samachara
www.samachara.com
ಸೌದಿಯಲ್ಲ ಇದು ‘ಸಲ್ಮಾನ್‌ ಅರೇಬಿಯಾ’: ಹಶೋಗ್ಜಿ ಸಾವು ಮತ್ತು ಭವಿಷ್ಯದ ಸರ್ವಾಧಿಕಾರಿಯ ಸುತ್ತ...
ವಿದೇಶ

ಸೌದಿಯಲ್ಲ ಇದು ‘ಸಲ್ಮಾನ್‌ ಅರೇಬಿಯಾ’: ಹಶೋಗ್ಜಿ ಸಾವು ಮತ್ತು ಭವಿಷ್ಯದ ಸರ್ವಾಧಿಕಾರಿಯ ಸುತ್ತ...

ಸೌದಿ ಅರೇಬಿಯಾ ಮೂಲದ ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತ ಜಮಾಲ್‌ ಹಶೋಗ್ಜಿ ನಿಗೂಢ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ‘ಎಂಬಿಎಸ್‌’ ಎಂಬ ಹೆಸರು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯಾರು ಈ ಎಂಬಿಎಸ್‌?

ಮೊಹಮ್ಮದ್‌ ಬಿನ್‌ ಸಲ್ಮಾನ್ ಅಲಿಯಾಸ್‌ ಎಂಬಿಎಸ್‌

ತೈಲ ಸಂಪದ್ಭರಿತ ಸೌದಿ ಅರೇಬಿಯಾದ ಯುವರಾಜ. ವಯಸ್ಸಿನ್ನೂ ಜಸ್ಟ್‌ 33. ಇಷ್ಟು ಸಣ್ಣ ವಯಸ್ಸಿಗೆ ಈತ ಮಾಡಿರುವ ಸದ್ದು ಅಂತಿಥಹದ್ದಲ್ಲ. ಅಂತರಾಷ್ಟ್ರೀಯ ಸಮುದಾಯದಲ್ಲಂತೂ ಕಳೆದ ಕೆಲವು ದಿನಗಳಿಂದ ಈತನದ್ದೇ ಮಾತು. ಆದರೆ ಒಳ್ಳೆಯ ಕಾರಣಕ್ಕಲ್ಲ ಎಂಬುದು ಮಾತ್ರ ವಿಪರ್ಯಾಸ.

ಸೌದಿ ಅರೇಬಿಯಾ ಮೂಲದ ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತ ಜಮಾಲ್‌ ಹಶೋಗ್ಜಿ ನಿಗೂಢ ನಾಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ‘ಎಂಬಿಎಸ್‌’ ಎಂಬ ಹೆಸರು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಕಾಲದಲ್ಲಿ ಸೌದಿ ಅರೇಬಿಯಾದ ರಾಜಮನೆತನಕ್ಕೆ ಆಪ್ತರಾಗಿದ್ದವರು ಜಮಾಲ್‌ ಹಶೋಗ್ಜಿ. ಅವರ ನಾಪತ್ತೆ ಹಿಂದೆ ಇರುವವರು ಇದೇ ಎಂಬಿಎಸ್ ಎಂಬುದಾಗಿ ಜಾಗತಿಕ ಸಮುದಾಯ ಬಲವಾಗಿ ನಂಬಿದೆ.

ಯಾರು ಈ ಎಂಬಿಎಸ್‌?

29ನೇ ವಯಸ್ಸಿಗೆ ಸೌದಿ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳನ್ನು ಬಾಚಿಕೊಂಡವರು ಮೊಹಮ್ಮದ್‌ ಬಿನ್‌ ಸಲ್ಮಾನ್‌. ಅವರ ತಂದೆ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ಅಲ್‌ ಸೌದ್‌ 2015ರಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಮಗನಿಗೆ ಪ್ರಮುಖ ಜವಾಬ್ದಾರಿಗಳನ್ನು ಧಾರೆ ಎರೆದು ಕೊಟ್ಟಿದ್ದರು. ಅಮೆರಿಕ, ಚೀನಾದ ನಂತರ ವಿಶ್ವದ ಮೂರನೇ ಅತೀ ಹೆಚ್ಚು ಮಿಲಿಟರಿ ಬಜೆಟ್‌ ಹೊಂದಿರುವ ಸೌದಿಯ ರಕ್ಷಣಾ ಖಾತೆ ಎಳೆ ವಯಸ್ಸಲ್ಲೇ ಸಲ್ಮಾನ್‌ ಹೆಗಲೇರಿತು. ಸರ್ಕಾರಿ ಒಡೆತನದ ವಿಶ್ವದ ಅತೀ ದೊಡ್ಡ ತೈಲ ಉತ್ಪಾದನಾ ಕಂಪನಿ ಅರಾಮ್ಕೋ ಮುಖ್ಯಸ್ಥರಾದರು. ಆರ್ಥಿಕ ಅಭಿವೃದ್ಧಿ ಇಲಾಖೆ ಅವರ ತೆಕ್ಕೆಗೆ ಬಂತು. ಹೀಗೆ ಹುದ್ದೆಗಳು ಸಿಕ್ಕಿದ ಕೂಡಲೇ ಆಕ್ರಮಣಕಾರಿ ನೀತಿಗೆ ಒತ್ತು ನೀಡಿದ ಸಲ್ಮಾನ್, ಸೌದಿ ಅರೇಬಿಯಾದಲ್ಲಿ ಸುಧಾರಣಾ ಪರ್ವಕ್ಕೆ ನಾಂದಿ ಹಾಡಿದರು.

ತಂದೆ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ಅಲ್‌ ಸೌದ್‌ ಜತೆ ಎಂಬಿಎಸ್‌
ತಂದೆ ಸಲ್ಮಾನ್‌ ಬಿನ್‌ ಅಬ್ದುಲ್‌ ಅಜೀಜ್‌ ಅಲ್‌ ಸೌದ್‌ ಜತೆ ಎಂಬಿಎಸ್‌

“ಸೌದಿ ಅರೇಬಿಯಾ ಸೇರಿ ಹಲವು ದೇಶಗಳಲ್ಲಿ ಇಂದು ಚಾಲ್ತಿಯಲ್ಲಿರುವ ಇಸ್ಲಾಂ ಆಚರಣೆಗಳು ನೈಜ ಇಸ್ಲಾಂನ ಆಚರಣೆಯಲ್ಲ ಎಂದು ನಾವು ನಂಬಿದ್ದೇವೆ. ಇವೆಲ್ಲವೂ 1979ರ ನಂತರ ಇಸ್ಲಾಂನ್ನು ಹೈಜಾಕ್‌ ಮಾಡಿದವರ ಆಚರಣೆಗಳು,” ಎನ್ನುತ್ತಾ ಮುಕ್ತವಾಗಿ ಭಯೋತ್ಪಾದಕ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡಿದ್ದರು ಬಿನ್‌ ಸಲ್ಮಾನ್. ಮಹಿಳೆಯರಿಗೆ ಚಾಲನಾ ಪರವಾನಿಗೆ ನೀಡುವ ಅವರ ನಿರ್ಧಾರ ಮೆಚ್ಚುಗೆಗೆ ಪಾತ್ರವಾಯಿತು. ಧಾರ್ಮಿಕ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಿದರು. ಬಿನ್‌ ಸಲ್ಮಾನ್‌ ಆರ್ಥಿಕ ಸುಧಾರಣಾ ಕ್ರಮಗಳು, ಮುಸ್ಲಿಂ ದೇಶದಲ್ಲಿ ಮತ್ತೆ ಆರಂಭವಾದ ಸಂಗೀತಗೋಷ್ಠಿಗಳು, ಸಿನಿಮಾ ಥಿಯೇಟರ್‌ಗಳು ಸೌದಿ ಅರೇಬಿಯಾದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದವು. ಪರಿಣಾಮ ದೊಡ್ಡ ಸಂಖ್ಯೆಯ ಯುವ ಸಮುದಾಯ ಎಂಬಿಎಸ್‌ ಬೆನ್ನಿಗೆ ನಿಂತಿತು.

ತೈಲದಾಚೆಗಿನ ಆರ್ಥಿಕತೆ ಬಗ್ಗೆ ಮಾತನಾಡುತ್ತಿದ್ದ ಸಲ್ಮಾನ್‌ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ವಿದೇಶಿಯರಿಗೆ ಸುಲಭವಾಗಿ ವೀಸಾ ನೀಡಲಾಗುವುದು ಎಂದು ಹೇಳಿದರು. ಸಹಜವಾಗಿಯೇ ಟೀಕಾಕಾರರ ಬಾಯಲ್ಲೂ ಎಂಬಿಎಸ್‌ ಹೊಗಳಿಕೆಯ ಮಾತುಗಳು ಹೊರ ಬಂದವು. ಅಷ್ಟೊತ್ತಿಗಾಗಲೇ ಮಾಧ್ಯಮಗಳನ್ನು ನಿಭಾಯಿಸುವುದರಲ್ಲಿಯೂ ಪರಿಣತಿ ಪಡೆದಿದ್ದ ಅವರು ತಮ್ಮ ಹೆಸರನ್ನು ಸೌದಿ ಗಡಿಗಳಾಚೆಗೆ ದಾಟಿಸಿದ್ದರು. ಇದರ ಮುಂದುವರಿದ ಭಾಗವಾಗಿ ಅವರು ಅಮೆರಿಕಾ ಪ್ರವಾಸ ಕೈಗೊಂಡರು.

ಕಂಡು ಕೇಳರಿಯದ ವಿದೇಶಿ ಪ್ರವಾಸ

2018ರ ಏಪ್ರಿಲ್‌ ತಿಂಗಳು... ಕಾಕ್‌ಪಿಟ್‌ ಅಡಿಯಲ್ಲಿ ‘ಗಾಡ್‌ ಬ್ಲೆಸ್‌ ಯು’ ಎಂದು ಬರೆಯಲಾಗಿದ್ದ ಬೋಯಿಂಗ್‌ 747 ವಿಮಾನ ಹತ್ತಿಕೊಂಡು ಬಂದ ಮೊಹಮ್ಮದ್‌ ಬಿನ್ ಸಲ್ಮಾನ್‌ ಅಮೆರಿಕಾ ನೆಲದಲ್ಲಿ ಇಳಿದಿದ್ದರು. ಬರೋಬ್ಬರಿ ಮೂರು ವಾರಗಳ ಪ್ರವಾಸ ಅವರದಾಗಿತ್ತು. ಈ ಹಿಂದಿನ ಸೋವಿಯತ್‌ ಯೂನಿಯನ್‌ನ ನಿಕಿತಾ ಕ್ರುಶ್ಚೇವ್‌ರನ್ನೂ ಮೀರಿಸುವ ಭೇಟಿ ಅವರದಾಗಿತ್ತು. ಅಷ್ಟೊತ್ತಿಗಾಗಲೇ ತಾನೊಬ್ಬ ದೂರದೃಷ್ಟಿಯ ನಾಯಕ ಎಂದು ಬಿಂಬಿಸಿಕೊಂಡಿದ್ದ ಸಲ್ಮಾನ್‌, ಸೌದಿ ಅರೇಬಿಯಾದ ‘ವಿಷನ್‌ 2030’ ಯೋಜನೆಯ ಪ್ರಚಾರಕ್ಕೆ ಅಮೆರಿಕಾಗೆ ಬಂದಿದ್ದರು.

ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಅಮೆಜಾನ್‌ ಮುಖ್ಯಸ್ಥ ಜೆಫ್‌ ಬಿಜೋಸ್‌, ವರ್ಜಿನ್‌ ಸಮೂಹ ಸಂಸ್ಥೆ ಮುಖ್ಯಸ್ಥ ರಿಚರ್ಡ್‌ ಬ್ರಾನ್‌ಸನ್‌ ಜತೆ ಮೊಹಮ್ಮದ್‌ ಬಿನ್‌ ಸಲ್ಮಾನ್‌
ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್‌ ಕ್ಲಿಂಟನ್‌, ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಟ್ಸ್‌, ಅಮೆಜಾನ್‌ ಮುಖ್ಯಸ್ಥ ಜೆಫ್‌ ಬಿಜೋಸ್‌, ವರ್ಜಿನ್‌ ಸಮೂಹ ಸಂಸ್ಥೆ ಮುಖ್ಯಸ್ಥ ರಿಚರ್ಡ್‌ ಬ್ರಾನ್‌ಸನ್‌ ಜತೆ ಮೊಹಮ್ಮದ್‌ ಬಿನ್‌ ಸಲ್ಮಾನ್‌
/ಟೈಮ್‌

ಬಂದವರೇ ದೊಡ್ಡಣ್ಣನ ದೇಶದಲ್ಲಿ ಮಿಂಚಿನ ಸಂಚಾರ ಕೈಗೊಂಡರು. ಐದು ರಾಜ್ಯಗಳಲ್ಲಿ ಸುತ್ತಾಡಿದರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾಲ್ಕು ಅಧ್ಯಕ್ಷರುಗಳು, ಐದು ಪತ್ರಿಕೆಗಳು, ಲೆಕ್ಕವಿಲ್ಲದಷ್ಟು ದೈತ್ಯ ಉದ್ಯಮಿಗಳು ಮತ್ತು ಅಮೆರಿಕಾ ಟಿವಿ ಲೋಕದ ದಂತಕಥೆ ಓಪ್ರಾ ವಿನ್‌ಫ್ರೇಯನ್ನು ಭೇಟಿಯಾಗಿದ್ದರು. ಸೌದಿ ಅರೇಬಿಯಾದಲ್ಲಿ 2 ಟ್ರಿಲಿಯನ್‌ ಡಾಲರ್‌ ಮೀಸಲು ನಿಧಿ ಸ್ಥಾಪಿಸಬೇಕು ಎಂಬ ಯೋಜನೆ ಅವರದಾಗಿತ್ತು. ಅದಕ್ಕಾಗಿ ದೊಡ್ಡ ಮಟ್ಟದ ಬಂಡವಾಳವನ್ನು ಸೌದಿಯಲ್ಲಿ ಹೂಡಬೇಕಾಗಿತ್ತು. ಅದನ್ನು ದಕ್ಕಿಸಿಕೊಳ್ಳಲು ಅವರು ಹೀಗೊಂದು ಪ್ರವಾಸ ಮಾಡಿದ್ದರು. ಪ್ರವಾಸ ಮುಗಿಸಿ ಹೊರಟಾಗ ‘ಟೈಮ್’ ಸೇರಿದಂತೆ ಜಗತ್ತಿನ ಪ್ರಮುಖ ಪತ್ರಿಕೆಗಳ ತುಂಬಾ ಮೊಹಮ್ಮದ್‌ ಬಿನ್ ಸಲ್ಮಾನ್‌ ಆವರಿಸಿಕೊಂಡಿದ್ದರು.

ಕರಾಳತೆಯ ದರ್ಶನ

ಅಮೆರಿಕಾ ಪ್ರವಾಸದ ಅಂತ್ಯಕ್ಕೆ ‘ಕಳೆದ 30 ವರ್ಷಗಳಲ್ಲಿ ಸೌದಿ ಅರೇಬಿಯಾದಲ್ಲಾಗದ್ದು ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ,’ ಎಂಬುದನ್ನು ಎಲ್ಲರ ತಲೆಯಲ್ಲೂ ಬಿತ್ತಿದ್ದರು ಎಂಬಿಎಸ್‌. ಆದರೆ ಅವರ ಈ ಜಾಣ ನಡೆಗಳನ್ನು, ಗೌಪ್ಯ ತಂತ್ರಗಳನ್ನು ಅವರೊಬ್ಬರು ಅರ್ಥ ಮಾಡಿಕೊಂಡಿದ್ದರು. ಅವರೇ ಜಮಾಲ್‌ ಹಶೋಗ್ಜಿ.

ಎಂಬಿಎಸ್‌ ಸೌದಿ ಅರೇಬಿಯಾದ ವ್ಲಾಡಿಮೀರ್‌ ಪುಟಿನ್‌ರಂತೆ ನಡೆದುಕೊಳ್ಳುತ್ತಿದ್ದಾರೆ. ಜತೆಗೆ ಸೌದಿ ಸರಕಾರದ ಎಲ್ಲಾ ಅಧಿಕಾರಗಳನ್ನೂ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಇರಾನ್‌ನ ಅಯಾತುಲ್ಲಾ ಅಲ್‌ ಖಮೇನಿಯಂತೆ ಸರ್ವೋಚ್ಛ ನಾಯಕರಾಗಿ ಮೂಡಿ ಬರುತ್ತಿದ್ದಾರೆ ಎಂದು ಎಚ್ಚರಿಸಿದ್ದರು. ಅವತ್ತು ಹಶೋಗ್ಜಿ ಹೇಳಿದ ಮಾತುಗಳು ಇಂದು ನಿಜವಾಗಿವೆ. ಮುಖವಾಡ ಕಳಚಿ ತನ್ನ ನಿಜ ರೂಪವನ್ನು ಎಂಬಿಎಸ್‌ ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.

ನ್ಯೂಯಾರ್ಕ್‌ ನಗರದ ಪ್ಲಾಜಾ ಹೋಟೆಲ್‌ನಲ್ಲಿ ಎಂಬಿಎಸ್‌ ಫೋಟೋಶೂಟ್‌
ನ್ಯೂಯಾರ್ಕ್‌ ನಗರದ ಪ್ಲಾಜಾ ಹೋಟೆಲ್‌ನಲ್ಲಿ ಎಂಬಿಎಸ್‌ ಫೋಟೋಶೂಟ್‌

ದೇಶದ ಆರ್ಥಿಕ ಬೆಳವಣಿಗೆ, ಭದ್ರತೆ, ಸ್ಥಿರತೆ, ಉದ್ಯೋಗ ಸೃಷ್ಟಿಯ ಪ್ರಗತಿಯ ಜತೆ ಜತೆಗೇ ಅವರು ಇನ್ನೂ ಹಲವು ಕೆಲಸಗಳಿಗೆ ಕೈ ಹಾಕಿದ್ದರು. ಅವು ಅವರ ಹುದ್ದೆಯನ್ನು ರಕ್ಷಿಸಿಕೊಳ್ಳುವ ಯತ್ನದ ಭಾಗವಾಗಿದ್ದವು. ಅವರ ಈ ಯತ್ನ ಮೊದಲಿಗೆ ಆರಂಭವಾಗಿದ್ದು ರಾಜಮನೆತನದ ಒಳಗಿನಿಂದ.

ಅಸಲಿಗೆ ಯುವರಾಜನ ಹಾದಿಯಲ್ಲಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಎರಡನೆಯವರಾಗಿದ್ದರು. ಅವರ ಅಣ್ಣ 55 ವರ್ಷದ ಮೊಹಮ್ಮದ್‌ ಬಿನ್‌ ನಯೀಫ್‌ ಮೊದಲ ಸ್ಥಾನದಲ್ಲಿದ್ದರು. ಇತ್ತೀಚೆಗ ಅಲ್‌ಕೈದಾ ನಡೆಸಿದ ದಾಳಿಯಿಂದ ಸ್ವಲ್ಪದರಲ್ಲೇ ಬಚಾವಾದ ಇವರು ಯಾವ ಕೋನದಿಂದಲೂ ಎಂಬಿಎಸ್‌ಗೆ ಸರಿಸಮನಾಗಿ ನಿಲ್ಲುವುದೇ ಇಲ್ಲ. ಈ ಕಾರಣಕ್ಕೆ ಜೂನ್‌ 2017ರಲ್ಲಿ ಯುವರಾಜನ ಜಾಗಕ್ಕೆ ನಯೀಫ್‌ ಬದಲು ಬಿನ್‌ ಸಲ್ಮಾನ್‌ರನ್ನು ಕರೆ ತರಲಾಗಿತ್ತು. ಅಷ್ಟಕ್ಕೇ ಮುಗಿಯಲಿಲ್ಲ.

ಅದಾಗಿ ಐದೇ ತಿಂಗಳಿಗೆ ಮತ್ತೊಂದು ದಾಳ ಉರುಳಿಸಿದ ಬಿನ್‌ ಸಲ್ಮಾನ್‌ ರಾಜ ಕುಟುಂಬದ ಸದಸ್ಯರು, ಅವರ ಸಹಾಯಕರು ಮತ್ತು ಅತೀ ಶ್ರೀಮಂತ 100 ಜನ ಉದ್ಯಮಿಗಳನ್ನು ಜೈಲಿಗೆ ತಳ್ಳಿದ್ದರು. ಅವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಸಲ್ಮಾನ್‌ ಹೊರಿಸಿದ್ದರು. ಇದಕ್ಕೆ ಯಾವುದೇ ತನಿಖೆಯಾಗಲೀ, ಪಾರದರ್ಶಕತೆಯಾಗಲಿ ಇರಲಿಲ್ಲ. ಬಂಧಿತರಲ್ಲಿ ಓರ್ವ ಕಸ್ಟಡಿಯಲ್ಲಿ ಸಾವನ್ನಪ್ಪಿದ. ಬಂಧಿತ 17 ಜನ ಸೇರಿ ಸಾವನ್ನಪ್ಪಿದವರ ದೇಹದ ಮೇಲೆ ಹಲ್ಲೆಯ ಗುರುತುಗಳಿದ್ದವು ಎಂದು ‘ನ್ಯೂಯಾರ್ಕ್‌ ಟೈಮ್ಸ್‌’ ವರದಿ ಮಾಡಿತ್ತು.

ಭ್ರಷ್ಟಾಚಾರ ಆರೋಪದಲ್ಲಿ ಹಲವರನ್ನು ಜೈಲಿಗೆ ತಳ್ಳಿದ ಯುವರಾಜ ಎಂಬಿಎಸ್‌ ಫ್ರಾನ್ಸ್‌ನಲ್ಲಿ ಜಗತ್ತಿನ ಐಷಾರಾಮಿ, ದುಬಾರಿ ಅರಮನೆಯನ್ನು ಸುಮಾರು 2,200 ಕೋಟಿ ರೂಪಾಯಿಗಳಿಗೆ ಖರೀದಿಸಿದರು. ಸುಮಾರು 3,600 ಕೋಟಿ ರೂ. ಮೌಲ್ಯದ ಹಡಗು ತಂದುಕೊಂಡರು. ಕೇಳಿದರೆ ಇದೆಲ್ಲಾ ನನ್ನ ದುಡಿಮೆಯ ಹಣ ಎಂದು ಬಿಟ್ಟರು. ಮತ್ತೂ ಕೇಳಿದರೆ, “ನಾನು ಭ್ರಷ್ಟನಾಗಿದ್ದರೆ ದಾಖಲೆ ತೋರಿಸಿ,” ಎಂದು ಬಿಡುತ್ತಿದ್ದರು.

