ಮೊಸಳೆ ದಾಳಿಗೆ ಒಬ್ಬ ಮನುಷ್ಯ ಬಲಿ; ಮನುಷ್ಯನ ದಾಳಿಗೆ 300 ಮೊಸಳೆ ಬಲಿ!
ವಿದೇಶ

ಮೊಸಳೆ ದಾಳಿಗೆ ಒಬ್ಬ ಮನುಷ್ಯ ಬಲಿ; ಮನುಷ್ಯನ ದಾಳಿಗೆ 300 ಮೊಸಳೆ ಬಲಿ!

ಗ್ರಾಮಸ್ಥರ ‘ಸೇಡಿ’ಗೆ ಇಂಡೋನೇಷ್ಯಾದಲ್ಲಿ ಸುಮಾರು 300 ಮೊಸಳೆಗಳು ಪ್ರಾಣ ಬಿಟ್ಟಿವೆ.

ಮೊಸಳೆ ದಾಳಿಗೆ ಬಲಿಯಾಗಿದ್ದ ಒಬ್ಬ ಮನುಷ್ಯನಿಗಾಗಿ ಸೇಡು ತೀರಿಸಿಕೊಳ್ಳಲು ಗ್ರಾಮಸ್ಥರು ಸುಮಾರು 300 ಮೊಸಳೆಗಳನ್ನು ಹೊಡೆದು ಕೊಂದಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.

ಇಂಡೋನೇಷ್ಯಾದ ಪಶ್ಚಿಮ ಪಪುವಾ ಪ್ರಾಂತ್ಯದ ಮೊಸಳೆ ತಳಿ ಸಂವರ್ಧನಾ ಕೇಂದ್ರದಲ್ಲಿ ಹುಲ್ಲು ಕುಯ್ಯಲು ಹೋಗಿದ್ದ 48 ವರ್ಷದ ವ್ಯಕ್ತಿ ಮೊಸಳೆ ಬಾಯಿಗೆ ಸಿಕ್ಕಿ ಬಲಿಯಾಗಿದ್ದ.

ಶನಿವಾರ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿರುವ ಗ್ರಾಮಸ್ಥರು ತಳಿ ಸಂವರ್ಧನಾ ಕೇಂದ್ರಕ್ಕೆ ನುಗ್ಗಿ ಸುಮಾರು 300 ಮೊಸಳೆಗಳನ್ನು ಸುತ್ತಿಗೆ, ಗುದ್ದಲಿ ಮತ್ತಿತರ ಆಯುಧಗಳಿಂದ ಹೊಡೆದು ಹಾಕಿದ್ದಾರೆ.

ಮೊಸಳೆ ದಾಳಿಗೆ ಒಬ್ಬ ಮನುಷ್ಯ ಬಲಿ; ಮನುಷ್ಯನ ದಾಳಿಗೆ 300 ಮೊಸಳೆ ಬಲಿ!

ಈ ಕೇಂದ್ರದಲ್ಲಿ ಉಪ್ಪು ನೀರಿನ ಮೊಸಳೆಗಳು ಹಾಗೂ ಅಪರೂಪದ ಮೊಸಳೆ ಸಂಸತಿಯ ತಳಿ ಅಭಿವೃದ್ಧಿ ಪಡಿಸಲಾಗುತ್ತಿತ್ತು. ಈಗ ಅಪರೂಪದ ಮೊಸಳೆ ಸಂತತಿಯ ನೂರಾರು ಮೊಸಳೆಗಳು ಬಲಿಯಾಗಿವೆ. ತಳಿ ಸಂವರ್ಧನಾ ಕೇಂದ್ರಕ್ಕೆ ಸೂಕ್ತ ಭದ್ರತೆ ಇಲ್ಲದಿರುವುದು ಈ ಮಾನವ- ವನ್ಯಜೀವಿ ಸಂಘರ್ಷಕ್ಕೆ ಕಾರಣ ಎನ್ನಲಾಗಿದೆ.

ಸದ್ಯ ಇಂಡೋನೇಷ್ಯಾ ಪೊಲೀಸರು ಪ್ರಕರಣವನ್ನೇನೋ ದಾಖಲಿಸಿಕೊಂಡಿದ್ದಾರೆ. ಆದರೆ, ಮನುಷ್ಯನ ಸಿಟ್ಟಿಗೆ ನೂರಾರು ಮೊಸಳೆಗಳು ಪ್ರಾಣ ಬಿಡಬೇಕಾಗಿ ಬಂದಿರುವುದು ಮಾತ್ರ ದುರಂತ.