ಸುದ್ದಿ ಸಾರ

ಡಿಸೆಂಬರಿನಿಂದ ಆರ್ಡರ್ಲಿ 'ಸೇವೆ' ರದ್ದು: ಸಿದ್ಧರಾಮಯ್ಯ

ರಾಜ್ಯದ ಪೊಲೀಸ್ ಸಿಬ್ಬಂದಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಹಾಗೂ ಆರ್ಡರ್ಲಿ 'ಸೇವೆ'ಗಳನ್ನು ನಿಲ್ಲಿಸುವ ಮಹತ್ವದ ನಿರ್ಣಯವನ್ನು ಸರ್ಕಾರ ಕೈಗೊಂಡಿದೆ.

ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ಸಿಗಲಿರುವ ಸೌಲಭ್ಯಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಘೋಷಿಸಿದರು. ಪೊಲೀಸರ ವೇತನ ತಾರತಮ್ಯ ನಿವಾರಣೆಯ ಮೊದಲ ಹಂತವಾಗಿ  ಡಿಸೆಂಬರ್ ಒಂದರಿಗೆ ಜಾರಿಗೆ ಬರುವಂತೆ ಹೊಸ ಸೌಲಭ್ಯಗಳನ್ನು ಘೋಷಿಸಿದೆ.

ಪೊಲೀಸ್ ಸಿಬ್ಬಂದಿಗೆ ಸರ್ಕಾರ ಹೊಸದಾಗಿ ಘೋಷಿಸಿರುವ ಸೌಲಭ್ಯಗಳು : 1. ಪ್ರತಿ ತಿಂಗಳು 500 ರೂ. ಸಮವಸ್ತ್ರ ಭತ್ಯೆ (ಪ್ರಸ್ತುತ 100 ರೂ.) 2. ಪ್ರತಿ ತಿಂಗಳು 600 ರೂ. ಅನುಕೂಲಕರ ಭತ್ಯೆ 3. ಪ್ರತಿ ತಿಂಗಳು 1000 ರೂ. ಕಠಿಣತಾ ಭತ್ಯೆ 4. ಪ್ರತಿ 10 ವರ್ಷಕ್ಕೊಮ್ಮೆ ಸಿಬ್ಬಂದಿಗೆ ಬಡ್ತಿ 5. ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುವ ಆಡರ್ಲಿ ಪದ್ಧತಿ ರದ್ಧು

ಇದೇ ಸಂದರ್ಭ ವೇತನ ತಾರತಮ್ಯ ನಿವಾರಣೆಗೆ ಮುಂದಿನ ವರ್ಷ ರಚನೆಯಾಗುವ ವೇತನ ಪರಿಷ್ಕರಣಾ ಆಯೋಗ ತೀರ್ಮಾನ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.

ಪೊಲೀಸರ ವೇತನ ತಾರತಮ್ಯ ನಿವಾರಿಸುವ ಸಲುವಾಗಿ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ರಚಿಸಲಾಗಿತ್ತು. ಆ ಸಮಿತಿ ಸೆಪ್ಟೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ವೇತನದಲ್ಲಿ ತಾರತಮ್ಯ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ವೇತನ ತಾರತಮ್ಯ ಕುರಿತು ತೀರ್ಮಾನ ಮಾಡುವುದು ಕಷ್ಟದ ಕೆಲಸ. ವೇತನ ಪರಿಷ್ಕರಣಾ ಆಯೋಗ ಮುಂದಿನ ವರ್ಷ ರಚನೆಯಾಗುತ್ತದೆ. ಅಲ್ಲಿ ಪರಿಷ್ಕರಣೆ ಕುರಿತು ಚರ್ಚೆ ನಡೆದು ತೀರ್ಮಾನ ಮಾಡಬೇಕಾಗುತ್ತದೆ ಎಂದು ಮುಖ್ಯಮಂತ್ರಿಯವರು ಹೇಳಿದರು.

ಈ ಹಿನ್ನೆಲೆಯಲ್ಲಿ ಕೆಲವೊಂದು ಸೌಲಭ್ಯಗಳನ್ನು ಪೊಲೀಸರಿಗೆ ಒದಗಿಸಲು ತೀರ್ಮಾನಿಸಲಾಗಿದೆ. ಈ ಸೌಲಭ್ಯಗಳು ಪೇದೆಗಳಿಂದ ಸಬ್ ಇನ್ಸ್‍ಪೆಕ್ಟರ್ ಹಂತದವರೆಗೆ ಅನ್ವಯ ಆಗಲಿದೆ. ಇದರಿಂದ ಶೇ.90ರಷ್ಟು ಆಂದರೆ 80 ಸಾವಿರ ಸಿಬ್ಬಂದಿಗೆ ಎರಡು ಸಾವಿರ ರೂ.ಗಳ ಭತ್ಯೆ ಹೆಚ್ಚುವರಿಯಾಗಿ ಸಿಗಲಿದೆ.

