samachara
www.samachara.com
ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಗ್ರಾಮಸ್ಥರು!
ಸುದ್ದಿ ಸಾರ

ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಈ ಗ್ರಾಮಸ್ಥರು!

ಭಾರತದಲ್ಲಿ ಕಾನೂನು ಸುವ್ಯವಸ್ಥೆ ಪಾಲಿಗೆ ಅಪರೂಪದ ಗ್ರಾಮ ಎಂದು ಗುರುತಿಸಿಕೊಂಡಿದ್ದ ಗ್ರಾಮದಲ್ಲಿ ಕೊನೆಗೂ ಒಂದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸ್ವಾತಂತ್ರ್ಯ ಬಂದು ಇಲ್ಲೀಯವರೆಗೂ ಜಾರ್ಖಂಡ್ ರಾಜ್ಯದ ಲತೇಹಾರ್ ಜಿಲ್ಲೆಯ ಲಾಲ್‍ಘಡಿ ಗ್ರಾಮದಲ್ಲಿ ಒಂದೇ ಒಂದು ಪೊಲೀಸ್ ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ, ಇಡೀ ದೇಶದಲ್ಲಿ ಈ ಗ್ರಾಮ ವಿಶೇಷ ಸ್ಥಾನದಲ್ಲಿ ಗುರುತಿಸಿಕೊಂಡಿತ್ತು.

ಆದರೆ ಇದೀಗ, ಮೊದಲ ಬಾರಿಗೆ ಗ್ರಾಮಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇಲ್ಲಿನ ಬುಡಕಟ್ಟು ಜನಾಂಗದ ವಿವಾಹಿತ ವ್ಯಕ್ತಿಯೊಬ್ಬ ಇದೇ ಗ್ರಾಮದ ಮಹಿಳೆಯೊಂದಿಗೆ ನಾಪತ್ತೆಯಾಗಿರುವುದು ಇದಕ್ಕೆ ಕಾರಣವಾಗಿದೆ. ಭಾನುವಾರ ಇಬ್ಬರ ನಾಪತ್ತೆ ಪ್ರಕರಣವನ್ನು ಹಿಡಿದುಕೊಂಡು ಗ್ರಾಮಸ್ಥರು ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದಾಗ ಸ್ವತಃ ಪೊಲೀಸರಿಗೂ ಅಚ್ಚರಿಯಾಗಿದೆ.

ಹಾಗಂತ ಇಲ್ಲಿ ತಪ್ಪುಗಳೇ ನಡೆಯುತ್ತಿರಲಿಲ್ಲ ಎಂದಲ್ಲ. ಎಂತಹದ್ದೇ ಪರಿಸ್ಥಿತಿಯನ್ನೂ ಗ್ರಾಮಸ್ಥರೇ ಪಂಚಾಯತಿ ನಡೆಸಿ, ಬಗೆಹರಿಸಿಕೊಳ್ಳುತ್ತಿದ್ದರು. "ಅಪರಾಧ ಕೃತ್ಯಗಳೇ ಇಲ್ಲದ ಗ್ರಾಮ ಎಂದು ಹೆಸರುವಾಸಿಯಾಗಿರುವ ಲಾಲ್‍ಘಡಿ ಗ್ರಾಮದ ಹೆಸರಿಗೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳುವ ಮುನ್ನ ಎರಡೂ ಕಡೆಯವರಿಗೆ ಮಾತುಕತೆ ನಡೆಸಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ,'' ಎಂದು ಇಲ್ಲಿನ ಪೊಲೀಸ್ ಠಾಣೆಯ ಅಧಿಕಾರಿ ರಮೇಶ್ ಪ್ರಸಾದ್ ಸಿಂಗ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಜಾರ್ಖಂಡ್ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾದ ವಿಜಯೇಂದರ್ ಸಿಂಗ್ ಕೂಡ ಲಾತೇಹಾರ್ ಜಿಲ್ಲೆಗೆ ಈ ಹಿಂದೆ ಭೇಟಿ ನೀಡಿದಾಗ ಲಾಲ್‍ಘಡಿ ಗ್ರಾಮವನ್ನು ಹಾಡಿ ಹೊಗಳಿದ್ದರು. ಆದ್ದರಿಂದ ಗ್ರಾಮಸ್ಥರಿಗೆ ತಾವೇ ಚರ್ಚಿಸಿ ವಿವಾದವನ್ನು ಇತ್ಯರ್ಥ ಮಾಡುವ ಅವಕಾಶ ನೀಡಲಾಗಿದ್ದು ಒಂದು ವೇಳೆ ಪ್ರಕರಣ ಇತ್ಯರ್ಥವಾಗದಿದ್ದರೆ ಮಾತ್ರ ಮಧ್ಯಸ್ಥಿಕೆ ವಹಿಸುವುದಾಗಿ ಸಿಂಗ್ ಹೇಳಿದ್ದಾರೆ.

ಈ ಭಾಗದಲ್ಲಿ ಮಾವೋವಾದಿ ನಕ್ಸಲೀಯರ ಇರುವಿಕೆಯೂ, ಗ್ರಾಮಸ್ಥರು ಪೊಲೀಸ್ ಠಾಣೆಗಳಿಂದ ದೂರು ಇರಲು ಕಾರಣ ಎಂದು ವರದಿಗಳು ಹೇಳುತ್ತಿವೆ.