ಜಿಯೋ ಮತ್ತು ಏರ್‌ಟೆಲ್ 
ಸುದ್ದಿ ಸಾರ

‘ಜಿಯೋ’ದಿಂದಾಗಿ ಏರ್ಟೆಲ್ ಕಳೆದುಕೊಳ್ಳೋದು ನಗಣ್ಯ!

ರಿಲಯನ್ಸ್ ಜಿಯೋ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪೆನಿ ಏರ್ಟೆಲ್ ಒಂದಷ್ಟು ನಷ್ಟ ಅನುಭವಿಸಲಿದೆ. ಆದರೆ, ಗ್ರಾಹಕರ ವಿಚಾರದಲ್ಲಿ ಏರ್ಟೆಲ್ ದೊಡ್ಡ ಮಟ್ಟದ ಕುಸಿತ ಕಾಣುವುದಿಲ್ಲ ಎಂದು 'ಎಸ್ ಆ್ಯಂಡ್ ಪಿ' ಗ್ಲೋಬಲ್ ರೇಟಿಂಗ್ಸ್ ಹೇಳಿದೆ.

ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿ ಏರ್ಟೆಲ್ ತನ್ನ ಆದಾಯದಲ್ಲಿ ಸ್ವಲ್ಪ ಮಟ್ಟಿಗೆ ಕುಸಿತ ಕಾಣಲಿದೆ. 2016ರ ಆರ್ಥಿಕ ವರ್ಷದಲ್ಲಿ ಶೇಕಡಾ 10ರಷ್ಟು ಕಳೆದುಕೊಳ್ಳಲಿದೆ. ಆದರೆ ಮುಂದಿನ ಎರಡು ವರ್ಷಗಳಲ್ಲಿ, ಅಂದರೆ 2017 ಹಾಗೂ 2018ರ ಆರ್ಥಿಕ ವರ್ಷದಲ್ಲಿ ನಷ್ಟದ ಪ್ರಮಾಣ ಶೇಕಡಾ 5ರಷ್ಟು ಮಾತ್ರವೇ ಕುಸಿತ ಉಂಟಾಗಲಿದೆ, ಎಂದು ರೇಟಿಂಗ್ಸ್ ಸಂಸ್ಥೆ ಹೇಳಿದೆ.

“ಸ್ಪರ್ಧಾತ್ಮಕ ಕರೆ ಮತ್ತು ಡೇಟಾ ದರಗಳಿಂದಾಗಿ ಭಾರ್ತಿ ಏರ್ಟೆಲ್ ಒಂದಷ್ಟು ಮಾರುಕಟ್ಟೆ ಕಳೆದುಕೊಳ್ಳಬೇಕಾಗಬಹುದು,” ಎಂದು ಏಜೆನ್ಸಿ ಹೇಳಿದೆ.ಜಿಯೋದ ಆರಂಭವೇ ಅಸ್ಥಿರವಾಗಿದೆ. ಇದರಿಂದ ಏರ್ಟೆಲ್ಗೆ ಅಂತಹ ಹೆದರಿಕೆಯೇನೂ ಇಲ್ಲ. ಇನ್ನು ಜಿಯೋಗೆ ಏರ್ಟೆಲ್ ಕೂಡಾ ಸರಿಯಾಗಿ ಸ್ಪರ್ಧೆ ನೀಡಲಿರುವುದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕಡಿಮೆ.

ಜಿಯೋ 4ಜಿಯಲ್ಲಿ ಮಾತ್ರ ಸೇವ ನೀಡುತ್ತಿದೆ. ಆದರೆ ಏರ್ಟೆಲ್ ಬಳಿ ಬೇರೆ ಬೇರೆ ಪ್ಲಾನ್ಗಳಿದ್ದು, ಗ್ರಾಹಕರನ್ನು ಉಳಿಸಿಕೊಳ್ಳುವಲ್ಲಿ ಸಹಾಯ ಮಾಡಲಿದೆ ಎಂದು ವಿಶ್ಲೇಷಿಸಲಾಗಿದೆ.ಭಾರತದಲ್ಲಿ ಸದ್ಯ ಏರ್ಟೆಲ್ ಜತೆ 25 ಕೋಟಿಗೂ ಜಾಸ್ತಿ ಗ್ರಾಹಕರಿದ್ದು, ಇವರಲ್ಲಿ ಹೆಚ್ಚಿನ ಗ್ರಾಹಕರು ಸ್ಥಿರ ಗ್ರಾಹಕರಾಗಿದ್ದಾರೆ. ಹೀಗಾಗಿ ಜಿಯೋಗೆ ಸ್ಪರ್ಧೆ ಕೊಡಲು ಏರ್ಟೆಲ್ನಿಂದ ಸಾಧ್ಯ ಎಂದು ಏಜೆನ್ಸಿ ವಿಶ್ಲೇಷಣೆ ನಡೆಸಿದೆ.

