ ಎಂದಿದ್ದಾರೆ. "ಅತ್ಯಚಾರಿ ಆರೋಪಿ ಕೋರ್ಟ್ ನಿಂದ ತಪ್ಪಿಸಿಕೊಂಡು ನ್ಯಾಯದಿಂದಲೇ ಪರಾರಿಯಾಗುತ್ತಾನೆ ಎಂದರೆ ಇದೊಂದು ಹಗರಣ. ಪ್ರಕರಣವನ್ನು ಕೈ ಬಿಟ್ಟರೂ ಅಸಾಂಜೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನುವುದನ್ನು ಬದಲಾಯಿಸಲು ಸಾಧ್ಯವಿಲ್ಲ," ಎಂದು ಸಂತ್ರಸ್ತೆಯ ವಕೀಲರು ಹೇಳಿದ್ದಾರೆ.

ಆದರೆ ಈ ಪ್ರಕರಣವನ್ನು ಅಸಾಂಜೆ ಆರಂಭದಿಂದಲೂ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ನಾನು ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಇಬ್ಬರ ನಡುವೆ ನಡೆದಿದ್ದು ಸಮ್ಮತಿಯ ಸೆಕ್ಸ್. ಈ ಪ್ರಕರಣ 'ರಾಜಕೀಯ ಪ್ರೇರಿ,' ಎಂದು ಅಸಾಂಜೆ ವಾದಿಸುತ್ತಲೇ ಬಂದಿದ್ದಾರೆ.

ಹಲವು ತಿರುವುಗಳನ್ನು ದಾಟಿ ಬಂದ ಪ್ರಕರಣ

ಅಸಾಂಜೆಯ ಅತ್ಯಾಚಾರ ಪ್ರಕರಣ 2010ರಿಂದ ಹಲವು ತಿರುವುಗಳನ್ನು ಪಡದುಕೊಳ್ಳುತ್ತಾ ಇಲ್ಲಿಯವರೆಗೆ ನಡೆದು ಬಂದಿದೆ. ಇತ್ತೀಚೆಗಷ್ಟೇ ಅಮೆರಿಕಾದ ಅಟಾರ್ನಿ ಜನರಲ್ ಅಸಾಂಜೆಯನ್ನು ಬಂಧಿಸುವುದು 'ತಮ್ಮ ಮೊದಲ ಆದ್ಯತೆ' ಎಂದಿದ್ದರು. ಇದಾದ ಬೆನ್ನಿಗೆ ಸ್ವೀಡನಿನ ಅಸಾಂಜೆ ವಕೀಲರು ಅವರ ಮೇಲಿನ ಬಂಧನ ವಾರಂಟ್ ವಾಪಸ್ ಪಡೆಯಬೇಕು ಎಂದು ನ್ಯಾಯಾಲಯವನ್ನು ಕೋರಿದ್ದರು. ಆದರೆ ಅದು ಜಾರಿಗೆ ಬಂದಿರಲಿಲ್ಲ.

ಇನ್ನು 2016ರ ನವೆಂಬರ್ ನಲ್ಲಿ ಈಕ್ವೆಡಾರ್ ರಾಯಭಾರ ಕಚೇರಿಯ ಒಳಗೇ ಒಮ್ಮೆ ಸ್ವೀಡನ್ ಅಧಿಕಾರಿಗಳು ವಿಕಿಲೀಕ್ ಸಂಸ್ಥಾಪಕರನ್ನು ವಿಚಾರಣೆಗೆ ಒಳಪಡಿಸಿದ್ದರು. ಇದಾಗಿ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ದೂರಿ ಸ್ವೀಡನ್ ಸರಕಾರಕ್ಕೆ ಕಳೆದ ಮೇ 8ರಂದು ಈಕ್ವೆಡಾರ್ ಸರಕಾರ ಪತ್ರ ಬರೆದಿತ್ತು.

ಹೀಗೆ ಹಲವು ಮಜಲುಗಳನ್ನು ದಾಟಿ ಬಂದ ಅಸಾಂಜೆಯ ಮೆಗಾ ಅತ್ಯಾಚಾರ ಪ್ರಕರಣವನ್ನು ತಾಂತ್ರಿಕ ಕಾರಣಗಳಿಗಾಗಿ ಸ್ವೀಡನ್ ಶುಕ್ರವಾರ ಕೈಬಿಟ್ಟಿದೆ. ಇದೀಗ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯು, ಅಸಾಂಜೆಯನ್ನು ಬ್ರಿಟನ್ ಮತ್ತು ಸ್ವೀಡನ್ ನಿರಂಕುಶವಾಗಿ ವಶಕ್ಕೆ ಪಡೆದುಕೊಂಡಿದ್ದಕ್ಕೆ, ಅವರ ಬಳಿ ಅಸಾಂಜೆ ಪರಿಹಾರ ಕೋರಬಹುದು ಎಂದು ಹೇಳಿದೆ. ಆದರೆ ಈ ವರದಿಯನ್ನು ಸ್ವೀಡನ್ ಮತ್ತು ಬ್ರಿಟನ್ ಎರಡೂ ತಳ್ಳಿ ಹಾಕಿವೆ.


       ಚಿತ್ರ: ಎಪಿ
ಚಿತ್ರ: ಎಪಿ

ಆಸ್ಟ್ರೇಲಿಯಾ ಮೂಲದವರಾದ ಅಸಾಂಜೆಗೆ ಈಕ್ವೆಡಾರ್ ತನ್ನ ಲಂಡನ್ ರಾಯಭಾರ ಕಚೇರಿಯಲ್ಲಿ ಆಶ್ರಯ ನೀಡಿತ್ತು. ರಾಯಭಾರ ಕಚೇರಿ ಆಯಾ ರಾಷ್ಟ್ರದ ಸಾರ್ವಭೌಮ ಪ್ರದೇಶವಾದ್ದರಿಂದ ನ್ಯಾಯಾಂಗದ ಕೈಯಿಂದ ತಪ್ಪಿಸಿಕೊಳ್ಳುವುದು ಅಸಾಂಜೆಗೆ ಸಾಧ್ಯವಾಗಿತ್ತು. ಹೀಗೆ ರಾಯಭಾರ ಕಚೇರಿಯ ಪರೋಕ್ಷ ಗೃಹ ಬಂಧನದಲ್ಲೇ ಅಸಾಂಜೆ ಕಳೆದ 5 ವರ್ಷಗಳನ್ನು ಕಳೆದಿದ್ದಾರೆ.

ಇದೀಗ ಅವರ ಮೇಲಿನ ಹಳೆ ಪ್ರಕರಣ ರದ್ದಾಗಿದೆ

. ಇನ್ನೊಂದು ಕಡೆ ಬ್ರಿಟನ್ ಅಸಾಂಜೆ ಬಂಧನಕ್ಕೆ ಕಾದು ಕುಳಿತಿದ್ದರೆ, ಅವರ ವಕೀಲರು ಅಲ್ಲಿನ ಸರಕಾರಿ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ಈ ಸಮಾಲೋಚನೆಯ ಯಶಸ್ಸಿನ ಮೇಲೆ ಅಸಾಂಜೆಯ ಭವಿಷ್ಯ ನಿಂತಿದೆ.

ಕೃಪೆ: ಅಲ್ ಜಝೀರಾ

ಚಿತ್ರ ಕೃಪೆ: ಜೂಲಿಯನ್ ಅಸಾಂಜೆ (ಟ್ವಿಟ್ಟರ್)

ಚೆಲ್ಸಿಯಾ ಮ್ಯಾನಿಂಗ್ ಬಿಡುಗಡೆ

ಇದೇ ವೇಳೆ ವಿಕಿಲೀಕ್ಸ್ ಗೆ ಅಮೆರಿಕಾ ಸೇನೆಯ ಕಂಡು ಕೇಳರಿಯದ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ತೃತೀಯ ಲಿಂಗಿ ಚೆಲ್ಸಿಯಾ ಮ್ಯಾನಿಂಗ್ ಜೈಲಿನಿಂದ  ಬಿಡುಗಡೆಯಾಗಿದ್ದಾರೆ. ಅಮೆರಿಕಾ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಚೆಲ್ಸಿಯಾ 7 ವರ್ಷಗಳ ಸಜೆಯ ನಂತರ ಬಿಡುಗಡೆಯಾಗಿದ್ದಾರೆ.

Read More: