samachara
www.samachara.com
ಅಪಾರ ನಿರೀಕ್ಷೆ; ಅನುಮಾನಗಳ ಭಾರ: ಬಜೆಟ್ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳು
ಸುದ್ದಿ ಸಾರ

ಅಪಾರ ನಿರೀಕ್ಷೆ; ಅನುಮಾನಗಳ ಭಾರ: ಬಜೆಟ್ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳು

ಅನಾಣ್ಯೀಕರಣ ಪ್ರಕ್ರಿಯೆ ನಡೆದ ನಂತರದ ಮೊದಲ ಕೇಂದ್ರ ಬಜೆಟ್ ಬುಧವಾರ, ಅಂದುಕೊಂಡ ಸಮಯಕ್ಕೆ ಮಂಡನೆಯಾಗಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ತಮ್ಮ ನಾಲ್ಕನೇ ಆಯವ್ಯಯವನ್ನು ಜನರ ಎದುರಿಗೆ ಇಡಲಿದ್ದಾರೆ. ಅವರಿಗೆ ಹಾಗೂ ಸರಕಾರದ ಪಾಲಿಗೆ ಇದು 'ಮಾಡು ಇಲ್ಲವೇ ಮಡಿ' ವಿಚಾರ. ಶೇರು ಮಾರುಕಟ್ಟೆ ಇಂದು ಘೋಷಣೆಯಾಗಲಿರುವ ಖರ್ಚು- ಆದಾಯದ ವಿವರಗಳ ಮೇಲೆ ಕಣ್ಣಿಟ್ಟು ಕುಳಿತಿದೆ. ಅಪಾರ ನಿರೀಕ್ಷೆ ಹಾಗೂ ಅನುಮಾನಗಳ ಭಾರವನ್ನು ಹೊದ್ದುಕೊಂಡಿರುವ ಮುಂಗಡ ಪತ್ರ ಅನಾವರಣಗೊಳ್ಳಲು ಕ್ಷಣಗಣನೆ ಆರಂಭವಾಗಿದೆ.

ಈ ಸಮಯದಲ್ಲಿ ಗಮನಿಸಬೇಕಾದ 10 ಅಂಶಗಳ ಪಟ್ಟಿ ಇಲ್ಲಿದೆ.

  1. ಮಂಗಳವಾರ ಸಂಸತ್ತಿನೊಳಗೆ ಕುಸಿದು ಬಿದ್ದ ಲೋಕಸಭಾ ಸದಸ್ಯ ಇ. ಅಹಮದ್ ರಾತ್ರಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಹೀಗಾಗಿ, ಬಜೆಟ್ ಮಂಡನೆ ಇನ್ನೊಂದು ದಿನ ಮುಂದಕ್ಕೆ ಹೋಗಲಿದೆ ಎಂದು ಅನುಮಾನ ವ್ಯಕ್ತವಾಗಿತ್ತು. ಅಂದುಕೊಂಡ ಸಮಯಕ್ಕೆ ಹಣಕಾಸು ಜೇಟ್ಲಿ ಬಜೆಟ್ ಮಂಡಿಸಲಿದ್ದಾರೆ ಎಂದು 'ಎನ್ಡಿಟಿವಿ' ವರದಿ ಹೇಳಿದೆ.


  2. ಇದೇ ಮೊದಲ ಬಾರಿಗೆ ರೈಲ್ವೆ ಆಯವ್ಯಯವನ್ನೂ ಈ ಬಾರಿಯ ಬಜೆಟ್ ಒಳಗೊಂಡಿದೆ. ಸಾಮಾನ್ಯವಾಗಿ ಕೇಂದ್ರ ಬಜೆಟ್ ಮಂಡನೆಯಾದ ಒಂದು ತಿಂಗಳ ಅಂತರದಲ್ಲಿ ರೈಲ್ವೆ ಬಜೆಟ್ ಮಂಡನೆಯಾಗುತ್ತಿತ್ತು. ಈ ಬಾರಿ ಸಂಪ್ರದಾಯವನ್ನು ಮುರಿದು ಎರಡೂ ಆಯವ್ಯಯ ಪತ್ರಗಳನ್ನು ಒಟ್ಟಿಗೆ ಮಂಡಿಸಲಾಗುತ್ತಿದೆ. 'ಇದು ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸರಕಾರ ತೆಗೆದುಕೊಂಡ ರಾಜಕೀಯ ತೀರ್ಮಾನ' ಎಂದು ಪ್ರತಿಪಕ್ಷಗಳು ಆರೋಪಿಸಿವೆ.


