'ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ': ಐಟಿ ದಿಗ್ಗಜ ಕಂಪನಿಯೊಳಗಿನ 8 ಬೆಳವಣಿಗೆಗಳು
ಸುದ್ದಿ ಸಾರ

'ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ': ಐಟಿ ದಿಗ್ಗಜ ಕಂಪನಿಯೊಳಗಿನ 8 ಬೆಳವಣಿಗೆಗಳು

ದೇಶದ

ಐಟಿ ಕ್ಷೇತ್ರದ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗೆ ಎಲ್ಲವೂ ಸರಿ ಇಲ್ಲ ಎಂಬ ಅಂಶವನ್ನು ಕಳೆದ ವಾರದಿಂದೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಬಹಿರಂಗಪಡಿಸಿವೆ. ಸಿಇಓ ವಿಶಾಲ್ ಸಿಕ್ಕಾ ಅವರ ಸಂಬಳ ಹೆಚ್ಚಳ ಹಾಗೂ ಕಂಪನಿಯಿಂದ ಹೊರಹೋಗಿರುವ ಇಬ್ಬರು ಅಧಿಕಾರಿಗಳಿಗೆ ನೀಡಿರುವ ಭಾರಿ ಮೊತ್ತದ ಹಣದ ವಿರುದ್ಧ ಕಂಪನಿಯ ಸಂಸ್ಥಾಪಕ ನಾರಾಯಣ ಮೂರ್ತಿ ಆಡಳಿತ ಮಂಡಳಿಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.

ಸೋಮವಾರ ಸಂಜೆ ಮುಂಬೈನಲ್ಲಿ ಕಂಪನಿ ಕಡೆಯಿಂದ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಗಳಿವೆ. ಇಲ್ಲಿ ಇನ್ಫೋಸಿಸ್ ಒಳಗೆ ನಡೆಯುತ್ತಿರುವ ಬೆಳವಣಿಗೆಗಳ ಚಿತ್ರಣವೊಂದು ಲಭ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಇನ್ಫೋಸಿಸ್ ಒಳಗೆ ನಡೆಯುತ್ತಿರುವ ಬೆಳವಣಿಗೆಗಳ ಪ್ರಮುಖ 8 ಅಂಶಗಳು ಇಲ್ಲಿವೆ.

  1. ಇನ್ಫೋಸಿಸ್ ಕಾರ್ಯ ನಿರ್ವಹಣಾಧಿಕಾರಿ ವಿಶಾಲ್ ಸಿಕ್ಕಾ ಇಂದು ಆರಂಭಗೊಂಡಿರುವ ಹೂಡಿಕೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಮ್ಮ ಸಂಬಳದಲ್ಲಿ ಹೆಚ್ಚಳ ಹಾಗೂ ಮಾಜಿ ಅಧಿಕಾರಿಗಳಿಗೆ ನೀಡಿರುವ ಹಣದ ಕುರಿತು ಮಾಹಿತಿ ನೀಡಲಿದ್ದಾರೆ.


  2. ಸದ್ಯ ಇನ್ಫೋಸಿಸ್‌ಗೆ ವಿದೇಶಿ ಬಂಡವಾಳ ಹರಿದು ಬಂದಿದೆ. ಇದರ ಜತೆಗೆ ವಿಮೆ ಕಂಪನಿಗಳು ಹಾಗೂ ಮ್ಯೂಚುವಲ್ ಫಂಡ್ ಕಂಪನಿಗಳೂ ಹೂಡಿಕೆ ಮಾಡಿವೆ. ಸದ್ಯ ಸಂಸ್ಥಾಪಕರಾದ ನಾರಾಯಣ ಮೂರ್ತಿ ಕುಟುಂಬ ಇನ್ಫಿಯಲ್ಲಿ ಹೊಂದಿರುವುದು ಕೇವಲ ಶೇ. 12.75 ರಷ್ಟು ಶೇರುಗಳನ್ನು ಮಾತ್ರ. ಆದರೂ, ಅವರು ಕಂಪನಿಯ ವಿಚಾರಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವುದು ಅಚ್ಚರಿ ಮೂಡಿಸಿದೆ.


  3. ನಾರಾಯಣ ಮೂರ್ತಿ ಜತೆಗೆ ಸಹ ಸಂಸ್ಥಾಪಕರಾದ ನಂದನ್ ನಿಲೇಕಣಿ ಮತ್ತು ಎಸ್. ಗೋಪಾಲಕೃಷ್ಣ ಕಳೆದ ವಾರ ಇನ್ಫೋಸಿಸ್ ಆಡಳಿತ ಮಂಡಳಿಗೆ ಪತ್ರವನ್ನು ಬರೆದಿದ್ದರು ಎಂದು ವರದಿಗಳು ಹೇಳುತ್ತಿವೆ. ಈ ಮೂವರೂ ಸಿಇಓ ಸಂಬಳ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


