
ಪಾಕ್ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸಂಚಕಾರ; ದಶಕದಲ್ಲಿ 1,500 ಶಾಲೆಗಳ ಮೇಲೆ ದಾಳಿ
ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹತ್ತಿಕ್ಕುವ ಕೃತ್ಯಗಳು ನಡೆಯುತ್ತಿವೆ. ಇತ್ತೀಚೆಗೆ ಬಾಲಕಿಯರ 12 ಶಾಲೆಗಳಿಗೆ ಬೆಂಕಿ ಹಾಕಲಾಗಿದೆ.
ಪಾಕಿಸ್ತಾನದಲ್ಲಿ ಔಪಚಾರಿಕ ಶಿಕ್ಷಣವನ್ನು ಹತ್ತಿಕ್ಕುವ ಪ್ರಯತ್ನಗಳು ಮುಂದುವರಿದಿವೆ. ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುವ ಕೃತ್ಯಗಳು ಮತ್ತೆ ಮತ್ತೆ ನಡೆಯುತ್ತಲೇ ಇವೆ. ಕಳೆದ 10 ವರ್ಷಗಳಲ್ಲಿ ಪಾಕಿಸ್ತಾನದಲ್ಲಿ ಸುಮಾರು 1,500 ಶಾಲೆಗಳ ಮೇಲೆ ದಾಳಿ ನಡೆಸಲಾಗಿದೆ ಎನ್ನುತ್ತವೆ ವರದಿಗಳು.
ನೆರೆ ರಾಷ್ಟ್ರದಲ್ಲಿ ಬಾಲಕಿಯರ ಶಿಕ್ಷಣವನ್ನು ಹತ್ತಿಕ್ಕುವ ಹೊಸ ಘಟನೆಗಳು ವರದಿಯಾಗಿವೆ. ಪಾಕಿಸ್ತಾನದ ಗಿಲ್ಗಿಟ್- ಬಲ್ತಿಸ್ತಾನ್ ಪ್ರಾಂತ್ಯದಲ್ಲಿ ಗುರುವಾರ ರಾತ್ರೋರಾತ್ರಿ 12 ಬಾಲಕಿಯರ ಶಾಲೆಗಳ ಮೇಲೆ ದಾಳಿ ನಡೆಸಿರುವ ಅಪರಿಚಿತರು ಇಷ್ಟೂ ಶಾಲೆಗಳಿಗೆ ಬೆಂಕಿ ಇಟ್ಟಿದ್ದಾರೆ.
ದೈಮರ್ ಜಿಲ್ಲೆಯ ಹಲವು ಬಾಲಕಿಯರ ಶಾಲೆಗಳ ಮೇಲೆ ದಾಳಿ ನಡೆದಿರುವುದನ್ನು ಪೊಲೀಸರು ಒಪ್ಪಿಕೊಂಡಿದ್ದಾರೆ. ಎರಡು ಶಾಲೆಗಳನ್ನು ಕಿಡಿಗೇಡಿಗಳು ಬಾಂಬ್ ಇಟ್ಟು ಸ್ಫೋಟಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಾಲಕಿಯರ ಶಾಲೆಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಹಾಗೂ ಬಾಲಕಿಯರ ಶಿಕ್ಷಣಕ್ಕೆ ಸರಕಾರ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
ಪಾಕಿಸ್ತಾನದಲ್ಲಿ ಶಸ್ತ್ರಧಾರಿಗಳಿಂದ ಬಾಲಕಿಯರ ಶಾಲೆಗಳ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಬಾಲಕಿಯರ ಶಿಕ್ಷಣವನ್ನು ಹತ್ತಿಕ್ಕಲು ಪಾಕಿಸ್ತಾನದಲ್ಲಿ ಸಾಂಪ್ರದಾಯಿಕ ಮನಸ್ಥಿತಿಗಳು ಪ್ರಯತ್ನಿಸುತ್ತಲೇ ಇವೆ. ಬಾಲಕಿಯರ ಶಾಲೆಗಳು, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ.
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸುಫ್ಝೈ ಮೇಲೆ ಗುಂಡಿನ ದಾಳಿ ನಡೆಯಲೂ ಇಂಥ ಮನಸ್ಥಿತಿಯೇ ಕಾರಣ. ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಶಿಕ್ಷಣ ಹಕ್ಕುಗಳ ಪರವಾಗಿ ಮಲಾಲಾ ಆಂದೋಲನ ರೂಪಿಸಿದ್ದರು. 2012ರಲ್ಲಿ ಮಲಾಲಾ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು.

ಉತ್ತರ ಪಾಕಿಸ್ತಾನದ ಹಲವು ಕಡೆಗಳಲ್ಲಿ ಬಾಲಕಿಯರ ಶಾಲೆಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಚಿಲಾಸ್ ಪ್ರಾಂತ್ಯದಲ್ಲಿ 2011ರಲ್ಲಿ ಒಟ್ಟು ನಾಲ್ಕು ಬಾಲಕಿಯರ ಶಾಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಎರಡು ಶಾಲೆಗಳನ್ನು ಉಗ್ರರು ಸ್ಫೋಟಿಸಿದ್ದರೆ, ಎರಡು ಶಾಲೆಗಳಿಗೆ ಅಪರಿಚಿತರು ಬೆಂಕಿ ಇಟ್ಟಿದ್ದರು.
2004ರಲ್ಲಿ ಎಂಟು ಬಾಲಕಿಯರ ಶಾಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಖೈಬರ್ ಪ್ರಾಂತ್ಯದಲ್ಲಿ ಕೂಡಾ ಉಗ್ರರು ಶಿಕ್ಷಣ ಸಂಸ್ಥೆಗಳಿಗೆ ಬೆಂಕಿ ಹಾಕಿದ್ದರು. ಪಾಕಿಸ್ತಾನದ ಉತ್ತರ ಭಾಗ ಹಾಗೂ ಬುಡಕಟ್ಟು ಪ್ರಾಂತ್ಯಗಳಲ್ಲಿ ಶಿಕ್ಷಣ ಹಕ್ಕನ್ನು ಕಸಿಯುವ ಕೃತ್ಯಗಳು ನಡೆಯುತ್ತಲೇ ಇವೆ.
ಶಾಲೆಗಳಿಗೆ ಬೆಂಕಿ ಇಡುವ ಮೂಲಕ ಮಕ್ಕಳ ಶಿಕ್ಷಣವನ್ನು ತಡೆಯುವ ಮೂಲಭೂತವಾದಿ ಮನಸ್ಸುಗಳು ಪಾಕಿಸ್ತಾನದಲ್ಲಿ ಇನ್ನೂ ‘ಚಟುವಟಿಕೆ’ಯಿಂದ ಇವೆ ಎಂಬುದಕ್ಕೆ ಇತ್ತೀಚಿನ 12 ಶಾಲೆಗಳಿಗೆ ಬೆಂಕಿ ಇಟ್ಟಿರುವ ಘಟನೆ ಒಂದು ಉದಾಹರಣೆಯಷ್ಟೆ.