3,000 ಕೋಟಿಯ ಭಾರಿ ಡ್ರಗ್ಸ್ ಜಾಲ ಪತ್ತೆ
ಸುದ್ದಿ ಸಾರ

3,000 ಕೋಟಿಯ ಭಾರಿ ಡ್ರಗ್ಸ್ ಜಾಲ ಪತ್ತೆ

ಭಾರತದ ಅತೀ ದೊಡ್ಡ ಡ್ರಗ್ಸ್ ಜಾಲವನ್ನು ವಶ ಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಉದಯಪುರದ ‘ಫಿಝ್ಝಿ ಡ್ರಿಂಕ್ಸ್ ಫ್ಯಾಕ್ಟರ್’ಯಲ್ಲಿ 3,000 ಕೋಟಿ ರೂಪಾಯಿ ಬೆಲೆಯ ನಿಷೇಧಿತ ಮ್ಯಾಂಡ್ರಾಗ್ಸ್ ಡ್ರಗ್ಸ್ ಪತ್ತೆಯಾಗಿರುವುದಾಗಿ ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ.

ಕಂಪೆನಿಯ ಫ್ಯಾಕ್ಟರಿಯಲ್ಲಿ 2 ಕೋಟಿ ಮಾತ್ರೆಗಳನ್ನು ಸಿಕ್ಕಿವೆ ಹೇಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಮೂರು ಸಾವಿರ ಕೋಟಿ ರೂಪಾಯಿ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಿವುಡ್ ಸಿನಿಮಾ ನಿರ್ಮಾಪಕ ಸುಭಾಷ್ ದುಧಾನಿಯನ್ನೂ ಬಂಧಿಸಲಾಗಿದೆ.

ಇವೆಲ್ಲಾ ದಕ್ಷಿಣ ಆಫ್ರಿಕಾ ಮತ್ತು ಮೊಝಾಂಬಿಕ್’ಗೆ ಸೇರಿದ್ದು ಎಂದು ಹೇಳಲಾಗಿದೆ. ರೆವಿನ್ಯೂ ಗುಪ್ತಚರ ನಿರ್ದೇಶನಾಲಯದ ಮಾಹಿತಿ ಮೇರೆಗೆ ನಜೀಬ್ ಶಾ ನೇತೃತ್ವದ ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ. ಬೃಹತ್ ಕಾರ್ಯಾಚರಣೆ ಇದಾಗಿದ್ದರಿಂದ ಭೂ ಸೇನೆಯ ಸಹಾಯವನ್ನೂ ಪಡೆದುಕೊಳ್ಳಲಾಗಿತ್ತು.

ಭರ್ಜರಿ ಬೇಟೆ

“ಇದರ ಒಟ್ಟು ತೂಕ 23.5 ಮೆಟ್ರಿಕ್ ಟನ್, ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 3,000 ಕೋಟಿ,” ಎನ್ನುತ್ತಾರೆ ನಜೀಬ್ ಶಾ. ಮಾತ್ರೆಗಳನ್ನು ಗುಪ್ತವಾದ ಕೋಣೆಯಲ್ಲಿ ಪೇರಿಸಿಡಲಾಗಿತ್ತು. ಇದು ಭಾರತದಲ್ಲಿ ಈವರೆಗೆ ಪತ್ತೆ ಹಚ್ಚಲಾದ ಅತೀ ದೊಡ್ಡ ಡ್ರಗ್ಸ್ ಜಾಲ ಎಂದು ಶಾ ಮಾಹಿತಿ ನೀಡಿದ್ದಾರೆ.

“ಜಾಲದ ಮಾಸ್ಟರ್ ಮೈಂಡ್ ನನ್ನು ಬಂಧಿಸಿದ್ದೇವೆ. ಈ ಜಾಲದಲ್ಲಿರುವ ಉಳಿದವರಿಗಾಗಿ ಹುಡುಕಾಡುತ್ತಿದ್ದೇವೆ,” ಎಂದು ಅವರು ಮಾಹಿತಿ ನೀಡಿದ್ದಾರೆ. ಕೆಲವರಿಗೆ ‘ಲುಕ್ ಔಟ್’ ನೋಟಿಸ್ ಕೂಡಾ ನೀಡಲಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಶಪಡಿಸಿಕೊಂಡು ಮಾತ್ರೆಗಳನ್ನು ಸಾಮಾನ್ಯವಾಗಿ ‘ಎಂ-ಪಿಲ್ಸ್’, ‘ಬಟನ್ಸ್’, ‘ಸ್ಮಾರ್ಟಿಸ್’ ಎಂದು ಕರೆಯುತ್ತಾರೆ. ಆಫ್ರಿಕಾ ಮತ್ತು ಏಷ್ಯಾದಲ್ಲಿ ಸಾಮಾನ್ಯವಾಗಿ ರೇವ್ ಪಾರ್ಟಿಗಳಲ್ಲಿ ಇವುಗಳನ್ನು ಬಳಸುತ್ತಾರೆ.

ಮೆಥಾಕ್ವಾಲೋನ್ ಎಂಬುದು ‘ಮ್ಯಾಂಡ್ರಾಗ್ಸ್’ನ ರಾಸಾಯನಿಕ ಹೆಸರಾಗಿದೆ. ಇದೊಂದು ಅಪಾಯಕಾರಿ ಡ್ರಗ್ಸ್ ಆಗಿದ್ದು, ಮಿತಿ ಮೀರಿ ಸೇವಿಸುವುದರಿಂದ ಕೋಮಾಕ್ಕೆ ಹೋಗುವ ಸಾಧ್ಯತೆಗಳಿರುತ್ತವೆ.