samachara
www.samachara.com
14 ವರ್ಷದ ಯುವತಿಗೆ ತಂದೆಯಿಂದ ಗರ್ಭದಾನ: 10 ಛಡಿಯೇಟಿಗೆ ಪಂಚಾಯ್ತಿ ತೀರ್ಮಾನ!
ಸುದ್ದಿ ಸಾರ

14 ವರ್ಷದ ಯುವತಿಗೆ ತಂದೆಯಿಂದ ಗರ್ಭದಾನ: 10 ಛಡಿಯೇಟಿಗೆ ಪಂಚಾಯ್ತಿ ತೀರ್ಮಾನ!

ಮಹಾರಾಷ್ಟ್ರ:'ಖಾಪ್ ಪಂಚಾಯತ್' ಮಾದರಿ ವ್ಯವಸ್ಥೆ ಮಹಾರಾಷ್ಟ್ರದಲ್ಲಿ ತನ್ನ ಭೀಕರ ಶಿಕ್ಷೆಯ ಮೂಲಕ ಸುದ್ದಿಯಾಗಿದೆ.

ಇಲ್ಲಿನ ಸತಾರ ಜಿಲ್ಲೆಯ ಗೋಪಾಲ್ ಹಳ್ಳಿಯಲ್ಲಿ 14 ವರ್ಷದ ಯುವತಿಯ ಮೇಲೆ ಪಂಚಾಯ್ತಿ ತನ್ನ ಅಧಿಕಾರವನ್ನು ಶುಕ್ರವಾರ ಚಲಾಯಿಸಿದೆ. ಆಕೆ ತನ್ನ ತಂದೆಯಿಂದ ಲೈಂಗಿಕ ದೌರ್ಜನ್ಯಕ್ಕೆ ಈಡಾಗಿ ಗರ್ಭ ಧರಿಸಿದ್ದಳು. ಈ ವಿಚಾರ ಬಹಿರಂಗವಾಗುತ್ತಿದ್ದಂತೆ ತಂದೆ ಹಾಗೂ ಮಗಳಿಗೆ ತಲಾ 10 ಛಡಿಯೇಟು ನೀಡುವಂತೆ ಪಂಚಾಯ್ತಿ ಫರ್ಮಾನು ಹೊರಡಿಸಿತ್ತು.

[embed]https://www.youtube.com/watch?v=KjCDFbzEX68[/embed]

ಇಂದು ಗ್ರಾಮಸ್ಥರ ಸಮ್ಮುಖದಲ್ಲಿ ಛಡಿಯೇಟು ನೀಡುವ ಭೀಕರ ಘಟನೆ ನಡೆಯಿತು. ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರ ವಿರೋಧದ ಹಿನ್ನೆಲೆಯಲ್ಲಿ ಗರ್ಭವತಿ ಬಾಲಕಿಗೆ ಕೋಲಿನಿಂದ ಥಳಿಸುವ ದೃಶ್ಯಗಳು ಹೊರಜಗತ್ತಿಗೆ ಲಭ್ಯವಾಗಿವೆ. ಈ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ. 'ಇಂಡಿಯಾ ಟುಡೆ'ಗೆ ಮಾತನಾಡಿದ ಕಾಂಗ್ರೆಸ್ ಪಕ್ಷದ ಪಿ. ಛತುರ್ವೇದಿ, "ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಸಮಾಜ ಕೂಡ ಇಂತಹ ಹೀನ ಕೃತ್ಯಗಳ ಕುರಿತು ಗಮನ ಹರಿಸಬೇಕು,'' ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಕರಣ ಬೆಳಕಿಗೆ ಬರುತ್ತಲೇ ಹಳ್ಳಿಗೆ ಸ್ಥಳೀಯ ಸತಾರ ಜಿಲ್ಲೆಯ ಎಸ್ಪಿ ಭೇಟಿ ನೀಡಿದ್ದಾರೆ. ಹಲ್ಲೆಗೆ ಗುರಿಯಾದ ಬಾಲಕಿಯನ್ನು ಪುನರ್ವಸತಿ ಕೇಂದ್ರಕ್ಕೆ ವರ್ಗಾಯಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಪ್ತ ಸಮಾಲೋಚನೆಯನ್ನೂ ನೀಡಲಾಗಿದ ಎಂದು ಪ್ರಾಥಮಿಕ ಮಾಹಿತಿ ತಿಳಿಸಿವೆ. ತಂದೆಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಸಕಾಲಕ್ಕೆ ಸ್ಪಂದಿಸಿದ RTI ಕಾರ್ಯಕರ್ತ:

ಹೀಗೊಂದು ಭೀಕರ ಘಟನೆ ಸಮಾಚಾರ ಹೊರ ಜಗತ್ತಿಗೆ ಭಿತ್ತರವಾಗಲು ನೆರವಾಗಿದ್ದು ಸ್ಥಳೀಯ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು. ಅವರು ಸತಾರ ಜಿಲ್ಲೆಯ ಗೋಪಾಲ ಹಳ್ಳಿಯ ಪಂಚಾಯ್ತಿ ತೀರ್ಮಾನ ಹೊರಬೀಳುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ಲಭ್ಯ ಇರುವ ಮಾಹಿತಿ ಪ್ರಕಾರ, ಘಟನೆಯನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವುದು ಪ್ರಮುಖ ಸಾಕ್ಷಿಯಾಗಿ ನಿಲ್ಲಲಿದೆ. ಈಗಾಗಲೇ 6 ಮಂದಿ ಪಂಚಾಯ್ತಿಗೆ ಸಂಬಂಧಪಟ್ಟವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಳ್ಳಿಯಲ್ಲಿ ಗೋಪಾಲ ಅಥವಾ ಗೋಪಾಲಕ ಸಮುದಾಯ ಜೀವನ ನಡೆಸುತ್ತಿದ್ದು, ಅವರು ತಮ್ಮದೇ ಸಂಪ್ರದಾಯ ಪಾಲನೆಗಾಗಿ ಈ ಪಂಚಾಯ್ತಿ ಮಾದರಿ ವ್ಯವಸ್ಥೆಯನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಇಂತವುಗಳನ್ನು 'ಖಾಪ್ ಪಂಚಾಯ್ತಿ'ಗಳು ಎಂದು ಕರೆಯುತ್ತಾರೆ.