ಇದಲ್ಲದೇ ಏರ್ಟೆಲ್ 2 ವರ್ಷ ಹಿಂದೆಯೇ 4ಜಿ ಸೇವೆ ಆರಂಭಿಸಿದ್ದು, ದೇಶದ ಹೆಚ್ಚಿನ ಭಾಗಗಳಲ್ಲಿ ಈಗಾಗಲೇ ತನ್ನ ಸೇವೆ ನೀಡುತ್ತಿದೆ. ಆದರೆ ಜಿಯೋ ಈಗಷ್ಟೇ ಅಂಬೆಗಾಲಿಡುತ್ತಿದೆ. ತನ್ನ ಸೇವಾ ಕೇಂದ್ರಗಳ ವಿಸ್ತೃತ ಜಾಲ, ಮೊಬೈಲ್ ಶಾಪ್, ಡೀಲರ್ಗಳೊಂದಿಗೆ ನಂಬಿಕೆಯ ದೀರ್ಘ ಸಂಬಂಧದ ಹಿನ್ನಲೆ ಏರ್ಟೆಲ್ ಮಾತೃ ಸಂಸ್ಥೆ ಭಾರ್ತಿ ಏರ್ಟೆಲ್ಗೆ ಇದೆ. ಮುಂದಿನ ದಿನಗಳಲ್ಲಿ ಇವೆಲ್ಲಾ ಸಹಾಯಕ್ಕೆ ಬರಲಿದೆ ಎಂದು ಏಜೆನ್ಸಿ ಹೇಳಿದೆ.

ಇನ್ನು ಏರ್ಟೆಲ್ ಶೇರುಗಳಿಗೆ ಮಾರುಕಟ್ಟೆಯಲ್ಲಿಯೂ ಉತ್ತಮ ದರವಿರುವುದರಿಂದ ಸಣ್ಣ ಮೊತ್ತದ ಶೇರುಗಳನ್ನು ಮಾರಿಯೂ ತನ್ನ ಮುಂದಿನ ಯೋಜನೆಗಳಿಗೆ ಹಣ ಹೊಂದಿಸಬಹುದಾದ ಅವಕಾಶವೂ ಏರ್ಟೆಲ್ ಮುಂದಿದೆ. ಬಹುಶಃ ಏರ್ಟೆಲ್ ಶೇಕಡಾ 5 ಶೇರುಗಳನ್ನು ಮಾರಿ 33 ಸಾವಿರ ಕೋಟಿ ಹಣ ಎತ್ತಿ ಮುಂದಿನ ಸ್ಪೆಕ್ಟ್ರಂ ಖರೀದಿಗೆ ತೊಡಗಿಸುವ ಯೋಚನೆಯಲ್ಲಿದೆ.

ಹೀಗಾದಲ್ಲಿ ಶಕ್ತಿಶಾಲಿ ನೆಟ್ವರ್ಕ್ ಕೂಡಾ ಎರ್ಟೆಲಿನದ್ದಾಗಲಿದ್ದು, ಮತ್ತಷ್ಟು ಪ್ರದೇಶಗಳಿಗೆ ತನ್ನ ಸೇವೆ ವಿಸ್ತರಿಸಲಿದೆ.ಹೀಗೆ ಮಾರುಕಟ್ಟೆಯಲ್ಲಿ ದೀರ್ಘ ಕಾಲ ಪಳಗಿರುವ ಕಂಪೆನಿ ಏರ್ಟೆಲ್ ಜಿಯೋಗೆ ತನ್ನ ಕಡೆಯಿಂದ ಸಾಧ್ಯವಿರುವಷ್ಟು ಸ್ಪರ್ಧೆ ನೀಡಿ ಗ್ರಾಹಕರನ್ನು ಉಳಿಸುವತ್ತ ಮಾತ್ರ ಮನಸ್ಸು ಮಾಡಿದೆ. ಸದ್ಯಕ್ಕೆ ಇರುವ ಗ್ರಾಹಕರನ್ನು ಉಳಿಸಿಕೊಂಡರೂ ಸಾಕು, ಏರ್ಟೆಲ್ ಜಿಯೋ ವಿರುದ್ಧ ಗೆದ್ದಂತೆಯೇ ಸರಿ.