ಪೊಲೀಸ್ ಇಲಾಖೆಗೆ ಪೇದೆಯಾಗಿ ಸೇರುವವರಿಗೆ 20-30 ವರ್ಷವಾದರೂ ಬಡ್ತಿ ಸಿಗದು. ಮುಖ್ಯಪೇದೆ ಅಥವಾ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಆಗಿ ಅವರು ನಿವೃತ್ತಿಯಾಗಬೇಕಾಗುತ್ತದೆ. ಇನ್ನು ಮುಂದೆ 10 ವರ್ಷಕ್ಕೊಮ್ಮೆ ಯಾವುದೇ ವಿಳಂಬ ಇಲ್ಲದೆ ಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಪೇದೆಯಾಗಿ ಸೇವೆಗೆ ಸೇರಿದವರು ಪಿಎಸ್‍ಐ ಹುದ್ದೆವರೆಗೆ ತಲುಪಲು ಸಹಾಯವಾಗುತ್ತದೆ ಎಂದು ಹೇಳಿದರು.

ಪೊಲೀಸ್ ಅಧಿಕಾರಿಗಳ ಮನೆಯಲ್ಲಿ ಪೇದೆಗಳು ಕೆಲಸ ಮಾಡುವ ಆಡರ್ಲಿ ಪದ್ಧತಿಯನ್ನು ರದ್ಧು ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಪೇದೆಗಳು ಪೊಲೀಸ್ ಕೆಲಸ ಬಿಟ್ಟು ಅಧಿಕಾರಿಗಳ ಮನೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂಬ ಒತ್ತಾಯ ಇತ್ತು. ಅದಕ್ಕೆ ಸ್ಪಂದಿಸಿದೇವೆ ಎಂದರು.

ಪೊಲೀಸ್ ಸಿಬ್ಬಂದಿಗೆ ಹೊಸದಾಗಿ ಸೌಲಭ್ಯಗಳನ್ನು ನೀಡುವುದರಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 200 ಕೋಟಿ ರೂ.ಗಳ ಹೊರೆ ಬೀಳುತ್ತದೆ. ಅದಕ್ಕಿಂತ ಹೆಚ್ಚಾಗಿ ಪೊಲೀಸರು ಹಗಲು-ರಾತ್ರಿ ದುಡಿಯುತ್ತಾರೆ. ಹೀಗಾಗಿ ಅವರ ಸೇವೆಯನ್ನು ವಿಶೇಷವಾಗಿ ಪರಿಗಣಿಸಿ ಸೌಲಭ್ಯಗಳನ್ನು ಘೋಷಿಸಲಾಗಿದೆ.

ಸರ್ಕಾರ ಇಂದು ಕೈಗೊಂಡಿರುವ ತೀರ್ಮಾನದಿಂದ ಪೊಲೀಸ್ ಸಿಬ್ಬಂದಿಗೆ ಅನುಕೂಲ ಆಗಲಿದೆ. ಈಗಾಗಲೇ ಅವರಿಗೆ ವಾರದ ರಜೆಯನ್ನೂ ಘೋಷಿಸಲಾಗಿದೆ ಎಂದು ತಿಳಿಸಿದರು.

ಈ ವರ್ಷ ಎಲ್ಲ ವೃಂದದ 7815 ಸಿಬ್ಬಂದಿ, 711 ಪಿಎಸ್‍ಐಗಳ ನೇಮಕಕ್ಕೆ ಅನುಮತಿ ನೀಡಲಾಗಿದೆ. 6610 ಪೇದೆಗಳು, 215 ಪಿಎಸ್‍ಐಗಳ ನೇಮಕ ಪ್ರಕ್ರಿಯೆ ಮುಗಿದಿದೆ. ಐದು ಸಾವಿರ ಪೇದೆಗಳು ತರಬೇತಿಯಲ್ಲಿದ್ದಾರೆ. ಖಾಲಿಯಾಗುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಉದ್ದೇಶಿಸಿಸಲಾಗಿದೆ. ಹೀಗಾಗಿ 4600 ಪೇದೆಗಳು, 300ಕ್ಕೂ ಪಿಎಸ್‍ಐ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. 4445 ಪೇದೆಗಳು, 312 ಪಿಎಸ್‍ಐ ಹುದ್ದೆಯನ್ನು ಮುಂದಿನ ವರ್ಷಕ್ಕೆ ಭರ್ತಿ ಮಾಡಲು ತೀರ್ಮಾನಿಸಿದೆ. 2018-19ನೇ ಸಾಲಿನ ವೇಳೆಗೆ ಎಲ್ಲ ಖಾಲಿ ಹುದ್ದೆಗಳನ್ನು ತುಂಬಲಾಗುವುದು ಎಂದು ಮುಖ್ಯಮಂತ್ರಿಯವರು ವಿವರಿಸಿದರು.

