samachara
www.samachara.com
ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ: ಬೆಂಗಳೂರಿನಲ್ಲಿ ದೇವೆಂದರ್ ಶರ್ಮಾ
ಸುದ್ದಿ ಸಾರ

ಕೃಷಿ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ: ಬೆಂಗಳೂರಿನಲ್ಲಿ ದೇವೆಂದರ್ ಶರ್ಮಾ

ರೈತರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರಕಾರ 3 ಲಕ್ಷ ಕೋಟಿ ರೂಪಾಯಿ ಶಾಶ್ವತ ಪ್ಯಾಕೇಜ್ ಘೋಷಿಸಬೇಕು ಎಂದು ಕೃಷಿ ಚಿಂತಕ ದೇವಿಂದರ್ ಶರ್ಮಾ ಬೆಂಗಳೂರಿನಲ್ಲಿ ಒತ್ತಾಯಿಸಿದ್ದಾರೆ.

ಇಲ್ಲಿಗೆ ಆಗಮಿಸಿದ್ದ ಅವರು, ಭಾನುವಾರ ಆಯ್ದ ಕೆಲವು ಪತ್ರಕರ್ತರ ಜತೆ  ಮಾತನಾಡಿದರು. "ದೇಶದ ಕೃಷಿ ಕ್ಷೇತ್ರ ಬಿಕ್ಕಟ್ಟಿನಲ್ಲಿದೆ. 60 ಕೋಟಿ ರೈತರ ಬದುಕು ಅತಂತ್ರ ಸ್ಥಿತಿಗೆ ಬಂದು ತಲುಪಿದೆ. ಈ ಸಮಯದಲ್ಲಿ ಶಾಶ್ವತ ಪರಿಹಾರ ನೀಡುವ ಮೂಲಕ ಕೃಷಿ ಚಟುವಟಿಗೆಗಳಿಗೆ ನೆರವಾಗಲು ಸರಕಾರ 3 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ, 7ನೇ ವೇತನ ಪರಿಷ್ಕರಣೆಯನ್ನು ತಡೆಹಿಡಿಯಬೇಕು,'' ಎಂದು ಅವರು ಒತ್ತಾಯಿಸಿದರು.

"7ನೇ ವೇತನ ಪರಿಷ್ಕರಣೆಗಾಗಿ 3 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ. ಒಂದು ವೇಳೆ ಕೇಂದ್ರ ಸರಕಾರದ ನೌಕರರಿಗೆ ವೇತನ ಪರಿಷ್ಕರಿಸಿದರೆ ದೇಶದ ಜಿಡಿಪಿ 1.9 ರಷ್ಟು ಹೆಚ್ಚಾಗುತ್ತದೆ. ಅದೇ ಹಣವನ್ನು ಕೃಷಿ ಕ್ಷೇತ್ರಕ್ಕೆ ಮೀಸಲಿದ್ದರೆ ದೇಶದ ಜಿಡಿಪಿಯಲ್ಲಿ ಶೇ. 15ರಷ್ಟು ಹೆಚ್ಚಾಗುತ್ತದೆ,'' ಎಂದು ಶರ್ಮಾ ಹೇಳಿದರು.

ಸರಕಾರಿ ನೌಕರರಿಗೆ 108 ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಅವುಗಳಲ್ಲಿ ಊಟಕ್ಕೆ (ಡಿಎ), ಮನೆ ಬಾಡಿಗೆಗೆ (ಎಚ್ ಆರ್ ಎ), ಶಿಕ್ಷಣ ಹಾಗೂ ವೈದ್ಯ ಸೌಲಭ್ಯಗಳನ್ನು ನೀಡಿದರೂ ಸಾಕು, ರೈತರ ಬದುಕು ಬದಲಾಗುತ್ತದೆ ಎಂದು ಅವರು ವಿವರಿಸಿದರು.

ದೇಶದ ಕೃಷಿ ಕ್ಷೇತ್ರದ ಬಗ್ಗೆ ಅಪಾರ ಅರಿವು ಹೊಂದಿರುವ ದೇವಿಂದರ್ ಶರ್ಮಾ, ಆಧುನಿಕ ಭಾರತದ ಕೃಷಿ ಬಿಕ್ಕಟ್ಟುಗಳ ಬಗ್ಗೆಅಂಕಣಗಳನ್ನು ಬರೆಯುತ್ತಿದ್ದಾರೆ. ಕೃಷಿ ವಲಯದ ಸಮಸ್ಯೆಗಳ ಜತೆಗೆ, ಅದಕ್ಕೆ ಪರಿಹಾರಾತ್ಮಕ ಹಾದಿಗಳ ಬಗ್ಗೆಯೂ ಅವರು ಬೆಳಕು ಚೆಲ್ಲುತ್ತಿದ್ದಾರೆ. ಅವರ 'ಗ್ರೌಂಡ್ ರಿಯಾಲಿಟಿ' ಬ್ಲಾಗ್ ಕೃಷಿ ಬಗ್ಗೆ ಆಸಕ್ತಿ ಇರುವವರಿಗೆ ಸಾಕಷ್ಟು ಮಾಹಿತಿ ನೀಡುತ್ತದೆ.