ಫ್ರಾನ್ಸ್‌ನಲ್ಲಿ ಎಂಬಿಎಸ್‌ ಖರೀದಿಸಿದ ಭವ್ಯ ಅರಮನೆ
ಫ್ರಾನ್ಸ್‌ನಲ್ಲಿ ಎಂಬಿಎಸ್‌ ಖರೀದಿಸಿದ ಭವ್ಯ ಅರಮನೆ
/ಬಿಬಿಸಿ

ಇನ್ನೂ ಹೆಚ್ಚಿಗೆ ಪ್ರಶ್ನಿಸಿದರೆ ಅವರೆಲ್ಲಾ ಕಂಬಿ ಎಣಿಸಬೇಕಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುತ್ತಲೇ ಹತ್ತಾರು ಅಹಿಂಸಾವಾದಿ ಧಾರ್ಮಿಕ ಗುರುಗಳು, ಇಸ್ಲಾಮಿಕ್‌ ಬುದ್ಧಿಜೀವಿಗಳನ್ನು ಮೊಹಮ್ಮದ್‌ ಬಿನ್‌ ಸಲ್ಮಾನ್‌ ಜೈಲಿಗೆ ತಳ್ಳಿದರು. ಇಬ್ಬರು ಮಹಿಳಾ ಮಾನವ ಹಕ್ಕು ಹೋರಾಟಗಾರರನ್ನು ಬಂಧಿಸಿದರು. ಇದನ್ನು ಪ್ರಶ್ನಿಸಿದ ಕೆನಡಾದ ರಾಯಭಾರ ಕಚೇರಿಗೇ ರಿಯಾದ್‌ನಿಂದ ಗೇಟ್‌ ಪಾಸ್‌ ನೀಡಿದರು. ಪ್ರಶ್ನಿಸುವವರ ಧ್ವನಿ ಅಡಗಿಸಿದ ಅವರು ಸೌದಿ ಅರೇಬಿಯಾದಂಥ ಸಂಪದ್ಭರಿತ ದೇಶವನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡರು. ದೇಶದ ಆರ್ಥಿಕ ಮತ್ತು ಭದ್ರತಾ ಕೇಂದ್ರಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡವರು ಇರಾನ್‌ ವಿರುದ್ಧ ಗೆರಿಲ್ಲಾ ಯುದ್ಧ ಸಾರಿದರು. ಇರಾನ್‌ ಬೆಂಬಲಿತ ಬಂಡುಕೋರರ ವಿರುದ್ಧ ಯೆಮೆನ್‌ನಲ್ಲಿ ಸೌದಿ ಅರೇಬಿಯಾ ಮುಗಿಬಿತ್ತು. ಪರಿಣಾಮ ಸುಮಾರು 10 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದರು. 16,749 ಬಾಂಬುಗಳ ಸುರಿಮಳೆಯಿಂದ ಮಾನವೀಯತೆಯ ಅನಗತ್ಯ ಬಿಕ್ಕಟ್ಟೊಂದು ಯೆಮನ್‌ನಲ್ಲಿ ಸೃಷ್ಟಿಯಾಯಿತು.

