ಇಸಾಗೆ ನೀಡಿದ್ದ ವೀಸಾ ವಾಪಾಸ್: ಚೀನಾ ವಿರೋಧಕ್ಕೆ ಮಣಿದ ಭಾರತ
ಸುದ್ದಿ ಸಾರ

ಇಸಾಗೆ ನೀಡಿದ್ದ ವೀಸಾ ವಾಪಾಸ್: ಚೀನಾ ವಿರೋಧಕ್ಕೆ ಮಣಿದ ಭಾರತ

'ಜಾಗತಿಕ ಐಘೂರ್ ಕಾಂಗ್ರೆಸ್' ನಾಯಕ, ಚೀನಾ ವಿರುದ್ಧ ಹೋರಾಟ ನಡೆಸುತ್ತಿರುವ ದೋಲ್ಕನ್ ಇಸಾಗೆ ನೀಡಿದ್ದ ವೀಸಾವನ್ನು ಭಾರತ ಹಿಂತೆಗೆದುಕೊಂಡಿದೆ.

ತಿಂಗಳ ಕೊನೆಯಲ್ಲಿ ಧರ್ಮಶಾಲದಲ್ಲಿ ನಡೆಯಲಿರುವ 'ಪ್ರಜಾಪ್ರಭುತ್ವ ಸ್ಥಾಪನಾ ಸಮ್ಮೇಳನ'ದಲ್ಲಿ ಇಸಾ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಭಾರತ ವೀಸಾ ನೀಡುತ್ತಿದ್ದಂತೆ ನೆರೆಯ ರಾಷ್ಟ್ರ ಚೀನಾ ತನ್ನ ಪ್ರಬಲ ವಿರೋಧವನ್ನು ದಾಖಲಿಸಿತ್ತು.ಈ ಹಿನ್ನೆಲೆಯಲ್ಲಿ ಭಾರತ ವೀಸಾ ವಾಪಾಸ್ ಪಡೆದಿದೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಎನ್ಡಿಟಿವಿಗೆ ಮಾತನಾಡಿರುವ ಇಸಾ, "ನನ್ನನ್ನು ಭಯೋತ್ಪಾದಕ ಎಂದು ಚೀನಾ ಹಣೆಪಟ್ಟಿ ಕಟ್ಟಿದೆ. ಹೀಗಾಗಿ ಭಾರತ ಅನುಮತಿ ನಿರಾಕರಿಸಿರಬಹುದು,'' ಎಂದು ತಿಳಿಸಿದ್ದಾರೆ.

ಏನಿದು ಐಘೂರ್ ಹೋರಾಟ?: ಚೀನಾದ ಝಿನ್ಜಿಂಗ್ ಪ್ರಾಂಥ್ಯದಲ್ಲಿ ಬಹುಸಂಖ್ಯಾತರಾಗಿರುವ ಟರ್ಕಿಕ್ ಪಂಗಡಕ್ಕೆ ಸೇರಿದ ಮುಸ್ಲಿಂ ಸಮುದಾಯ 1990ರಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿದೆ. ‘ಐಘೂರ್ ಪ್ರತ್ಯೇಕತಾ ಹೋರಾಟ’ ಎಂದು ಗುರುತಿಸುವ ಇದನ್ನು ಮುನ್ನಡೆಸುತ್ತಿರುವುದು ದೋಲ್ಕನ್ ಇಸಾ. ಸದ್ಯ ಚೀನಾದಿಂದ ಗಡೀಪಾರಾಗಿರುವ ಇಸಾ ಜರ್ಮನ್ ಪ್ರಜೆಯಾಗಿ ಬದುಕು ನಡೆಸುತ್ತಿದ್ದಾರೆ. ಚೀನಾ ನಡೆಸುತ್ತಿರುವ ಮಾನವ ಹಕ್ಕು ದಮನದ ವಿರುದ್ಧ ಅಂತರಾಷ್ಟ್ರೀಯ ಅಭಿಪ್ರಾಯ ರೂಪಿಸುತ್ತಿದ್ದಾರೆ. ಇವರನ್ನು ‘ಭಯೋತ್ಪಾದಕ’ ಎಂದು ಚೀನಾ ಘೋಷಿಸಿದೆ.

ಕಳೆದ ವಾರ ಚೀನಾಕ್ಕೆ ಬೇಕಾಗಿರುವ ಆರೋಪಿ ಇಸಾಗೆ ವೀಸಾ ನೀಡಿದ ಸಮಯದಲ್ಲಿ "ಮಸೂದ್ ಅಝರ್ ಪ್ರಕರಣ ಹಾಗೂ ಹಿಮಾಚಲ ಪ್ರದೇಶದ ಗಡಿ ವಿಚಾರದಲ್ಲಿ ಚೀನಾ ಪಾಕಿಸ್ತಾನದ ಪರವಾಗಿ ವಿಶ್ವಸಂಸ್ಥೆಯಲ್ಲಿ ವಕಾಲತ್ತು ವಹಿಸಿತ್ತು. ಇದಕ್ಕೀಗ ಭಾರತ ಸರಿಯಾದ ಉತ್ತರವನ್ನು ನೀಡಿದೆ,'' ಎಂದು ಸಂಪುಟ ಕಾರ್ಯದರ್ಶಿ ನರೇಶ್ ಚಂದ್ರ ಪ್ರತಿಕ್ರಿಯಿಸಿದ್ದರು.

ಇದು ಭಾರತದ ವಿದೇಶಾಂಗ ನೀತಿ ವಿಚಾರದಲ್ಲಿ ಚೀನಾ ವಿರುದ್ಧ ತೆಗೆದುಕೊಂಡ ಗಟ್ಟಿ ನಿಲುವು ಎಂದೇ ಹೇಳಲಾಗುತ್ತಿತ್ತು. ಆರಂಭದಿಂದಲೂ ಯುಪಿಎ ಸರಕಾರದ ವಿದೇಶಾಂಗ ನೀತಿಗಳನ್ನು ಚಿಕ್ಕಪುಟ್ಟ ಬದಲಾವಣೆಗಳ ಜತೆ ಅನುಸರಿಸಿಕೊಂಡು ಬಂದ ನರೇಂದ್ರ ಮೋದಿ, ಚೀನಾ ವಿರುದ್ಧ ತಮ್ಮ ದೃಢ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ವಿಶ್ಲೀಷಿಸಲಾಗುತ್ತು.ಇದೀಗ, ಇಸಾಗೆ ನೀಡಿರುವ ವೀಸಾ ಹಿಂತೆಗೆದುಕೊಳ್ಳುವ ಮೂಲಕ ಚೀನಾ ವಿರೋಧಕ್ಕೆ ಭಾರತ ಮಣಿದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ.