samachara
www.samachara.com
ಕಂಡೀಲ್ ಬಲೋಚ್ ಅಣ್ಣನಿಗಿಲ್ಲ ಕ್ಷಮಾದಾನ
ಸುದ್ದಿ ಸಾರ

ಕಂಡೀಲ್ ಬಲೋಚ್ ಅಣ್ಣನಿಗಿಲ್ಲ ಕ್ಷಮಾದಾನ

ಮೂರು

ದಿನಗಳ ಹಿಂದೆ ಪಾಕಿಸ್ತಾನದಲ್ಲಿ ಸ್ವಂತ ಅಣ್ಣನಿಂದಲೇ 'ಮರ್ಯಾದಾ ಹತ್ಯೆ'ಗೆ ಒಳಗಾದ ಕಂಡೀಲ್ ಬಲೋಚ್ ಪ್ರಕರಣದಲ್ಲಿ ಸರಕಾರ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

ಕೊಲೆ ಆರೋಪವನ್ನು ಒಪ್ಪಿಕೊಂಡಿರುವ ಆಕೆಯ ಅಣ್ಣನಿಗೆ ಕುಟುಂಬ ಕ್ಷಮಾದಾನ ನೀಡಲು ಅವಕಾಶ ನೀಡದಿರಲು ತೀರ್ಮಾನಿಸಿದೆ. ಪಂಜಾಬ್ ಪ್ರಾಂಥ್ಯದಲ್ಲಿ ನಡೆದ ಬಹುತೇಕ ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಆರೋಪಿಗಳಾದವರಿಗೆ ಕುಟುಂಬದವರು ಕ್ಷಮಾದಾನ ನೀಡಿದರೆ ಬಿಟ್ಟು ಕಳುಹಿಸುವ ಕಾನೂನು ಜಾರಿಯಲ್ಲಿತ್ತು. ಆದರೆ, ಇದೀಗ ಕಂಡಿಲ್ ಪ್ರಕರಣ ವಿಶ್ವದ ಗಮನಸೆಳೆದಿರುವ ಹಿನ್ನೆಲೆಯಲ್ಲಿ ಆರೋಪಿ ಅಣ್ಣನಿಗೆ ಕುಟುಂಬದವರು ಕ್ಷಮಾದಾನ ನೀಡದಂತೆ ತಡೆಯಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಟರ್ಸ್ ವರದಿ ಮಾಡಿದೆ.

ಸ್ಥಳೀಯ ಪೊಲೀಸ್ ಅಧಿಕಾರಿಗಳ ಮಾಹಿತಿಯನ್ನು ಉಲ್ಲೇಖಿಸಿರುವ ವರದಿಯು, 'ಇದೊಂದು ಅಪರೂಪದ ಪ್ರಕರಣ,' ಎಂದು ಹೇಳಿದೆ.

ಸ್ಥಳೀಯ ಮಾಧ್ಯಮಗಳ ಪಾಲಿಗೆ ಕಂಡೀಲ್ ಸೆಲೆಬ್ರೆಟಿಯಾಗಿದ್ದರು. ಆಕೆ ತನ್ನನ್ನು ತಾನು ಆಧುನಿಕ ಮಹಿಳಾವಾದಿ ಎಂದು ಕರೆದುಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಭಂಗಿಯ ಚಿತ್ರಗಳನ್ನು ಹಾಕುವ ಮೂಲಕ ಧಾರ್ಮಿಕ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೊನೆಗೆ ತಮ್ಮದೇ ಮನೆಯಲ್ಲಿ ಅಣ್ಣನಿಂದ 'ಮರ್ಯಾದಾ ಹತ್ಯೆ'ಗೆ ಈಡಾದರು.

ಇದೀಗ, ಹತ್ಯೆ ಪ್ರಕರಣದ ತನಿಖೆ ಆರಂಭವಾಗಿದ್ದು, ಅಣ್ಣ ತಂಗಿ ಕಂಡೀಲ್ರನ್ನು ಕೊಲೆ ಮಾಡಿರುವುದಾಗಿ ನ್ಯಾಯಾಲಯದಲ್ಲಿ ಒಪ್ಪಿಕೊಂಡಾಗಿದೆ ಎಂದು 'ಅಲ್ ಜಝೀರಾ' ವರದಿ ಮಾಡಿದೆ. ವಿಚಾರಣೆ ಶುರುವಾಗಿದ್ದು, ಕುಟುಂಬವನ್ನು ಕ್ಷಮಾದಾನ ನೀಡದಂತೆ ತಡೆಯಲಾಗಿದೆ. ಹೀಗಾಗಿ, ಆದಷ್ಟು ಬೇಗ ಕಂಡೀಲ್ ಹತ್ಯೆ ಪ್ರಕರಣದ ತೀರ್ಪು ಹೊರಬೀಳಬಹುದು ಎಂದು ಸ್ಥಳೀಯ ಮಾಧ್ಯಮಗಳು ವಿಶ್ಲೇಷಿಸಿವೆ. ಜತೆಗೆ, ಇದು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮರ್ಯಾದಾ ಹತ್ಯೆ ಪ್ರಕರಣಗಳಿಗೆ ಪಾಠ ಕಲಿಸುವ ನಿಟ್ಟಿನಲ್ಲಿ ಇದು ಮಾದರಿ ತೀರ್ಪಾಗಲಿದೆ ಎಂದು ಹೇಳುತ್ತಿವೆ.