ದೇಶದೆಲ್ಲೆಡೆ ಸಂಭ್ರಮದ ಗಣರಾಜ್ಯೋತ್ಸವ: ಕಾಶ್ಮೀರದಲ್ಲಿ ಹಿಮಪಾತಕ್ಕೆ 10 ಸೈನಿಕರ ಸಾವು
ಸುದ್ದಿ ಸಾರ

ದೇಶದೆಲ್ಲೆಡೆ ಸಂಭ್ರಮದ ಗಣರಾಜ್ಯೋತ್ಸವ: ಕಾಶ್ಮೀರದಲ್ಲಿ ಹಿಮಪಾತಕ್ಕೆ 10 ಸೈನಿಕರ ಸಾವು

ಇಡೀ

ದೇಶ ಇತ್ತ ಗಣರಾಜ್ಯೋತ್ಸವದ ಸಂಭ್ರದಲ್ಲಿರುವಾಗಲೇ, ಅತ್ತ ಶ್ರೀನಗರದಿಂದ 200 ಕಿ. ಮೀ ದೂರದ ಬಂಡಿಪೋರ ಗುರೆಝ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ ಮತ್ತಿಬ್ಬರು ಸೈನಿಕರ ದೇಹಗಳನ್ನು ಹೊರತೆಗೆಯಲಾಗಿದೆ.

ಬುಧವಾರ ಮತ್ತು ಗುರುವಾರದಂದು ಎರಡು ಪ್ರತ್ಯೇಕ ಹಿಮಪಾತ ಪ್ರಕರಣಗಳಿಗೆ ಕಾಶ್ಮೀರ ಸಾಕ್ಷಿಯಾಗಿದ್ದು, ಈವರೆಗೆ 10 ಸೈನಿಕರು ಸಾವನ್ನಿಪ್ಪಿದ್ದರೆ, ಹಲವರು ನಾಪತ್ತೆಯಾಗಿದ್ದಾರೆ. ಈವರೆಗೆ ರಕ್ಷಿಸಿದ ಸೈನಿಕರ ಸಂಖ್ಯೆ 7ಕ್ಕೇರಿದೆ.

ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. "ಸೇನಾ ನೆಲೆ ಮತ್ತು ಪ್ಯಾಟ್ರೋಲ್ ನಡೆಸುತ್ತಿದ್ದ ತುಕಡಿ ಪ್ರತ್ಯೇಕ ಸ್ಥಳಗಳಲ್ಲಿ ಹಿಮಪಾತಕ್ಕೆ ಸಿಲುಕಿದೆ. ಸದ್ಯ ವಾತಾವರಣ ಹಿಮಾವೃತವಾಗಿದ್ದು, ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ,'' ಎಂದು ಉದಂಪುರದಿಂದ ಸೇನಾ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

ಗುರಝ್ ಪರ್ವತ ಪ್ರದೇಶದ ಕಣಿವೆ ಮತ್ತು ಕಾಶ್ಮೀರದ ನಡುವೆ ಒಂದೇ ಒಂದು ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಅದೀಗ ಹಿಮಾವೃತವಾಗಿದೆ. ಕಳೆದ ಎರಡು ದಿನಗಳಿಂದ ಈ ಸ್ಥಳದಲ್ಲಿ ತಾಪಮಾನ ಕನಿಷ್ಟ ಡಿಗ್ರಿಗೆ ಇಳಿದಿದೆ. ಪಾಕಿಸ್ತಾನದ ಗಡಿಯಲ್ಲಿ ಹಂಚಿಕೊಳ್ಳುವ ಈ ಪ್ರದೇಶದಲ್ಲಿ ಸೇನೆ ನಿಗಾ ಇಡುತ್ತಿತ್ತು. ನಿತ್ಯ ಪ್ಯಾಟ್ರೋಲ್ಗಳು ನಡೆಸಲಾಗುತ್ತಿತ್ತು.

ಕಳೆದ ವರ್ಷ ಇಂತಹದ್ದೇ ಸಿಯಾಚಿನ್ ಪರ್ವತ ಪ್ರದೇಶದಲ್ಲಿ ನಡೆದ ಹಿಮಪಾತದಲ್ಲಿ ಕರ್ನಾಟಕದ ಸೈನಿಕರೊಬ್ಬರು ಸೇರಿದಂತೆ 9 ಸೈನಿಕರು ಮೃತಪಟ್ಟಿದ್ದರು.

ಸಂಭ್ರಮದ ಗಣರಾಜ್ಯೋತ್ಸವ:

ದಿಲ್ಲಿಯಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ತೆರೆ ಬಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಬೆಳಗ್ಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಧ್ವಜಾರೋಹಣ ಮಾಡುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಕುಶಾಲ ತೋಪು ಸಿಡಿಸುವ ಮೂಲಕ ಧ್ವಜಗೌರವ ಸಲ್ಲಿಸಲಾಯಿತು. ಭಾರತೀಯ ಸೇನೆಯಎಂಐ-17 ಹೆಲಿಕಾಪ್ಟರ್ ಸೇರಿದಂತೆ ನೌಕಾದಳ, ವಾಯುದಳ ಹಾಗೂ ಭೂಸೇನೆಯ 3 ಹೆಲಿಕಾಪ್ಟರ್ ಗಳು ತ್ರಿವರ್ಣ ಧ್ವಜವನ್ನು ಹೊತ್ತು ಸಾಗುವ ಮೂಲಕ ಆಕರ್ಷಕ ಪಥ ಸಂಚಲನಕ್ಕೆ ಚಾಲನೆ ನೀಡಿದವು.

ದೇಶದ 17 ರಾಜ್ಯಗಳ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ ಸ್ತಬ್ದ ಚಿತ್ರಗಳು ಜನರ ಗಮನ ಸೆಳೆದವು. ಮಹಾರಾಷ್ಟ್ರ, ಮಣಿಪುರ, ಗುಜರಾತ್, ಲಕ್ಷದ್ವೀಪ, ಗೋವಾ, ದೆಹಲಿ, ಹಿಮಾಚಲ ಪ್ರದೇಶ, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಜತೆಗೆ, ಕೇಂದ್ರ ಸರಕಾರದ ನಾನಾ ಯೋಜನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಈ ಬಾರಿಯ ವಿಶೇಷವಾಗಿತ್ತು. 

ರಾಜ್ಯ ಸರಕಾರ ಬೆಂಗಳೂರಿನ ಮಾಣಿಕ್ ಶಾ ಪೆರೇಟ್ ಮೈದಾನದಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವನ್ನು ರಾಜ್ಯಪಾಲ ವಾಜೂಬಾಯಿ ವಾಲಾ ಚಾಲನೆ ನೀಡಿದರು. "

ರಾಜ್ಯ ಸರ್ಕಾರದ ಹಲವು ಯೋಜನೆಗಳು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿವೆ. ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ರಾಜ್ಯದ ಐಟಿಬಿಟಿ ಕ್ಷೇತ್ರಗಳಲ್ಲಿ ಪ್ರತಿವರ್ಷ ಸಾಕಷ್ಟು ಉದ್ಯೋಗಗಳು ಸೃಷ್ಠಿಯಾಗುತ್ತಿದೆ,'' ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.