ಸುದ್ದಿ ಸಾರ

ಶೋಕಾಚರಣೆಯಲ್ಲಿ ಜತೆಗಿದ್ದವರಿಗೆ ಧನ್ಯವಾದ ಅರ್ಪಿಸಿದ ಸಿಎಂ

ಈ ಸುದ್ದಿಯನ್ನು

ಬರೆಯಲು ಶುರು ಮಾಡುವ ಹೊತ್ತಿಗೆ ಶನಿವಾರ ಇಹಲೋಕ ತ್ಯಜಿಸಿದ ರಾಕೇಶ್ ಸಿದ್ದರಾಮಯ್ಯ ಮೃತ ದೇಹವನ್ನು ಎಮರೈಟ್ಸ್ ಏರ್ಲೈನ್ಸ್ ವಿಮಾನದಲ್ಲಿ ದೇಶದ ಕಡೆಗೆ ತೆಗೆದುಕೊಂಡು ಬರಲಾಗುತ್ತಿದೆ. ಸೋಮವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ದೇವನಹಳ್ಳಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬಂದಿಳಿಯಲಿದೆ.

ಭಾನುವಾರ ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಪ್ರಕಾರ, "ಬೆಂಗಳೂರಿನಲ್ಲಿ ವಿಮಾನದಿಂದ ಇಳಿಯುವ ಮೃತ ದೇಹವು, ಅಲ್ಲಿಂದಲೇ ವಿಶೇಷ ವಿಮಾನದಲ್ಲಿ ಮೈಸೂರಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಲ್ಲಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ. ನಂತರ ಸಂಜೆ 3ರಿಂದ 4 ಗಂಟೆ ನಡಯವೆ ಅಂತ್ಯಕ್ರಿಯೆಯನ್ನು ಟಿ. ಕಾಟೂರಿನ ತೋಟದ ಮನೆಯ ಆವರಣದಲ್ಲಿ ನಡೆಸಿಕೊಡಲಾಗುತ್ತದೆ.''

ಇದರ ನಡುವೆಯೇ, ಬೆಲ್ಜಿಯಂ ದೇಶದ ಬ್ರುಸೆಲ್ಸ್ನಲ್ಲಿರುವ ಸಿಎಂ ಸಿದ್ದರಾಮಯ್ಯ, ತಮ್ಮ ಪುತ್ರನ ಸಾವಿಗೆ ಸಂತಾಪವನ್ನು ವ್ಯಕ್ತಪಡಿಸಿದ ನಾಡ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. "ಸಿಎಂ ಸಿದ್ದರಾಮಯ್ಯ ತಮ್ಮ ದುಃಖದಲ್ಲಿ ಪಾಲ್ಗೊಂಡ ಎಲ್ಲರಿಗೂ, ವಿಶೇಷವಾಗಿ ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ನನ್ನ ನೋವನ್ನು ಹಂಚಿಕೊಳ್ಳುವುದು ಕಷ್ಟ ಮತ್ತು ಆಗಿರುವ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ನನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಈ ದುಃಖದ ಸಮಯದಲ್ಲಿ ನನ್ನ ಜತೆಗೆ ನಿಂತವರಿಗೆ ಕೃತಜ್ಞತೆಗಳನ್ನು ಸಲ್ಲಿಸದಿದ್ದರೆ ನಾನು ಕರ್ತವ್ಯವನ್ನು ಮರೆತಂತೆ ಆಗುತ್ತದೆ ಎಂದು ಅವರು ಬ್ರುಸೆಲ್ಸ್ನಿಂದ ತಿಳಿಸಿದ್ದಾರೆ'' ಎಂದು ಪ್ರಕಟಣೆ ಹೇಳಿದೆ. ಇದೇ ವೇಳೆ, ಅವರ ಟ್ವಿಟರ್ ಖಾತೆಯಲ್ಲಿಯೂ ಈ ಕುರಿತು ಸಂದೇಶ ಹಾಕಲಾಗಿದೆ.

ಇದರ ಜತೆಗೆ, ಪಕ್ಕದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಡಿಎಂಕೆ ನಾಯಕ ಕರುಣಾನಿಧಿ ಕೂಡ ಸಿಎಂ ಸಿದ್ದರಾಮಯ್ಯ ಅವರಿಗೆ, "ನಿಮ್ಮ ಪ್ರೀತಿಯ ಪುತ್ರನ ಅಗಲಿಕೆ ನೋವನ್ನು ಭರಿಸಲು ನನ್ನ ಬಳಿ ಪದಗಳಿಲ್ಲ,'' ಎಂದು ಸಂದೇಶ ಕಳುಹಿಸಿದ್ದಾರೆ.