‘ಕಾಶ್ಮೀರ ಸಂಘರ್ಷ’ಕ್ಕೆ 4 ತಿಂಗಳು: ಕಣಿವೆ ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ
ಸುದ್ದಿ ಸಾರ

‘ಕಾಶ್ಮೀರ ಸಂಘರ್ಷ’ಕ್ಕೆ 4 ತಿಂಗಳು: ಕಣಿವೆ ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

13 ವರ್ಷದ ಬಾಲಕನ ಸಾವಿನೊಂದಿಗೆ ಕಾಶ್ಮೀರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.

ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಪೆಲ್ಲೆಟ್ ಗನ್ ದಾಳಿಯಿಂದ ಶ್ರೀನಗರದ ಸೈದ್ಪುರ ಪ್ರದೇಶದ ನಿವಾಸಿ ಜುನೈದ್ ಅಹ್ಮದ್ ಭಟ್ ಗಂಭೀರ ಗಾಯಗೊಂಡಿದ್ದ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮುಂಜಾನೆ ಬಾಲಕ ಮೃತನಾಗಿದ್ದು ಮತ್ತೆ ಪ್ರತಿಭಟನೆಗಳು ತಾರಕಕ್ಕೇರಿವೆ.

ಜುನೈದ್ ಸಾವಿನೊಂದಿಗೆ ಕಳೆದು ಮೂರು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಬಲಿಯಾದವರ ಸಂಖ್ಯೆ 91ಕ್ಕೆ ಏರಿಕೆಯಾಗಿದೆ.

ಶುಕ್ರವಾರದಂದು ಪುಲ್ವಾಮ, ಶೋಪಿಯಾನ್ ಮತ್ತು ಉತ್ತರ ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಈ ವೇಳೆ ಪ್ರತಿಭಟನಾಕಾರರು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಪ್ರತಿಭಟನಾಕಾರರು ಈ ವೇಳೆ ಸೈನಿಕರ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ. ಈ ವೇಳೆ ಸೈನಿಕರು ಪೆಲ್ಲೆಟ್ ಗನ್ ದಾಳಿ ನಡೆಸಿದ್ದು, ಇದರಲ್ಲಿ ಎಳೆ ಬಾಲಕ ಸಾವನ್ನಪ್ಪುವಂತಾಗಿದೆ.

ಜುನೈದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಜಮ್ಮು ಪೊಲೀಸರು ಹೇಳಿದ್ದಾರೆ. “ಆತನ (ಜುನೈದ್) ಸೈದ್ಪೊರ ಮನೆಯ ಮೈನ್ ಗೇಟ್ ಬಳಿ ಜುನೈದ್ ನಿಂತಿದ್ದ. ಆ ಸಂದರ್ಭ ಆತನ ಮೇಲೆ ಪೆಲ್ಲೆಟ್ ಕ್ಯಾಡ್ರಿಡ್ಜ್ ಸ್ಪೋಟಿಸಲಾಗಿದೆ,” ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜುನೈದ್ ತಲೆಗೆ ಮತ್ತು ಎದೆಭಾಗಕ್ಕೆ ಡಜನ್ ಗಟ್ಟಲೆ ಪೆಲ್ಲೆಟ್ಗಳು ಹೊಕ್ಕಿದ್ದವು. ನಂತರ ಸ್ಥಳೀಯರು ಜುನೈದ್ನನ್ನು ಇಲ್ಲಿನ ‘ಶೇರ್-ಇ-ಕಾಶ್ಮೀರ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್’ ಆಸ್ಪತ್ರೆಗೆ ಸೇರಿಸಲಾಯಿತಾದರೂ ಸಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ.

ಈತನ ಶವದೊಂದಿಗೆ ದೊಡ್ಡ ಸಂಖ್ಯೆಯಲ್ಲಿ ಜನರು ನಗರದ ಈದ್ಗಾ ಮೈದಾನತ್ತ ಬೆಳಿಗ್ಗೆ ಮೆರವಣಿಗೆ ಹೊರಟಿದ್ದಾರೆ. ಈ ಜನರತ್ತ ಪೊಲೀಸರು ಆಶ್ರುವಾಯು ಸಿಡಿಸಿದ್ದು ಮತ್ತೆ ಹಿಂಸಾಚಾರ ಆರಂಭವಾಗಿದೆ.

ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ 7 ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಎಲ್ಲಾ ವ್ಯಾಪಾರ ಹಾಗೂ ವ್ಯವಹಾರಗಳನ್ನು ಬಂದ್ ಮಾಡಲಾಗಿದೆ. ಇದಲ್ಲದೆ, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಜುಲೈ 8ರಂದು ಹಿಜ್ಬುಲ್ಲಾ ಮುಜಾಹಿದ್ದೀನ್ ಬಂಡುಕೋರ 21 ವರ್ಷದ ಬುರ್ಹಾನ್ ವನಿಯನ್ನು ಭದ್ರತಾ ಪಡೆಗಳನ್ನು ಎನ್ಕೌಂಟರಿನಲ್ಲಿ ಹೊಡೆದುರುಳಿಸಿದ್ದವು. ಇದಾದ ಬೆನ್ನಿಗೆ ಭಾರಿ ಪ್ರತಿಭಟನೆಗಳು ಎದ್ದಿದ್ದವು. ಅವತ್ತಿನಿಂದ ಆರಂಭವಾದ ‘ಕಾಶ್ಮೀರ ಸಂಘರ್ಷ’ಕ್ಕೆ ಶನಿವಾರ ನಾಲ್ಕನೇ ತಿಂಗಳಿಗೆ ಕಾಲಿಟ್ಟಿದೆ. ಕರ್ಫ್ಯೂ 92ನೇ ದಿನಕ್ಕೆ ಕಾಲಿಟ್ಟಿದ್ದು ಸಾವಿನ ಸಂಖ್ಯೆ 91ಕ್ಕೆ ಬಂದು ನಿಂತಿದೆ.