samachara
www.samachara.com
ಮಾಯಾವತಿಗೆ ಅವಮಾನ: ಹುದ್ದೆ ಕಿತ್ತುಕೊಂಡ ಬಿಜೆಪಿ
ಸುದ್ದಿ ಸಾರ

ಮಾಯಾವತಿಗೆ ಅವಮಾನ: ಹುದ್ದೆ ಕಿತ್ತುಕೊಂಡ ಬಿಜೆಪಿ

ಬಿಎಸ್ಪಿ ನಾಯಕಿ ಮಾಯಾವತಿಯನ್ನು ವೇಶ್ಯೆಗಿಂತಲೂ ಕಡೆ ಎಂದು ಹೇಳಿ ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ವಿವಾದ ಹುಟ್ಟುಹಾಕಿದ್ದಾರೆ. ಸದ್ಯ ಅವರನ್ನು ಉಪಾಧ್ಯಕ್ಷ ಹುದ್ದೆಯಿಂದ ಕಿತ್ತೊಗೆದಿರುವ ಬಿಜೆಪಿ ಡ್ಯಾಮೇಜ್ ಕಂಟ್ರೋಲಿಗೆ ಮುಂದಾಗಿದೆ .

ಒಂದು ವಾರದ ಹಿಂದೆ ಗುಜರಾತಿನಲ್ಲಾದ ದಲಿತರ ಮೇಲಿನ ಹಲ್ಲೆಯ ವಿರುದ್ಧ ಮಾಯಾವತಿ ಬಿಜೆಪಿಯನ್ನು ಕಟು ಶಬ್ದಗಳಿಂದ ಝಾಡಿಸಿದ್ದರು. ಈ ವೇಳೆ ಮಾಯವತಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ದಯಾಶಂಕರ್ ಸಿಂಗ್ ಎಲ್ಲೆ ಮೀರಿ ಮಾತನಾಡಿದ್ದರು.

ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು “ಮಾಯಾವತಿ ಟಿಕೆಟು (ಚುನಾವಣಾ) ಗಳನ್ನು ಮಾರಾಟ ಮಾಡುತ್ತಾರೆ. ಅವರು ಮೂರು ಬಾರಿ ಮುಖ್ಯಮಂತ್ರಿಯಾದವರು. ಆದರೆ ಆಕೆ 1 ಕೋಟಿ ಯಾರು ಕೊಡುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಮಧ್ಯಾಹ್ನದ ನಂತರ ಯಾರು 2 ಕೋಟಿಯೊಂದಿಗೆ ಬರುತ್ತಾರೋ ಅವರಿಗೆ ಟಿಕೆಟ್ ನೀಡುತ್ತಾರೆ. ಸಂಜೆ ವೇಳೆ ಇನ್ನೊಬ್ಬ ಮೂರು ಕೋಟಿಯೊಂದಿಗೆ ಬಂದರೆ, ಮೊದಲಿನ ಅಭ್ಯರ್ಥಿಗಳು ಬಿಸಾಕಿ ಆತನನ್ನು ಹಿಡಿದುಕೊಳ್ಳುತ್ತಾರೆ. ಇವತ್ತು ಆಕೆಯ ಪಾತ್ರ ವೇಶ್ಯೆಗಿಂತ ಕೆಟ್ಟದಾಗಿದೆ,” ಎಂದಿದ್ದರು.

ಈ ಹೇಳಿಕೆ ಕೇಳಿ ಉಗ್ರಾವತಾರ ತಾಳಿದ ಮಾಯಾವತಿ ಸಂಸತ್ತಿನ ಮೇಲ್ಮನೆಯಲ್ಲಿ ಬಿಜೆಪಿಯ ವಿರುದ್ಧ ಗರ್ಜಿಸಿದ್ದರು. ಬಿಜೆಪಿ ಬಿಎಸ್ಪಿಗೆ ಸಿಗುವ ಜನಬೆಂಬಲದಿಂದ ಕಂಗೆಟ್ಟಿದೆ. ಅದಕ್ಕಾಗಿ ಈ ರೀತಿ ಹೇಳಿಕೆಗಳನ್ನು ನೀಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದರು.ಇದಕ್ಕೆ ಪ್ರತಿಕ್ರೀಯೆ ನೀಡಿದ ರಾಜ್ಯಸಭೆಯಲ್ಲಿ ಸರಕಾರದ ನಾಯಕ ಅರುಣ್ ಜೇಟ್ಲಿ, ಬಿಜೆಪಿ ಮಾಯವತಿ ಪರವಾಗಿ ನಿಲ್ಲಲಿದೆ ಎಂದು ಹೇಳಿದ್ದರು.

ಇನ್ನು ದಯಾಶಂಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ್ ಮೌರ್ಯ ಕೂಡಾ ಉಪಾಧ್ಯಕ್ಷರ ಮಾತನ್ನು ಖಂಡಿಸಿದ್ದು, ಅವರೂ ಕ್ಷಮೆ ಕೋರಿದ್ದಾರೆ. ಪಕ್ಷ ದಯಾಶಂಕರ್ ವಿರುದ್ಧ ಪ್ರಕರಣ ದಾಖಲಿಸಲಿದ್ದು, "ನ್ಯಾಯಾಲಯಕ್ಕೆ ಎಳೆದೊಯ್ಯುತ್ತೇವೆ," ಎಂದು ಬಿಎಸ್ಪಿ ನಾಯಕ ಸತೀಶ್ ಮಿಶ್ರಾ ಹೇಳಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಬಿಜೆಪಿ ಸಂಜೆ ವೇಳೆಗೆ ದಯಾಶಂಕರ್ ಸಿಂಗ್ ಅವರನ್ನು ಉಪಾಧ್ಯಕ್ಷ ಹುದ್ದೆಯಿಂದ ಕಿತ್ತೊಗೆದಿದೆ. ಇದೀಗ ಅವರು ಕ್ಷಮೆ ಕೋರಿದ್ದು ಮಾಯಾವತಿ ಮಹಾನ್ ನಾಯಕಿ, ಅವರು ಈ ಹಂತಕ್ಕೆ ಬರಲು ಕಷ್ಟ ಪಟ್ಟಿದ್ದಾರೆ ಎಂದು ಹೇಳಿದ್ದಾರೆ. “ಮಾಯಾವತಿ ದೊಡ್ಡ ನಾಯಕಿ. ನಾನು ಯಾರ ಬಗ್ಗೆಯೂ ಹಾಗೆ ಹೇಳುವುದಿಲ್ಲ. ನನ್ನ ಹೇಳಿಕೆಗೆ ನಾನು ಕ್ಷಮೆ ಕೋರುತ್ತೇನೆ,” ಎಂದು ಅವರು ಪ್ರತಿಕ್ರೀಯೆ ನೀಡಿದ್ದಾರೆ.