  4. ಇತ್ತೀಚೆಗೆ 'ಎಕನಾಮಿಕ್ ಟೈಮ್ಸ್'ಗೆ ನೀಡಿದ ಸಂದರ್ಶನದಲ್ಲಿ ಇನ್ಫಿ ನಾರಾಯಣ ಮೂರ್ತಿ ಕೆಲವು ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಕಂಪನಿಯಿಂದ ಹೊರಹೋಗಿರುವ ಇಬ್ಬರು ಅಧಿಕಾರಿಗಳಿಗೆ ದೊಡ್ಡ ಮೊತ್ತದ ಹಣವನ್ನು ನೀಡಿರುವುದು ನೋಡಿದರೆ, ಕಂಪನಿಯ ಆಗುಹೋಗುಗಳನ್ನು ಮರೆಮಾಚಲು ಈ ತಂತ್ರ ಅನುಸರಿಸಿರಬಹುದು ಎಂದು ಅವರು ಹೇಳಿದ್ದರು. ಜತೆಗೆ, ಆಡಳಿತ ನೀತಿಯ ವಿರುದ್ಧ ಅವರು ತೀವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.


  5. ಹೀಗಿರುವಾಗಲೇ, ಇನ್ಫೋಸಿಸ್ ಅಧ್ಯಕ್ಷ ಆರ್. ಶೇಶಸಾಯಿ ನೀಡಿರುವ ಪ್ರಕಟಣೆ 'ಎಲ್ಲವೂ ಸರಿ ಇದೆ' ಎಂದು ಬಿಂಬಿಸಲು ಪ್ರಯತ್ನ ಪಟ್ಟಿದೆ. ಸಿಇಓ ವಿಶಾಲ್ ಸಿಕ್ಕಾ ತೆಗದುಕೊಂಡ ನಿರ್ಧಾರದ ಬಗ್ಗೆ ಆಡಳಿತ ಮಂಡಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಹೇಳಿದ್ದರು.


  6. 2014ರಲ್ಲಿ ಕಂಪನಿಯ ಸಿಇಓ ವಿಶಾಲ್ ಸಿಕ್ಕಾ ನೇಮಗೊಂಡಿದ್ದರು. ಅವರಿಗಿದ್ದ ವಾರ್ಷಿಕ 47 ಕೋಟಿ ಪ್ಯಾಕೇಜ್‌ನ್ನು ಇತ್ತೀಚೆಗಷ್ಟೆ 74 ಕೋಟಿಗೆ ಏರಿಕೆ ಮಾಡಲಾಗಿತ್ತು.


  7. ಈ ವಿಚಾರದಲ್ಲಿ ಸದ್ಯ ಕಂಪನಿಯ ಆಡಳಿತ ಮಂಡಳಿಯ ಒಳಗೆ ತೀವ್ರ ಭಿನ್ನಾಭಿಪ್ರಾಯ ಮೂಡಿದೆ. ಸಂಸ್ಥಾಪಕರು ವಿಶಾಲ್ ಸಿಕ್ಕಾ ಅವರ ನಿರ್ಧಾರವನ್ನು ಟೀಕಿಸಿದರೆ, ಆಡಳಿತ ಮಂಡಳಿ ಮತ್ತು ಹೂಡಿಕೆದಾರರು ಸಿಕ್ಕಾ ಅವರ ಪರವಾಗಿದ್ದಾರೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ನಡೆಯುವ ಹೂಡಿಕೆದಾರರ ಸಭೆ ಮಹತ್ವ ಪಡೆದುಕೊಂಡಿದೆ.


  8. ಕಂಪನಿಯ ಸ್ವತಂತ್ರ ನಿರ್ದೇಶಕರಾಗಿರುವ ಕಿರಣ್ ಮಜುಂಜಾದ್ ಶಾ ಇನ್ಫೋಸಿಸ್ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ಟಾಟಾ ಸಮೂಹ ಸಂಸ್ಥೆಗಳ ಇತ್ತೀಚಿನ ಬಿಕ್ಕಟ್ಟಿಗೆ ಹೋಲಿಸುವ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ.


ಕಂಪನಿಗೆ ಮಧ್ಯಂತರ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಎಸ್. ಗೋಪಾಕೃಷ್ಣ ಮುಂದಿಟ್ಟಿದ್ದರು. ಹೀಗೆ, ದಿನದಿಂದ ದಿನಕ್ಕೆ ಇನ್ಫೋಸಿಸ್ ಒಳಗಿನ ಆಡಳಿತ ಮತ್ತು ಸಂಸ್ಥಾಪಕರ ನಡುವಿನ ಬಿಕ್ಕಟ್ಟು ತಾರಕಕ್ಕೇರುತ್ತಿದೆ. ಈಗಾಗಲೇ ಶೇರು ಪೇಟೆಯಲ್ಲಿ ಇನ್ಫೋಸಿಸ್ ಶೇರುಗಳ ಮೇಲೆ ಈ ಬೆಳವಣಿಗೆ ಪರಿಣಾಮ ಬೀರಿದೆ. ಮುಂಬೈನಲ್ಲಿ ಇಂದು ನಡೆಯುವ ಸಭೆ ಮತ್ತು ನಂತರ ನಡೆಯಲಿರುವ ಪತ್ರಿಕಾಗೋಷ್ಠಿ ಕೆಲವು ವಿಚಾರಗಳನ್ನು ಸ್ಪಷ್ಟಗೊಳಿಸಬಹುದು ಎಂದು ನಂಬಲಾಗಿದೆ.