samachara
www.samachara.com
ಅಮೆರಿಕಾಗೆ ಕಾಲಿಟ್ಟ ‘ಮ್ಯಾಥ್ಯೂ ಚಂಡಮಾರುತ’: ನಿಸರ್ಗದ ಆರ್ಭಟಕ್ಕೆ ಒಟ್ಟು 900 ಬಲಿ!
ಸುದ್ದಿ ಸಾರ

ಅಮೆರಿಕಾಗೆ ಕಾಲಿಟ್ಟ ‘ಮ್ಯಾಥ್ಯೂ ಚಂಡಮಾರುತ’: ನಿಸರ್ಗದ ಆರ್ಭಟಕ್ಕೆ ಒಟ್ಟು 900 ಬಲಿ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಹೈಟಿ ಮೇಲೆ ಅಪ್ಪಳಿಸಿ 900ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದ್ದ ‘ಹರಿಕೇನ್ (ಚಂಡಮಾರುತ) ಮ್ಯಾಥ್ಯೂ’ ಅಮೆರಿಕಾಕ್ಕೂ ಕಾಲಿಟ್ಟಿದೆ. ಜಾರ್ಜಿಯಾ ಮತ್ತು ಕ್ಯಾರೊಲಿನಾ ಭಾಗಗಳಲ್ಲಿ ಚಂಡಮಾರುತದಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಆತಂಕ ತಲೆದೋರಿದೆ.

ಈ ವಾರದ ಆರಂಭದಲ್ಲಿ ಉತ್ತರ ಅಮೆರಿಕಾದ ದ್ವೀಪರಾಷ್ಟ್ರ ಹೈಟಿ ಮೇಲೆ ಮ್ಯಾಥ್ಯೂ ಚಂಡಮಾರುತ ಬಂದು ಅಪ್ಪಳಿಸಿತ್ತು. ಪರಿಣಾಮ ದಕ್ಷಿಣ ಹೈಟಿಯ 90 ಭಾಗ ಪೂರ್ತಿ ನಾಶವಾಗಿ 900ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮ್ಯಾಥ್ಯೂ ಚಂಡಮಾರುತ ತೀವ್ರವಾಗಿದ್ದು, ಹಾನಿಯಾದ ಕೆಲವು ಪ್ರದೇಶಗಳಿಗೆ ರಕ್ಷಣಾ ಪಡೆಗಳಿಗೂ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೈಟಿಯಲ್ಲಿ ಇನ್ನೂ ಹೆಚ್ಚಿನ ಹಾನಿ ಸಂಭವಿಸಿರುವ ಸಾಧ್ಯತಗಳಿದ್ದ, ಸಾವಿನ ಸಂಖ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಭೀತಿ ಸೃಷ್ಟಿಯಾಗಿದೆ.

ಶುಕ್ರವಾರ ಸಂಜೆ ವೇಳೆಗೆ 877 ಜನ ಸತ್ತಿರುವುದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕೆರಿಬಿಯನ್ ಭಾಗದಲ್ಲಿ ದಶಕದಲ್ಲೇ ಬಂದ ಭೀಕರ ಚಂಡಮಾರುತವಾಗಿದ್ದು, ಹಾನಿಗೊಂಡ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆ ತೀವ್ರಗೊಂಡಿದೆ.

ಮುಖ್ಯವಾಗಿ ಚಂಡಮಾರುತದ ಭೀಕರತೆ ಸರಕಾರ ಮತ್ತು ಜನರ ನಿದ್ದೆಗೆಡಿಸಿದೆ. ಈ ವಿಕೋಪದಿಂದ ಬದುಕುಳಿದು ಬಂದವರು ವಿವರಿಸುತ್ತಿರುವ ಘಟನೆಗಳು ಚಂಡಮಾರುತದ ತೀವ್ರತೆಯನ್ನು ಸಾರಿ ಹೇಳುತ್ತಿವೆ. ‘ಮೂರು ಮಹಡಿಯ ಕಟ್ಟಡ ಕಣ್ಣೆದುರೇ ಕುಸಿದು ಬಿತ್ತು’, ‘ಸಣ್ಣ ನಗರಗಳು ಪೂರ್ತಿ ಕಣ್ಮರೆಯೇ ಆಗಿವೆ,’ ಎನ್ನುವ ರೀತಿಯ ಅನುಭವಗಳನ್ನು ಜನ ಹಂಚಿಕೊಳ್ಳುತ್ತಿದ್ದಾರೆ.

ಆರಂಭದಲ್ಲಿ ಗಂಟೆಗೆ 230 ಕಿಲೋಮೀಟರ್ ವೇಗದ ಚಂಡಮಾರುತ ಬಂದು ಟಿಬುರೋನ್ ಪೆನಿನ್ಸುಲಾ ಮೂಲಕ ದಕ್ಷಿಣ ಹೈಟಿ ಮೇಲೆ ಅಪ್ಪಳಿಸಿದ್ದು ಮನೆಗಳನ್ನು ನೆಲಸಮ ಮಾಡಿದೆ. ರಾಜಧಾನಿ ಪೋರ್ಟ್-ಅವ್-ಪ್ರಿನ್ಸ್ ನಗರವನ್ನು ದಕ್ಷಿಣ ಕರಾವಳಿಯ ಜತೆ ಬೆಸೆಯುವ ಪ್ರಮುಖ ರಸ್ತೆ ಮಾಯವಾಗಿದ್ದು ಸಂಪರ್ಕ ಕಡಿತಗೊಂಡಿದೆ.

ಸರಕಾರ ಮತ್ತು ವಿಶ್ವಸಂಸ್ಥೆಯ ಅಧಿಕಾರಿಗಳ ಪ್ರಕಾರ 3,50,000 ಜನ ತುರ್ತು ನೆರವು ಬಯಸಿದ್ದಾರೆ. ಆದರೆ ಕೆಲವು ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕವೂ ತೆರಳಲು ಸಾಧ್ಯವಾಗುತ್ತಿಲ್ಲ.

ಹೈಟಿ ಮತ್ತು ಕ್ಯೂಬಾ ಮೂಲಕ ಹಾದು ಹೋದ ಚಂಡಮಾರುತ ಬಹಾಮಸ್ ದ್ವೀಪಕ್ಕೆ ಗುರುವಾರ ಅಪ್ಪಳಿಸಿದರೆ, ಶುಕ್ರವಾರ ಅಮೆರಿಕಾದ ಫ್ಲೋರಿಡಾ ಪ್ರವೇಶಿಸಿತ್ತು. ಆದರೆ ಬಹಾಮಸ್ ನಲ್ಲಿ ಯಾವುದೇ ಜೀವಹಾನಿ ವರದಿಯಾಗಿಲ್ಲವಾದರೆ, ಪ್ಲೋರಿಡಾದಲ್ಲಿ ನಾಲ್ಕು ಜನರಷ್ಟೇ ಸಾವನ್ನಪ್ಪಿದ್ದರು. ಇನ್ನು ಪಕ್ಕದ ಡೊಮಿನಿಕನ್ ರಿಪಬ್ಲಿಕಿನಲ್ಲಿ ಮಂಗಳವಾರ ನಾಲ್ಕು ಜನ ಇದೇ ಚಂಡ ಮಾರುತದ ಹೊಡೆತಕ್ಕೆ ಪ್ರಾಣ ಬಿಟ್ಟಿದ್ದರು.


       ಹರಿಕೇನ್ ಮ್ಯಾಥ್ಯೂ ಗ್ರಾಫಿಕ್ ಚಿತ್ರ
ಹರಿಕೇನ್ ಮ್ಯಾಥ್ಯೂ ಗ್ರಾಫಿಕ್ ಚಿತ್ರ

ಇದೀಗ ಇದೇ ಚಂಡಮಾರುತ ಅಮೆರಿಕಾದಲ್ಲಿ ಹಾವಳಿ ಎಬ್ಬಿಸುತ್ತಿದ್ದು, ದಕ್ಷಿಣ ಕರೋಲಿನಾದಲ್ಲಿ ಭೂ ಕುಸಿತ ಉಂಟುಮಾಡಿದೆ.

ಶುಕ್ರವಾರ ಫ್ಲೋರಿಡಾಗೆ ಚಂಡಮಾರುತ ಕಾಲಿಡುತ್ತದೆ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಸದ್ಯ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು ಜಾರ್ಜಿಯಾ ಮತ್ತು ದಕ್ಷಿಣ ಕ್ಯಾರೊಲಿನಾದ ಮೂರು ಲಕ್ಷ ಜನರಿಗೆ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಹೇಳಲಾಗಿದೆ.

ಅಮೆರಿಕಾದ ‘ರಾಷ್ಟ್ರೀಯ ಚಂಡಮಾರುತ ಕೇಂದ್ರ’ ಈ ಹರಿಕೇನ್ ವೇಗವನ್ನು ಗಂಟೆಗೆ 120 ಕಿಲೋಮೀಟರ್ ವೇಗಕ್ಕೆ ಇಳಿಸಿದೆ. ಆದರೆ ದೊಡ್ಡಮಟ್ಟಕ್ಕೆ ಪ್ರವಾಹ ಬರುವ ಎಚ್ಚರಿಕೆಯನ್ನು ಚಂಡಮಾರುತ ಕೇಂದ್ರವು ನೀಡಿದೆ.

ಅಮೆರಿಕಾ ತನ್ನ ನೌಕಾ ಸೇನೆಯ ಹಡಗು ಹಾಗೂ ಮಿಲಟರಿಯ 9 ಹೆಲಿಕಾಫ್ಟರ್ಗಳನ್ನು ರಕ್ಷಣಾ ಕಾರ್ಯಚರಣೆ ಇಳಿಸಿದೆ.

ಗಾಯದ ಮೇಲೆ ಬರೆ

ಬಡ ದ್ವೀಪ ರಾಷ್ಟ್ರ ಹೈಟಿ 2010ರಲ್ಲಿ ಭೀಕರ ಭೂಕಂಪಕ್ಕೆ ತುತ್ತಾಗಿತ್ತು; ಸಾವಿರಾರು ಜನ ಸಾವಿಗೀಡಾದಾರೆ, ಕಾಲರಾ ರೋಗ ಎಲ್ಲೆಲ್ಲೂ ಕಾಣಿಸಿಕೊಂಡಿತ್ತು. ಅಂದು ಪತನಗೊಂಡ ಹೈಟಿ ಇಂದಿಗೂ ಸರಿಯಾಗಿ ಎದ್ದು ನಿಂತಿಲ್ಲ. ಇದೀಗ ಮತ್ತೆ ಪ್ರವಾಹ, ಚಂಡಮಾರುತದಿಂದ ನುರಾರು ಜನ ಜೀವ ಕಳೆದುಕೊಂಡಿದ್ದು ಬೆನ್ನಿಗೇ ಕಾಲಾರ ಮಾರಿ ಹುಟ್ಟಿಕೊಳ್ಳುವ ಭೀತಿ ಎದುರಾಗಿದೆ.

ಚಿತ್ರ ಕೃಪೆ:

ದಿ ಗಾರ್ಡಿಯನ್