ಏಕಕಾಲಕ್ಕೆ ಮುನ್ನೂರು 'ಶೆಲ್ ಕಂಪನಿ'ಗಳ ಮೇಲೆ ಮುಗಿ ಬಿದ್ದ ಜಾರಿ ನಿರ್ದೇಶನಾಲಯ
ಸುದ್ದಿ ಸಾರ

ಏಕಕಾಲಕ್ಕೆ ಮುನ್ನೂರು 'ಶೆಲ್ ಕಂಪನಿ'ಗಳ ಮೇಲೆ ಮುಗಿ ಬಿದ್ದ ಜಾರಿ ನಿರ್ದೇಶನಾಲಯ

ದೇಶದಲ್ಲಿ

ಅನಾಣ್ಯೀಕರಣದ ನಂತರ ಹುರುಪಿನಿಂದ ಅಖಾಡಕ್ಕೆ ಇಳಿದಿರುವ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ದೇಶದ 16 ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿಗಳನ್ನು ಸಂಘಟಿಸುವ ಮೂಲಕ ಅಚ್ಚರಿ ಮೂಡಿಸಿದೆ.

ನಾನಾ ರಾಜ್ಯಗಳ ಸುಮಾರು 300 'ಶೆಲ್ ಕಂಪನಿ'ಗಳ ಮೇಲೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಕಾನೂನು ಬಾಹಿರ ಹಣದ ವಹಿವಾಟಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ದಿಲ್ಲಿ, ಮುಂಬೈ, ಚೆನ್ನೈ, ಹೃದ್ರಾಬಾದ್ ಸೇರಿದಂತೆ ಸುಮಾರು 100 ಕಡೆಗಳಲ್ಲಿ ಈ ದಾಳಿಗಳು ನಡೆದಿವೆ.

ಅನಾಣ್ಯೀಕರಣ ಘೋಷಣೆಗೊಂಡ ನಂತರ ದೇಶದ ಆರ್ಥಿಕ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳಾಗುತ್ತಿವೆ. ಅಕ್ರಮವಾಗಿ ನಡೆಯುತ್ತಿರುವ ಹಣದ ವಹಿವಾಟುಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ದಾಳಿಗಳು ನಡೆಯುತ್ತಿದೆ. ಕಳೆದ ತಿಂಗಳು ದಿಲ್ಲಿಯಲ್ಲಿ ನಡೆದ ದಾಳಿ ವೇಳೆ ಕಪ್ಪು ಹಣವನ್ನು ಚಲಾವಣೆಗೆ ತರಲಾಗುತ್ತಿದ್ದ 'ಶೆಲ್ ಕಂಪನಿ'ಯ ಮಾಲೀಕರನ್ನು ಬಂಧಿಸಲಾಗಿತ್ತು. ಇತ್ತೀಚೆಗಷ್ಟೆ ಕೇಂದ್ರ ಸರಕಾರ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ 'ಕಾಳ ಸಂತೆ' ನಡೆಸುವ ಕಂಪನಿಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿತ್ತು.

ದೇಶದಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಕಂಪನಿಗಳ ನೋಂದಣಿಯಾಗಿವೆ. ಇದರಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಸಲ್ಲಿಸುತ್ತಿದ್ದ ಕಂಪನಿಗಳ ಸಂಖ್ಯೆ ಕೇವಲ 6 ಲಕ್ಷ ಎಂದು ಅಂಕಿ ಅಂಶಗಳು ಹೇಳುತ್ತವೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿರುವ, ಕೇವಲ ಕಾಗದದ ಮೇಲಷ್ಟೆ ಇರುವ ಕಂಪನಿಗಳು ಕಪ್ಪು ಹಣದ ವಹಿವಾಟು ನಡೆಸುತ್ತಿವೆ ಎಂಬ ಅನುಮಾನ ಇತ್ತು. ಇಂತಹ ನಕಲಿ ಕಂಪನಿಗಳು ತಮ್ಮ ಶೇರುಗಳ ಖರೀದಿಯ ಮೂಲಕವೂ ಕಪ್ಪು ಹಣವನ್ನು ಚಲಾವಣೆಗೆ ಅನುಕೂಲ ಮಾಡಿಕೊಡುತ್ತಿದ್ದವು.

ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಇಂತಹ ಕಂಪನಿಗಳ ಹೆಸರಿನಲ್ಲಿ ಸುಮಾರು 1, 238 ಕೋಟಿ ರೂಪಾಯಿ ಹೂಡಿಕೆ ನಡೆದಿತ್ತು. ಗಂಭೀರ ಅವ್ಯವಹಾರಗಳ ತನಿಖಾ ಸಂಸ್ಥೆ ಕೂಡ 49 ಶೆಲ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಜತೆಗೆ, ಬೇನಾಮಿ ವ್ಯವಹಾರ (ತಡೆ) ಕಾಯ್ದೆಯನ್ನು ಜಾರಿಗೆ ತರಲಾಗಿತ್ತು.

ಇದೀಗ ಏಕಕಾಲದಲ್ಲಿ 300 ಕಂಪನಿಗಳ ಮೇಲೆ ಇಡಿ ದಾಳಿ ನಡೆಸುವ ಮೂಲಕ ದೊಡ್ಡ ಮಟ್ಟದಲ್ಲಿ ಅಕ್ರಮ ಹಣದ ವಹಿವಾಟಿಗೆ ಕಡಿವಾಣ ಹಾಕಲು ಮುಂದಾಗಿರುವ ಸೂಚನೆ ಸಿಕ್ಕಿದೆ.

ಶೆಲ್ ಕಂಪನಿಗಳು ಎಂದರೆ?: 

'ಶೆಲ್ ಕಂಪನಿ'ಗಳು ಯಾವುದೇ ವ್ಯವಹಾರ ನಡೆಸದಿದ್ದರೂ ಕಾಗದಲ್ಲಿ ಮಾತ್ರವೇ ಅಸ್ಥಿತ್ವವನ್ನು ಕಾಯ್ದುಕೊಂಡಿರುತ್ತವೆ. ಅವು ಇನ್ನೊಂದು ಕಂಪನಿಗೆ ಪೂರಕವಾಗಿ ಲೆಕ್ಕಪತ್ರವನ್ನು ಸಲ್ಲಿಸಲು ನೋಂದಣಿಯಾಗಿರುತ್ತವೆ. ಇಂತಹ ಕಂಪನಿಗಳು ಸ್ಟಾಕ್‌ ಎಕ್ಸ್‌ಚೇಂಜ್‌ಗಳ ಪಟ್ಟಿಯಲ್ಲಿರುತ್ತವೆ. ಇವುಗಳ ಶೇರುಗಳನ್ನು ಕೊಳ್ಳುವ ಮತ್ತು ಮಾರುವ ಕೆಲಸ ನಡೆಯುತ್ತಿರುತ್ತದೆಯಾದರೂ ವಾಸ್ತವದಲ್ಲಿ ಕಂಪನಿಗಳು ಯಾವುದೇ ವಹಿವಾಟು ಮಾಡುತ್ತಿರುವುದಿಲ್ಲ. ದೊಡ್ಡ ಮಟ್ಟದಲ್ಲಿ ಕಪ್ಪು ಹಣವನ್ನು ಚಲಾವಣೆಗೆ ತರಲು ಇವು ನೆರವು ನೀಡುತ್ತಿರುತ್ತವೆ.

ನಕಲಿ ದಾಖಲೆಗಳನ್ನು ನೀಡಿ ಬ್ಯಾಂಕುಗಳಿಂದ ಸಾಲ ಪಡೆಯುವುದು, ಕಪ್ಪುಹಣದ ವಹಿವಾಟು ನಡೆಸುವುದು, ತೆರಿಗೆಯಿಂದ ತಪ್ಪಿಸಿಕೊಳ್ಳಲು ನಕಲಿ ಸೇವೆಗಳನ್ನು ನೀಡುವುದಾಗಿ ಘೋಷಿಸುವುದು ಇವುಗಳ ಗುಣಲಕ್ಷಣಗಳು.

ಇಡಿ ಕುರಿತು:

ಇಂತಹ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳುವ ಜಾರಿ ನಿರ್ದೇಶನಾಲಯ (ಇಡಿ) ಬಗ್ಗೆ ಕುತೂಹಲಕಾರಿ ಮಾಹಿತಿ ಇಲ್ಲಿದೆ: