samachara
www.samachara.com
ಪಾಕಿಸ್ತಾನ ಚುನಾವಣೆ: ಹಿಂಸಾಚಾರದೊಂದಿಗೆ ಮತದಾನ ಅಂತ್ಯ, ಫಲಿತಾಂಶಕ್ಕೆ ಕ್ಷಣಗಣನೆ
ವಿದೇಶ

ಪಾಕಿಸ್ತಾನ ಚುನಾವಣೆ: ಹಿಂಸಾಚಾರದೊಂದಿಗೆ ಮತದಾನ ಅಂತ್ಯ, ಫಲಿತಾಂಶಕ್ಕೆ ಕ್ಷಣಗಣನೆ

ಹಿಂಸೆ, ವಿವಾದ, ಸೇನೆಯ ಹಸ್ತಕ್ಷೇಪಗಳ ನಡುವೆ ಕೊನೆಗೂ ಪ್ರಜಾಪ್ರಭುತ್ವದ ‘ಪವಿತ್ರ’ ಚುನಾವಣಾ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ. ಇಂದು ರಾತ್ರಿ 2 ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳಲಿದೆ.

ಹಲವು ಕಾರಣಗಳಿಗೆ ಪ್ರಾಮುಖ್ಯತೆ ಪಡೆದಿರುವ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತದಾನ ಸಂಜೆ 6 ಗಂಟೆಗೆ ಅಂತ್ಯಗೊಂಡಿದೆ. ಸಂಸತ್ ಮತ್ತು ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತದಾನ ಮುಕ್ತಾಯಗೊಳ್ಳುತ್ತಿದ್ದಂತೆ ಮತ ಎಣಿಕೆ ಆರಂಭವಾಗಿದೆ. ಇಂದು ರಾತ್ರಿ 2 ಗಂಟೆ ವೇಳೆಗೆ ಫಲಿತಾಂಶ ಹೊರ ಬೀಳುವ ನಿರೀಕ್ಷೆ ಇದ್ದು, ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.

ಒಟ್ಟು 342 ಸದಸ್ಯ ಬಲದ ಪಾಕಿಸ್ತಾನ ಸಂಸತ್‌ನಲ್ಲಿ 272 ಸ್ಥಾನಗಳಿಗೆ ಇಂದು ನೇರ ಚುನಾವಣೆ ನಡೆಯಿತು. ಉಳಿದ 70 ಸ್ಥಾನಗಳಲ್ಲಿ 60 ಮಹಿಳೆಯರಿಗೆ ಮತ್ತು 10 ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾಗಿವೆ. ಒಟ್ಟು 272ರಲ್ಲಿ ಎರಡು ಕ್ಷೇತ್ರಗಳ ಚುನಾವಣೆಯನ್ನು ಚುನಾವಣಾ ಆಯೋಗ ಮುಂದೂಡಿರುವುದರಿಂದ ಅಂತಿಮವಾಗಿ 270 ಸ್ಥಾನಗಳಿಗೆ ಚುನಾವಣೆ ನಡೆದಿದೆ.

ಪಕ್ಷವೊಂದು ಅಧಿಕಾರಕ್ಕೇರಲು ನೇರ ಚುನಾವಣೆ ನಡೆದ 270 ಕ್ಷೇತ್ರಗಳಲ್ಲಿ ಕನಿಷ್ಟ 136ರಲ್ಲಿ ಗೆಲುವು ಸಾಧಿಸಬೇಕಾಗಿದೆ. ಒಂದೊಮ್ಮೆ ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದಲ್ಲಿ, ಮೈತ್ರಿ ಪಕ್ಷಕ್ಕೆ ಸರಕಾರ ರಚನೆಗೆ ಅವಕಾಶ ನೀಡಲಾಗುತ್ತದೆ.

ಇಂದಿನ ಚುನಾವಣೆಯಲ್ಲಿ 10.5 ಕೋಟಿ ಜನರು ಮತದಾನದ ಹಕ್ಕು ಹೊಂದಿದ್ದರು. ಇವರಲ್ಲಿ 5.9 ಕೋಟಿ ಪುರುಷರು ಮತ್ತು 4.7 ಕೋಟಿ ಮಹಿಳೆಯರಾಗಿದ್ದರು. ಇವರಲ್ಲಿ ಎಷ್ಟು ಜನ ಮತ ಚಲಾಯಿಸಿದ್ದಾರೆ ಎಂಬ ವಿವರಗಳು ತಿಳಿದು ಬಂದಿಲ್ಲ. ಇಂದಿನ ಚುನಾವಣೆಯಲ್ಲಿ ರಾಜಕಾರಣಿಗಳು, ಚಿತ್ರ ತಾರೆಯರು, ಕ್ರಿಕೆಟಿಗರು, ಧಾರ್ಮಿಕ ಮುಖಂಡರು ಸೇರಿ ಅಸಂಖ್ಯಾತ ಜನರು ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇವರೆಲ್ಲಾ ಬ್ಯಾಲೆಟ್‌ ಪೇಪರ್‌ನಲ್ಲಿ ಮತ ಚಲಾಯಿಸಿದ್ದು, 3459 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆ ಸೇರಿದೆ. ಇದೀಗ ಈ ಮತಪತ್ರಗಳ ಎಣಿಕೆ ಕಾರ್ಯ ಆರಂಭವಾಗಿದೆ.

ಪ್ರಮುಖ ಪಕ್ಷಗಳು

ಒಟ್ಟು ಮೂರು ಪಕ್ಷಗಳು ಇವತ್ತಿನ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧಿಗಳಾಗಿವೆ. ಜೈಲು ಸೇರಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್ ಅವರ ‘ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್‌’ (ಪಿಎಂಎಲ್‌-ಎನ್) ಕಣದಲ್ಲಿದೆ. ಷರೀಫ್ ತಮ್ಮ ಶೆಹಬಾಜ್‌ ಷರೀಫ್ ನೇತೃತ್ವದಲ್ಲಿ ಪಕ್ಷ ಚುನಾವಣೆಯನ್ನು ಎದುರಿಸಿದೆ. ಇನ್ನು ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್ ಅವರ ಪಾಕಿಸ್ತಾನ್ ತೆಹ್ರಿಕ್‌-ಇ-ಇನ್ಸಾಫ್ (ಪಿಟಿಐ) ಕಣದಲ್ಲಿರುವ ಮತ್ತೊಂದು ಪಕ್ಷವಾಗಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಷರೀಫ್ ಮತ್ತು ಖಾನ್‌ ಪಕ್ಷದ ನಡುವೆ ಪೈಪೋಟಿ ಇದೆ. ಇದರಲ್ಲಿ ಇಮ್ರಾನ್‌ ಖಾನ್‌ ಒಂದು ಹೆಜ್ಜೆ ಮುಂದೆ ಇದ್ದಾರೆ.

ಇನ್ನು ಮಾಜಿ ಪ್ರಧಾನಿ ಬೆನೆಜೀರ್‌ ಭುಟ್ಟೋ ಮತ್ತು ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಝರ್ದಾರಿ ಪುತ್ರ ಬಿಲಾವಲ್‌ ಭುಟ್ಟೋ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ (ಪಿಪಿಪಿ)ಯು ಕಣದಲ್ಲಿದೆ. ಗೆಲ್ಲುವ ಲಕ್ಷಣಗಳು ಬಿಲಾವಲ್‌ ಪಾಲಿಗೆ ಇಲ್ಲವಾದರೂ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಮೈತ್ರಿಕೂಟ ಸೇರುವ ಅವಕಾಶ ಅವರಿಗಿದೆ.

ಹಿಂಸಾಚಾರದ ಚುನಾವಣೆ

ಈ ಬಾರಿ ಪಾಕಿಸ್ತಾನದ ಚುನಾವಣೆ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಯಿತು. ಚುನಾವಣೆಗೂ ಮೊದಲು ಹಲವು ಬಾಂಬ್ ಸ್ಫೋಟಗಳು ಸಂಭವಿಸಿ ರಾಜಕೀಯ ಪಕ್ಷದ ಮುಖಂಡರು, ನೂರಾರು ಸಾರ್ವಜನಿಕರನ್ನು ಬಲಿ ಪಡೆಯಿತು. ಹಿಂಸಾಚಾರಕ್ಕೆ ಇಂದಿನ ಮತದಾನವೂ ಹೊರತಾಗಿರಲಿಲ್ಲ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾದಲ್ಲಿ ಮತದಾನ ಕೇಂದ್ರದ ಹೊರಗೆ ನಡೆದ ಬಾಂಬ್ ಸ್ಫೋಟದಲ್ಲಿ 31 ಜನರು ಸಾವನ್ನಪ್ಪಿ 30ಕ್ಕೂ ಹೆಚ್ಚು ಜನರು ಗಾಯಗೊಂಡರು.

ಇಂದಿನ ಚುನಾವಣೆಗೆ 8 ಲಕ್ಷಕ್ಕೂ ಅಧಿಕ ಭದ್ರತಾ ಪಡೆಗಳನ್ನು ಸುರಕ್ಷತೆಗಾಗಿ ನಿಯೋಜಿಸಲಾಗಿತ್ತು. ಹೀಗಿದ್ದೂ ಲರ್ಕಾನಾ, ಖುಜ್ದಾರ್‌, ಸ್ವಬಿ, ಕೊಹಿಸ್ತಾನ್, ಬುಲೇದ ಸೇರಿದಂತೆ ಹಲವೆಡೆ ಮತಗಟ್ಟೆಗಳ ಮೇಲೆ ಗ್ರೆನೇಡ್‌ ದಾಳಿ, ಉಗ್ರರ ದಾಳಿ ನಡೆದಿದೆ. ಹಲವು ಕಡೆಗಳಲ್ಲಿ ಹಿಂಸಾಚಾರ ನಡೆದಿದ್ದು, ಒಟ್ಟಾರೆ ಚುನಾವಣಾ ಪ್ರಕ್ರಿಯೆ ಜನ ಸಾಮಾನ್ಯರ ಬಲಿಯೊಂದಿಗೆ ಮತ ಎಣಿಕೆಯತ್ತ ಸಾಗಿದೆ.

ವಿವಾದಗಳ ಮೂಟೆ

ಈ ಬಾರಿಯ ಚುನಾವನೆಯಲ್ಲಿ ದೊಡ್ಡ ಮಟ್ಟಕ್ಕೆ ಸೇನೆಯ ಹೆಸರು ಕೇಳಿ ಬಂದಿತ್ತು. ಪಾಕಿಸ್ತಾನ ಚುನಾವಣೆ ಸ್ವತಂತ್ರ ಮತ್ತು ನ್ಯಾಯ ಸಮ್ಮತವಾಗಿಲ್ಲ. ಪ್ರತೀ ಹಂತದಲ್ಲೂ ಸೇನೆ ಹಸ್ತಕ್ಷೇಪ ನಡೆಸಿದೆ ಎಂಬ ಆರೋಪ ಕೊನೆಯವರೆಗೂ ಕೇಳಿ ಬಂತು.

ಚುನಾವಣೆ ಮುಗಿಯುವ ಹೊತ್ತಿಗೆ ಇಮ್ರಾನ್‌ ಖಾನ್‌ ಮತದಾನ ಮಾಡಿದ ವಿಧಾನ ವಿವಾದಕ್ಕೆ ಕಾರಣವಾಯಿತು. ಜನರು ಮತ್ತು ಕ್ಯಾಮೆರಾಗಳ ಮುಂದೆ ಇಮ್ರಾನ್ ಖಾನ್ ಮತ ಹಾಕಿದ್ದರು. ಇದು ಪಾಕಿಸ್ತಾನದ ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿದ್ದು, ಅವರನ್ನು ವಿಚಾರಣೆಗೆ ಕರೆಯಲಾಗಿದೆ. ಇದಲ್ಲದೆ ನೂರಾರು ದೂರುಗಳು, ಆಕ್ಷೇಪಗಳು ಚುನಾವಣಾ ಆಯೋಗಕ್ಕೆ ಹರಿದು ಬಂದಿವೆ.

ಹೀಗೆ ಹಿಂಸೆ, ವಿವಾದ, ಸೇನೆಯ ಹಸ್ತಕ್ಷೇಪಗಳ ನಡುವೆ ಕೊನೆಗೂ ಪ್ರಜಾಪ್ರಭುತ್ವದ ‘ಪವಿತ್ರ’ ಚುನಾವಣಾ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದೆ. ಇಂದು ರಾತ್ರಿ 2 ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳಲಿದ್ದು, ಫಲಿತಾಂಶ ಮತ್ತು ಚುನಾವಣೆಯ ಇನ್ನಿತರ ಸುದ್ದಿಗಳಿಗಾಗಿ ನಿರೀಕ್ಷಿಸಿ… ‘ಸಮಾಚಾರ’.