samachara
www.samachara.com
ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: ಪತ್ನಿಯಿಂದ ಮಡಿಕೇರಿಯಲ್ಲಿ ಕೇಸು ದಾಖಲು
ಸುದ್ದಿ ಸಾರ

ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ: ಪತ್ನಿಯಿಂದ ಮಡಿಕೇರಿಯಲ್ಲಿ ಕೇಸು ದಾಖಲು

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಪಾವನಾ ಕೇಸು ದಾಖಲಿಸಿದ್ದಾರೆ. ಮಡಿಕೇರಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್, ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣಬ್ ಮೊಹಾಂತಿ ಕಿರುಕುಳ ಹಾಗೂ ಮಾನಸಿಕ ಚಿತ್ರಹಿಂಸೆಯಿಂದಲೇ ನನ್ನ ಪತಿ ಜೀವವನ್ನು ಅಂತ್ಯಗೊಳಿಸಿದ್ದಾರೆ. ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಂಡು ನನಗೂ ಮತ್ತು ನನ್ನ ಮಕ್ಕಳಿಗೂ ನ್ಯಾಯ ಒದಗಿಸಬೇಕು. ಎಂದು ಕೋರಿಕೊಂಡಿದ್ದಾರೆ.

ಪತ್ರದಲ್ಲಿ ಪತಿ ಅನುಭವಿಸುತ್ತಿದ್ದ ಕಿರುಕುಳ ಮತ್ತು ಹಿಂಸೆಯನ್ನು ದಾಖಲಿಸಿದ್ದಾರೆ. ಮೊದಲಿಗೆ ಸಿಐಡಿ ತನಿಖೆ ಹಿನ್ನೆಲೆಯಲ್ಲಿ ದೂರು ಪಡೆಯಲು ನಿರಾಕರಿಸಿದ ಪೊಲೀಸರು ಬಳಿಕ ದೂರು ಸ್ವೀಕರಿಸಿದ್ದಾರೆ.

ಎಂ.ಕೆ ಗಣಪತಿ ಪತ್ನಿ ಪಾವನಾ ನೀಡಿರುವ ದೂರು ಇಂತಿದೆ.

ರಿಂದ,

ಪಾವನಾ, ದಿ.ಎಂ.ಕೆ.ಗಣಪತಿ ಅವರ ಪತ್ನಿ

ರಂಗ ಸಮುದ್ರ ಗ್ರಾಮ,

ನಂಜರಾಯನ ಪಟ್ಟಣ ಪೋಸ್ಟ್,

ಕುಶಾಲನಗರ, ಕೊಡಗು ಜಿಲ್ಲೆ - 571234

ರಿಗೆ,

ಪೊಲೀಸ್ ಸಬ್ ಇನ್ಸ್ ಪೆಕ್ಟರ್,

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ

ಕುಶಾಲನಗರ,

ಸರ್,

ಕೆಳಕಂಡ ವಿಚಾರಗಳ ಬಗ್ಗೆ ನಿಮ್ಮ ಗಮನ ಸೆಳೆಯುವ ಮೂಲಕ, ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತಿದ್ದೇನೆ. ನಾನು ಸೋಮವಾರಪೇಟೆ ತಾಲೂಕಿನ ರಂಗಸಮುದ್ರ ಗ್ರಾಮದ ಎಂ.ಕೆ. ಕುಶಾಲಪ್ಪ ಅವರ ಪುತ್ರ ದಿ.ಎಂ.ಕೆ.ಗಣಪತಿಯವರ ಪತ್ನಿಯಾಗಿರುತ್ತೇನೆ, ನನ್ನ ಪತಿ ಎಂ.ಕೆ.ಗಣಪತಿ ಅವರು ಡಿವೈಎಸ್ಪಿಯಾಗಿದ್ದರು. ಇತ್ತೀಚೆಗೆ ಮಂಗಳೂರಿನ ಐಜಿ ಕಚೇರಿಯಲ್ಲಿ ಸೇವೆಗೆ ನಿಯೋಜಿಸಲಾಗಿತ್ತು.

ನನ್ನ ಪತಿ 1994ರಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಪೊಲೀಸ್ ಇಲಾಖೆಗೆ ಸೇರಿದರು. ಅಲ್ಲದೆ ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರ ಉತ್ತಮ ಸೇವೆಯಿಂದಾಗಿ ಎಲ್ಲೆಡೆ ಉತ್ತಮ ಗೌರವ ಹಾಗೂ ಒಳ್ಳೆಯ ಹೆಸರನ್ನು ಗಳಿಸಿದ್ದರು. ನಾನು ಎಂ.ಕೆ. ಗಣಪತಿ 1996ರಲ್ಲಿ ವಿವಾಹವಾದೆವು. ನಮಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಈ ಪೈಕಿ ಮೊದಲ ಪುತ್ರ ಎಂ.ಜಿ. ನಿಹಾಲ್ ಪ್ರಥಮ ವರ್ಷದ ಬಿಇ ಓದುತ್ತಿದ್ದು, ಎರಡನೇ ಪುತ್ರ ಎಂ.ಜಿ.ಸಾಹಿಲ್ 10ನೇ ತರಗತಿಯಲ್ಲಿ ಓದುತ್ತಿದ್ದಾನೆ.

ನಮ್ಮದು ಅನ್ಯೋನ್ಯ ವೈವಾಹಿಕ ಜೀವನವಾಗಿತ್ತು. ಈ ನಮ್ಮ ದಾಂಪತ್ಯದಲ್ಲಿ ನನ್ನ ಗಂಡನಿಗೆ ನಾನು ಎಲ್ಲಾ ಪ್ರೀತಿ, ವಿಶ್ವಾಸವನ್ನು ತೋರಿಸಿದ್ದೇನೆ. ಇದಕ್ಕೆ ಉತ್ತರವಾಗಿ ನನ್ನ ಪತಿಯೂ ಅಷ್ಟೇ ಪ್ರೀತಿ ವಿಶ್ವಾಸವನ್ನು ನನಗೆ ತೋರಿಸಿದ್ದಾರೆ. ನನ್ನ ಪತಿ ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ರು. ತಮ್ಮ ಬಿಡುವಿನ ವೇಳೆಯನ್ನು ಅವರು ನನ್ನ ಹಾಗೂ ಮಕ್ಕಳೊಂದಿಗೆ ಕಳೆಯುತ್ತಿದ್ದರು. ಅವರು ಪೊಲೀಸ್ ಇಲಾಖೆಯಲ್ಲಿ ತಾವು ಅನುಭವಿಸಿದ ಕಷ್ಟ, ಕಿರುಕುಳವನ್ನು ನಮ್ಮ ಮುಂದೆ ಹಂಚಿಕೊಳ್ಳುತ್ತಿದ್ದರು.

ನಾನು ಅವರಿಗೆ ಇವುಗಳ ಬಗ್ಗೆ ಹೆಚ್ಚು ಚಿಂತಿಸದಿರಿ ನಮಗೂ ಒಳ್ಳೆಯ ದಿನಗಳು ಬರುತ್ತೆ ಅಂತಾ (ಪತಿಗೆ) ಸಾಂತ್ವನ ಹೇಳುತ್ತಿದ್ದೆ. ಅವರು ತಮ್ಮ ಕರ್ತವ್ಯವನ್ನೂ ಸ್ವತಂತ್ರವಾಗಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಭಾಯಿಸಲು ಸಮರ್ಥರಾಗಬಹುದು ಅಂತಾ ನಾನು ಅವರಿಗೆ ಹುರಿದುಂಬಿಸುತ್ತಿದ್ದೆ. 2008ರಲ್ಲಿ ನನ್ನ ಪತಿ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು, ಆಗ ರಾಜ್ಯಾದ್ಯಂತ ಕೋಮು ಸಂಘರ್ಷಗಳ ನಡೆದಿದ್ದವು. ಇದರಿಂದ ಪ್ರಭಾವಿತರಾಗಿ ಕೆಲವು ದುಷ್ಕರ್ಮಿಗಳು ಮಂಗಳೂರಿನ ಚರ್ಚ್ ಮೇಲೆ ದಾಳಿ ನಡೆಸಿದ್ದರು.

