ಸುದ್ದಿ ಸಾರ

ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹ: ಮಹಿಳೆಯರ ಭಾರಿ ಪ್ರತಿಭಟನೆ

'ಗಾಂಧಿ ಜಯಂತಿ' ಹಿನ್ನೆಲೆಯಲ್ಲಿ ಮದ್ಯಪಾನದ ಮೇಲೆ ಸಂಪೂರ್ಣ ನಿಷೇಧಕ್ಕೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆಗೆ ಭಾನುವಾರ ರಾಯಚೂರು ಜಿಲ್ಲಾ ಕೇಂದ್ರ ಸಾಕ್ಷಿಯಾಯಿತು.

ಸುಮಾರು 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ, ಜಿಲ್ಲೆಯ ನಾನಾ ಹಳ್ಳಿಗಳಿಂದ ಆಗಮಿಸಿದ ಮಹಿಳೆಯರು, ರಾಜ್ಯದಲ್ಲಿ ಮದ್ಯ ಉತ್ಪಾದನೆ ಹಾಗೂ ಮಾರಾಟದ ಮೇಲೆ ನಿಷೇಧ ಹೇರಬೇಕು ಎಂದು ಆಗ್ರಹಿಸಿದರು. 'ಮದ್ಯಪಾನ ನಿಷೇಧ ಆಂದೋಲನ- ಕರ್ನಾಟಕ' ನೇತೃತ್ವದಲ್ಲಿ ಸುಮಾರು 27 ಸಹಭಾಗಿ ಸಂಘಟನೆಗಳು ಈ ಪ್ರತಿಬಟನೆಯನ್ನು ಆಯೋಜಿಸಿದ್ದವು.

ಮುಂಜಾನೆಯಿಂದಲೇ ರಾಯಚೂರಿನ ಎಪಿಎಂಸಿ ಮಾರುಕಟ್ಟೆಗೆ ಆಗಮಿಸತೊಡಗಿದ ಮಹಿಳೆಯರು, 'ನಮಗೆ ಭೂಮಿ ಮತ್ತು ವಸತಿ ಬೇಕು; ಮದ್ಯಪಾನ ಬೇಡ' ಎಂಬ ಘೋಷಣೆಗಳನ್ನು ಕೂಗತೊಡಗಿದರು. ಜತೆಗೆ, ಸೂಕ್ತ ವೈದ್ಯ ಸೌಲಭ್ಯ, ವ್ಯಸನ ಮುಕ್ತಗೊಳಿಸಲು ಪುನರ್ವಸತಿ ಕೇಂದ್ರಗಳಿಗಾಗಿ ಬೇಡಿಕೆ ಮುಂದಿಟ್ಟರು. 'ಮದ್ಯಪಾನ ನಿಷೇಧ ಮಾಡುವವರಿಗೆ ನಮ್ಮ ಮತವನ್ನು ಮೀಸಲಿಡುವುದಾಗಿ' ಭಾರಿ ಸಂಖ್ಯೆಯಲ್ಲಿದ್ದ ಮಹಿಳೆಯರು ಘೋಷಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾಮೀಣ ಕೂಲಿ ಕಾರ್ಮಿಕ ಸಂಘಟನೆ ನಾಯಕಿ ಸ್ವರ್ಣಾ ಭಟ್, ಮದ್ಯಪಾನದಿಂದಾಗಿ ಸರಕಾರ ಬಡ ಜನರ ಬದುಕನ್ನು ಹಾಳು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರ ತೆರಿಗೆ ಹಣದ ನೆಪವನ್ನು ಇಟ್ಟುಕೊಂಡು ಮದ್ಯಪಾನವನ್ನು ಪ್ರೋತ್ಸಾಹಿಸುತ್ತಿರುವುದನ್ನು ಖಂಡಿಸಿದರು.

"ರಾಜ್ಯದ ವರಮಾನಕ್ಕೆ ಮದ್ಯ ಮಾರಾಟದಿಂದ ಹಣ ಬರುತ್ತದೆ ಎಂಬ ಸಾಮಾನ್ಯ ನೆಪವನ್ನು ಎಲ್ಲಾ ಸರಕಾರಗಳು ನೀಡುತ್ತಲೇ ಬಂದಿವೆ. ಹೀಗೆ ಸಂಗ್ರಹವಾದ ತೆರಿಗೆ ಹಣವನ್ನು ಸ್ಥಿತಿವಂತರಿಗೆ ಮತ್ತು ಉಳ್ಳವರಿಗೆ ನಾನಾ ರೂಪದಲ್ಲಿ ಖರ್ಚು ಮಾಡಲಾಗುತ್ತದೆ. ಮದ್ಯ ಮಾರಾಟವನ್ನು ಪ್ರೋತ್ಸಾಹಿಸುವ ಮೂಲಕ ಬಡವರು ಇನ್ನಷ್ಟು ನಿರ್ಗತಿಕರಾಗುತ್ತಿದ್ದಾರೆ. ಮದ್ಯ ಮಾರಾಟಗಾರರು ಸ್ಥಿತಿವಂತರಾಗುತ್ತಿದ್ದಾರೆ,'' ಎಂದು ಭಟ್ ಆರೋಪಿಸಿದರು.

ಇದೇ ಸಮಯದಲ್ಲಿ, ಪಾಲ್ಗೊಂಡ ಮಹಿಳೆಯರು ಮದ್ಯಪಾನದಿಂದ ಅವರ ಕೌಟುಂಬಿಕ ಜೀವನದಲ್ಲಿ ಎದುರಾದ ಸಂಕಷ್ಟಗಳನ್ನು ಹಂಚಿಕೊಂಡರು.

ಕೃಪೆ: ದಿ ಹಿಂದೂ.

ಚಿತ್ರಗಳು: ಸಂತೋಷ್ ಸಾಗರ್.