ಕಾತುರ ಹೆಚ್ಚಿಸಿದ 'ಪಂಚ ರಾಜ್ಯ' ಫಲಿತಾಂಶ: ಕೊನೆಯ ಕ್ಷಣದ ರಾಜಕೀಯ ವಿಶ್ಲೇಷಣೆಗಳು
ಸುದ್ದಿ ಸಾರ

ಕಾತುರ ಹೆಚ್ಚಿಸಿದ 'ಪಂಚ ರಾಜ್ಯ' ಫಲಿತಾಂಶ: ಕೊನೆಯ ಕ್ಷಣದ ರಾಜಕೀಯ ವಿಶ್ಲೇಷಣೆಗಳು

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ.

ಸರಿಯಾಗಿ ಇನ್ನು ಆರು ದಿನಗಳಲ್ಲಿ ಅಂದರೆ ಮಾರ್ಚ್ 11ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಇಂದು ಉತ್ತರ ಪ್ರದೇಶದಲ್ಲಿ 6ನೇ ಹಂತದ ಹಾಗೂ ಮಣಿಪುರದಲ್ಲಿ ಮೊದಲ ಹಂತದ ಮತದಾನಗಳು ನಡೆಯುತ್ತಿವೆ. ಮಾರ್ಚ್ 8ರಂದು ಉತ್ತರ ಪ್ರದೇಶ ಮತ್ತು ಮಣಿಪುರದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ.

ಶನಿವಾರ ಮತದಾನ ನಡೆಯುತ್ತಿರುವ 49 ಕ್ಷೇತ್ರಗಳಲ್ಲಿ ಆಡಳಿತರೂಢ ಸಮಾಜವಾದಿ ಪಕ್ಷ ಅಂತಹ ಹಿಡಿತವನ್ನೇನೂ ಹೊಂದಿಲ್ಲ. 2012ರಲ್ಲಿ ಇದೇ 49 ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷ 27 ಸ್ಥಾನಗಳನ್ನು ಗೆದ್ದಿತ್ತಾದರೂ ಮುಸ್ಲಿಂ ಬಾಹುಳ್ಯದ ಈ ಪ್ರದೇಶಗಳಲ್ಲಿ ಬಹುಜನ ಸಮಾಜವಾದಿ ಪಕ್ಷ ಸರಿಯಾಗಿ ಪೈಪೋಟಿ ನೀಡಿತ್ತು. ಹಾಗಾಗಿ ಇಲ್ಲಿ ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿಯ ಮಧ್ಯೆ ವಿಶೇಷವಾದ ಸ್ಪರ್ಧೆ ಇದೆ. ಇನ್ನು ಕಳೆದ ಬಾರಿ ಇಲ್ಲಿ ಬಿಎಸ್ಪಿ 9, ಬಿಜೆಪಿ 7 ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಎರಡು ಕ್ಷೇತ್ರ ಅನ್ಯರ ಪಾಲಾಗಿತ್ತು. ಈ 49 ಕ್ಷೇತ್ರಗಳ ಬಗ್ಗೆಯೂ ಬಿಜೆಪಿ ಅಂತಹ ನಿರೀಕ್ಷೆಯನ್ನು ಇಟ್ಟುಕೊಂಡಂತೆ ಕಾಣಿಸುತ್ತಿಲ್ಲ.

ಆದರೆ ಕೊನೆಯ ಹಂತದ ಮತದಾನ ವಿಶೇಷವಾಗಿ ಬಿಜೆಪಿ ಪಾಲಿಗೆ ನಿರ್ಣಾಯಕವಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯೂ ಕ್ಷೇತ್ರವೂ ಬರುತ್ತದೆ. ಇದೇ ವಾರಣಾಸಿಯಲ್ಲಿ ನರೇಂದ್ರ ಮೋದಿ ರೋಡ್ ಶೋ ನಡೆಸಿದರು. ಇಲ್ಲಿನ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ''ಮಾರ್ಚ್ 11 ರಂದು ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷಗಳಿಗೆ ಎಲೆಕ್ಟ್ರಿಕ್ ಶಾಕ್ ಹೊಡೆಯಲಿದೆ,'' ಎಂದಿದ್ದಾರೆ.

ಪ್ರಧಾನಿ ಹೇಳಿಕೆ ನಿಜವೇ ಆದರೆ?

