samachara
www.samachara.com
'ಶನಿವಾರದ ಬಂದ್': ಮಹದಾಯಿ 'ಮಧ್ಯಂತರ' ಬೆಳವಣಿಗೆ ವಿರೋಧಿಸಿ ರಾಜ್ಯ ಸ್ಥಗಿತ; ಭಾರಿ ಭದ್ರತೆ
ಸುದ್ದಿ ಸಾರ

'ಶನಿವಾರದ ಬಂದ್': ಮಹದಾಯಿ 'ಮಧ್ಯಂತರ' ಬೆಳವಣಿಗೆ ವಿರೋಧಿಸಿ ರಾಜ್ಯ ಸ್ಥಗಿತ; ಭಾರಿ ಭದ್ರತೆ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕರ್ನಾಟಕದ

ಮಧ್ಯಂತರ ಅರ್ಜಿ ತಿರಸ್ಕರಿಸಿರುವ ಮಹಾದಾಯಿ ನ್ಯಾಯಾಧಿಕರಣದ ತೀರ್ಪು ವಿರೋಧಿಸಿ ಶನಿವಾರ ರಾಜ್ಯಾದ್ಯಂತ ಬಂದಿಗೆ ಕರೆ ನೀಡಲಾಗಿದೆ. ಕನ್ನಡಪರ ಸಂಘಟನೆಗಳು ಹಾಗೂ ಹಲವು ಸಂಘಟನೆಗಳು ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಬಂದಿಗೆ ಕರೆ ನೀಡಿದ್ದು, ಕರಾವಳಿ ಭಾಗ ಹೊರತು ಪಡಿಸಿ ಉಳಿದೆಡೆ ಬಂದ್ ಪೂರ್ತಿ ಯಶಸ್ವಿಯಾಗುವ ಸಾಧ್ಯತೆಗಳಿವೆ.

ಶುಕ್ರವಾರದ ಬೆಳವಣಿಗೆಗಳು: 

ದಿನದಿಂದ ದಿನಕ್ಕೆ ತೀರ್ಪು ವಿರೋಧಿ ಹೋರಾಟ ಹೆಚ್ಚಾಗುತ್ತಿದ್ದು ಶುಕ್ರವಾರದ ಪ್ರತಿಭಟನೆಗೆ ಪೂರ್ವ ಭಾವಿಯಾಗಿ ಹೋರಾಟದ ಕೇಂದ್ರಗಳಾದ ಹುಬ್ಬಳ್ಳಿ-ಧಾರವಾಡ, ಗದಗದಲ್ಲಿ ರೈತರ ಬಂಧನಗಳು ನಡೆದಿವೆ.

ಪ್ರತಿಭಟನೆ ದೀರ್ಘ ಇತಿಹಾಸವಿರುವ ನವಲಗುಂದ ಮತ್ತು ನರಗುಂದದಲ್ಲಿ ಗುರುವಾರ ಸಂಜೆಯಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಅಲ್ಲಿನ ಶಾಲಾ ಕಾಲೇಜುಗಳಿಗೆ ರಜೆಯನ್ನೂ ನೀಡಲಾಗಿತ್ತು.

ಇಲ್ಲಿನ ಯಮುನೂರಿ ಗ್ರಾಮದಲ್ಲಿ ಸುಮಾರು 35 ಜನರಿದ್ದ ಗುಂಪು ಪೊಲೀಸ್ ಜೀಪಿನ ಮೇಲೆ ಕಲ್ಲು ತೂರಾಟ ನಡೆಸಿದೆ. ಈ ವೇಳೆ ಜೀಪಿನಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದು ತಕ್ಷಣ ಅಲ್ಲಿಗೆ ಹೆಚ್ಚಿನ ಪಡೆಗಳನ್ನು ಕರೆಸಿಕೊಳ್ಳಲಾಗಿತ್ತು.

ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ನಿನ್ನೆ ನವಲಗುಂದದಲ್ಲಿ ಹಿಂಸಾಚಾರ ನಡೆದಿತ್ತು. ಈ ವೇಳೆ ಸರಕಾರಿ ಕಚೇರಿಗೆ ಬೆಂಕಿ ಇಟ್ಟಿದ್ದ ಪ್ರತಿಭಟನಾಕಾರರು ದಾಖಲೆಗಳನ್ನು ಸುಟ್ಟು ಹಾಕಿದ್ದರು. ಶುಕ್ರವಾರ ನವಲಗುಂದಕ್ಕೆ ಭೇಟಿ ನೀಡಿದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ, ಪ್ರತಿಭಟನಾನಿರತರು ಬೆಂಕಿ ಹಚ್ಚಿದ್ದ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗುರುವಾರದ ಹೋರಾಟದ ವೇಳೆ ನವಲಗುಂದದ 10 ಸರ್ಕಾರಿ ಕಚೇರಿಗಳಿಗೆ ಹಾನಿಯಾಗಿದೆ. ಈ ವೇಳೆ ಪೊಲೀಸರು ಅನಿವಾರ್ಯವಾಗಿ ಲಾಠಿ ಬೀಸಿದ್ದರು. ಸರಕಾರಿ ಕಚೇರಿ ಮೇಲೆ ದಾಳಿ, ಸಾರ್ವಜನಿಕ ಆಸ್ತಿಗೆ ಹಾನಿ ಸೇರಿದಂತೆ ಐದು ಪ್ರಕರಣಗಳಿಗೆ ಸಂಬಂಧಿಸಿದಂತೆ ನವಲಗುಂದದಲ್ಲಿ127 ಕ್ಕೂ ಹೆಚ್ಚು ರೈತರನ್ನು ಬಂಧಿಸಲಾಗಿತ್ತು. ನರಗುಂದ ಮತ್ತು ಗದಗದಲ್ಲಿಯೂ ಕ್ರಮವಾಗಿ 19 ಮತ್ತು 11 ಜನರನ್ನು ಗುರುವಾರವೇ ಬಂಧಿಸಿದ್ದರು.

ಬಂದ್ ಪೂರ್ವ ತಯಾರಿ: 

ಉತ್ತರ ಕರ್ನಾಟಕದಾದ್ಯಂತ ಭಿಗಿ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಗಲಭೆ, ಹೋರಾಟದ ನರಗುಂದ ಹಾಗೂ ನವಲಗುಂದ ಅವಳಿ ತಾಲೂಕು ಕೇಂದ್ರಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ. ಈಗಾಗಗಲೇ ಎರಡು ಆರ್‍ಎಎಫ್ ಹಾಗೂ ಎರಡು ಬಿಎಸ್‍ಎಫ್ ತುಕಡಿಗಳು ಉತ್ತರ ಕರ್ನಾಟಕದಲ್ಲಿ ಬೀಡು ಬಿಟ್ಟಿವೆ.

ಮುಂಜಾಗ್ರತಾ ಕ್ರಮವಾಗಿ ಸುಮಾರು 235 ಮಂದಿಯನ್ನು ಬಂಧಿಸಲಾಗಿದೆ. ಕನ್ನಡ ಪರ ಸಂಘಟನೆಗಳ ಬಂದ್ ಕರೆಗೆ ಹಲವಾರು ಸಂಘಟನೆಗಳು ಕೈ ಜೋಡಿಸಿವೆ. ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನ ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜಿಗೆ ರಜೆ ಘೋಷಿಸಲಾಗಿದೆ. ಇನ್ನು ಪರಿಸ್ಥಿತಿ ನೋಡಿಕೊಂಡು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ನಡೆಯಲಿದೆ.

ಕರಾವಳಿ- ಕೊಡಗು ಸ್ಥಿತಿ: 

ಕರ್ನಾಟಕದ ಬಂದ್ಗಳಿಗೆ ಯಾವತ್ತೂ ನೀರಸ ಪ್ರತಿಕ್ರಿಯೆ ನೀಡುವ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕೊಡಗಿನಲ್ಲಿ ಜನಜೀವನ ಎಂದಿನಂತೆ ಇರಲಿದೆ ಎಂದುಕೊಳ್ಳಲಾಗಿದೆ. ನೇತ್ರಾವತಿ ತಿರುವು ಹೋರಾಟಕ್ಕೆ ಕರ್ನಾಟಕದ ಜನ ಸ್ಪಂದಿಸಿಲ್ಲ, ನಾವು ಈಗ ಯಾಕೆ ಹೋರಾಟದಲ್ಲಿ ಭಾಗವಹಿಸಬೇಕು ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು ಬಹುತೇಕ ಈ ಮೂರು ಜಿಲ್ಲೆಗಳಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲಿದೆ.

ಚಿತ್ರ ಕೃಪೆ:

ದಿ ಹಿಂದೂ