ನೋಟು ರದ್ದು ಕ್ರಮ ವಿರೋಧಿಸುವುದಿಲ್ಲ :

ಇದೇ ವೇಳೆ ಮಾತನಾಡಿದ ಅವರು, ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳನ್ನು ರದ್ದು ಮಾಡಿರುವ ಕೇಂದ್ರದ ಕ್ರಮವನ್ನು ವಿರೋಧಿಸುವುದಿಲ್ಲ. ಆದರೆ ರದ್ದು ಮಾಡುವ ಮುನ್ನ ಪೂರ್ವ ಸಿದ್ಧತೆ ಮಾಡಿಕೊಂಡಿಲ್ಲ ಎಂದಷ್ಟೇ ಹೇಳಿದ್ದೇನೆ ಎಂದು ಮುಖ್ಯಮಂತ್ರಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಪ್ಪುಹಣ ಮತ್ತು ಕಾಳಸಂತೆಕೋರರನ್ನು ಬಲಿ ಹಾಕುವುದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ನೋಟುಗಳನ್ನು ಇದೇ ಮೊದಲ ಬಾರಿಗೆ ರದ್ದು ಮಾಡಿಲ್ಲ. ಮೊರಾರ್ಜಿ ದೇಸಾಯಿ ಅವರು ಪ್ರಧಾನಿ ಆಗಿದ್ದಾಗ ಆಗಿತ್ತು. ಆದರೆ ಪೂರ್ವ ಸಿದ್ಧತೆ ಮಾಡಿಕೊಳ್ಳದ ಕಾರಣ ಸಾಮಾನ್ಯ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. 500ರ ಹೊಸ ನೋಟುಗಳನ್ನು ಬಿಡುಗಡೆ ಮಾಡದೆ 2 ಸಾವಿರ ರೂ.ಗಳ ನೋಟು ಬಿಡುಗಡೆ ಮಾಡಲಾಗಿದೆ. ಇದರಿಂದ 2 ಸಾವಿರ ರೂ.ಗಳ ನೋಟು ಕೊಟ್ಟರೂ ಅಂಗಡಿಗಳಲ್ಲಿ ಚಿಲ್ಲರೆ ಸಿಗುತ್ತಿಲ್ಲ ಎಂದು ಹೇಳಿದರು.

ಹಳೆಯ ನೋಟುಗಳ ವಿನಿಯಮಕ್ಕೆ ಸಹಕಾರ ಬ್ಯಾಂಕ್‍ಗಳಲ್ಲಿ ಅವಕಾಶವಿಲ್ಲ. ಹೀಗಾಗಿ ರೈತರು ಸಾಲ ಮರು ಪಾವತಿ ಮಾಡಲು ಕಷ್ಟವಾಗಿದೆ. ಕೃಷಿಕರಿಗೆ ಆದಾಯ ತೆರಿಗೆ ಮಿತಿ ಇಲ್ಲ. ರೈತರು ಮನೆಯಲ್ಲಿ ದುಡ್ಡು ಇಟ್ಟುಕೊಂಡಿದ್ದರೂ ಅದನ್ನು ವಿನಿಮಯ ಮಾಡಿಕೊಳ್ಳಲು ಆಗುತ್ತಿಲ್ಲ.

ಹೀಗಾಗಿ ಕೇಂದ್ರ ಹಣಕಾಸು ಸಚಿವರು ಮತ್ತು ರಿಸರ್ವ್ ಬ್ಯಾಂಕ್ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲೂ ಹಳೆಯ ನೋಟುಗಳು ಚಲಾವಣೆ ಆಗುತ್ತಿಲ್ಲ. ಆದರೆ, ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಸಣ್ಣಪುಟ್ಟ ವ್ಯಾಪಾರಸ್ಥರಿಗೂ ಭಾರಿ ತೊಂದರೆ ಆಗಿದೆ. ಮನೆಯಲ್ಲಿ ಇಟ್ಟಿರುವ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅವರಿಂದ ಆಗುತ್ತಿಲ್ಲ. ಜನರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ದೃಷ್ಟಿಯಿಂದ ನಿನ್ನೆ ಕನಕ ಜಯಂತಿ ಪ್ರಯುಕ್ತ ಇದ್ದ ಸರ್ಕಾರಿ ರಜೆಯನ್ನೂ ರದ್ದು ಮಾಡಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.