samachara
www.samachara.com
ದುತಾರ್ತೆ ನಾಡಿನಲ್ಲಿ ನಡುಬೀದಿಯಲ್ಲೇ ಮಹಾಪೌರನಿಗೆ ಗುಂಡಿಕ್ಕಿದ ಪೊಲೀಸರು!
ಸುದ್ದಿ ಸಾರ

ದುತಾರ್ತೆ ನಾಡಿನಲ್ಲಿ ನಡುಬೀದಿಯಲ್ಲೇ ಮಹಾಪೌರನಿಗೆ ಗುಂಡಿಕ್ಕಿದ ಪೊಲೀಸರು!

ಮಾದಕ

ವಸ್ತುಗಳ ವಿರುದ್ಧ ಭಾರಿ ಸಮರ ಸಾರಿರುವ ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಯಾರನ್ನೂ ಬಿಡುವಂತೆ ಕಾಣಿಸುತ್ತಿಲ್ಲ. ಇದೀಗ ಅಧ್ಯಕ್ಷರ ಪೊಲೀಸರು ಫಿಲಿಪ್ಪೀನ್ಸ್ ಮೇಯರ್ ರನ್ನೇ ನಡುಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಶುಕ್ರವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೇಯರ್ ಮತ್ತು ಆತನ 9 ಜನ ಸಂಗಡಿಗರನ್ನು ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ದುತಾರ್ತೆಯ ಮಾದಕ ವಸ್ತುಗಳ ಮೇಲಿನ ಯುದ್ಧದಲ್ಲಿ ನಡೆದ ಭೀಕರ ಕದನಗಳಲ್ಲಿ ಈ ಘಟನೆ ಪ್ರಮುಖವಾಗಿದೆ.

ಸೌದಿ ಅ್ಯಂಪೆಟನ್ ನಗರದ ಮೇಯರ್ ಸಂಶುದ್ದೀನ್ ದಿಮಾಕೋಮ್ ಪೊಲೀಸರ ಗುಂಡಿಗೆ ಬಲಿಯಾದವರಾಗಿದ್ದಾರೆ. ವರ್ಷಾರಂಭದಲ್ಲಿ ಅಧಿಕಾರಕ್ಕೆ ಬಂದಿದ್ದ ದುತಾರ್ತೆ ಮಾದಕ ವಸ್ತು ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ 150 ಸ್ಥಳೀಯ ಅಧಿಕಾರಿಗಳು, ಜಡ್ಜ್ಗಳು, ಪೊಲೀಸರ ಪಟ್ಟಿ ಮಾಡಿದ್ದರು. ಈ ಪಟ್ಟಿಯಲ್ಲಿ ಇದೇ ಮೇಯರ್ ಹೆಸರೂ ಇತ್ತು. ಇವರಿಗೆಲ್ಲಾ ಶರಣಾಗುವಂತೆ, ಇಲ್ಲದಿದ್ದಲ್ಲಿ ಹೊಡೆದುರುಳಿಸಲಾಗುವುದು ಎಂದು ಅಧ್ಯಕ್ಷ ದುತಾರ್ತೆ ಆದೇಶ ಹೊರಡಿಸಿದ್ದರು.

ಆದರೆ ಪೊಲೀಸರಿಗೆ ಬೆನ್ನು ತೋರಿಸಿದ್ದ ಮೇಯರ್ ಶರಣಾಗಿರಲಿಲ್ಲ. ತಾನು ಡ್ರಗ್ಸ್ ಸ್ಮಗ್ಲಿಂಗ್ನಲ್ಲಿ ತೊಡಗಿಸಿಕೊಂಡಿಲ್ಲ ಎಂದು ವಾದಿಸುತ್ತಿದ್ದರು. ಮಾತ್ರವಲ್ಲ ಮಾಧ್ಯಮಗಳ ಮುಂದೆ ತಾವೂ ಮಾದಕ ಪದಾರ್ಥಗಳ ಅಕ್ರಮ ಸಾಗಣೆ ವಿರುದ್ಧ ಹೋರಾಟ ಮಾಡುತ್ತಿದ್ದು, ದುತಾರ್ತೆಯ ಕೆಲಸಕ್ಕೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದ್ದರು.

ಇದೀಗ ದಿಮಾಕೋಮ್’ರನ್ನು ಬೀದಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದಿಮಾಕೋಮ್ ಮತ್ತು ಆತನ ಸಹಚರರು ದುತಾರ್ತೆಯ ತವರು ದವಾವೋ ನಗರದಿಂದ ಮಗಯಂಡನಾವೋ ಪ್ರಾಂತ್ಯಕ್ಕೆ ದೊಡ್ಡ ಮಟ್ಟದಲ್ಲಿ ‘ಮೆಥಾಂಫೆಟಾಮೀನ್’ ಮಾದಕ ಪದಾರ್ಥ ಕಳ್ಳ ಸಾಗಣೆ ಮಾಡಲು ಯತ್ನಿಸುತ್ತಿದ್ದರು. ಈ ಮಾಹಿತಿಯ ಮೇಲೆ ತಾವು ಕಾರ್ಯಾಚರಣೆ ನಡೆಸಿರುವುದಾಗಿ ಪೊಲೀಸರು ಹೇಳಿಕೊಂಡಿದ್ದಾರೆ.

“ಇದೇ ಅನುಮಾನದ ಮೇರೆಗೆ ದಿಮಾಕೋಮ್ ಕಾರನ್ನು ಆ್ಯಂಟಿ ನಾರ್ಕೋಟಿಕ್ ಪೊಲೀಸರು ತಡೆದಾಗ ಕಾರಿನಲ್ಲಿದ್ದವರು ಪೊಲೀಸರತ್ತ ಗುಂಡಿನ ದಾಳಿ ಆರಂಭಿಸಿದರು,” ಎಂದು ಪೊಲೀಸ್ ವಕ್ತಾರ ರೋಮಿಯೋ ಗುಲ್ಗೋ ಹೇಳಿದ್ದಾರೆ. ಈ ಸಂದರ್ಭ ಪೊಲೀಸರು ಅನಿವಾರ್ಯವಾಗಿ ಮರು ದಾಳಿ ನಡೆಸಿದ್ದು ಮೇಯರ್ ಮತ್ತು ಮೇಯರ್ ಸಹಚರರನ್ನು ರಾಜಧಾನಿ ಮನೀಲಾದಿಂದ 950 ಕಿಲೋಮೀಟರ್ ದೂರದ ಮಕಿಲಾಲದಲ್ಲಿ ಹೊಡೆದುರುಳಿಸಿದ್ದಾರೆ.

ಮೇಯರ್ ಮತ್ತು ಮೇಯರ್ ಪತ್ನಿಯನ್ನು ಕೊಂದ ನಂತರ ದಿಮಾಕೋಮ್ ಮನೆಯನ್ನು ಪೊಲೀಸರು ಹುಡುಕಾಡಿದ್ದು ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಹೀಮದೆ ಪೊಲೀಸರ ಹಿಟ್ ಲಿಸ್ಟಿನಲ್ಲಿ ಇದ್ದುದರಿಂದ ಮೇಯರ್ಗೆ ಇದ್ದ ಪೊಲೀಸ್ ಭದ್ರತೆ ಮತ್ತು ಮಿಲಿಟರಿ ರಕ್ಷಣೆಯನ್ನು ಹಿಂತೆಗೆದುಕೊಳ್ಳಲಾಗಿತ್ತು.

ದುತಾರ್ತೆಯ ಮೆಗಾ ಡ್ರಗ್ ಸಮರ


       ರೊಡ್ರಿಗೋ ದುತಾರ್ತೆ
ರೊಡ್ರಿಗೋ ದುತಾರ್ತೆ

ಕಳೆದ ಮೇನಲ್ಲಿ ಚುನಾವಣೆ ನಡೆದು ದೇಶದ ಅಧ್ಯಕ್ಷ ಸ್ಥಾನಕ್ಕೇರಿದ್ದ ರೊಡ್ರಿಗೋ ದುತಾರ್ತೆ ಮಾದಕ ವಸ್ತುಗಳ ಮೇಲೆ ಯುದ್ಧವನ್ನೇ ಸಾರಿದ್ದರು. ಪರಿಣಾಮ ಅಧಿಕಾರಕ್ಕೇರಿದ 100ದಿನಗಳಲ್ಲಿ 3800 ಜನ ಸಾವಿಗೀಡಾಗಿದ್ದಾರೆ. ಇದರ ವಿರುದ್ಧ ಅಮೆರಿಕಾ, ವಿಶ್ವಸಂಸ್ಥೆ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಧ್ವನಿ ಎತ್ತುತ್ತಲೇ ಇವೆ. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದ ದುತಾರ್ತೆ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ.

ಗುರುವಾರವಷ್ಟೇ ಜಪಾನ್ ಪ್ರವಾಸದಿಂದ ಮರಳಿ ಬಂದಿರುವ ದುತಾರ್ತೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಶಂಕಿತರ ಕೊಲೆಯನ್ನು ಹೆಚ್ಚು ಮಾಡುತ್ತೇನ ಎಂದು ಹೇಳಿದ್ದರು. ಈ ಹಿಂದೆ ಯರೋಪಿಯನ್ ಯೂನಿಯನ್ ಕೊಲೆಗಳನ್ನು ನಿಲ್ಲಿಸುವಂತೆ ಅವರಲ್ಲಿ ಕೇಳಿಕೊಂಡಿತ್ತಾದರೂ ಅದಕ್ಕೂ ದುತಾರ್ತೆ ಸೊಪ್ಪು ಹಾಕಿರಲಿಲ್ಲ. ಬದಲಿಗೆ ಯೂನಿಯನ್ ಸಲಹೆಗೆ ಆಕ್ರೋಷ ವ್ಯಕ್ತಪಡಿಸಿದ್ದ ದುತಾರ್ತೆ, ಯುರೋಪಿಯನ್ ಯೂನಿಯನನ್ನು ಅಶ್ಲೀಲವಾಗಿ ತರಾಟೆಗೆ ತೆಗೆದುಕೊಂಡಿದ್ದರು.

More on this topic: