samachara
www.samachara.com
'ನಾವೂ ಜನರ ಬಳಿ ಹೋಗುತ್ತೇವೆ': ಪತ್ರಿಕಾಗೋಷ್ಠಿಯ ಪೂರ್ಣಪಾಠ
ಸುದ್ದಿ ಸಾರ

'ನಾವೂ ಜನರ ಬಳಿ ಹೋಗುತ್ತೇವೆ': ಪತ್ರಿಕಾಗೋಷ್ಠಿಯ ಪೂರ್ಣಪಾಠ

ಡಿವೈಎಸ್ಪಿ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಅವರು ಈ ನಿರ್ಧಾರ ಕೈಗೊಂಡರು...

ಇದು ಸೋಮವಾರ ನಡೆದ ಮಹತ್ವದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರ ಸ್ಪಷ್ಟ ನುಡಿಗಳು. ಪ್ರತಿಪಕ್ಷಗಳಿಗೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎನ್ನುತ್ತಲೇ ಮಾತು ಶುರು ಮಾಡಿದ ಅವರು ಅಂಕಿ ಅಂಶಗಳನ್ನು ಮುಂದಿಡುತ್ತಾ, ಸರಕಾರದ ನಿಲುವುಗಳನ್ನು ಸಮರ್ಥಿಸಿಕೊಂಡರು.

ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯ ಪೂರ್ಣ ಪಾಠ ಇಲ್ಲಿದೆ:

“ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಬಿಜೆಪಿಯಲ್ಲಿ 18ಕ್ಕೂ ಹೆಚ್ಚು ಮುಖಂಡರ ಮೇಲೆ ಕ್ರಿಮಿನಲ್ ಕೇಸುಗಳು ದಾಖಲಾಗಿವೆ. ಆದರೂ ಅವರು ಭಾರಿ ಪ್ರಾಮಾಣಿಕರಂತೆ ನಾವು ಯಾವುದೇ ಕೇಸಿನಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಾರೆ. ಇನ್ನು ಎಚ್.ಡಿ. ಕುಮಾರಸ್ವಾಮಿ ಮತ್ತು ಅವರ ಸಹೋದರನ ವಿರುದ್ಧವೂ ಕೇಸುಗಳಿವೆ. ಇವರೆಲ್ಲ ನೈತಿಕವಾಗಿ ದಿವಾಳಿಯಾಗಿದ್ದಾರೆ.  ತಮ್ಮ ಮೇಲೆ ಹತ್ತಾರು ಕೇಸುಗಳು ಇದ್ದರೂ ಅದನ್ನು ಮರೆತಿರುವ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು, ಗಾಜಿನ ಮನೆಯಲ್ಲಿ ಕುಳಿತು ಇನ್ನೊಬ್ಬರ ಮನೆಯತ್ತ ಕಲ್ಲು ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ,” ಎಂದು ವಿರೋಧ ಪಕ್ಷಗಳಿಗೆ ಸಿಎಂ ತಿರುಗೇಟು ನೀಡಿದರು.

ಇನ್ನು ಪೊಲೀಸರ ಬಗ್ಗೆ ಮಾತು ಬದಲಿಸಿದ ಮುಖ್ಯಮಂತ್ರಿಗಳು, “ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ ಎಂಬುದನ್ನು ನಾನೂ ಒಪ್ಪುತ್ತೇನೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ 2003ರಿಂದ 2013ರ ವರೆಗೆ ರಾಜ್ಯದಲ್ಲಿ 122 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ನಮಗೂ ನೋವಿದೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು. ಆದರೆ ಶೆಟ್ಟರ್ ಮತ್ತು ಕುಮಾರಸ್ವಾಮಿ ಅವರುಗಳು ತಾವು ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ಮರೆತಿದ್ದಾರೆ,” ಎಂದು ವಿಪಕ್ಷಗಳ ವಿರುದ್ಧ ಗರಂ ಆದರು.

2007ರಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿ. ಆಗ 24 ಪೊಲೀಸ್ ಸಿಬ್ಬಂದಿ ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಶೆಟ್ಟರ್ ಅವರು ಸಿಎಂ ಆಗಿದ್ದಾಗ 17 ಮಂದಿ ಸಾವಿಗೆ ಶರಣಾಗಿದ್ದಾರೆ. ಎಲ್ಲರ ಜೀವವೂ ಅಮೂಲ್ಯ. ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಬಗ್ಗೆ ನಮಗೆ ನೋವಿದೆ. ಆದರೆ, ಜೆಡಿಎಸ್ ಮತ್ತು ಬಿಜೆಪಿ ನಾಯಕರು ತಮ್ಮ ಅವಧಿಯಲ್ಲಿ ಏನೂ ನಡೆದಿಲ್ಲ ಎಂದು ಬಿಂಬಿಸಿಕೊಳ್ಳುತ್ತಾರೆ. ಅದು ನೈತಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಝಾಡಿಸಿದರು.

“ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಬಿಐ ಎಂದರೆ ಕ್ರಿಮಿನಲ್ ಇನ್ವೆಸ್ಟಿಗೇಷನ್ ಬ್ಯೂರೋ ಎಂದು ಟೀಕೆ ಮಾಡುತ್ತಿದರು. ಮಾಜಿ ಪ್ರಧಾನಿ ದೇವೇಗೌಡರು ಸಿಬಿಐ ಎಂದರೆ ಚೋರ್ ಬಚಾವೋ ಸಂಸ್ಥೆ ಎನ್ನುತ್ತಿದ್ದರು. ಪ್ರತಿಪಕ್ಷವಾಗಿ ನಾವು 13 ಪ್ರಕರಣಗಳಲ್ಲಿ ಸಿಬಿಐ ತನಿಖೆಗೆ ಒತ್ತಾಯ ಮಾಡಿದರೂ ಆಗ ಅಧಿಕಾರದಲ್ಲಿದ್ದ ಬಿಜೆಪಿಯವರು ಕಿವಿಗೊಡಲಿಲ್ಲ. ಅಕ್ರಮ ಗಣಿಗಾರಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸದನದಲ್ಲಿ ಐದು ದಿನ ಅಹೋರಾತ್ರಿ ಧರಣಿ ನಡೆಸಿದರೂ, ಬೆಂಗಳೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ಮಾಡಿದರೂ ಕೇಳಲಿಲ್ಲ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಆ ಪಕ್ಷದ ನಾಯಕರ ಬಣ್ಣ ಬಯಲಾಗಿದೆ. ಈಗ ಅವರು ಸಿಬಿಐ ಕುರಿತು ಬಾಯಿಪಾಠ ಮಾಡುತ್ತಿದ್ದಾರೆ. ಇದು ಇಬ್ಬಗೆ ಧೋರಣೆ ಅಲ್ಲವೇ?,” ಎಂದು ವ್ಯಂಗ್ಯವಾಡಿದರು.

