ಮುಖ್ಯಮಂತ್ರಿ ವಿರುದ್ಧ ಮತ್ತೆ ಪೂಜಾರಿ ಗುಡುಗು
ಸುದ್ದಿ ಸಾರ

ಮುಖ್ಯಮಂತ್ರಿ ವಿರುದ್ಧ ಮತ್ತೆ ಪೂಜಾರಿ ಗುಡುಗು

ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಜಿ ಕೆಪಿಸಿಸಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮುಖ್ಯಮಂತ್ರಿ ವಿರುದ್ದ ಗುಡುಗಿದ್ದಾರೆ. ಡಿವೈಎಸ್ಪಿ ತನ್ನ ಸಾವಿಗೂ ಮುನ್ನ ನೀಡಿದ ಹೇಳಿಕೆಯಲ್ಲಿ ಮಹತ್ವವಿದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಡಿವೈಎಸ್ಪಿ ಗಣಪತಿ ತಮ್ಮ ಸಾವಿಗೂ ಮುನ್ನ ನೀಡಿರುವ ಹೇಳಿಕೆಗೆ ಸುಪ್ರೀಂ ಕೋರ್ಟ್ ಮಾನ್ಯತೆ ಇದೆ. ಈ ಹೇಳಿಕೆಯ ಪ್ರಕಾರ ಎಫ್ಐಆರ್ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ಸರಕಾರ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಪಕ್ಷದ ವಿರುದ್ದವೇ ಪೂಜಾರಿ ಕಿಡಿಕಾರಿದ್ದಾರೆ.

ಶನಿವಾರ ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯರೇ ಯಾಕೆ ಹೀಗೆ ಮಾಡುತ್ತಿದ್ದೀರಿ? ಆರೋಪಿತ ಸಚಿವರು, ಅಧಿಕಾರಿಗಳನ್ನು ಬಂಧಿಸಬೇಕಿತ್ತು. ಮುಖ್ಯಮಂತ್ರಿಯವರೇ ನಿಮಗೆ ಯಾರ ಒತ್ತಡವಿದೆ ಎಂದು ಬಹಿರಂಗಪಡಿಸಿ ಎಂದು ನೇರವಾಗಿಯೇ ಸಿದ್ದರಾಮಯ್ಯರನ್ನು ಪ್ರಶ್ನಿಸಿದ್ದಾರೆ.

ಕೇವಲ ಒಬ್ಬ ವ್ಯಕ್ತಿಯ ರಕ್ಷಣೆಗೆ ನಿಲ್ಲಬೇಡಿ. ಈ ಮೂಲಕ ತಮ್ಮ ಸ್ಥಾನಕ್ಕೆ ಅವಮಾನ ಮಾಡಬೇಡಿ. ಒಬ್ಬ ವ್ಯಕ್ತಿಗೋಸ್ಕರ ಕಾಂಗ್ರೆಸ್ ಪಕ್ಷವನ್ನು ಮುಗಿಸುವ ಕೆಲಸ ಮಾಡಬೇಡಿ, ಪಕ್ಷಕ್ಕಿಂತ ಒಬ್ಬ ವ್ಯಕ್ತಿ ದೊಡ್ಡದಾಗಿಬಿಟ್ಟರಾ? ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಅಧಿಕಾರವನ್ನು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿರುದ್ದ ಬಳಸಬೇಡಿ ಎಂದು ಸಲಹೆ ನೀಡಿದ್ದಾರೆ.

ಸರಕಾರಕ್ಕೆ ಪದೇ ಪದೇ ಚಾಟಿ ಬೀಸುವ ಜನಾರ್ಧನ ಪೂಜಾರಿ ಈಗ ಮತ್ತೊಮ್ಮೆ ಸರಕಾರಕದ ವಿರುದ್ಧ ಮಾತನಾಡಿ ಮುಖ್ಯಮಂತ್ರಿಗಳನ್ನು ಪೇಚಿಗೆ ಸಿಲುಕಿಸಿದ್ದಾರೆ.