samachara
www.samachara.com
ಮಾಯಾವತಿ ಅವಮಾನಿಸಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಬಂಧನ
ಸುದ್ದಿ ಸಾರ

ಮಾಯಾವತಿ ಅವಮಾನಿಸಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ದಯಾಶಂಕರ್ ಬಂಧನ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಬಿಎಸ್ಪಿ ನಾಯಕಿ ಮಾಯಾವತಿ ‘ವೇಶ್ಯೆಗಿಂತ ಕೀಳು’ ಎಂದು ಹೇಳಿ ವಿವಾದ ಹುಟ್ಟು ಹಾಕಿದ್ದ ಉತ್ತರ ಪ್ರದೇಶ ಬಿಜೆಪಿ ಮಾಜಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ರನ್ನು ಬಂಧಿಸಲಾಗಿದೆ. ಮಾನಹಾನಿಕರ ಹೇಳಿಕೆ ಸಂಬಂಧ ಅವರ ವಿರುದ್ಧ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಯಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಉತ್ತರ ಪ್ರದೇಶದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೇಶವ್ ಯಾದವ್, ‘ಯುಪಿ’ಯ ವಿಶೇಷ ಕಾರ್ಯ ಪಡೆ ಮತ್ತು ಬಿಹಾರ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ, ಬಿಹಾರದ ಬಕ್ಸಾರಿನ ಚಿನಿ ಮಿಲ್ ಪ್ರದೇಶದಿಂದ ಸಿಂಗ್ರನ್ನು ಬಂಧಿಸಲಾಗಿದೆ, ಎಂದು ಮಾಹಿತಿ ನೀಡಿದ್ದಾರೆ. ದಯಾಶಂಕರ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರು ತಲೆ ಮರೆಸಿಕೊಂಡಿದ್ದರು.

“ಅವರನ್ನು (ದಯಾಶಂಕರ್ ಸಿಂಗ್) ಉತ್ತರ ಪ್ರದೇಶಕ್ಕೆ ಕರೆತರಲಾಗುವುದು,” ಎಂದು ಹೇಳಿರುವ ಯಾದವ್, ದಯಾಶಂಕರ್ ಸಿಂಗ್ ಬಿಹಾರ ತಲುಪುತ್ತಿದ್ದಂತೆ ನಾವು ತನಿಖೆ ಆರಂಭಿಸಿದೆವು. ಅವರು ಉಳಿದುಕೊಂಡಿರಬಹುದಾದ ಸಾಂಭಾವ್ಯ ಸ್ಥಳಗಳಲ್ಲಿ ಹುಡುಕಾಡಿದೆವು ಎಂದು ತಮ್ಮ ತನಿಖೆಯ ಮಾಹಿತಿ ನೀಡಿದ್ದಾರೆ.

ಜುಲೈ 19ರಂದು ಮಾಯಾವತಿ ವಿರುದ್ಧ ಹೇಳಿಕೆ ನೀಡಿದ್ದ ದಯಾಶಂಕರ್ ಸಿಂಗ್ “ಮಾಯಾವತಿ ಟಿಕೆಟು (ಚುನಾವಣಾ) ಗಳನ್ನು ಮಾರಾಟ ಮಾಡುತ್ತಾರೆ. ಅವರು ಮೂರು ಬಾರಿ ಮುಖ್ಯಮಂತ್ರಿಯಾದವರು. ಆದರೆ ಆಕೆ 1 ಕೋಟಿ ಯಾರು ಕೊಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಮಧ್ಯಾಹ್ನದ ನಂತರ ಯಾರು 2 ಕೋಟಿಯೊಂದಿಗೆ ಬರುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಸಂಜೆ ವೇಳೆ ಇನ್ನೊಬ್ಬ ಮೂರು ಕೋಟಿಯೊಂದಿಗೆ ಬಂದರೆ, ಮೊದಲಿನ ಅಭ್ಯರ್ಥಿಗಳು ಬಿಸಾಕಿ ಆತನನ್ನು ಹಿಡಿದುಕೊಳ್ಳುತ್ತಾರೆ. ಇವತ್ತು ಆಕೆಯ ಪಾತ್ರ ವೇಶ್ಯೆಗಿಂತ ಕೆಟ್ಟದಾಗಿದೆ,” ಎಂದಿದ್ದರು.

ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ನಂತರ ಬಿಜೆಪಿ ಅವರನ್ನು ಉತ್ತರ ಪ್ರದೇಶ ಉಪಾಧ್ಯಕ್ಷ ಸ್ಥಾನದಿಂದ ಕಿತ್ತೊಗೆದಿತ್ತು. ದಯಾಶಂಕರ್ ತಮ್ಮ ಹೇಳಿಕೆಗೆ ಕ್ಷಮೆಯನ್ನೂ ಕೋರಿದ್ದರು. ಆದರೆ ಇದಕ್ಕೆಲ್ಲಾ ಬಗ್ಗದ ಎಸ್ಪಿ ನಾಯಕಿ ಮಾಯವತಿ ರಾಜ್ಯಸಭೆಯಲ್ಲೇ ದಯಾಶಂಕರ್ ಬಂಧನಕ್ಕೆ ಒತ್ತಾಯಿಸಿದ್ದರು.

ಕೊನೆಗೆ ಜುಲೈ 20ರಂದು ದಯಾಶಂಕರ್ ವಿರುದ್ಧ ಪ್ರಕರಣ ದಾಖಲಾಗಿದ್ದೇ ಅಲ್ಲದೆ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಇದೀಗ ಪೊಲೀಸರು ದಯಾಶಂಕರ್ ಕೈಗೆ ಕೊಳ ತೊಡಿಸಿದ್ದಾರೆ.