ಇದರಿಂದ ಉಂಟಾದ ಪರಿಸ್ಥಿತಿಯನ್ನು ನನ್ನ ಪತಿ ಸಮರ್ಥವಾಗಿ ಮತ್ತು ಕಾರ್ಯದಕ್ಷತೆಯಿಂದ ನಿಭಾಯಿಸಿದ್ರು. ಮತ್ತು ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತಂದಿದ್ರು. ಆದ್ರೆ ಈ ವೇಳೆ ಕೆಲ ಸಮುದಾಯ ಮುಖಂಡರು, ರಾಜಕೀಯ ಹಿತಾಸಕ್ತಿಗಾಗಿ ನನ್ನ ಪತಿಯ ಮೇಲೆ ಕೆಂಗಣ್ಣು ಬೀರಿದ್ರು. ಅವರ ನ್ಯಾಯುತವಲ್ಲದ ಬೇಡಿಕೆಗಳಿಗೆ ತಕ್ಕಂತೆ ನನ್ನ ಪತಿ ಕುಣಿಯುವಂತೆ ಹಾಗೂ ಒಂದು ನಿರ್ಧಿಷ್ಟ ಕೋಮಿನ ಹಿತಾಸಕ್ತಿ ಅನುಸಾರವಾಗಿ ಕಾರ್ಯನಿರ್ವಹಿಸುವಂತೆ ಒತ್ತಡ ಹೇರಿದ್ರು. ಆದ್ರೆ ಅವರ ಇಚ್ಛಾಪ್ರಜ್ಞೆಗೆ ವಿರುದ್ಧವಾಗಿದ್ದರಿಂದ ಅವರು ಇದನ್ನು ತಿರಸ್ಕರಿಸಿದ್ರು. ಆದೇ ಸ್ವಹಿತಾಸಕ್ತಿ ಹೊಂದಿದವರು ತನ್ನ ಪತಿಯ ಮೇಲೆ ಹಿರಿಯ ಅಧಿಕಾರಿಗಳ ಮೂಲಕ ಒತ್ತಡ ಹೇರಿದ್ದರು.

ಪ್ರತಿ ದಿನ ಈ ಸಮಾಜಘಾತುಕ ಶಕ್ತಿಗಳ ವಿರುದ್ಧ ಮೃದುವಾಗಿ ವರ್ತಿಸುವಂತೆ ಒತ್ತಡ ಹೇರಿದ್ರು. ಮತ್ತು ಅವರ ದೈನದಿಂದ ಕಾರ್ಯಚಟುವಟಿಕೆಗಳ ಮೇಲೆ ಅಡ್ಡಿ ಪಡಿಸಿದರು. ನನ್ನ ಪತಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ, ಕಾನೂನಿನ ಚೌಕಟ್ಟನನ್ನು ಮೀರಿ ಎಂದೂ ಕಾರ್ಯನಿರ್ವಹಿಸಿಲ್ಲ. ಅಷ್ಟೇ ಅಲ್ಲಾ, ಯಾವುದೇ ರಾಜಕೀಯ ಪಕ್ಷದ ಪರವಾಗಿಯೂ ಕಾರ್ಯ ನಿರ್ವಹಿಸಿಲ್ಲ. ಯಾವುದೇ ರಾಜಕೀಯ ಒತ್ತಡಕ್ಕೂ ನನ್ನ ಪತಿ ಬಗ್ಗುತ್ತಿರಲಿಲ್ಲ. ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ರು. ಹಲವು ಸಂದರ್ಭಗಳಲ್ಲಿ ನನ್ನ ಪತಿ ಹಿರಿಯ ಅಧಿಕಾರಿಗಳಾದ ಎ.ಎಂ. ಪ್ರಸಾದ್ ಮತ್ತು ಪ್ರಣಬ್ ಮೊಹಾಂತಿ ಅಕ್ರಮ ಹಣವನ್ನು ಸಂಗ್ರಹಿಸುವಂತೆ ನನ್ನ ಪತಿಯ ಮೇಲೆ ತುಂಬಾ ಒತ್ತಡ ಹೇರಿದ್ದನ್ನು ಅವರು ನನ್ನ ಮುಂದೆ ಹೇಳಿಕೊಂಡಿದ್ದಾರೆ.

ಆದ್ರೆ ಈ ರೀತಿ ಅಕ್ರಮ ಹಣವನ್ನು ಸಂಗ್ರಹಿಸೋದಕ್ಕೆ ವಿರೋಧಿಯಾಗಿದ್ದ ನನ್ನ ಪತಿ ಹಿರಿಯ ಅಧಿಕಾರಿಗಳ ಈ ಒತ್ತಡವನ್ನು ಒಪ್ಪಿರಲಿಲ್ಲ. ಈ ರೀತಿ ಹಿರಿಯಾಧಿಕಾರಿಗಳಿಂದ ಎಲ್ಲಾ ಕಿರುಕುಳವನ್ನು ನನ್ನ ಪತಿ ಸಹಿಸಿಕೊಂಡೇ ಬಂದಿದ್ರು. ನನ್ನ ಪತಿ ಹಿರಿಯ ಅಧಿಕಾರಿಗಳಿಂದ ಅತ್ಯಂತ ದಾರುಣವಾದ ಕಿರುಕುಳವನ್ನು ಅನುಭವಿಸಿದ್ದರು. ಆದ್ರೆ ನನ್ನ ಪತಿ ಎಂದಿಗೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥರಾಗಿದ್ದರು. ಕೆ.ಜೆ. ಜಾರ್ಜ್ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನನ್ನ ಪತಿಯ ಮೇಲೆ ಹಿರಿಯ ಅಧಿಕಾರಿಗಳ ಒತ್ತಡ ಹೆಚ್ಚಾಯಿತು.

