samachara
www.samachara.com
ಮನೆ ಪಾಠದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಸೂಚನೆ
ಸುದ್ದಿ ಸಾರ

ಮನೆ ಪಾಠದ ಉಪನ್ಯಾಸಕರ ವಿರುದ್ಧ ಕ್ರಮಕ್ಕೆ ಸೂಚನೆ

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಸಿಐಡಿ ಪೊಲೀಸರು ಬುಧವಾರ ಇನ್ನಿಬ್ಬರನ್ನು ಬಂಧಿಸಿದೆ.

ಸದಾಶಿವ ನಗರದ ಪೂರ್ಣಪ್ರಜ್ಞಾ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್, ಮತ್ತಿಕೆರೆ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್ ಬಂಧಿತರು.

ಇವರಿಬ್ಬರು, ಪ್ರಶ್ನೆ ಪತ್ರಿಕೆಗಳ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದರು. ಇದರಿಂದ ಕಮಿಷನ್ ಪಡೆಯುತ್ತಿದ್ದರು ಎಂದು ಸಿಐಡಿ ಡಿಐಜಿ ಸೋನಿಯಾ ನಾರಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಸೋರಿಕೆಯಾದ ಪಿಯುಸಿ ರಸಾಯನ ಶಾಸ್ತ್ರ ವಿಭಾಗದ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈವರೆಗೆ ಐವರ ಬಂಧನವಾದಂತಾಗಿದೆ.

ಮನೆಪಾಠಕ್ಕೆ ಕಡಿವಾಣ:

ಪದೇ ಪದೇ ಪಿಯು ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಪಿಯು ಮಂಡಳಿ, ಮನೆ ಪಾಠ ಮಾಡುವ ಸರ್ಕಾರಿ ಮತ್ತು ಅನುದಾನಿಕ ಕಾಲೇಜುಗಳ ಉಪನ್ಯಾಸಕರನ್ನು ಸಸ್ಪೆಂಡ್ ಮಾಡುವ ಎಚ್ಚರಿಕೆ ನೀಡಿದೆ.

ಮನೆ ಪಾಠ ಮಾಡುತ್ತಿರುವ ಉಪನ್ಯಾಸಕರ ಪಟ್ಟಿ ತಯಾರಿಸುವಂತೆ ಉಪ ನಿರ್ದೇಶಕರಿಗೆ ಇಲಾಖೆ ಆದೇಶ ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಹಿಂದೆ ಖಾಸಗಿ ಟ್ಯೂಷನ್ ಮಾಡುತ್ತಿರುವ ಉಪನ್ಯಾಸಕರ ಕೈವಾಡವಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯ. ಹೀಗಾಗಿ ಸಸ್ಪೆಂಡ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿರ್ದೇಶಕ ರಾಮೇಗೌಡ ಹೇಳಿದ್ದಾರೆ.

"ಕಳೆದ ಬಾರಿ ನಾನು ಪಿಯು ಇಲಾಖೆ ನಿರ್ದೇಶಕನಾಗಿದ್ದಾಗ ಅಂಥವರ 158 ಮಂದಿಯ ಪಟ್ಟಿ ತಯಾರಿಸಿದ್ದೆ. ಆದರೆ ಅಷ್ಟರಲ್ಲಿ ನನ್ನ ವರ್ಗಾವಣೆಯಾಗಿತ್ತು. ಇದೀಗ ಮತ್ತೆ ಅವರ ಪಟ್ಟಿ ತಯಾರಿಸುವಂತೆ ಹೇಳಿದ್ದೇನೆ. ಟ್ಯೂಷನ್ ಲಾಬಿಯನ್ನು ತಪ್ಪಿಸಲು ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕು," ಎಂದು ಅವರು ಹೇಳಿದ್ದಾರೆ.