samachara
www.samachara.com
ಉತ್ತರಖಾಂಡ್ ಕಾಂಗ್ರೆಸ್ ಶಾಸಕರಿಂದ 'ಕುದುರೆ ವ್ಯಾಪಾರ'ದ ಆರೋಪ
ಸುದ್ದಿ ಸಾರ

ಉತ್ತರಖಾಂಡ್ ಕಾಂಗ್ರೆಸ್ ಶಾಸಕರಿಂದ 'ಕುದುರೆ ವ್ಯಾಪಾರ'ದ ಆರೋಪ

ಉತ್ತರಾಖಾಂಡದಲ್ಲಿ ಹೇರಿರುವ ರಾಷ್ಟ್ರಪತಿ ಆಡಳಿತ ಸಂಬಂಧ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವ ನಡುವೆಯೇ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳು ತಮಗೆ ಬಿಜೆಪಿಯಿಂದ 50 ಕೋಟಿ ರೂ. ನೀಡುವ ಆಮಿಷವೊಡ್ಡಲಾಗಿದೆ ಎಂದು ಹೇಳಿರುವುದು ಭಾರೀ ಸುದ್ದಿಗೆ ಗ್ರಾಸವಾಗಿದೆ.

ಕಾಂಗ್ರೆಸ್ ಶಾಸಕರಾದ ರಾಜೇಂದ್ರ ಭಂಡಾರಿ ಮತ್ತು ಜೀತ್ ರಾಮ್ ಈ ಗಂಭೀರ ಆರೋಪ ಮಾಡಿದ್ದಾರೆ.

"ನಮಗೆ 50 ಕೋಟಿ ರೂ. ಜೊತೆಗೆ ಮತ್ತಿತರ ಸೌಲಭ್ಯಗಳನ್ನು ಕೊಡುವ ಭರವಸೆಯನ್ನು ಬಿಜೆಪಿಯಿಂದ ನೀಡಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್, ಒಬ್ಬರಿಗೆ ರಾಜ್ಯಸಭಾ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿಯಿಂದ ನೀಡಲಾಗಿದೆ," ಎಂದು ಅವರಿಬ್ಬರು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಸರಕಾರ ರಚನೆಯ ಬಿಕ್ಕಟ್ಟು ಸೃಷ್ಟಿಯ ಪ್ರಾರಂಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸದಸ್ಯನೊಬ್ಬರಿಗೆ 2.5 ಕೋಟಿ ರೂ. ಆಮಿಷವೊಡ್ಡಲಾಗಿತ್ತು. ನಂತರ ಅದು 5 ಕೋಟಿ ರೂ.ನಿಂದ 10 ಕೋಟಿ ರೂ. ವರೆಗೆ ಹೆಚ್ಚಿಸಲಾಗಿತ್ತು. ಇತ್ತೀಚೆಗೆ ಇದು 50 ಕೋಟಿ ರೂ. ಹೆಚ್ಚಿಸಲಾಗಿದೆ ಎಂದು ಬದ್ರಿನಾಥ್ ಕ್ಷೇತ್ರದ ಶಾಸಕರಾಗಿರುವ ಭಂಡಾರಿ ಹೇಳಿದ್ದಾರೆ.

ನಾವು ಬಿಜೆಪಿಯ ಸತ್ಪಾಲ್ ಸಿಂಗ್ ಅವರಿಗೆ ಆತ್ಮೀಯರಾಗಿದ್ದೇವೆ. ಆದರೆ ಇದು ವೈಯಕ್ತಿಕ. ಯಾರೊಬ್ಬರು ನಮ್ಮನ್ನು ಕೊಳ್ಳಲು ಸಾಧ್ಯವಿಲ್ಲ ಎಂದು ಭಂಡಾರಿ ತಿಳಿಸಿದ್ದಾರೆ.

ಸತ್ಪಾಲ್ ಸಿಂಗ್ ಮಾಜಿ ಕಾಂಗ್ರೆಸ್ಸಿಗರಿದ್ದು, ಇದೀಗ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಿಶೇಷ ಏನೆಂದರೆ, ಕಾಂಗ್ರೆಸ್ ನಲ್ಲಿ ಬಂಡಾಯವೆದ್ದ 9 ಶಾಸಕರಲ್ಲಿ ಒಬ್ಬರು ಸತ್ಪಾಲ್ ಸಿಂಗ್ ಅವರ ಪತ್ನಿಯಾಗಿದ್ದಾರೆ.

ಸುಪ್ರಿಂ ವಿಚಾರಣೆ:

ಉತ್ತರಾಖಾಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದಕ್ಕೆ ಸಂಬಂಧಿಸಿದಂತೆ ಬುಧವಾರ ಏಳು ಪ್ರಶ್ನೆಗಳನ್ನು ಮುಂದಿಟ್ಟಿರುವ ಸುಪ್ರೀಂ ಕೋರ್ಟ್ ಈ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.

ಸದನದಲ್ಲಿ ಬಲಪರೀಕ್ಷೆ ಎದುರಿಸುವಂತೆ ವಿಧಿ 175 (2)ರ ಅಡಿಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿಗೆ ಸೂಚನೆ ನೀಡಿದ್ದರೆ? ವಿಧಾನಸಭಾಧ್ಯಕ್ಷರು ಶಾಸಕರನ್ನು ಅನರ್ಹಗೊಳಿಸಿದ ಕ್ರಮವು ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಳ್ವಿಕೆ ಹೇರಲು ಸೂಕ್ತವಾದ ವಿಷಯವೇ? ಕೇಂದ್ರದ ಆಡಳಿವನ್ನು ಹೇರಲು ರಾಷ್ಟ್ರಪತಿಯವರು ವಿಧಾನಸಭೆಯ ಕಲಾಪಗಳನ್ನು ಪರಿಗಣಿಸಬಹುದೇ? ಧನವಿನಿಯೋಗ ಮಸೂದೆಗೆ ಸಂಬಂಧಿಸಿದಂತೆ ರಾಷ್ಟ್ರಪತಿ ಆಳ್ವಿಕೆಯನ್ನು ಯಾವಾಗ ಹೇರಬಹುದು? ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ಸದನದಲ್ಲಿ ಬಲಾಬಲ ಪರೀಕ್ಷೆಗೆ ಆಗುವ ವಿಳಂಬವು ರಾಷ್ಟ್ರಪತಿ ಆಳ್ವಿಕೆ ಘೊಷಿಸಲು ಕಾರಣ ಆಗಬಲ್ಲುದೇ ಎಂಬ ಪ್ರಶ್ನೆಯನ್ನೂ ಸುಪ್ರೀಂಕೋರ್ಟ್ ಕೇಳಿದೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಮಾಡುವಂತಹುದು ಏನೂ ಇಲ್ಲ. ವಿಧಾನಸಭೆಗೆ ಸಭಾಧ್ಯಕ್ಷರೇ 'ಮಾಸ್ಟರ್' ಎಂದೂ, ನೈನಿತಾಲ್ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ವಿಚಾರಣೆ ನಡೆಸುತ್ತಾ ಸುಪ್ರೀಂಕೋರ್ಟ್ ಹೇಳಿದೆ.