samachara
www.samachara.com
‘ಲೈಂಗಿಕ ಹಗರಣ’ದಲ್ಲಿ ಜಾಣ ಮೌನ, ಪೋಪ್‌ ಫ್ರಾನ್ಸಿಸ್‌ ರಾಜೀನಾಮೆಗೆ ಹೀಗೊಂದು ಆಗ್ರಹ
ವಿದೇಶ

‘ಲೈಂಗಿಕ ಹಗರಣ’ದಲ್ಲಿ ಜಾಣ ಮೌನ, ಪೋಪ್‌ ಫ್ರಾನ್ಸಿಸ್‌ ರಾಜೀನಾಮೆಗೆ ಹೀಗೊಂದು ಆಗ್ರಹ

ಕ್ರೈಸ್ತ ಧರ್ಮದ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್‌ ಫ್ರಾನ್ಸಿಸ್‌ ರಾಜೀನಾಮೆಗೆ ಒತ್ತಾಯವೊಂದು ಕೇಳಿ ಬಂದಿದೆ. ಇಂಥಹದ್ದೊಂದು ಬೇಡಿಕೆ ಕೇಳಿ ಬರಲು ಕಾರಣವಾಗಿದ್ದು ಒಂದು ಲೈಂಗಿಕ ಹಗರಣ.

ಕ್ರೈಸ್ತ ಧರ್ಮದ ಅತ್ಯುನ್ನತ ಧಾರ್ಮಿಕ ನಾಯಕ ಪೋಪ್‌ ಫ್ರಾನ್ಸಿಸ್‌ ರಾಜೀನಾಮೆಗೆ ಒತ್ತಾಯವೊಂದು ಕೇಳಿ ಬಂದಿದೆ. ಇಂಥಹದ್ದೊಂದು ಬೇಡಿಕೆ ಕೇಳಿ ಬರಲು ಕಾರಣವಾಗಿದ್ದು ಒಂದು ಲೈಂಗಿಕ ಹಗರಣ.

ಮಾಜಿ ಕಾರ್ಡಿನಲ್‌ ಥಿಯೋಡರ್‌ ಮೆಕ್‌ಕ್ಯಾರಿಕ್‌ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣವೊಂದು ಕೇಳಿ ಬಂದಿತ್ತು. ಹೀಗಾಗಿ ಇವರ ಮೇಲೆ ಈ ಹಿಂದಿನ ಪೋಪ್‌ ಬೆನೆಡಿಕ್ಟ್‌-16 ನಿರ್ಬಂಧಗಳನ್ನು ಹೇರಿದ್ದರು. ಈ ನಿರ್ಬಂಧಗಳನ್ನು ತೆರವುಗೊಳಿಸಿದ ಪೋಪ್‌ ಫ್ರಾನ್ಸಿಸ್‌, ಮೆಕ್‌ಕ್ಯಾರಿಕ್‌ಗೆ ಬೆನ್ನೆಲುಬಾಗಿದ್ದರು ಎಂದು ತಮ್ಮ 11 ಪುಟಗಳ ಪತ್ರದಲ್ಲಿ ಆರ್ಚ್‌ಬಿಷಪ್‌ ಕಾರ್ಲೋ ಮರಿಯಾ ವಿಗಾನೋ ದೂರಿದ್ದಾರೆ. ಸೆಮಿನರಿ ಮತ್ತು ಪಾದ್ರಿಗಳೊಂದಿಗೆ ಅನೈತಿಕ ನಡವಳಿಕೆ ಹೊಂದಿರುವ ಗಂಭೀರ ಆರೋಪ ಮೆಕ್‌ಕ್ಯಾರಿಕ್‌ ವಿರುದ್ಧ ಇದ್ದಾಗಲೂ ಫ್ರಾನ್ಸಿಸ್‌ ನಿರ್ಬಂಧ ತೆರವುಗೊಳಿಸಿದ್ದಾರೆ ಎಂದವರು ದೂರಿದ್ದಾರೆ.

ಈ ಹಿಂದೆ 2013ರಲ್ಲಿ ತಾನು ಪೋಪ್‌ ಫ್ರಾನ್ಸಿಸ್‌ರನ್ನು ಖುದ್ದು ಭೇಟಿಯಾಗಿ ಮೆಕ್‌ಕ್ಯಾರಿಕ್‌ ವಿರುದ್ಧ ಕೈಗೊಳ್ಳಲಾದ ನಿರ್ಬಂಧಗಳು ಮತ್ತು ವಾಷಿಂಗ್ಟನ್‌ ಆರ್ಚ್‌ಬಿಷಪ್‌ ಆಗಿದ್ದ ಅವಧಿಯಲ್ಲಿ ಅವರು ಸೆಮಿನರಿ ಮತ್ತು ಪಾದ್ರಿಗಳ ಒಂದು ಜನಾಂಗವನ್ನೇ ಭ್ರಷ್ಟಗೊಳಿಸಿದ್ದನ್ನು ವಿವರವಾಗಿ ತಿಳಿಸಿದ್ದೆ. ಹೀಗಿದ್ದೂ ಪೋಪ್‌ ಫ್ರಾನ್ಸಿಸ್‌ ಮೆಕ್‌ಕ್ಯಾರಿಕ್‌ಗೆ ರಕ್ಷಣೆ ನೀಡುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನಂಬುಗೆಯ ಕೌನ್ಸಿಲರ್‌ ಆಗಿ ಅವರನ್ನು ಇಟ್ಟುಕೊಂಡಿದ್ದರು ಎಂದು ವಿಗಾನೋ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, “ಈ ಒಂದು ನಾಟಕೀಯ ಪ್ರಕರಣದಲ್ಲಿ ತಮ್ಮ ತಪ್ಪನ್ನು ಪೋಪ್‌ ಒಪ್ಪಿಕೊಳ್ಳಬೇಕು. ಜತೆಗೆ ಮೆಕ್‌ಕ್ಯಾರಿಕ್‌ ಅವರಿಗೆ ರಕ್ಷಣೆ ನೀಡಿದವರೆಲ್ಲರ ಜೊತೆ ಸೇರಿ ರಾಜೀನಾಮೆ ನೀಡುವ ಮೂಲಕ ಕಾರ್ಡಿನಲ್‌ಗಳು ಮತ್ತು ಬಿಷಪ್‌ಗಳಿಗೆ ಮಾದರಿಯಾಗುವ ತೀರ್ಮಾನ ತೆಗೆದುಕೊಳ್ಳಬೇಕು,” ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಆದರೆ 77 ವರ್ಷದ ವಿಗಾನೋ ಬೇಡಿಕೆಗೆ ವ್ಯಾಟಿಕನ್‌ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಆಂತರ್ಯದ ಬೆಳವಣಿಗೆಗಳು

ಹಾಗೆ ನೋಡಿದರೆ ವಿಗಾನೋ ವಿರೋಧ ಇದೇ ಹೊಸತೇನೂ ಅಲ್ಲ. ಸಲಿಂಗಕಾಮದ ವಿರುದ್ಧ ಸ್ಪಷ್ಟ ಅಭಿಪ್ರಾಯಗಳನ್ನು ಮಂಡಿಸುತ್ತಾ ಬಂದಿರುವ ಅವರು ಈ ಹಿಂದಿನಿಂದಲೂ ಪೋಪ್‌ ಫ್ರಾನ್ಸಿಸ್‌ ಟೀಕಾಕಾರರಾಗಿಯೇ ಗುರುತಿಸಿಕೊಂಡಿದ್ದರು. ಇದೀಗ ಅವರು ತಮ್ಮ ಪತ್ರದಲ್ಲಿಯೂ ಸಲಿಂಗಕಾಮದ ಬಗ್ಗೆ ದೊಡ್ಡ ವಿವರಣೆಯನ್ನೇ ಬರೆದಿರುವ ಜತೆಗೆ ಪೋಪ್‌ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬರಹಗಾರ ಕಾಲಮ್ ಒ’ಗೋರ್ಮನ್, ‘ವಿಗಾನೋ ಪತ್ರ ಆತಂಕಕಾರಿ’ ಎಂದಿದ್ದಾರೆ. “2,000 ವರ್ಷಗಳ ಚರ್ಚ್‌ ಇತಿಹಾಸದಲ್ಲಿ ಯಾವುದೇ ಹಿರಿಯ ಚರ್ಚ್‌ ಅಧಿಕಾರಿ ಹೊರಗೆ ಬಂದು ಪೋಪ್‌ ರಾಜೀನಾಮೆ ನೀಡಬೇಕು ಎಂದು ಬೇಡಿಕೆ ಮುಂದಿಟ್ಟ ಉದಾಹರಣೆ ಇಲ್ಲ” ಎಂದಿದ್ದಾರೆ.

“ಆದರೆ ಈ ಬಗ್ಗೆ ಎಚ್ಚರಿಕೆಯಿಂದಲೂ ಇರಬೇಕು. ಕಾರಣ ವಿಗಾನೋ ಅವರಿಗೆ ಒಂದು ಅಜೆಂಡಾ ಇದೆ. ಚರ್ಚ್‌ ಒಳಗಡೆ ಸೈದ್ಧಾಂತಿಕ ಸಂಘರ್ಷ ನಡೆಯುತ್ತಲೇ ಬಂದಿದ್ದು, ಇದು ಅದರ ಮುಂದುವರಿದ ಭಾಗ. ಚರ್ಚ್‌ನ ಉನ್ನತ ಸ್ಥಾನದವರ ಮೇಲೆ ಇಂಥಹದ್ದೊಂದು ಆರೋಪ ಕೇಳಿ ಬಂದಿರುವುದಕ್ಕೆ ನಾನು ಅಚ್ಚರಿಗೊಂಡಿದ್ದೇನೆ. ಇದಕ್ಕೆ ವ್ಯಾಟಿಕನ್‌ ಪ್ರತಿಕ್ರಿಯೆ ನೀಡಲೇಬೇಕಾಗಿದೆ,” ಎಂದವರು ಹೇಳಿದ್ದಾರೆ.

ಪೋಪ್‌ ಫ್ರಾನ್ಸಿಸ್‌ ಐರ್ಲೆಂಡ್‌ ಪ್ರವಾಸದಲ್ಲಿರುವ ಸಂದರ್ಭದಲ್ಲಿ ಈ ಆರೋಪ ಕೇಳಿ ಬಂದಿದೆ. ಅವರು ಭಾನುವಾರ ಡಬ್ಲಿನ್‌ನಲ್ಲಿ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿ ‘ಚರ್ಚ್‌ನಿಂದ ಲೈಂಗಿಕ ದೌರ್ಜನ್ಯದಲ್ಲಾದ ನಂಬಿಕೆ ದ್ರೋಹಕ್ಕೆ ದೇವರಲ್ಲಿ ಕ್ಷಮಾಪಣೆ ನೀಡುವಂತೆ’ ಕೇಳಿಕೊಂಡಿದ್ದರು. ಇದೇ ಹೊತ್ತಿಗೆ ಇತ್ತ ವಿಗಾನೋ ಪೋಪ್‌ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೌನವಹಿಸಿದ ಆರೋಪ ಮಾಡಿದ್ದು ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಅಮೆರಿಕಾದ ಪತ್ರಿಕೆ ‘ನ್ಯಾಷನಲ್‌ ಕ್ಯಾಥೋಲಿಕ್‌ ರೆಜಿಸ್ಟಾರ್‌’ನಲ್ಲಿ ಮೊದಲ ಬಾರಿಗೆ ವಿಗಾನೋ ಆರೋಪ ಪ್ರಕಟಗೊಂಡಿತ್ತು. ಅದರಲ್ಲಿ ಅವರು ವ್ಯಾಟಿಕನ್‌ನ ಹಲವು ಅಧಿಕಾರಿಗಳಿಗೆ ಸುಮಾರು ವರ್ಷಗಳಿಂದ ಮೆಕ್‌ಕ್ಯಾರಿಕ್‌ ಮೇಲಿದ್ದ ಆರೋಪ ತಿಳಿದಿತ್ತು ಎಂದಿದ್ದಾರೆ. ವ್ಯಕ್ತಿಯೋರ್ವ ನಾನು 11 ವರ್ಷವಿದ್ದಾಗ ಮೆಕ್‌ಕ್ಯಾರಿಕ್‌ ಅವರಿಂದ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದೆ ಎಂದು ಹೇಳಿದ್ದ. ಇದಾದ ನಂತರ ಮೆಕ್‌ಕ್ಯಾರಿಕ್‌ ವಿರುದ್ಧ ತನಿಖೆ ಆರಂಭಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಮತ್ತೋರ್ವ ಸೆಮಿನರಿಯನ್‌ ನನ್ನ ಮೇಲೂ ದೌರ್ಜನ್ಯವಾಗಿದೆ ಎಂದು ದೂರು ನೀಡಿದ್ದ. ಹೀಗಿದ್ದೂ ಕಳೆದ ಜೂನ್‌ನಲ್ಲಷ್ಟೇ ಮ್ಯಾಕ್‌ಕ್ಯಾರಿಕ್‌ರನ್ನು ಅಧಿಕೃತ ಕೆಲಸಗಳಿಂದ ದೂರ ಇಡಲಾಗಿತ್ತು. ಇದಾದ ನಂತರ ಮೊನ್ನೆ ಜುಲೈನಲ್ಲಷ್ಟೇ ಮೆಕ್‌ಕ್ಯಾರಿಕ್‌ ತಮ್ಮ 88ನೇ ವಯಸ್ಸಿನಲ್ಲಿ ಕಾರ್ಡಿನಲ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹಲವು ವರ್ಷ ಹಿಂದೆಯೇ ಆರೋಪ ಕೇಳಿ ಬಂದ ಹೊರತಾಗಿಯೂ ಅವರನ್ನು ಇಷ್ಟು ದೀರ್ಘ ಕಾಲ ಹುದ್ದೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಟ್ಟ ಆರೋಪವನ್ನು ಪೋಪ್‌ ಎದುರಿಸುತ್ತಿದ್ದಾರೆ.

ಇದೀಗ ತಮ್ಮ ಮೇಲಿನ ಆರೋಪದ ಬಗ್ಗೆ ಪೋಪ್‌ ಫ್ರಾನ್ಸಿಸ್‌ ನೀಡಲಿರುವ ಪ್ರತಿಕ್ರಿಯೆಗೆ ಅಸಂಖ್ಯಾತ ವ್ಯಾಟಿಕನ್‌ ಅನುಯಾಯಿಗಳು ಕಾತರದಿಂದ ಕಾಯುತ್ತಿದ್ದಾರೆ.