“ಸಿಬಿಐ ಎಂದರೆ ನಮಗೆ ಭಯ ಇಲ್ಲ. ಗೌರವ ಇದೆ. ಇದೇ ಕಾರಣಕ್ಕೆ ನಮ್ಮ ಸರ್ಕಾರ ಈ ವರೆಗೆ 8 ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಿದೆ. ನರೇಂದ್ರ ಮೋದಿಯವರ ಸರ್ಕಾರದಲ್ಲಿ ಇತ್ತೀಚೆಗೆ ದಲಿತ ಸ್ಕಾಲರ್ ರೋಹಿತ್ ವೇಮುಲ ಪ್ರಕರಣದಲ್ಲಿ ಏನಾಗಿದೆ ನೋಡಿ. ಆ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ವಿರುದ್ಧವಾಗಿ IPC 306 ರ ಅಡಿ ಆತ್ಮಹತ್ಯೆಗೆ ಪ್ರೇರಣೆ (Abatement to Suicide) ಆರೋಪದಲ್ಲಿ FIR ದಾಖಲಾಗಿದೆ.  ಹಾಗಾದರೆ ಅವರು ಯಾಕೆ ಇನ್ನೂ ರಾಜೀನಾಮೆ ನೀಡಲಿಲ್ಲ? ಇದರ ಬಗ್ಗೆ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಯಾಕೆ ಮಾತಾಡಲಿಲ್ಲ? 2016ರ ಮಾರ್ಚ್ ತಿಂಗಳಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧವೂ FIR ದಾಖಲಾಗಿದೆ. ಹಾಗೆಯೇ ಉಮಾ ಭಾರತಿಯವರ ಮೇಲೆ 13 ಪ್ರಕರಣಗಳು, ಅದರಲ್ಲಿ ಎರಡು ಕೊಲೆ ಪ್ರಕರಣಗಳಿವೆ. FIR ಸಹ ದಾಖಲಾಗಿದೆ. ಇತ್ತೀಚೆಗೆ ಸಂಪುಟ ಸೇರಿದವ 19 ಸಚಿವರ  ಪೈಕಿ 7 ಮಂದಿ ವಿರುದ್ಧ ಕ್ರಿಮಿನಲ್ ಕೇಸುಗಳು ದಾಖಲಾಗಿದೆ. ರಾಜ್ಯ ಬಿಜೆಪಿ ನಾಯಕರೇಕೆ ಅವರಿಂದ ರಾಜೀನಾಮೆ ಕೊಡಿಸಿಲ್ಲ. ಜಾರ್ಜ್ ಒಬ್ಬರೇನಾ ಅವರಿಗೆ ಸಿಕ್ಕಿದ್ದು. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ನಮಗೊಂದು ಅವರಿಗೊಂದು ಕಾನೂನು ಇದೆಯೇ? ಇಂಡಿಯನ್ ಪೀನಲ್ ಕೋಡ್ ಇಡೀ ದೇಶಕ್ಕೇ ಅನ್ವಯವಾಗುತ್ತದೆಯಲ್ಲವೇ? ಈ ಎಲ್ಲ ಸತ್ತವರ ಶವದ ಮೇಲೆ ರಾಜಕೀಯ ಮಾಡಬಾರದು ಎಂಬ ಕಾರಣಕ್ಕೆ ನಾವು ಕೇಂದ್ರ ಸಚಿವರ ರಾಜೀನಾಮೆಗೆ ಒತ್ತಾಯ ಮಾಡಿಲ್ಲ,” ಎಂದು ಹೇಳಿದರು.

“ನನ್ನ ವಿರುದ್ಧವೂ ಕೇಸುಗಳಿವೆ ಎಂದು ಆರೋಪ ಮಾಡಿದ್ದಾರೆ. ಕುಮಾರಸ್ವಾಮಿಯವರು ಸಿದ್ದರಾಮಯ್ಯ ಮೇಲೆ 10 ಕೇಸುಗಳಿವೆ ಎಂದು ಆರೋಪಿಸಿದ್ದರು. ಆದರೆ ನನ್ನ ಮೇಲೆ 5 ಕೇಸುಗಳಿದ್ದದ್ದು ನಿಜ. ಅವೆಲ್ಲವೂ ನನ್ನ ಕ್ಷೇತ್ರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಧರಣಿ, ಪ್ರತಿಭಟನೆ ನಡೆಸಿದಾಗ ದಾಖಲಾಗಿತ್ತು. 2008ರಲ್ಲೇ ಎಲ್ಲವೂ ಇತ್ಯರ್ಥವಾಗಿವೆ. Out of five cases one was withdrawn and four cases met C report by CID. ಈಗ ಯಾವುದೇ ಪ್ರಕರಣ ಬಾಕಿ ಇಲ್ಲ. ವಿರೋಧ ಪಕ್ಷದವರು ಮತ್ತೊಬ್ಬರ ತೇಜೋವಧೆಯನ್ನು ಹೇಗೆ ಮಾಡುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಇದನ್ನು ಹೇಳಿದ್ದು,” ಎಂದರು.

“ವಿಧಾನ ಮಂಡಲದ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯಬೇಕು. ಈ ಕಾರಣಕ್ಕಾಗಿಯೇ ನಾವು ಅಧಿವೇಶನವನ್ನು ಕರೆದದ್ದು. ಆದರೆ, ಪ್ರತಿಪಕ್ಷಗಳು ಕಲಾಪಕ್ಕೆ ಅವಕಾಶವನ್ನೇ ಕೊಡಲಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಾವೂ ಜನರ ಬಳಿಗೆ ಹೋಗುತ್ತೇವೆ. ಪ್ರತಿಪಕ್ಷಗಳ ಗೋಸುಂಬೆ ಬಣ್ಣ ಬಯಲು ಮಾಡುತ್ತೇವೆ,” ಎಂದು ಸಿದ್ಧರಾಮಯ್ಯ ಗುಡುಗಿದರು.