ಮೊಹಮ್ಮದ್‌ ಬಿನ್‌ ಸಲ್ಮಾನ್ ಅಟ್ಟಹಾಸಗಳು ಇಲ್ಲಿಗೇ ನಿಲ್ಲುವುದಿಲ್ಲ. ಕಳೆದ ನವೆಂಬರ್‌ನಲ್ಲಿ ಬಿನ್‌ ಸಲ್ಮಾನ್‌ ಲೆಬನಾನ್‌ ಪ್ರಧಾನಿ ಸಾದ್‌ ಹರಿರಿಯನ್ನು ಎರಡಕ್ಕಿಂತ ಹೆಚ್ಚು ವಾರಗಳ ಕಾಲ ತಮ್ಮ ವಶದಲ್ಲಿಟ್ಟುಕೊಂಡಿದ್ದರು. ರಾಜೀನಾಮೆ ನೀಡಿ ರಿಯಾದ್‌ಗೆ ಬಂದಿದ್ದ ಆಧ್ಯಕ್ಷರನ್ನೇ ವಶದಲ್ಲಿಟ್ಟುಕೊಳ್ಳುವುದೆಂದರೇನು. ಕೊನೆಗೆ ಇದರ ವಿರುದ್ಧ ಜಾಗತಿಕ ವಿರೋಧ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಹರಿರಿ ತಮ್ಮ ದೇಶಕ್ಕೆ ಮರಳಿ ರಾಜೀನಾಮೆಯನ್ನು ಹಿಂಪಡೆದಿದ್ದರು.

ಕಳೆದ ಮೇನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಬಾರಿ ಸೌದಿ ಅರೇಬಿಯಾ ಭೇಟಿಗೆ ತೆರಳಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಕತಾರ್‌ ಮೇಲೆ ಐತಿಹಾಸಿಕ ನಿರ್ಬಂಧಗಳನ್ನು ಸೌದಿ ಅರೇಬಿಯಾ ಹೇರಿತ್ತು. ಹೀಗೆ ಕಳೆದ ಮೂರು ವರ್ಷಗಳಲ್ಲಿ ಮಧ್ಯ ಪೂರ್ವ ದೇಶಗಳಲ್ಲಿ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಎಬ್ಬಿಸಿರುವ ಬಿರುಗಾಳಿ ಕಡಿಮೆಯದ್ದೇನಲ್ಲ.

ಮೂರು ವರ್ಷಗಳಲ್ಲಿ ಅಪಾರ ಕೆಲಸಗಳನ್ನು ಮಾಡಿದ್ದ ಬಿನ್‌ ಸಲ್ಮಾನ್‌ ‘ಟೈಮ್’ ಜತೆಗಿನ ಸಂದರ್ಶನದಲ್ಲಿ “ನಾನು ನನ್ನ ಸಮಯವನ್ನು ಹಾಳು ಮಾಡಲು ಹೋಗುವುದಿಲ್ಲ,” ಎಂದಿದ್ದರು. ‘ನಾನು ಯುವಕ’ ಎಂದು ನೆನಪಿಸಿದ್ದರು. ಅದೇ ಯುವ ಮನಸ್ಸು ಭಿನ್ನ ದನಿಯನ್ನು ಹತ್ತಿಕ್ಕುವ ಯತ್ನವನ್ನು ಸೌದಿ ಅರೇಬಿಯಾದ ಹೊರಗೂ ಮಾಡಿದಂತೆ ಕಾಣಿಸುತ್ತಿದೆ. ಪರಿಣಾಮ ರಾಜಮನೆತನವನ್ನು ಟೀಕಿಸುತ್ತಿದ್ದ ಹಶೋಗ್ಜಿಯನ್ನು ಅವರು ಕೊಂದಿರಬಹುದು. ಸದ್ಯದ ವರದಿಗಳ ಪ್ರಕಾರ ಅವರ ನಿರ್ದೇಶನದ ಮೇಲೆಯೇ ವಾಷಿಂಗ್ಟನ್‌ ಪೋಸ್ಟ್‌ ಪತ್ರಕರ್ತನ ಹತ್ಯೆಯಾಗಿದೆ. ಇದು ಸರ್ವಾಧಿಕಾರಿಯೊಬ್ಬನ ಹುಟ್ಟಿನ ಪ್ರೌಢಾವಸ್ಥೆ ಇದ್ದರೂ ಇರಬಹುದು. ಅದಕ್ಕೆ ಸಮಯವೇ ಉತ್ತರ ನೀಡಲಿದೆ.