ಹಲವು ಬಾರಿ ನನ್ನ ಪತಿಯ ಕಾರ್ಯಕ್ಕೂ ಅಡ್ಡಿ ಪಡಿಸಲಾಯ್ತು. ನನ್ನ ಪತಿ ಇದೆಲ್ಲವನ್ನೂ ಧೈರ್ಯ ಹಾಗೂ ತಾಳ್ಮೆಯಿಂದ ಎದುರಿಸಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿದ್ದರು. ಅವರ ಬಡ್ತಿಯನ್ನು ಯಾವುದೇ ಕಾರಣವಿಲ್ಲದೇ ತಡೆಹಿಡಿಯಲಾಯಿತು ಮತ್ತು ಪೊಲೀಸ್ ಠಾಣೆಯಿಂದ ಠಾಣೆಗೆ ವರ್ಗಾವಣೆ ಮಾಡಲಾಯಿತು.

ಹಿಂದಿನ ಗೃಹ ಸಚಿವ ಕೆ.ಜೆ. ಜಾರ್ಜ್ ಬೆಂಬಲದಿಂದ ನಿರಂತರವಾಗಿ ಹಿರಿಯ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳವನ್ನು ತಡೆಯಲಾರದೇ ಒತ್ತಡ, ಕಿರುಕುಳದಿಂದ ಉಂಟಾದ ಹತಾಶೆ ಅವರು 7-7-2016ರಂದು ಮಡಿಕೇರಿಯ ಸ್ಥಳೀಯ ಮಾಧ್ಯಮವನ್ನು ಸಂಪರ್ಕಿಸುವಂತೆ ಮಾಡಿತ್ತು. ಅಲ್ಲಿ ಅವರು ತಮಗಾದ ನೋವು, ಕಿರುಕುಳ ತೆರೆದಿಟ್ಟಿದ್ದರು.

ಗುರುವಾರ 7-7-2016ರಂದು ಮಾಧ್ಯಮದ ಮುಂದೆ ಅವರು ತೆರೆದಿಟ್ಟ ಎಲ್ಲಾ ಘಟನಾವಳಿಗಳು ಸತ್ಯವಾಗಿದ್ವು, ಈ ಮೂಲಕ ಪ್ರತಿದಿನ ನಮ್ಮ ಮುಂದೆ ಹೇಳುತ್ತಿದ್ದ ವಿಷಯಗಳನ್ನೇ ಬಹಿರಂಗಗೊಳಿಸಿದ್ದರು. ವರ್ಷಗಳಿಂದಲೂ ನಡೆಯುತ್ತಿದ್ದ ಈ ಎಲ್ಲಾ ಬೆಳವಣಿಗೆಗಳಿಂದ ಒತ್ತಡಕ್ಕೊಳಗಾಗಿ ನನ್ನ ಪತಿ ನಮ್ಮ ಜೀವವನ್ನು ಅಂತ್ಯಗೊಳಿಸೋ ನಿರ್ಧಾರಕ್ಕೆ ಬರುವಂತೆ ಮಾಡಿತು.

ಗೃಹ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣಬ್ ಮೊಹಾಂತಿ ನನ್ನ ಪತಿಗೆ ನೀಡಿದ ಕಿರುಕುಳ ಹಾಗೂ ಮಾನಸಿಕ ಚಿತ್ರಹಿಂಸೆಯಿಂದಲೇ ನನ್ನ ಪತಿ ತಮ್ಮ ಜೀವವನ್ನು ಅಂತ್ಯಗೊಳಿಸಿದ್ದಾರೆ. ಆದ್ದರಿಂದ ಈ ಮೂವರ ವಿರುದ್ಧ ಹಾಗೂ ಇನ್ನಿತರ ಯಾರೇ ಈ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ನನಗೂ ಮತ್ತು ನನ್ನ ಮಕ್ಕಳಿಗೂ ನ್ಯಾಯ ಒದಗಿಸಬೇಕು. ಕೆಲ ಧಾರ್ಮಿಕ ಕಾರ್ಯಗಳಿಂದಾಗಿ ನಾನು ಬರಲಾಗದ್ದರಿಂದ ಈ ದೂರು ನೀಡುವಲ್ಲಿ ವಿಳಂಬವಾಗಿದೆ.

ನಿಮ್ಮ ವಿಧೇಯ,

ಪಾವನಾ ಕೆ.ಕೆ