ಹಲವು ಕಾರಣಗಳಿಗಾಗಿ ಪಂಚ ರಾಜ್ಯ ಚುನಾವಣೆ ಫಲಿತಾಂಶಗಳು ಮುಖ್ಯವಾಗಿವೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಧೂಳೆಬ್ಬಿಸಿದ ಅನಾಣ್ಯೀಕರಣದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಜತೆಗೆ ದೇಶದ ರಾಜಕೀಯದಲ್ಲಿ ‘ಕಿಂಗ್ ಮೇಕರ್’ ಸ್ಥಾನವನ್ನು ನಿರಂತರವಾಗಿ ನಿಭಾಯಿಸುತ್ತಾ ಬಂದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವುದು ಸಹಜ ಕುತೂಹಲ ಹುಟ್ಟಿಸಿದೆ.

ಒಂದೊಮ್ಮೆ ಕಾಂಗ್ರೆಸ್-ಸಮಜವಾದಿ ಮೈತ್ರಿಕೂಟವನ್ನು ಹಿಮ್ಮೆಟ್ಟಿಸಿ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಏರಿದ್ದೇ ಆದಲ್ಲಿ ಅದು ಪ್ರಮುಖವಾಗಿ ಎರಡು ಸಂದೇಶಗಳನ್ನು ನೀಡಲಿದೆ. ಮೊದಲನೆಯದಾಗಿ ಸ್ಥಳೀಯ ಪಕ್ಷಗಳು ವಿರೋಧ ಪಕ್ಷದ ಪಾತ್ರವನ್ನು ಇನ್ನು ಮುಂದೆ ನಿರ್ವಹಿಸುವುದು ಕಷ್ಟವಾಗಬಹುದು. ಇಲ್ಲೀವರೆಗೆ ಕೇಂದ್ರ ಸರಕಾರವನ್ನು ತಕ್ಕಮಟ್ಟಿಗೆ ಅಲ್ಲಾಡಿಸುತ್ತಿದ್ದವರು ಎಐಎಡಿಎಂಕಯ ಜಯಲಲಿತಾ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಮಮತಾ ಬ್ಯಾನರ್ಜಿ. ಸದ್ಯ ಜಯಾ ಉಳಿದಿಲ್ಲ. ಜಯಾ ಸಾವಿನ ಬಳಿಕ ಎಐಎಡಿಎಂಕೆಯನ್ನು ಒಡೆದ ಮನೆ ಮಾಡುವಲ್ಲಿ ಬಿಜೆಪಿ ಪರೋಕ್ಷವಾಗಿ ಸಫಲವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಮಾಜವಾದಿ ಪಕ್ಷದ ಸೀಟೂ ಖಾಲಿಯಾಗುತ್ತದೆ. ಇನ್ನು ಉಳಿದಿದ್ದು ಮಮತಾ ಮಾತ್ರ.

ಎರಡನೆಯದಾಗಿ ಕಾಂಗ್ರೆಸ್ ಗೆ ಪರ್ಯಾಯವಾಗಿ ರಾಷ್ಟ್ರೀಯ ಪಕ್ಷವೊಂದು ಉದ್ಭವಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಜನ ನಿಧಾನವಾಗಿ ಆ ಸಾಧ್ಯತೆಗಳನ್ನು ಎಎಪಿಯಲ್ಲಿ ಕಾಣುತ್ತಿದ್ದಾರೆ. ಪಂಜಾಬ್ ಗೆಲುವಿನೊಂದಿಗೆ ದೆಹಲಿಯ ಹೊರಗೆ ರಾಜಕೀಯ ಅಧಿಕಾರ ಪಡೆಯುವ, ಅತ್ತ ಗೋವಾದಲ್ಲೂ ಒಂದಷ್ಟು ಕ್ಷೇತ್ರಗಳನ್ನು ಗೆದ್ದು ರಾಷ್ಟ್ರೀಯ ಪಕ್ಷವಾಗುವ ಹವಣಿಕೆಯಲ್ಲಿದೆ ಎಎಪಿ. ಈಗಾಗಲೇ ‘ನಮ್ಮ ಮುಂದಿನ ಗುರಿ ಗುಜರಾತ್’ ಎಂದು ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ನರೇಂದ್ರ ಮೋದಿಯ ತವರು ನೆಲದಲ್ಲೇ ಅವರಿಗೆ ಹೊಡೆತ ನೀಡಲು ಕೇಜ್ರಿವಾಲ್ ಹೊರಟಂತೆ ಕಾಣಿಸುತ್ತಿದೆ. ಅವರ ಉತ್ಸಾಹ ನೋಡಿದರೆ ಪಂಜಾಬ್ ಎಎಪಿಯ ಕೈವಶವಾಗುವ ಸೂಚನೆಗಳು ಕಾಣಿಸುತ್ತಿವೆ.

