samachara
www.samachara.com
ಬೆಂಗಳೂರಿನಲ್ಲಿ ಮಹಿಳಾ ಪಿಎಸ್ಐ ಆತ್ಮಹತ್ಯೆಗೆ ಯತ್ನ
ಸುದ್ದಿ ಸಾರ

ಬೆಂಗಳೂರಿನಲ್ಲಿ ಮಹಿಳಾ ಪಿಎಸ್ಐ ಆತ್ಮಹತ್ಯೆಗೆ ಯತ್ನ

ರಾಜ್ಯ ಪೊಲೀಸ್ ಇಲಾಖೆಯಿಂದ ಮತ್ತೊಂದು ಆತ್ಮಹತ್ಯೆ ಸಂಬಂಧಿತ ಪ್ರಕರಣ ಕೇಳಿ ಬಂದಿದೆ. ಬೆಂಗಳೂರಿನ ವಿಜಯನಗರ ಠಾಣಾ ಮಹಿಳಾ ಪಿಎಸ್ಐ ರೂಪಾ ತಂಬದ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳಾರ ಮಧ್ಯಾಹ್ನ ನಡೆದಿದೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್‍ಸ್ಪೆಕ್ಟರ್ ಆಗಿರುವ ರೂಪಾ ತಂಬದ ಠಾಣೆಯಲ್ಲೇ 23 ಮಾತ್ರಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಠಾಣಾಧಿಕಾರಿ ಸಂಜೀವ್ ಗೌಡ ಮತ್ತು ರೂಪಾ ನಡುವಿನ ವೃತ್ತಿ ಸಂಬಂಧಿತ ಮನಸ್ತಾಪವೇ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ. ಮೊಬೈಲ್ ಕಳವು ಪ್ರಕರಣವೊಂದರಲ್ಲಿ ಎಫ್ಐಆರ್ ದಾಖಲಿಸದ ಪಿಎಸ್ಐ ಕ್ರಮವನ್ನು ಸಂಜೀವ್‍ಗೌಡ ಪ್ರಶ್ನಿಸಿ ಡೈರಿಯಲ್ಲಿ ಉಲ್ಲೇಖಿಸಿದ್ದೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಸದ್ಯ ರಾಜಾಜಿನಗರದಲ್ಲಿರುವ ಸುಗುಣಾ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ರೂಪಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ.

ಮೂಲತಃ ದಾವಣಗೆರೆಯವರಾದ ರೂಪಾ 2009ರಲ್ಲಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದರು. ಕಳೆದ 2 ವರ್ಷದಿಂದ ವಿಜಯನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಮಂಗಳವಾರ ನಡೆದಿದ್ದಿಷ್ಟು:

ಎಂದಿನಂತೆ ಬೆಳಗ್ಗೆ ರೂಪಾ ಕರ್ತವ್ಯಕ್ಕೆ ಹಾಜರಾದವರು ಮಧ್ಯಾಹ್ನ 2.30ರ ಸುಮಾರಿಗೆ ಸ್ಟೇಷನ್ ಡೈರಿ ಬರೆಯುವಂತೆ ಸಹ ಸಿಬ್ಬಂದಿಗೆ ತಿಳಿಸಿದ್ದಾರೆ. ತಾನು ಕಮೀಷನರ್ ಆಯುಕ್ತರ ಕಚೇರಿಗೆ ಹೋಗಿ ಬರುವುದಾಗಿ ಹೇಳಿದ್ದಾರೆ. ಈ ಸಂದರ್ಭ ವೃತ್ತಿಯಲ್ಲಿ ವಕೀಲನಾಗಿರುವ ಪತಿ ನಟರಾಜ್ ಅವರಿಗೆ ಕರೆ ಮಾಡಿದ ರೂಪಾ, ‘ಠಾಣೆಯಲ್ಲಿ ಜಗಳ ನಡೆದಿದೆ, ನಾನು ಆಯುಕ್ತರ ಕಚೇರಿಗೆ ಬರುತ್ತಿದ್ದು, ತಾವು ಬನ್ನಿ,’ ಎಂದು ತಿಳಿಸಿದ್ದಾರೆ. ಹೀಗಾಗಿ ಪತಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದಾರೆ.

