samachara
www.samachara.com
ಪತ್ರಕರ್ತ ಖಶೋಗಿ ನಾಪತ್ತೆ ಪ್ರಕರಣ: ಸೌದಿ ವಿರುದ್ಧ ಹೆಚ್ಚಿದ ಒತ್ತಡ, ‘ನಿಗೂಢ ಕೊಲೆಗಾರರ’ ಕತೆ ಕಟ್ಟಿದ ದೊರೆ
ವಿದೇಶ

ಪತ್ರಕರ್ತ ಖಶೋಗಿ ನಾಪತ್ತೆ ಪ್ರಕರಣ: ಸೌದಿ ವಿರುದ್ಧ ಹೆಚ್ಚಿದ ಒತ್ತಡ, ‘ನಿಗೂಢ ಕೊಲೆಗಾರರ’ ಕತೆ ಕಟ್ಟಿದ ದೊರೆ

ಅನಿವಾರ್ಯ ಸಂದರ್ಭದಲ್ಲಿ ನಿಗೂಢ ಕೊಲೆಗಾರರ ಕತೆ ಹೆಣಯಲಾಗಿದೆ ಎಂದು ಸೆನೆಟರ್‌ ಕ್ರಿಸ್‌ ಮುರ್ಫಿ ತಿಳಿಸಿದ್ದಾರೆ. ಹೊರ ಜತ್ತಿಗೆ ತಿಳಿಸಲು ಅಮೆರಿಕಾ ಅಧ್ಯಕ್ಷರನ್ನೇ ಸೌದಿ ದೊರೆಗಳು ಪಿಆರ್‌ ಏಜೆಂಟ್‌ಗಳ ರೀತಿ ಬಳಸಿಕೊಳ್ಳುತ್ತಿದ್ದಾರೆ.

ಸೌದಿ ಅರೇಬಿಯಾ ಮೂಲದ ‘ವಾಷಿಂಗ್ಟನ್‌ ಪೋಸ್ಟ್‌’ ಪತ್ರಕರ್ತ ಜಮಾಲ್ ಖಶೋಗಿ ನಾಪತ್ತೆ ಪ್ರಕರಣ ಇನ್ನೂ ನಿಗೂಢವಾಗಿದೆ. ದಿನದಿಂದ ದಿನಕ್ಕೆ ಪ್ರಕರಣ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದು, ಇದು ಸೌದಿ ಅರೇಬಿಯಾ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಪರಿಣಾಮ ಖಶೋಗಿ ನಾಪತ್ತೆ/ಕೊಲೆ ಪ್ರಕರಣದ ಹೊಣೆಯನ್ನು ಅಪರಿಚಿತರ ತಲೆಗೆ ಕಟ್ಟುವ ಕೆಲಸಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಗೆ ಬಂದಿವೆ.

ಅಕ್ಟೋಬರ್‌ 2ರಂದು ತನ್ನ ಗೆಳತಿಯನ್ನು ಹೊರಗೆ ಕಾಯುತ್ತಿರುವಂತೆ ಹೇಳಿ ಜಮಾಲ್‌ ಖಶೋಗಿ ಟರ್ಕಿ ರಾಜಧಾನಿ ಇಸ್ತಾಂಬುಲ್‌ನಲ್ಲಿರುವ ಸೌದಿ ರಾಯಭಾರ ಕಚೇರಿ ಒಳ ಹೊಕ್ಕಿದ್ದರು. ತಮ್ಮ ಮೊದಲ ಪತ್ನಿಯೊಂದಿಗಿನ ವಿಚ್ಛೇದನದ ಪ್ರಮಾಣ ಪತ್ರ ಪಡೆಯಲು ಹೀಗೆ ಒಳ ಹೋದವರು ಮತ್ತೆ ವಾಪಸ್‌ ಬರದೆ ನಾಪತ್ತೆಯಾಗಿದ್ದರು. ಸದ್ಯ ಅವರನ್ನು ಸೌದಿ ರಾಯಭಾರ ಕಚೇರಿ ಒಳಗೆ ಕೊಲ್ಲಲಾಗಿದೆ ಎಂದು ಬಹುಪಾಲು ಜನರು ನಂಬಿಕೊಂಡಿದ್ದಾರೆ.

ಈ ಕಾರಣಕ್ಕೆ ಸೌದಿ ಅರೇಬಿಯಾದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವು ಘಟಿಸಿದ 13 ದಿನಗಳ ತರುವಾಯ ಅಪರೂಪದ ಬೆಳವಣಿಗೆಯಲ್ಲಿ ತನ್ನ ರಾಯಭಾರ ಕಚೇರಿಯ ಬಾಗಿಲುಗಳನ್ನು ತನಿಖೆಗಾಗಿ ಸೌದಿ ಅರೇಬಿಯಾ ತೆರೆದುಕೊಟ್ಟಿದೆ. ಅಲ್ಲಿ ಸೋಮವಾರ ಟರ್ಕಿಯ ತನಿಖಾ ಸಂಸ್ಥೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಅಮೆರಿಕಾದ ಸೆಕ್ರೆಟರಿ ಆಫ್‌ ಸ್ಟೇಟ್‌ ಮೈಕ್‌ ಪಾಂಪೇವ್‌ರನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೌದಿ ಅರೇಬಿಯಾಗೆ ಕಳುಹಿಸಿಕೊಟ್ಟಿದ್ದಾರೆ. ಸೌದಿ ಅರೇಬಿಯಾ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಜತೆ ಜಮಾಲ್‌ ಖಶೋಗಿ ಕೊಲೆ ಸಂಬಂಧ ಚರ್ಚೆ ನಡೆಸಲು ಅವರನ್ನು ಕಳುಹಿಸಿಕೊಟ್ಟಿದ್ದಾರೆ. ನಡುವೆಯೇ ಖಶೋಗಿ ನಾಪತ್ತೆ ಪ್ರಕರಣದ ಒಂದು ‘ರಹಸ್ಯ ಕಾರ್ಯಾಚರಣೆ’ ಎಂಬುದಾಗಿ ಬಿಂಬಿಸಲು ಸೌದಿ ಅರೇಬಿಯಾ ಮುಂದಾಗಿದೆ. ಅಲ್ಲಿನ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುವ ಅರ್ಥದಲ್ಲಿ ಮಾತನಾಡಲು ಆರಂಭಿಸಿದ್ದಾರೆ.

ವರದಿಗಾರರಿಗೆ ಉತ್ತರಿಸಿರುವ ಡೊನಾಲ್ಡ್‌ ಟ್ರಂಪ್‌ ಕೂಡ ಇದೇ ದಾಳ ಉರುಳಿಸಿದ್ದಾರೆ. ರಾಜ ಸಲ್ಮಾನ್‌ ಜತೆ 20 ನಿಮಿಷಕ್ಕೂ ಹೆಚ್ಚು ಕಾಲ ಮಾತನಾಡಿದೆ ಎಂದು ಹೇಳಿರುವ ಅವರು, ಖಶೋಗಿ ನಾಪತ್ತೆ ಹಿಂದೆ ರಾಜಪ್ರಭುತ್ವದ ಕೈವಾಡ ಇಲ್ಲ ಎಂದಿರುವುದಾಗಿ ಮಾಹಿತಿ ನೀಡಿದ್ದಾರೆ. “ನಾನು ಅವರ ಮನಸ್ಸಿನೊಳಗೆ ಹೋಗಬೇಕೆಂದು ಬಯಸುವುದಿಲ್ಲ. ಆದರೆ ಇದರ ಹಿಂದೆ ‘ನಿಗೂಢ ಕೊಲೆಗಾರ’ರಿದ್ದಾರೆ ಎಂಬುದನ್ನು ಅವರ ಮಾತು ಧ್ವನಿಸುತ್ತಿತ್ತು,” ಎಂದು ಟ್ರಂಪ್ ಹೇಳಿದ್ದಾರೆ. "ಯಾರಿಗೆ ಗೊತ್ತು? ನಾವು ಇದರ ಆಳಕ್ಕಿಳಿದು ಇದರ ಹಿಂದಿರುವವರನ್ನು ಶೀಘ್ರದಲ್ಲೇ ಪತ್ತೆ ಹಚ್ಚಬಹುದು. ಆದರೆ ಅವರು ಮಾತ್ರ ತಮ್ಮ ಪಾತ್ರವನ್ನು ಸರಸಗಾಗಿ ತಿರಸ್ಕರಿಸಿದ್ದಾರೆ,” ಎಂದು ಟ್ರಂಪ್‌ ಹೇಳಿಕೆ ನೀಡಿದ್ದಾರೆ. ಆದರೆ ‘ನಿಗೂಢ ಕೊಲೆಗಾರ’ರ ಮಾತನ್ನು ಅವರೇ ಹೇಳಿದರಾ ಅಥವಾ ಬಿನ್‌ ಸಲ್ಮಾನ್‌ ಟ್ರಂಪ್‌ ಮುಂದಿಟ್ಟರಾ ಎಂಬುದು ತಿಳಿದಿಲ್ಲ. ಒಟ್ಟಿನಲ್ಲಿ ಸೌದಿ ಅರೇಬಿಯಾ ಮತ್ತು ಡೋನಾಲ್ಡ್ ಟ್ರಂಪ್‌ ಜತೆಯಾಗಿ ಖಶೋಗಿ ನಾಪತ್ತೆ ಹಿಂದೆ ರಹಸ್ಯ ಕಾರ್ಯಾಚರಣೆ ನಡೆದಿದೆ. ನಿಗೂಢ ಕೊಲೆಗಾರರು ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ನಿರೂಪಿಸಲು ಹೊರಟಂತೆ ಕಾಣಿಸುತ್ತಿದೆ.

ಜಮಾಲ್‌ ಖಶೋಗಿ
ಜಮಾಲ್‌ ಖಶೋಗಿ
/ಇಂಡಿಪೆಂಡೆಂಟ್‌

ಸಾಕ್ಷಿಯೇ ಇಲ್ಲ, ಹೇಳಿಕೆಯೇ ಎಲ್ಲ

ಜಮಾಲ್‌ ಖಶೋಗಿ ಎಲ್ಲಿದ್ದಾರೆ ಎಂಬುದರ ಮಾಹಿತಿ ತಮಗಿಲ್ಲ ಎಂದು ಸೌದಿ ಅರೇಬಿಯಾ ವಾದಿಸುತ್ತಿದೆ. ಜತೆಗೆ ಅವರು ರಾಯಭಾರ ಕಚೇರಿಯೊಳಗೆ ಬಂದ ಕೆಲವೇ ಕ್ಷಣಗಳಲ್ಲಿ ನಿರ್ಗಮಿಸಿದ್ದಾರೆ ಎಂಬ ಹಳೆ ರಾಗವನ್ನೇ ಮತ್ತೆ ಮತ್ತೆ ಹಾಡುತ್ತಿದೆ. ಆದರೆ ಬಂದಿರುವುದಕ್ಕೆ ಸಾಕ್ಷಿ ಇದೆ, ಹೋಗಿರುವುದಕ್ಕೆ ಸಾಕ್ಷಿ ನೀಡಿ ಎಂಬ ಟರ್ಕಿ ಸರಕಾರದ ಸವಾಲನ್ನು ರಾಜ ಪ್ರಭುತ್ವ ಸ್ವೀಕರಿಸಿಲ್ಲ. ಅವರು ರಾಯಭಾರ ಕಚೇರಿ ತೊರೆದಿದ್ದಾರೆ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ.

ಇದೀಗ ಟ್ರಂಪ್‌, ಖಶೋಗಿ ನಾಪತ್ತೆ ಪ್ರಕರಣಕ್ಕೆ ಉತ್ತರ ಹುಡುಕಲು ಟರ್ಕಿ ಜತೆ ಸೌದಿ ಅರೇಬಿಯಾ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಜತೆಗೆ ಈ ಸಂಬಂಧ ತನಿಖೆ ನಡೆಸಲು ಪಾಂಪೇವ್‌ರನ್ನು ಕಳುಹಿಸಿದ್ದಾರೆ. ಅವರು ತನಿಖೆ ಸಂಬಂಧ ಎಲ್ಲಿಗೆ ಬೇಕಾದರು ಪ್ರಯಾಣ ನಡೆಸಬಹುದು ಎಂದು ಟ್ರಂಪ್‌ ತಿಳಿಸಿದ್ದಾರೆ.

ಜಾಗತಿಕ ಗಮನ ಸೆಳೆದ ಘಟನೆ

ಒಂದು ಕಡೆ ತನಿಖೆ ನಡೆಯುತ್ತಿದ್ದರೆ ಇನ್ನೊಂದು ಕಡೆ ಜಗತ್ತಿನ ಮೂಲೆ ಮೂಲೆಯಲ್ಲೂ ಖಶೋಗಿ ಹತ್ಯೆ ಸದ್ದು ಮಾಡುತ್ತಿದೆ. ಸ್ವತಃ ಟ್ರಂಪ್‌ ಈ ಮಾತನ್ನು ಒಪ್ಪಿಕೊಂಡಿದ್ದಾರೆ. ಸಲ್ಮಾನ್‌ಗೆ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಲಾಗಿದೆ, “ಜಗತ್ತೇ ನೋಡುತ್ತಿದೆ. ಇಡೀ ಪ್ರಪಂಚವೇ ಈ ಬಗ್ಗೆ ಮಾತನಾಡುತ್ತಿದೆ,” ಎಂಬುದನ್ನು ಅವರಿಗೆ ತಿಳಿಸಿರುವುದಾಗಿ ಟ್ರಂಪ್‌ ವಿವರಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆ ನಡುವೆ ಖಶೋಗಿ ಕುಟುಂಬಸ್ಥರು ಅವರನ್ನು ಪತ್ತೆ ಮಾಡುವಂತೆ ಇಂಡಿಪೆಂಡೆಂಟ್‌ ಆಂಡ್‌ ಇಂಪಾರ್ಷಿಯಲ್‌ ಕಮಿಷನ್‌ಗೆ ದೂರು ಸಲ್ಲಿಸಿದ್ದಾರೆ. ಜತೆಗೆ ಟರ್ಕಿಯ ತನಿಖಾ ತಂಡದವರೂ ಸೋಮವಾರ ಸೌದಿ ಅರೇಬಿಯಾ ರಾಯಭಾರ ಕಚೇರಿಯಲ್ಲಿ ಪರೀಶಿಲನೆ ನಡೆಸಿದ್ದಾರೆ. ಅತ್ಯಾಧುನಿಕ ಸಲಕರಣೆಗಳೊಂದಿಗೆ ಅವರು ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳು ತಿಳಿದು ಬಂದಿಲ್ಲ.

ಇದಕ್ಕೂ ಮುನ್ನ ಟರ್ಕಿ ಅಧಿಕಾರಿಗಳು ತನಿಖೆಗೆ ಸಂಬಂಧಿಸಿದ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದರು. ಖಶೋಗಿ ಕೊಲೆ ಅಥವಾ ಅಪಹರಣಕ್ಕಾಗಿ ಸೌದಿಯಿಂದ ವಿಮಾನಗಳಲ್ಲಿ ಬಂದಿದ್ದ ಏಜೆಂಟ್‌ಗಳ ದೃಶ್ಯಾವಳಿಗಳನ್ನು ನೀಡಿದ್ದರು. ಜತೆಗೆ ರಾಯಭಾರ ಕಚೇರಿಯೊಳಗೆ ಕೊಲೆ ನಡೆದಿದ್ದರ ಆಡಿಯೋ ಮತ್ತು ವಿಡಿಯೋ ದಾಖಲೆಗಳಿವೆ ಎಂದು ಟರ್ಕಿ ಸರ್ಕಾರ ಅಮೆರಿಕಾಗೆ ತಿಳಿಸಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಖಶೋಗಿಯನ್ನು ಪ್ರಶ್ನಿಸಿ, ಹಿಂಸೆ ನೀಡಿ ನಂತರ ಕೊಲೆ ಮಾಡಿದ್ದಾರೆ ಎಂಬ ನಿರ್ಧಾರಕ್ಕೆ ಅಮೆರಿಕಾದ ಅಧಿಕಾರಿಗಳು ಬಂದಿದ್ದಾರೆ ಎಂದು ‘ವಾಷಿಂಗ್ಟನ್‌ ಪೋಸ್ಟ್‌’ ಹೇಳಿದೆ.

ಇಷ್ಟಲ್ಲದೆ ಖಶೋಗಿಯನ್ನು ವರ್ಜೀನಿಯಾದಲ್ಲಿರುವ ಮನೆಯಿಂದ ಅಪಹರಿಸಿ ಕರೆ ತರುವಂತೆ ಸೌದಿ ರಾಜ ಆದೇಶ ನೀಡಿದ್ದ ಎಂಬುದನ್ನು ಅಮೆರಿಕಾದ ಅಧಿಕಾರಿಗಳು ಹೇಳಿದ್ದಾರೆ. ಈ ಮಾಹಿತಿಗಳನ್ನು ಅಮೆರಿಕಾದ ಗುಪ್ತಚರ ಅಧಿಕಾರಿಗಳು ಕಲೆ ಹಾಕಿದ್ದರು ಎಂಬುದಾಗಿ ಪೋಸ್ಟ್‌ ಹೇಳಿದೆ.

ಆರ್ಥಿಕ ನಿರ್ಬಂಧ?

ಈ ಎಲ್ಲಾ ಹಿನ್ನೆಲೆಗಳಿಂದ ಅಂತರಾಷ್ಟ್ರೀಯ ಸಮುದಾಯ ಖಶೋಗಿ ಸೌದಿ ರಾಯಭಾರ ಕಚೇರಿಯೊಳಗೆ ಕೊಲೆಗೀಡಾಗಿದ್ದಾರೆ ಎಂಬು ಸ್ಪಷ್ಟ ಅಭಿಪ್ರಾಯಕ್ಕೆ ಬರುತ್ತಿರುವಂತೆ ಕಾಣುತ್ತಿದೆ. ಪರಿಣಾಮ ದಿನದಿಂದ ದಿನಕ್ಕೆ ಸೌದಿ ಅರೇಬಿಯಾದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಭಾನುವಾರ ಹೇಳಿಕೆ ನೀಡಿದ್ದ ಟ್ರಂಪ್‌, ‘ಒಂದೊಮ್ಮೆ ಕೊಲೆ ನಡೆದಿರುವುದು ಸಾಬೀತಾದರೆ ಸೌದಿ ಅರೇಬಿಯಾ ಗಂಭೀರ ಶಿಕ್ಷೆ ಅನುಭವಿಸಬೇಕಾಗುತ್ತದೆ,’ ಎಂದು ಎಚ್ಚರಿಸಿದ್ದಾರೆ. ಈ ಸಂಬಂಧ ಜರ್ಮನಿ, ಫ್ರಾನ್ಸ್‌, ಬ್ರಿಟನ್‌ ಕೂಡ ಜಂಟಿ ಹೇಳಿಕೆಗಳನ್ನು ಬಿಡುಗಡೆ ಮಾಡಿವೆ.

ಒಂದು ಕಡೆ ಸೌದಿ ಅರೇಬಿಯಾದ ಮೇಲೆ ರಾಜಕೀಯ ಒತ್ತಡ ಹೇರುತ್ತಿರುವ ಅಂತರಾಷ್ಟ್ರೀಯ ಸಮುದಾಯ ಐಷಾರಾಮಿ ದೊರೆಗಳಿಗೆ ಆರ್ಥಿಕ ಹೊಡೆತವನ್ನೂ ನೀಡಲು ಮುಂದಾಗಿವೆ. ಈ ತಿಂಗಳ ಅಂತ್ಯದಲ್ಲಿ ಸೌದಿಯಲ್ಲಿ ಪ್ರಮುಖ ಹೂಡಿಕೆದಾರರ ಸಮಾವೇಶ ನಡೆಯಲಿದ್ದು ಇದರಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಪ್ರಮುಖ ಉದ್ದಿಮೆದಾರರು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಜೆಪಿ ಮೋರ್ಗನ್‌, ಬ್ಲ್ಯಾಕ್‌ರಾಕ್‌, ಫೋರ್ಡ್‌ನಂತಹ ಐತಿಹಾಸಿಕ ದೈತ್ಯ ಕಂಪನಿಗಳ ಮುಖ್ಯಸ್ಥರು ಈ ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆ. ಸೌದಿ ರಾಯಭಾರ ಕಚೇರಿಗಳಿಗೆ ಬೇರೆ ಬೇರೆ ಸೇವೆಗಳನ್ನು ನೀಡುತ್ತಿದ್ದ ಗ್ಲೋವರ್‌ ಪಾರ್ಕ್‌ ಗ್ರೂಪ್‌, ಬಿಜಿಆರ್ ಗ್ರೂಪ್‌, ಹಾರ್ಬರ್‌ ಗ್ರೂಪ್‌ಗಳು ತಮ್ಮ ಒಪ್ಪಂದ ಮುರಿದುಕೊಂಡಿವೆ. ಬಹಿರಂಗ ಒತ್ತಡ ಸೃಷ್ಟಿಯಾಗಿರುವುದು ಅರಿವಿಗೆ ಬರುತ್ತಲೇ ರಾಷ್ಟ್ರೀಯ ದಿನಾಚರಣೆ ಹಿನ್ನೆಲೆಯಲ್ಲಿ ಗುರುವಾರ ಹಮ್ಕಿಕೊಂಡಿದ್ದ ಔತಣಕೂಟವನ್ನೇ ಸೌದಿ ರದ್ದುಗೊಳಿಸಿದೆ.

ಇಂಥಹ ಅನಿವಾರ್ಯ ಸಂದರ್ಭದಲ್ಲಿ ನಿಗೂಢ ಕೊಲೆಗಾರರ ಕತೆ ಹೆಣಯಲಾಗಿದೆ ಎಂದು ಸೆನೆಟರ್‌ ಕ್ರಿಸ್‌ ಮುರ್ಫಿ ತಿಳಿಸಿದ್ದಾರೆ. ಈ ಕಥೆಯನ್ನು ಹೊರ ಜತ್ತಿಗೆ ತಿಳಿಸಲು ಅಮೆರಿಕಾ ಅಧ್ಯಕ್ಷರನ್ನೇ ಸೌದಿ ದೊರೆಗಳು ಪಿಆರ್‌ ಏಜೆಂಟ್‌ಗಳ ರೀತಿ ಬಳಸಿಕೊಳ್ಳುತ್ತಿದ್ದಾರೆ ಎಂದವರು ಕಿಡಿಕಾರಿದ್ದಾರೆ.

ಹೀಗೆ ಜಮಾಲ್‌ ಖಶೋಗಿ ಎಂಬ ಪತ್ರಕರ್ತನ ಕೊಲೆ ಅಂತಾರಾಷ್ಟ್ರೀಯ ವಿಚಾರವಾಗಿ ಬೆಳೆದು ಸದ್ಯ ‘ನಿಗೂಢ ಕೊಲೆಗಾರ’ರಲ್ಲಿಗೆ ಬಂದು ನಿಂತಿದೆ.