ಕೂತಲ್ಲಿ ನಿಂತಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾರ್ವಜನಿಕವಾಗಿ ಅಬ್ಬರಿಸಿವ ಅರವಿಂದ್ ಕೇಜ್ರಿವಾಲ್ ವಿರೋಧ ಪಕ್ಷದ ಪಾತ್ರವನ್ನು ನಿಭಾಯಿಸುತ್ತಾರಾ? ಮಾರ್ಚ್ 11ರ ಫಲಿತಾಂಶ ನಿರ್ಧರಿಸಲಿದೆ.

ಇವುಗಳ ಜತೆಗೆ, ಯಾವ ಸಮೀಕ್ಷೆಗಳು ಗಮನಿಸದ ಕೆಲವು ಅಂಶಗಳನ್ನು ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಮಾಧ್ಯಮಗಳು ಎತ್ತಿ ಹಿಡಿಯುತ್ತಿವೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿಗೆ ಇರುವ 'ಮತದಾರರು' ಮುಖ್ಯವಾಹಿನಿಯಲ್ಲಿ ಅಬ್ಬರಿಸದಿದ್ದರೂ, ತಣ್ಣನೆ ಪಕ್ಷದ ಜತೆಗಿದ್ದಾರೆ ಎಂದು ಅವು ಹೇಳುತ್ತಿವೆ. ಈಗಾಗಲೇ ದಲಿತರು ಮತ್ತು ಮುಸ್ಲಿಂ ಮತ ಬ್ಯಾಂಕ್‌ಗಳ ಸಂಕರಣದ ಮೂಲಕ ರಾಜಕೀಯ ತಂತ್ರ ಹೆಣೆದಿರುವ ಮಾಯಾವತಿ ಗೆದ್ದು ಬಂದರೆ ದೇಶದ ಭವಿಷ್ಯ ಚುನಾವಣೆಯ ಕೆಮಿಸ್ಟ್ರಿಯೇ ಬದಲಾಗುವ ಸಾಧ್ಯತೆಗಳಿವೆ. ಸೋತರೂ ಕೂಡ, ಕೆಳವರ್ಗಗಳ ರಾಜಕೀಯ ತಂತ್ರಗಾರಿಕೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಪ್ರೇರಣೆ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂತಹ ಹಲವು ಕಾರಣಗಳಿಗಾಗಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಕಾತರದಿಂದ ಕಾಯುವಂತೆ ಮಾಡಿದೆ.

ಡಬ್ಬಿಂಗ್ ವಿರೋಧಿ ಬಂದ್:

ಇವೆಲ್ಲದರ ಮಧ್ಯೆ ಮಾರ್ಚ್ 11ರಂದು ಕರ್ನಾಟಕದಾದ್ಯಂತ ಡಬ್ಬಿಂಗ್ ವಿರೋಧಿಸಿ ತೀವ್ರ ಬಂದ್ ನಡೆಸಲು ಮತ್ತದೇ ಸಾ.ರಾ ಗೋವಿಂದು, ವಾಟಾಳ್ ನಾಗರಾಜ್ ಮತ್ತವರ ತಂಡ ಸಿದ್ಧವಾಗಿದೆ. ಮಾರ್ಚ್ 11 ಶನಿವಾರವಾಗಿರುವುದರಿಂದ ಕರ್ನಾಟಕ ಬಂದ್ ಗೆ ಕರೆ ನೀಡುವ ಸಾಧ್ಯತೆಗಳಿವೆ. ಇಡೀ ದೇಶವೇ ಕಾದುಕುಳಿತಿರುವ ಮಾರ್ಚ್ 11 ಫಲಿತಾಂಶದ ರೋಚಕೆಯ ಮಧ್ಯೆ ಡಬ್ಬಿಂಗ್ ವಿರೋಧಿ ಜನರನ್ನು ಸೆಳೆಯುತ್ತಾ ನೋಡಬೇಕು. ಎಲ್ಲದಿಕ್ಕಿಂತ ಮುಖ್ಯವಾಗಿ ಜನಕ್ಕೆ ಡಬ್ಬಿಂಗ್ ಬೇಡ ಎಂದೆನಿಸಿದರೆ ಮಾತ್ರ.