- ಸಾಂದರ್ಭಿಕ ಚಿತ್ರ
ಸುದ್ದಿ ಸಾರ

ಅಸ್ಸಾಂ ಅತಂತ್ರ; ಕೇರಳದಲ್ಲಿ ಕೆಂಬಾವುಟ; ತಮಿಳುನಾಡು; ಪ.ಬಂಗಾಳದಲ್ಲಿ ಯಥಾಸ್ಥಿತಿ

ಇಂಡಿಯಾ ಟಿವಿ- ಸಿ ವೋಟರ್ ಸಮೀಕ್ಷೆ

Summary

ಅಸ್ಸಾಂ ಅತಂತ್ರ, ಕೇರಳದಲ್ಲಿ ಎಡಪಕ್ಷಗಳ ಮೈತ್ರಿಕೂಟ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನಲ್ಲಿ ಯಥಾಸ್ಥಿತಿಯ ಮುಂದುವರಿಕೆ...ಇದು ನಾಲ್ಕು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಮತದಾನ ಪೂರ್ವ ಸಮೀಕ್ಷೆಯ ಮುಖ್ಯಾಂಶಗಳು. ಇಂಡಿಯಾ ಟಿವಿ- ಸಿ ವೋಟರ್ ಜಂಟಿ ಸಮೀಕ್ಷೆಯ ವರದಿ ಶುಕ್ರವಾರ ರಾತ್ರಿ ಹೊರಬಿದ್ದಿದೆ. ಸದರಿ ರಾಜ್ಯಗಳಲ್ಲಿ ಪಕ್ಷಗಳ ಬಲಾಬಲ ಹೀಗಿದೆ:

ಅಸ್ಸಾಂ

ಬಿಜೆಪಿ ಮೈತ್ರಿ ಪಕ್ಷಗಳು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿವೆ. 126 ಸದಸ್ಯ ಬಲದ ವಿಧಾನ ಸಭೆಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ+ ಗೆ, 55 ಹಾಗೂ ಕಾಂಗ್ರೆಸ್ ಪಕ್ಷಕ್ಕೆ 53 ಸ್ಥಾನಗಳ ನಿರೀಕ್ಷೆಯನ್ನು ನೀಡಲಾಗಿದೆ. ಉಳಿದಂತೆ ಎಐಯುಡಿಎಫ್ 12 ಹಾಗೂ ಇತರೆ 6 ಸ್ಥಾನಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ಅಸ್ಸಾಂ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 64 ಸೀಟುಗಳ ಅವಶ್ಯಕತೆ ಇದೆ.

ತಮಿಳುನಾಡು

ಮುಖ್ಯಮಂತ್ರಿ ಜಯಲಲಿತ ನೇತೃತ್ವದ ಎಐಎಡಿಎಂಕೆ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಮರಳುವ ಸಾಧ್ಯತೆಯನ್ನು ಸಮೀಕ್ಷೆ ನೀಡಿದೆ. 234 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೈತ್ರಿಕೂಟ 130 ಸ್ಥಾನಗಳನ್ನು ಪಡೆಯಲಿದೆ. ಪ್ರತಿಪಕ್ಷ ಡಿಎಂಕೆ ಹಾಗೂ ಕಾಂಗ್ರೆಸ್ ಮೈತ್ರಿಕೂಟಕ್ಕೆ 70 ಸ್ಥಾನಗಳು ಬರಬಹುದು ಎಂದು ಅಂದಾಜಿಸಲಾಗಿದೆ. ಉಳಿದವರು 34 ಸ್ಥಾನಗಳನ್ನು ಪಡೆಯುವ ಮೂಲಕ ವಿಧಾನಸಭೆಯನ್ನು ಪ್ರವೇಶಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಎರಡು ವರ್ಷಗಳಿಂದ ಎಐಎಡಿಎಂಕೆ ಕಟ್ಟಿದ 'ಅಮ್ಮ' ಬ್ರಾಂಡ್ ಮತಗಳಾಗಿ ಬದಲಾಗುವ ಸಾಧ್ಯತೆ ಕಾಣಿಸುತ್ತಿದೆ. ಬಿಜೆಪಿ ಖಾತೆಯನ್ನು ತೆರೆಯುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಕೇರಳ

ಕೇರಳದಲ್ಲಿ ಆಡಳಿತ ವಿರೋಧಿ ಅಲೆ ಎಡಪಕ್ಷಗಳಿಗೆ ನೆರವಾಗಲಿದೆ ಎಂದು ಸಮೀಕ್ಷೆ ಹೇಳಿದೆ. 140 ಸದಸ್ಯಬಲದ ವಿಧಾನಸಭೆಗೆ ಸಿಪಿಐ ನೇತೃತ್ವದ ಎಲ್ಡಿಎಫ್ 86 ಸ್ಥಾನಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 53 ಸ್ಥಾನಗಳನ್ನು ಪಡೆಯಲಿದೆ ಹಾಗೂ ಬಿಜೆಪಿ ಮೈತ್ರಿಕೂಟ ಒಂದು ಸ್ಥಾನ ಪಡೆಯಬಹುದು ಎಂದು ಸಮೀಕ್ಷೆ ವರದಿ ಮಾಡಿದೆ. ಮಾಜಿ ಕ್ರಿಕೆಟಿಗ ಶ್ರೀಶಾಂತ್ ಕರೆತರುವ ಮೂಲಕ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿರುವ ಬಿಜೆಪಿಯನ್ನು ಕೇರಳ ಜನ ಹತ್ತಿರಕ್ಕೂ ಬಿಟ್ಟುಕೊಳ್ಳುವುದು ಕಷ್ಟ ಎಂದು ಸಮೀಕ್ಷೆ ಹೇಳುತ್ತಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಅವರ ತೃಣಮೂಲ ಕಾಂಗ್ರೆಸ್ ಕಡೆಗೆ ಬೆಂಗಾಲಿಗರು ಒಲವು ತೋರಿಸಿದ್ದಾರೆ. 294 ಸದಸ್ಯಬಲದ ವಿಧಾನಸಭೆಗೆ ತೃಣಮೂಲ ಕಾಂಗ್ರೆಸ್ 160 ಸೀಟುಗಳನ್ನು ಪಡೆಯುವ ಮೂಲಕ ಆಡಳಿತ ಪಕ್ಷವಾಗಿ ಹೊರಹೊಮ್ಮಲಿದೆ. ಸಿಪಿಐ-ಎಂ ಹಾಗೂ ಕಾಂಗ್ರೆಸ್ ಮೈತ್ರಿ ಕೂಟ 137 ಸ್ಥಾನಗಳನ್ನು (ಎಡರಂಗ 106 ಹಾಗೂ ಕಾಂಗ್ರೆಸ್ 21) ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿದೆ.