samachara
www.samachara.com
ಭಾರತಕ್ಕೆ ಖುಷಿಕೊಟ್ಟ ಮಾಲ್ಡೀವ್ಸ್‌ ಚುನಾವಣಾ ಫಲಿತಾಂಶ; ಮೊಹಮದ್‌ ಸೊಲಿಹ್ ಅಧ್ಯಕ್ಷ!
ವಿದೇಶ

ಭಾರತಕ್ಕೆ ಖುಷಿಕೊಟ್ಟ ಮಾಲ್ಡೀವ್ಸ್‌ ಚುನಾವಣಾ ಫಲಿತಾಂಶ; ಮೊಹಮದ್‌ ಸೊಲಿಹ್ ಅಧ್ಯಕ್ಷ!

ಸೊಲಿಹ್‌ 1,34,616 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಯಮೀನ್‌ 96,132 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಸೊಲಿಹ್‌ ಗೆಲುವನ್ನು ಭಾರತ ಮತ್ತು ಅಮೆರಿಕಾ ಸ್ವಾಗತಿಸಿವೆ.

Team Samachara

ಭಾರತ ಮತ್ತು ಚೀನಾದ ನಡುವಿನ ಚುನಾವಣೆಯೇನೋ ಎಂಬಂತೆ ಬಿಂಬಿತವಾಗಿದ್ದ ಮಾಲ್ಡೀವ್ಸ್‌ ಅಧ್ಯಕ್ಷೀಯ ಚುನಾವಣೆಯಲ್ಲಿ ಚೀನಾ ಬೆಂಬಲಿತ ಅಭ್ಯರ್ಥಿ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್‌ಗೆ ಸೋಲಾಗಿದೆ. ಅಲ್ಲಿ ವಿರೋಧ ಪಕ್ಷಗಳ ಜಂಟಿ ಅಭ್ಯರ್ಥಿ ಮೊಹಮದ್‌ ಸೊಲಿಹ್ ಜಯ ಗಳಿಸಿದ್ದಾರೆ.

ಸೊಲಿಹ್‌ 1,34,616 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಯಮೀನ್‌ 96,132 ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಸೊಲಿಹ್‌ ಗೆಲುವನ್ನು ಭಾರತ ಮತ್ತು ಅಮೆರಿಕಾ ಸ್ವಾಗತಿಸಿವೆ.

ಚುನಾವಣೆಗೂ ಮೊದಲು ಮಾಲ್ಡೀವ್ಸ್‌ನಲ್ಲಿ ರಾಜಕೀಯ ಅಸ್ಥಿರತೆಗಳು ಕಾಣಿಸಿಕೊಂಡಿತ್ತು. ಯಮೀನ್‌ ತಮ್ಮ ಆಡಳಿತಾವಧಿಯಲ್ಲಿ ಹಲವು ವಿರೋಧಿ ನಾಯಕರನ್ನು ಜೈಲಿಗೆ ಅಟ್ಟಿದ್ದರು. ಈ ಹಿನ್ನಲೆಯಲ್ಲಿ ಮತ್ತೆ ದೇಶದಲ್ಲಿ ಪ್ರಜಾಪ್ರಭುತ್ವ ಸುಧಾರಣೆಯಾಗದಿದ್ದಲ್ಲಿ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕಾ ಮತ್ತು ಯುರೋಪಿಯನ್‌ ಒಕ್ಕೂಟ ಮಾಲ್ಡೀವ್ಸ್‌ಗೆ ಎಚ್ಚರಿಕೆ ನೀಡಿದ್ದವು. ಇದೀಗ ಮಾಲ್ಡೀವ್ಸ್‌ನಲ್ಲಿ ವಿರೋಧಿ ನಾಯಕ ಜಯಶಾಲಿಯಾಗುವುದರೊಂದಿಗೆ ಎಲ್ಲಾ ವಿವಾದಗಳೂ ಸುಖಾಂತ್ಯ ಕಂಡಿವೆ.

ಜಯದ ಬಳಿಕ ಪ್ರತಿಕ್ರಿಯೆ ನೀಡಿರುವ ಸೊಲಿಹ್, “ಸ್ಪಷ್ಟ ಮತ್ತು ಗಟ್ಟಿ ಧ್ವನಿಯ ಸಂದೇಶ ಹೊರ ಬಿದ್ದಿದೆ. ಮಾಲ್ಡೀವ್ಸ್‌ ಜನರು ಬದಲಾವಣೆ, ಶಾಂತಿ ಮತ್ತು ನ್ಯಾಯ ಬಯಸಿದ್ದಾರೆ,” ಎಂದಿದ್ದಾರೆ.

ಯಾರು ಇಬ್ರಾಹಿಂ ಮೊಹಮದ್‌ ಸೊಲಿಹ್?

ಇವರನ್ನು ಮಾಲ್ಡೀವ್ಸ್‌ನಲ್ಲಿ ಪ್ರೀತಿಯಿಂದ ಇಬು ಎಂದು ಕರೆಯುವುದೇ ಜಾಸ್ತಿ. ಮಾಲ್ಡೀವ್ಸ್‌ ರಾಜಕಾರಣದ ಹಿರಿಯ ಮುಖ. ತನ್ನ ದೇಶದಲ್ಲಿ ಪ್ರಜಾಪ್ರಭುತ್ವ ಸುಧಾರಣೆಯಾಗಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಾ ಬಂದವರು ಅವರು. ಈ ಬಾರಿ ಎಂಡಿಪಿ, ಜುಮ್ಹೂರೀ ಪಾರ್ಟಿ ಮತ್ತು ಅಧಾಲತ್ ಪಾರ್ಟಿಯ ಜಂಟಿ ಅಭ್ಯರ್ಥೀಯಾಗಿ ಅವರು ಚುನಾವಣಾ ಅಖಾಡಕ್ಕೆ ಇಳಿದಿದ್ದರು.

2011ರಿಂದ ಎಂಡಿಪಿ ಪಕ್ಷದ ಸಂಸದೀಯ ಪಕ್ಷದ ನಾಯಕರಾಗಿರುವ ಅವರು ಇದೀಗ ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಅರಾಜಕ ಮಾಲ್ಡೀವ್ಸ್‌

ಮಾಲ್ಡೀವ್ಸ್‌ ಪುಟ್ಟ ದೇಶ. 26 ಹವಳದ ದಿಬ್ಬಗಳು 1,192 ದ್ವೀಪಗಳನ್ನು ಒಳಗೊಂಡ 4 ಲಕ್ಷ ಚಿಲ್ಲರೆ ಜನರು ವಾಸಿಸುವ ದೇಶ. ಪ್ರವಾಸೋದ್ಯಮವೇ ದೇಶದ ಜೀವಾಳ. ಇತ್ತೀಚಿನ ದಿನಗಳಲ್ಲಿ ಉಂಟಾಗುತ್ತಿರುವ ಹವಮಾನ ವೈಪರೀತ್ಯಗಳು ಇಲ್ಲಿನ ಪ್ರವಾಸೋದ್ಯಮದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿವೆ. ಇದೇ ಹೊತ್ತಲ್ಲಿ ಇಲ್ಲಿನ ರಾಜಕೀಯದಲ್ಲಿಯೂ ಏರುಪೇರುಗಳು ಸಂಭವಿಸುತ್ತಿವೆ.

ಸದ್ಯ ಗಡಿಪಾರಾಗಿರುವ ಮಾಲ್ಡೀವ್ಸ್‌ನ ಮೊದಲ ಚುನಾಯಿತ ಅಧ್ಯಕ್ಷ ಮೊಹಮದ್‌ ನಶೀದ್‌
ಸದ್ಯ ಗಡಿಪಾರಾಗಿರುವ ಮಾಲ್ಡೀವ್ಸ್‌ನ ಮೊದಲ ಚುನಾಯಿತ ಅಧ್ಯಕ್ಷ ಮೊಹಮದ್‌ ನಶೀದ್‌
/ಟ್ರಾವೆಲ್‌ ಸೆಂಟರ್‌ ಮಾಲ್ಡೀವ್ಸ್‌

ಕಳೆದ ಫೆಬ್ರವರಿಯಲ್ಲಿ ಇಲ್ಲಿ ಸುಪ್ರೀಂ ಕೋರ್ಟ್‌ 9 ವಿರೋಧ ಪಕ್ಷಗಳ ನಾಯಕರಿಗೆ ವಿಧಿಸಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿತ್ತು. ಇದರಲ್ಲಿ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಕೂಡ ಸೇರಿದ್ದರು. ಆದರೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಧ್ಯಕ್ಷ ಯಮೀನ್‌ ಆದೇಶ ನೀಡಿದ ಸುಪ್ರೀಂ ಕೋರ್ಟ್‌ ಅಧ್ಯಕ್ಷರ ಬಂಧನಕ್ಕೆ ಸೂಚಿಸಿದ್ದರು. ಬಳಿಕ ಆದೇಶವನ್ನು ಬದಲಾಯಿಸಲಾಗಿತ್ತು. ತನ್ನ ಅಧಿಕಾರಕ್ಕೆ ದಕ್ಕೆ ಬಂದರೆ ತಾನು ಯಾವ ಹಂತಕ್ಕೂ ಇಳಿಯಬಲ್ಲೆ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದರು ನಶೀದ್. ಅವರ ಈ ನಡೆಗೆ ಅಮೆರಿಕಾ, ಬ್ರಿಟನ್‌ ಮತ್ತು ಭಾರತ ಕಟು ಟೀಕೆ ವ್ಯಕ್ತಪಡಿಸಿದ್ದವು.

ಈ ಸಂದರ್ಭದಲ್ಲಿ ನಶೀದ್ ದೇಶದೊಳಕ್ಕೆ ಸೇನೆ ನುಗ್ಗಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ ಭಾರತ ವಿವಾದದಿಂದ ಅಂತರವನ್ನು ಕಾಯ್ದುಕೊಂಡಿತು. ಇದೀಗ ಚುನಾವಣೆಯಲ್ಲಿ ಯಮೀನ್‌ ಸೋಲುವುದರೊಂದಿಗೆ ಈ ಅನಿಶ್ಚತೆಗಳಿಗೆ ಅಲ್ಪವಿರಾಮ ಬಿದ್ದಿದೆ.

ಚೀನಾ ವರ್ಸಸ್‌ ಭಾರತ

ಹಿಂದೂ ಮಹಾ ಸಾಗರದ ಮೇಲೆ ಅಧಿಪತ್ಯ ಸ್ಥಾಪಿಸುವ ಭಾಗವಾಗಿ ಭಾರತದ ನೆರೆಯ ದೇಶಗಳ ಮೇಲೆಲ್ಲಾ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿರುವ ಚೀನಾ ಮಾಲ್ಡೀವ್ಸ್‌ನಲ್ಲೂ ಹೂಡಿಕೆ ಮಾಡಿತ್ತು. ಯಮೀನ್‌ ನೇತೃತ್ವದ ಮಾಲ್ಡೀವ್ಸ್‌ ಕೂಡ ಈ ಹೂಡಿಕೆಯನ್ನು ಸ್ವಾಗತಿಸಿತ್ತು. ಪರಿಣಾಮ ಪುಟ್ಟ ದೇಶದ ಮೆಗಾ ಪ್ರಾಜೆಕ್ಟ್‌ಗಳಿಗೆ ಹಣ ಹರಿದು ಬಂದಿತ್ತು. ನಿರ್ಬಂಧ ರಹಿತ ವ್ಯಾಪಾರ ಒಪ್ಪಂದದ ಹಿನ್ನೆಲೆಯಲ್ಲಿ ಇವತ್ತು ಬೇರೆಲ್ಲಾ ದೇಶಗಳಿಗಿಂತ ಚೀನಾದ ಪ್ರವಾಸಿಗರು ಹೆಚ್ಚಾಗಿ ಮಾಲ್ಡೀವ್ಸ್‌ಗೆ ಬರುತ್ತಿದ್ದಾರೆ.

ನಿರ್ಗಮಿತ ಅಧ್ಯಕ್ಷ ಅಬ್ದುಲ್ಲಾ ಯಮೀನ್‌
ನಿರ್ಗಮಿತ ಅಧ್ಯಕ್ಷ ಅಬ್ದುಲ್ಲಾ ಯಮೀನ್‌

ಈ ಎಲ್ಲಾ ಕಾರಣಗಳಿಗೆ ಮಾಲ್ಡೀವ್ಸ್‌ನಲ್ಲಿ ಅಧಿಕಾರ ಬದಲಾಗುವುದು ಚೀನಾಕ್ಕೆ ಬೇಕಿರಲಿಲ್ಲ. ಆದರೆ ಭಾರತಕ್ಕೆ ಯಮೀನ್‌ ಕೆಳಗಿಳಿಸಬೇಕಾಗಿತ್ತು. ಕಾರಣ ಚೀನಾದ ಪ್ರಾಬಲ್ಯ, ಹೂಡಿಕೆಗಳು ಮೇರೆ ಮೀರಿದ್ದವು.

ಈ ಎಲ್ಲಾ ಹಿನ್ನೆಲೆಯಲ್ಲಿ ಭಾನುವಾರ ನಡೆದಿದ್ದ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಜತೆಗೆ ಈ ಚುನಾವಣೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿದ್ದವು. ಈ ಚುನಾವಣೆಗೆ ಯುರೋಪಿಯನ್‌ ಒಕ್ಕೂಟ ಮತ್ತು ವಿಶ್ವಸಂಸ್ಥೆ ವೀಕ್ಷಕರನ್ನೂ ಕಳುಹಿಸಿರಲಿಲ್ಲ. ಹೀಗಾಗಿ ಇಂದಿನ ಫಲಿತಾಂಶದಲ್ಲಿ ಯಮೀನ್‌ ಮರು ಆಯ್ಕೆಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಫಲಿತಾಂಶ ಹೊರ ಬಿದ್ದಾಗ ಮಾಲ್ಡೀವ್ಸ್‌ ದ್ವೀಪದ ಜನ ಯಮೀನ್‌ ಕೆಳಗಿಳಿಸಿ ಮೊಹಮದ್‌ ಸೊಲಿಹ್ ಆಯ್ಕೆ ಮಾಡಿದ್ದರು. ಅಷ್ಟರ ಮಟ್ಟಿಗೆ ಸದ್ಯ ಭಾರತ ಮತ್ತು ಮಾಲ್ಡೀವ್ಸ್‌ ಜನ ಇಂದು ಉಸಿರು ಬಿಡುವಂತಾಗಿದೆ.