ಸುಪ್ರಿಂ ಮೆಟ್ಟಿಲೆರಿತು ಯಡಿಯೂರಪ್ಪ ಡಿ-ನೋಟಿಫಿಕೇಶನ್
ಸುದ್ದಿ ಸಾರ

ಸುಪ್ರಿಂ ಮೆಟ್ಟಿಲೆರಿತು ಯಡಿಯೂರಪ್ಪ ಡಿ-ನೋಟಿಫಿಕೇಶನ್

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧದ 15 ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಸುಪ್ರಿಂಕೋರ್ಟ್‍ನಲ್ಲಿ ಶುಕ್ರವಾರ ಅರ್ಜಿ ಸಲ್ಲಿಕೆಯಾಗಿದ್ದು, ಹೈಕೋರ್ಟ್ ಎಲ್ಲಾ ಪ್ರಕರಣಗಳನ್ನು ವಜಾ ಮಾಡಿದ್ದನ್ನು ಪ್ರಶ್ನೆ ಮಾಡಿ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರ ಯಡಿಯೂರಪ್ಪ ಅವರ ವಿರುದ್ಧ ವಾದ ಮಾಡಲು ವಕೀಲ ಅರಿಸ್ಟಾಟಲ್ ಅವರನ್ನು ನೇಮಿಸಿದೆ.

ಲೋಕಾಯುಕ್ತಕ್ಕೆ ಬಿಎಸ್ವೈ ವಿರುದ್ಧದ ಪ್ರಕರಣಗಳನ್ನು ತನಿಖೆ ನಡೆಸುವ ಅಧಿಕಾರವಿದೆ. 2ಜಿ ಹಗರಣದಲ್ಲೂ ಸಿಎಜಿ ವರದಿ ಆಧರಿಸಿ ಎಫ್ ಐಆರ್ ದಾಖಲಿಸಲಾಗಿತ್ತು. ಹಾಗೆಯೇ ಸಿಎಜಿ ವರದಿ ಆಧರಿಸಿ ಪ್ರಕರಣ ದಾಖಲಿಸಲಾಗಿದ್ದು, ಕ್ರಿಮಿನಲ್ ಪ್ರಕ್ರಿಯೆ ಸಾಧ್ಯವಿದೆ. ಮಾಹಿತಿ ಮೂಲವಾಗಿ ಸಿಎಜಿ ವರದಿ ಬಳಸಬಹುದಾಗಿದೆ ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿದೆ.

ಈ ಮೂಲಕ ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ನಂತರ ಬಿ. ಎಸ್. ಯಡಿಯೂರಪ್ಪ ಮೇಲೆ ಕಾನೂನಿನ ತೂಗುಗತ್ತಿ ತೂಗಾಡಲು ಶುರುಮಾಡಿದೆ. ಪ್ರಕರಣಕ್ಕೆ ಮರುಜೀವ ನೀಡುವ ನಿರ್ಧಾರ ಕೈಗೊಳ್ಳುವ ಮುನ್ನ, ಸರಕಾರ ಹೆಚ್ಚುವರಿ ಅಡ್ವೋಕೆಟ್ ಜನರಲ್ ಪೊನ್ನಣ್ಣ ಸಲಹೆಯನ್ನು ಕೇಳಿತ್ತು. ಅವರು ನೀಡಿರುವ ವರದಿಯನ್ನು ಆಧರಿಸಿ ಕಳೆದೆರಡು ದಿನಗಳ ಹಿಂದೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು.

ಮುಂದಿನ ದಿನಗಳಲ್ಲಿ ಇದು ಕೇವಲ ಕಾನೂನು ಹೋರಾಟವಾಗದೆ, ರಾಜಕೀಯ ಹೋರಾಟದ ರೂಪವನ್ನು ತಾಳುವ ಲಕ್ಷಣಗಳಿವೆ. "ನನ್ನ ಮೇಲಿನ ಆರೋಪಗಳಿಂದ ಮುಕ್ತನಾಗಿದ್ದೇನೆ. ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳುತ್ತಿದ್ದೇನೆ," ಎಂದು ಹೇಳುತ್ತ ಮೊನ್ನೆಯಷ್ಟೇ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ರಾಜ್ಯ ಪ್ರವಾಸಕ್ಕೆ ಹೊರಟಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಇದು ಹಿನ್ನಡೆಯಾಗಿದೆ.

ಈ ಹಿಂದೆ ಸಿಎಜಿ ವರದಿ ಆದರಿಸಿ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಯಡಿಯೂರಪ್ಪ ಅವರ ಮೇಲಿನ ಪ್ರಕರಣಗಳನ್ನ ವಜಾ ಮಾಡಿತ್ತು.