samachara
www.samachara.com
ಕಿಮ್ ಚೀನಾ ಭೇಟಿ; ಅಮೆರಿಕಕ್ಕೆ ಪರ್ಯಾಯ ಕಂಡುಕೊಳ್ಳುತ್ತಿದೆಯೇ ಉತ್ತರ ಕೊರಿಯ?
ವಿದೇಶ

ಕಿಮ್ ಚೀನಾ ಭೇಟಿ; ಅಮೆರಿಕಕ್ಕೆ ಪರ್ಯಾಯ ಕಂಡುಕೊಳ್ಳುತ್ತಿದೆಯೇ ಉತ್ತರ ಕೊರಿಯ?

ಯಾವುದೇ ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನಾ ಕ್ಸಿ ಮತ್ತು ಕಿಮ್‌ ಪದೇ ಪದೇ ಭೇಟಿಯಾಗುತ್ತಿರುವುದು ಅಂತರರಾಷ್ಟ್ರೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಚೀನಾ ಸರಕಾರದ ಆಹ್ವಾನದ ಮೇರೆಗೆ ಉತ್ತರ ಕೊರಿಯ ಅಧ್ಯಕ್ಷ ಕಿಮ್ ಜಾನ್ ಉಂಗ್ ಮಂಗಳವಾರ ಚೀನಾಗೆ ಬಂದಿಳಿದಿದ್ದಾರೆ. ಕಿಮ್‌ ನಾಲ್ಕು ದಿನಗಳ ಚೀನಾ ಭೇಟಿ ಇದಾಗಿದೆ.

ತಮ್ಮ ಪತ್ನಿ ರಿ ಸೊಲ್ ಜು ಜತೆಗೆ ಕಿಮ್ ಜಾನ್ ಉಂಗ್ ಖಾಸಗಿ ರೈಲಿನಲ್ಲಿ ಬೀಜಿಂಗ್ ತಲುಪಿದ್ದಾರೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭೇಟಿಗೂ ಮುನ್ನಾ ಹಾಗೂ ಭೇಟಿ ನಂತರ ಮತ್ತು ದಕ್ಷಿಣ ಕೊರಿಯ ಅಧ್ಯಕ್ಷ ಮೂನ್‌ ಝೇಇನ್‌ ಭೇಟಿಯ ನಂತರ ಮೂರು ಬಾರಿ ಕಿಮ್‌ ಚೀನಾ ಪ್ರವಾಸ ಮಾಡಿದ್ದರು.

ಯಾವುದೇ ರಾಜತಾಂತ್ರಿಕ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನಾ ಕ್ಸಿ ಮತ್ತು ಕಿಮ್‌ ಪದೇ ಪದೇ ಭೇಟಿಯಾಗುತ್ತಿರುವುದು ಅಂತರರಾಷ್ಟ್ರೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗೆ ಚೀನಾ ಹಾಗೂ ಅಮೆರಿಕ ಸಂಬಂಧ ಹದಗೆಟ್ಟಿದೆ. ತೈವಾನ್ ದ್ವೀಪ ಹಾಗೂ ದಕ್ಷಿಣಾ ಚೀನಾ ಸಮುದ್ರದಲ್ಲಿ ಅಮೆರಿಕ ಜತೆಗಿನ ವಿವಾದ ಅಪಾಯದ ಹಂತ ಮೀರಿದೆ. ಜನವರಿ 5 ರಂದು ರಕ್ಷಣಾ ಅಧಿಕಾರಿಗಳ ಸಭೆ ಕರೆದಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಯುದ್ಧಕ್ಕೆ ತಯಾರಾಗುವಂತೆ ಸೈನ್ಯಕ್ಕೆ ಸೂಚನೆ ನೀಡಿದ್ದರು.

ಇದೇ ಸಂದರ್ಭದಲ್ಲಿ ಅಮೆರಿಕದ ಜತೆಗೆ ಅಣುಬಾಂಬ್ ಪರೀಕ್ಷೆ ಸಂಬಂಧ ನಿರಂತರ ಜಟಾಪಟಿಯಲ್ಲಿದ್ದ ಉತ್ತರ ಕೊರಿಯ ಅಧ್ಯಕ್ಷ ಕಿಮ್, 2018 ಜೂನ್ 12 ರಂದು ಟ್ರಂಪ್ ಭೇಟಿಯಾಗಿ ಸಭೆ ನಡೆಸಿದ್ದರು. ಆದರೂ ಸಹ ಅಮೆರಿಕ ಹಾಗೂ ಉತ್ತರ ಕೊರಿಯ ನಡುವಿನ ಸಂಬಂಧ ಸುಧಾರಿಸಿದಂತೆ ಕಾಣುತ್ತಿಲ್ಲ.

ಕಿಮ್ ಜಾನ್ ಉಂಗ್ ಅಮೆರಿಕದ ಒತ್ತಡವನ್ನೂ ಮೀರಿ ಅಣುಬಾಂಬ್ ಪರೀಕ್ಷೆ ನಡೆಸಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಟ್ರಂಪ್ ಉತ್ತರ ಕೊರಿಯ ಮೇಲೆ ಆರ್ಥಿಕ ದಿಗ್ಬಂಧನ ಹೇರುವ ಎಚ್ಚರಿಕೆ ನೀಡಿದ್ದರು. ಇದೇ ಕಾರಣಕ್ಕೆ ಸಾಮರಸ್ಯ ಒಪ್ಪಂದ ಮಾಡಿಕೊಳ್ಳುವ ಸಲುವಾಗಿ ಟ್ರಂಪ್ ಹಾಗೂ ಕಿಮ್ ನಡುವೆ ಕಳೆದ ವರ್ಷ ದ್ವಿಪಕ್ಷೀಯ ಸಭೆ ಏರ್ಪಡಿಸಲಾಗಿತ್ತು. ಈ ವರ್ಷ ಮತ್ತೊಮ್ಮೆ ಈ ಇಬ್ಬರೂ ನಾಯಕರು ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಅಮೆರಿಕ ಜತೆಗಿನ ಮುಂದಿನ ಮಾತುಕತೆಯಲ್ಲಿ ಉತ್ತರ ಕೊರಿಯ ನಡೆ ಹೇಗಿರಬೇಕು ಎಂದು ಚೀನಾ ನಿರ್ದೇಶಿಸಲು ಮುಂದಾಗಿದೆ ಎನ್ನಲಾಗಿದೆ. ಈ ಸಲುವಾಗಿ ಕಿಮ್‌ ಚೀನಾ ಭೇಟಿಯನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ನಾಲ್ಕು ದಿನದ ಚೀನಾ ಭೇಟಿಯಲ್ಲಿ ಕಿಮ್ ಹಾಗೂ ಕ್ಸಿ ಎರಡೂ ದೇಶಗಳ ಆರ್ಥಿಕ ಅಭಿವೃದ್ಧಿಯ ಕುರಿತೂ ಚರ್ಚೆ ನಡೆಸಲಿದ್ದು, ಇದು ಉತ್ತರ ಕೊರಿಯಗೆ ಲಾಭವಾಗಲಿದೆ ಎನ್ನಲಾಗುತ್ತಿದೆ. ಅಲ್ಲದೆ ಉತ್ತರ ಕೊರಿಯ ತನ್ನ ಆರ್ಥಿಕ ಅಭಿವೃದ್ಧಿಗೆ ಅಮೆರಿಕ ಹೊರತಾದ ಮತ್ತೊಂದು ಪರ್ಯಾಯವನ್ನು ಹುಡುಕಿಕೊಳ್ಳುತ್ತಿದೆ ಎಂಬ ಸಂದೇಶ ರವಾನೆಯಾಗುತ್ತಿದೆ.

ಈ ಇಬ್ಬರೂ ನಾಯಕರ ಭೇಟಿಯಿಂದಾಗಿ ಉತ್ತರ ಕೊರಿಯ ಹಾಗೂ ಅಮೆರಿಕ ಸಂಬಂಧ ಮತ್ತಷ್ಟು ಹಳಸುವ ಸಾಧ್ಯತೆ ಇದೆ. ಅಲ್ಲದೆ ದಕ್ಷಿಣ ಏಷ್ಯಾದಲ್ಲಿ ಯುದ್ಧದ ಛಾಯೆ ಆವರಿಸಿರುವ ಈ ಸಂದರ್ಭದಲ್ಲಿ ಅಮೆರಿಕ ವಿರೋಧಿ ರಾಷ್ಟ್ರದ ಇಬ್ಬರು ನಾಯಕರು ಭೇಟಿಯಾಗುತ್ತಿದ್ದು, ಯುದ್ಧ ಸಾಧ್ಯತೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.