ಆದರೆ ಆಯುಕ್ತರ ಕಚೇರಿ ದಾರಿ ಬಿಟ್ಟು ರೂಪಾ ಮಾತ್ರ ತಮ್ಮ ಪೊಲೀಸ್ ಚೀತಾ ಬದಲಿಗೆ ಓಲಾ ಕ್ಯಾಬ್‍ನಲ್ಲಿ ತೆರಳುವಂತೆ ಪೊಲೀಸ್ ಸಿಬ್ಬಂದಿಗೆ ತಿಳಿಸಿದ್ದಾರೆ.  ಅಲ್ಲಿಂದ ರಾಜಾಜಿನಗರದಲ್ಲಿರುವ ಪೊಲೀಸ್ ಕ್ವಾಟ್ರಸ್‍ನಲ್ಲಿರುವ ಮನೆಗೆ ತೆರಳಿ ಡಾರ್ಟ್ ಮತ್ತು ಪ್ಯಾರಾಸಿಟಮಾಲ್ 23 ಮಾತ್ರೆಗಳನ್ನು ನುಂಗಿದ್ದಾರೆ. ಎಷ್ಟೊತ್ತಾದರೂ ಆಯುಕ್ತರ ಕಚೇರಿಗೆ ಬರದ ಪತ್ನಿಯ ಮೊಬೈಲ್‍ಗೆ ಪತಿ ಕರೆ ಮಾಡಿದರೆ  ಮೊಬೈಲ್ ಸ್ವಿಚ್‍ಆಫ್ ಬರುತ್ತಿದ್ದಂತೆ, ಗಾಬರಿಗೊಂಡ ಪತಿ ಪೊಲೀಸ್ ಠಾಣೆಗೆ ಕರೆ ಮಾಡಿದಾಗ ಠಾಣಾ ಚೀತಾ ವಾಹನದಲ್ಲಿ ತೆರಳಿದ ಸಿಬ್ಬಂದಿಗಳು ನಿಜ ಸಂಗತಿ ತಿಳಿಸಿದ್ದಾರೆ. ಗಾಬರಿಗೊಂಡು ಪತಿ ಮನೆಗೆ ಬಂದು ನೋಡಿದಾಗ ಪ್ರಜ್ಞೆತಪ್ಪಿ ರೂಪಾ ಅಸ್ವಸ್ಥರಾಗಿರುವುದು ಗೊತ್ತಾಗಿದೆ. ಕೂಡಲೇ ಅವರನ್ನು ಸಮೀಪದ ಸುಗುಣಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಆಸ್ಪತ್ರೆಗೆ ಪಶ್ಚಿಮ ವಿಭಾಗದ ಉಸ್ತುವಾರಿ ಡಿಸಿಪಿ ಸಂದೀಪ್‍ಪಾಟೀಲ್ ಮತ್ತು ಹೆಚ್ಚುವರಿ ಆಯುಕ್ತ ಪ್ರತಾಪ್ ರೆಡ್ಡಿ ಭೇಟಿ ನೀಡಿ ರೂಪಾ ಅವರ ಆರೋಗ್ಯ ಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು.

ಘಟನೆಗೆ ಮೊದಲು ಎಫ್ಐಆರ್ ವಿಚಾರದಲ್ಲಿ ಇನ್‍ಸ್ಪೆಕ್ಟರ್ ಜತೆ ಜಗಳ:

ಮೂರು ದಿನದ ಹಿಂದೆ ಮೊಬೈಲ್ ಕಳ್ಳತನದ ಬಗ್ಗೆ ಮಹಿಳೆಯೊಬ್ಬರು ವಿಜಯನಗರ ಠಾಣೆಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ್ದ ಪಿಎಸ್‍ಐ ರೂಪಾ ಎಫ್ಐಆರ್ ದಾಖಲಿಸಿರಲಿಲ್ಲ. ದೂರು ಸ್ವೀಕರಿಸಿ ಮುಂದೆ ಕಳವು ಮಾಲು ಪತ್ತೆಯಾಗದಿದ್ದರೆ ಸಮಸ್ಯೆಯಾಗಬಹುದೆಂಬ ಕಾರಣಕ್ಕೆ ಪ್ರಥಮನ ವರ್ತಮಾನ ವರದಿ ಮಾಡಿರಲಿಲ್ಲ.

ಇದೇ ಸಮಯಕ್ಕೆ ಕೊಲೆ ಪ್ರಕರಣವೊಂದನ್ನು ಸಮರ್ಥವಾಗಿ ನಿಭಾಯಿಸಲಿಲ್ಲ ಎಂಬ ಆರೋಪದಲ್ಲಿ ಅಮಾನತಿಗೆ ಒಳಗಾಗಿದ್ದ ಇನ್‍ಸ್ಪೆಕ್ಟರ್ ಸಂಜೀವ್‍ಗೌಡ ನಾಲ್ಕು ದಿನದ ಹಿಂದಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಮೊಬೈಲ್ ಕಳವು ಕುರಿತು ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸದೇ ಕರ್ತವ್ಯಲೋಪ ಎಸಗಿದ್ದ ಬಗ್ಗೆ ಡೈರಿಯಲ್ಲಿ ಉಲ್ಲೇಖಿಸಿದ್ದರು. ಹಿರಿಯ ಅಧಿಕಾರಿಗಳ ಮಾತು ಪಾಲಿಸುವುದಿಲ್ಲ ಎಂದು ರೂಪಾ ವಿರುದ್ಧ ಡೈರಿಯಲ್ಲಿ ಬರೆದಿದ್ದರು. ಹಿರಿಯ ಅಧಿಕಾರಿಗಳ ಗಮನಕ್ಕೂ ಈ ಸಂಗತಿ ತರುವುದಾಗಿ ರೂಪಾ ಅವರಿಗೆ ಸಂಜೀವ್ ತಿಳಿಸಿದ್ದರು. ಇದೇ ವಿಚಾರವಾಗಿ ಮಂಗಳವಾರ ಮಧ್ಯಾಹ್ನ ಇನ್‍ಸ್ಪೆಕ್ಟರ್ ಸಂಜೀವ್‍ಗೌಡ ಮತ್ತು ರೂಪಾ ನಡುವೆ ಜಗಳ ನಡೆದಿದೆ. ಕಾರ್ಯದೊತ್ತಡ ಮತ್ತು ಕಿರುಕುಳ ಕುರಿತು ತಾನೂ ಸಹ ಆಯುಕ್ತರಿಗೆ ದೂರು ನೀಡುವುದಾಗಿ ರೂಪಾ ಠಾಣೆಯಿಂದ ಹೊರಟಿದ್ದರು ಎಂದು ಪೊಲೀಸ್ ಮೂಲಗಳು ಹೇಳಿವೆ.