  3. ಸರಕಾರ ವೆಚ್ಚವನ್ನು ಸರಿದೂಗಿಸಲು ಅರುಣ್ ಜೇಟ್ಲಿ ಜಿಡಿಪಿ ವಿಚಾರದಲ್ಲಿ 3. 3- 3.4ರಷ್ಟು ವಿತ್ತೀಯ ಕೊರತೆಯನ್ನು ತೋರಿಸುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಹೇಳುತ್ತಿದ್ದಾರೆ. ಇದು ಈ ಹಿಂದೆ ಶೇ. 3ರಷ್ಟಿದ್ದ ವಿತ್ತೀಯ ಕೊರತೆಗಿಂತ ಹೆಚ್ಚುವು ಹಿನ್ನೆಲೆಯಲ್ಲಿ ರೇಟಿಂಗ್ ಏಜೆನ್ಸಿಗಳು ದೇಶದ ಹಣಕಾಸು ವ್ಯವಸ್ಥೆಯನ್ನು ಅಳೆಯುವ ಮಾನದಂಡ ಬದಲಾಗಬಹುದು ಎಂದು ನಿರೀಕ್ಷಿಸಲಾಗಿದೆ.


  4. ಕೇಂದ್ರ ಸರಕಾರ ವಿಧಿಸಲಿರುವ ತೆರಿಗೆಗಳ ಮೇಲೆ ಎಲ್ಲರ ಚಿತ್ತವಿದೆ. ವೈಯಕ್ತಿಕ ಮಟ್ಟದಲ್ಲಿ ಆದಾಯ ತೆರಿಗೆ ವಿನಾಯಿತಿ (ಸದ್ಯ 2. 5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ತೆರಿಗೆ ವಿಧಿಸಲಾಗುತ್ತಿದೆ)ಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. 2014ರಲ್ಲಿ ಜೇಟ್ಲಿ ಮಂಡಿಸಿದ್ದ ಆಯವ್ಯಯ ಪತ್ರದಲ್ಲಿ 2 ಲಕ್ಷವರೆಗೆ ಇದ್ದ ತೆರಿಗೆ ವಿನಾಯಿತಿಯನ್ನು 2. 5 ಲಕ್ಷಕ್ಕೆ ಏರಿಸಲಾಗಿತ್ತು.


  5. ಅದೇ ವೇಳೆ ಉಳಿತಾಯದ ಮೇಲಿನ ಬಡ್ಡಿದರ ಇನ್ನಷ್ಟು ಇಳಿಯುವ ಸಾಧ್ಯತೆಗಳಿವೆ. ವಿಶೇಷವಾಗಿ ವಿಮಾ ಉಳಿತಾಯಗಳ ಮೇಲಿನ ಬಡ್ಡಿ ದರಕ್ಕೆ ಕತ್ತರಿ ಹಾಕಲು ಹಣಕಾಸು ಸಚಿವರು ಮುಂದಾಗಬಹುದು. ಅನಾಣ್ಯೀಕರಣದ ನಂತರ ಹಳೆಯ ನೋಟುಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಬ್ಯಾಂಕುಗಳಲ್ಲಿ ಭಾರಿ ಮೊತ್ತದ ಠೇವಣಿ ಸಂಗ್ರಹವಾಗಿದೆ. ಹೀಗಾಗಿ, ಉಳಿತಾಯ ಹಣದ ಮೇಲಿನ ಬಡ್ಡಿಯನ್ನು ಕಡಿತಗೊಳಿಸುವ ಮೂಲಕ ಬ್ಯಾಂಕುಗಳ ಮೇಲಿನ ಭಾರವನ್ನು ಕಡಿಮೆ ಮಾಡುವ ನಡೆಯನ್ನು ಹಣಕಾಸು ಸಚಿವರು ಇಡುವ ಮುನ್ಸೂಚನೆ ಇದೆ.


  6. ಪಾತಾಳಕ್ಕೆ ಇಳಿದಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಕೆಲವೊಂದು ನಿರ್ಧಾರಗಳನ್ನು ಬಜೆಟ್ ಒಳಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಬಡ್ಡಿ ಪಾವತಿ ಮೇಲಿನ ವಿನಾಯಿತಿ ಮಿತಿಯನ್ನು- ಗೃಹ ಸಾಲದ ವಿಚಾರದಲ್ಲಿ- 2 ಲಕ್ಷದಿಂದ 2. 5 ಲಕ್ಷಕ್ಕೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಎಸ್ಬಿಐ ಪರಿಣಿತರು ಅಂದಾಜಿಸಿದ್ದಾರೆ.


  7. ಜುಲೈ ತಿಂಗಳ ವೇಳೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಪದ್ಧತಿ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸೇವಾ ತೆರಿಗೆಗಳನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಈ ಮುಂಗಡ ಪತ್ರ ಒಳಗೊಂಡಿದೆ. ಇದರ ಜತೆಗೆ ಕಾರ್ಪೊರೇಟ್ ತೆರಿಗೆ ದರವನ್ನು ಕಡಿತಗೊಳಸಲಿದ್ದಾರೆ. 2015ರಲ್ಲಿ ಜೇಟ್ಲಿ ಶೇ. 30ರಷ್ಟಿರುವ ಕಾರ್ಪೊರೇಟ್ ತೆರಿಗೆಯನ್ನು ಹಂತಹಂತವಾಗಿ ಶೇ. 25ಕ್ಕೆ ಇಳಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು ಎಂಬುದನ್ನು ಗಮನಿಸಬೇಕಿದೆ.


  8. ಇದರ ನಡುವೆ, ಅನಾಣ್ಯೀಕರಣ ನಂತರ ಪರಿಸ್ಥಿತಿ ನಿಧಾನವಾಗಿ ಸುಧಾರಣೆಗೊಂಡಿದೆ. ನಗದು ವ್ಯವಹಾರ ಮತ್ತೆ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಅದರ ಪರಿಣಾಮಗಳು ಇನ್ನೂ ಜಾರಿಯಲ್ಲಿದೆ. ಹೀಗಾಗಿ, ಈ ಬಾರಿಯ ಬಜೆಟ್ ಮಂಡನೆಗೆ ಗಣನೆಗೆ ತೆಗೆದುಕೊಳ್ಳುವ ಅಂಕಿ ಅಂಶಗಳ ಬಗ್ಗೆ ಅನುಮಾನಗಳನ್ನು ಮೋರ್ಗನ್ ಸ್ಟಾನ್ಲಿಯಂತಹ ಜಾಗತಿಕ ಹಣಕಾಸು ಸಂಸ್ಥೆ, ಹಣಕಾಸು ತಜ್ಷರು ವ್ಯಕ್ತಪಡಿಸಿದ್ದಾರೆ.


  9. ಮುಂದಿನ ವರ್ಷಾಂತ್ಯದಲ್ಲಿ ಪ್ರಗತಿಯ ದರ 6. 75ರಿಂದ 7. 5ಕ್ಕೆ ಏರಲಿದೆ ಎಂದು 'ಹಣಕಾಸು ಸಮೀಕ್ಷೆ' ವರದಿ ಹೇಳಿದೆಯಾದರೂ, ಅನಾಣ್ಯೀಕರಣ ಪ್ರಗತಿಗೆ ಮಾರಕವಾಗಲಿದೆ ಎಂದು ಹೇಳಿದೆ. ಅದೂ ಕೂಡ ಮಂಡನೆಯಾಗಲಿರುವ ಮುಂಗಡ ಪತ್ರದ ಮೇಲೆ ಪರಿಣಾಮಗಳನ್ನು ಬೀರಲಿದೆ.


  10. ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿಯ ಆಯವ್ಯಯ ಸಬ್ಸಿಡಿ ಮತ್ತಿತರ ಜನಪ್ರಿಯ ಘೋಷಣೆಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಎಲ್ಲರ ನಿರೀಕ್ಷೆಯಾಗಿದೆ.


ಇನ್ನೇನು ಕೆಲವೇ ಹೊತ್ತಿನಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಈ ಮೂಲಕ ಅನಾಣ್ಯೀಕರಣ ಪ್ರಕ್ರಿಯೆ ನಂತರ ಮಂಡನೆಯಾಗಲಿರುವ ಮೊದಲ ಬಜೆಟ್ ಕೇಂದ್ರ ಸರಕಾರದ ಆಲೋಚನೆಯನ್ನು ನಿಚ್ಚಳಗೊಳಿಸಲಿದೆ.