samachara
www.samachara.com
'ಸೇನಾಂತರಂಗ': ಎಚ್ಚರಿಕೆಗಳ ಆಚೆಗೂ ಸಮಸ್ಯೆಗಳನ್ನು ಮುಂದಿಡುತ್ತಿರುವ ಸೈನಿಕರು
ಸುದ್ದಿ ಸಾರ

'ಸೇನಾಂತರಂಗ': ಎಚ್ಚರಿಕೆಗಳ ಆಚೆಗೂ ಸಮಸ್ಯೆಗಳನ್ನು ಮುಂದಿಡುತ್ತಿರುವ ಸೈನಿಕರು

samachara

samachara

ಯೋಧಾರಾಧನೆಯ

ರಾಜಕೀಯ ನಡೆಯುತ್ತಿರುವ ದೇಶದಲ್ಲಿ ಸೈನಿಕರ ಸ್ಥಿತಿಗತಿಗಳು ಹೇಗಿದ್ದಿರಬಹುದು ಎಂಬುದಕ್ಕೆ ಪ್ರತಿ ದಿನವೂ ಹೊಸ ಸಾಕ್ಷಿಗಳು ಲಭ್ಯವಾಗುತ್ತಿವೆ.

ಭಾನುವಾರವಷ್ಟೆ ಸೈನಿಕರಿಗೆ ತಮ್ಮ ಸಂಕಷ್ಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಭೂ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದರು. ಅದರ ಬೆನ್ನಿಗೇ ಸೋಮವಾರ, ಸೈನಿಕನೊಬ್ಬ ತನ್ನ ಸಂಕಷ್ಟಗಳನ್ನು ಹಾಡಿನ ಮೂಲಕ ವಿವರಿಸುತ್ತಿದ್ದ ವಿಡಿಯೋ ಒಂದು ಬಹಿರಂಗಗೊಂಡಿದೆ.

'ಸೈನಿಕರು ಉಪ್ಪಿನಕಾಯಿ ಮತ್ತು ರೊಟ್ಟಿಯನ್ನು ತಿನ್ನಬೇಕು. ಅದೇ ನಗರದಲ್ಲಿರುವವರು ಪಂಚತಾರ ಹೋಟೆಲ್ಗಳಿಗೆ ಹೋಗುತ್ತಾರೆ' ಎಂಬರ್ಥದ ಹಾಡನ್ನು ರಾಗವಾಗಿ ಸೈನಿಕ ಹೇಳಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

'ನನಗೆ ರಜೆ ಸಿಗದೆ 10 ತಿಂಗಳಾಗಿದೆ. ನನ್ನ ಮದುವೆಯಾದವಳ ಕಣ್ಣಲ್ಲಿ ನೀರು ಸುರಿಯುತ್ತಿದೆ. ಆಕೆಗೆ ತಾನು ಮದುವೆಯಾಗಿದ್ದೀನಿ ಅಥವಾ ಇಲ್ಲ ಎಂಬ ಭಾವನೆಯೇ ಇಲ್ಲವಾಗಿದೆ' ಎಂದು ಸೈನಿಕ ಹಾಡಿನ ಮೂಲಕ ಪರಿಸ್ಥಿತಿಯನ್ನು ಬಿಚ್ಚಿಟ್ಟಿದ್ದಾನೆ. ಇದರ ಜತೆಗೆ, ರಾಜಕಾರಣಿಗಳ ಬಗ್ಗೆಯೂ ಹಾಡಿನಲ್ಲಿ ಆಕ್ರೊಶ ವ್ಯಕ್ತವಾಗಿದೆ. 'ಅವರು ದೀಪಾವಳಿಗೆ ಹಾರೈಸಿ ಮನೆಗಳಲ್ಲಿ ಹೋಗಿ ಮಲಗುತ್ತಾರೆ. ನಾವು ಗಡಿಯಲ್ಲಿ ಹಬ್ಬವನ್ನು ಆಚರಿಸುತ್ತೇವೆ' ಎಂದು ಆತ ಹಾಡಿದ್ದಾನೆ.

ಶುಕ್ರವಾರ ಭೂಸೇನಾ ಮುಖ್ಯಸ್ಥ ಜನರಲ್ ರಾವತ್  ಆರ್ಮಿ ಡೇ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಸೈನಿಕರ ಸಮಸ್ಯೆಗಳನ್ನು ಆಲಿಸಲು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಎಲ್ಲ ದೂರುಗಳು ನೇರವಾಗಿ ನನಗೆ ತಲುಪುವಂತೆ ಮಾಡಲಾಗಿದೆ,'' ಎಂದು ತಿಳಿಸಿದ್ದು. ಇದರ ಜತೆಗೆ, ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೂರುಗಳನ್ನು ಹರಿಯಬಿಡದಂತೆ ಎಚ್ಚರಿಕೆಯನ್ನೂ ನೀಡಿದ್ದರು.

ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಸಿಂಗ್ ಕಾಶ್ಮೀರದ ಗಡಿಯಲ್ಲಿ ಕಳಪೆ ಆಹಾರ ನೀಡುತ್ತಿದ್ದ ಕುರಿತು ವಿಡಿಯೋ ಸಂದೇಶವನ್ನು ಕೆಲವು ದಿನಗಳ ಹಿಂದೆ ಸಾಮಾಜಿ ಜಾಲತಾಣದಲ್ಲಿ ಹಂಚಿಕೊಂಡಿದ್ದ. ಈ ಮೂಲಕ ದೇಶಾದ್ಯಂತ ಸೇನಾ ಪಡೆಗಳಲ್ಲಿ ಹಾಗೂ ಅರೆ ಸೇನಾಪಡೆಗಳಲ್ಲಿ ಕೆಳಮಟ್ಟದ ಸೈನಿಕರ ಸ್ಥಿತಿಗತಿಗಳ ಕುರಿತು ಚರ್ಚೆ ಆರಂಭವಾಗಿತ್ತು. ವಾರ್ಷಿಕ ಆಯವ್ಯಯದಲ್ಲಿ ಸುಮಾರು 2. 5 ಲಕ್ಷ ಕೋಟಿಯಷ್ಟು ಹಣವನ್ನು ಸೇನೆಗಾಗಿ ಮತ್ತು ಸುಮಾರು 70 ಸಾವಿರ ಕೋಟಿಯಷ್ಟು ಹಣವನ್ನು ಅರೆಸೇನಾ ಪಡೆಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ಆದರೆ, ಮೇಲಾಧಿಕಾರಿಗಳ ವ್ಯಾಪಕ ಭ್ರಷ್ಟಾಚಾರದಿಂದಾಗಿ ಸೈನಿಕರಿಗೆ ಮೂಲ ಸೌಕರ್ಯಗಳು ಸಿಗುತ್ತಿಲ್ಲ ಎಂಬ ದೂರುಗಳೀಗ ಕೇಳಿಬರುತ್ತಿದೆ.

ಕಳೆದ ವಾರ ಮತ್ತೊಬ್ಬ ಯೋಧ 42 ಇನ್ಫೆಂಟ್ರಿ ಬ್ರಿಗೇಡ್ನ ಲಾನ್ಸ್ ನಾಯಕ್ ಪ್ರತಾಪ್ ಸಿಂಗ್ ಸೇನೆಯಲ್ಲಿನ ಆರ್ಡರ್ಲಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದ್ದ. "ಮೇಲಾಧಿಕಾರಿಗಳ ಮನೆಯಲ್ಲಿ ಬಟ್ಟೆ ತೊಳೆಯುವುದು, ಬೂಟು ಪಾಲಿಶ್ ಮಾಡಿಸುವುದು ಮತ್ತು ನಾಯಿಗಳನ್ನು ವಾಕಿಂಗ್ ಕರೆದುಕೊಂಡು ಹೋಗಲು ಸೈನಿಕರನ್ನು ಬಳಸಲಾಗುತ್ತಿದೆ,'' ಎಂದು ಆತ ದೂರಿದ್ದ. ಇದರ ವಿರುದ್ಧ ಮಾತನಾಡಿದರೆ ಬಲಿಪಶು ಮಾಡಲಾಗುತ್ತಿದೆ ಎಂದೂ ಆತ ಹೇಳಿದ್ದ.

ಹೀಗೆ, ಸೇನೆ ಮತ್ತು ಅರೆ ಸೇನಾಪಡೆಗಳಲ್ಲಿನ ಸೈನಿಕರು ಪರಿಸ್ಥಿತಿಯ ಕುರಿತು ದೊಡ್ಡಮಟ್ಟದಲ್ಲಿ ಆಂತರಿಕ ಪ್ರತಿರೋಧ ಕಾಣಿಸಿಕೊಂಡಿದೆ. ಇದನ್ನು ತಡೆಯಲು ರಕ್ಷಣಾ ಇಲಾಖೆ ಹೊಸ ದೂರು ವ್ಯವಸ್ಥೆಯನ್ನು ಜಾರಿಗೆ ತರುವ ಜತೆಗೆ, ಸೈನಿಕರಿಗೆ ಶಿಕ್ಷೆಯ ಎಚ್ಚರಿಕೆಯನ್ನೂ ನೀಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸೈನಿಕರ ಪರವಾಗಿ ದೊಡ್ಡಮಟ್ಟದ ಅನುಕಂಪ ಸೃಷ್ಟಿಯಾಗಿದೆ. ಇದು ಹೀಗೆ ಮುಂದುವರಿದರೆ ಶಿಸ್ತಿನ ವ್ಯವಸ್ಥೆ ಎಂದು ಕರೆಸಿಕೊಂಡು ಬಂದಿದ್ದ ಸೇನೆ ಹಾಗೂ ಅರೆಸೇನಾಪಡೆಗಳಲ್ಲಿನ ಆಂತರಿಕ ವ್ಯವಸ್ಥೆಯನ್ನು ಬದಲಾವಣೆಗಳಾಗುವ ಸಾಧ್ಯತೆ ಎದ್ದು ಕಾಣಿಸುತ್ತಿದೆ.