ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಮಳೆಯಿಂದಾಗಿ ಪ್ರವಾಹ
ಸುದ್ದಿ ಸಾರ

ಅರುಣಾಚಲ ಪ್ರದೇಶದಲ್ಲಿ ಭೂಕುಸಿತ: ಮಳೆಯಿಂದಾಗಿ ಪ್ರವಾಹ

ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದೆ. ಘಟನೆಯಲ್ಲಿ 15 ಜನ ಮೃತಪಟ್ಟಿದ್ದಾರೆ.

ಈ ಪ್ರದೇಶದಲ್ಲಿ ಕಟ್ಟಡಗಳಿಗೂ ಹಾನಿಯುಂಟಾಗಿದ್ದು, ರಸ್ತೆ ಸಂಪರ್ಕ ವ್ಯತ್ಯಯಗೊಂಡಿದೆ. ಮಳೆಯಿಂದಾಗಿ ವಿದ್ಯುತ್ ಉತ್ಪಾದನಾ ಘಟಕಕ್ಕೂ ಹಾನಿಯಾಗಿದೆ. ಹಲವು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ತವಾಂಗ್ ಗಡಿ ಜಿಲ್ಲೆಗಳ ಹಲವೆಡೆ ಭೂ ಕುಸಿತವುಂಟಾಗಿದೆ. ಪ್ರಕೃತಿ ಅವಘಡಕ್ಕೆ 15 ಮಂದಿ ಮೃತಪಟ್ಟಿರುವ ಹಿನ್ನಲೆಯಲ್ಲಿ, ಗೃಹ ಸಚಿವ ರಾಜನಾಥ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಗೃಹ ಸಚಿವರು ಅರುಣಾಚಲ ಮುಖ್ಯಮಂತ್ರಿ ಕಲಿಕೋ ಪುಲ್ ಅವರೊಂದಿಗೆ ಸಮಾಲೋಚನೆ ನಡೆಸಿ ತವಾಂಗ್ ಜಿಲ್ಲೆಯ ಭೂಕುಸಿತದ ಬಗ್ಗೆ ಹಾಗೂ ಚಂಗ್'ಲಾಂಗ್ ಮತ್ತು ಇತರೆ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹದ ಬಗ್ಗೆ ವರದಿ ನೀಡುವಂತೆ ಹೇಳಿದರು.

ನಾವಾ ದೇಹಿಂಗ್ ನದಿ ಉಕ್ಕಿ ಹರಿಯುವುದರಿಂದ ಉಂಟಾಗುವ ಪ್ರವಾಹವನ್ನು ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರ ಸರಕಾರ ನೆರವು ನೀಡಲಿದೆ ಎಂದು ಸಿಂಗ್ ಭರವಸೆ ನೀಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನಿರ್ದೇಶಕ ಓ. ಪಿ. ಸಿಂಗ್ ರವರಿಗೆ ಭೂಕುಸಿತಕ್ಕೆ ತುತ್ತಾಗಿರುವ ಚೀನಾ ಗಡಿಯಲ್ಲಿರುವ ತವಾಂಗ್ ಜಿಲ್ಲೆಗೆ ರಕ್ಷಣಾ ಪಡೆಗಳೊಂದಿಗೆ ಧಾವಿಸಿದ್ದಾರೆ.  ಕಳೆದ ಕೆಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ರಾಜಧಾನಿ ಇಟಾನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ಉಂಟಾಗಿತ್ತು. ಚೀನಾ ಗಡಿಗೆ ಸಮೀಪದಲ್ಲಿರುವ ತವಾಂಗ್ ನಗರದಿಂದ 4 ಕಿಮೀ ದೂರದಲ್ಲಿರುವ ತಾಮ್ಲಾದಲ್ಲಿ ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ಭೂಕುಸಿತ ಉಂಟಾಗಿ 15 ಮಂದಿ ಮೃತಪಟ್ಟಿದ್ದಾರೆ. ತಾಮ್ಲಾದಲ್ಲಿ ಕಟ್ಟಡ ಕಾರ್ಮಿಕರು ಕ್ಯಾಂಪ್ನಲ್ಲಿ ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ.