samachara
www.samachara.com
ಬಾಂಬ್‌, ಬಂಧನ, ಭಯೋತ್ಪಾದನೆ; ಪಾಕಿಸ್ತಾನದ ರಕ್ತಸಿಕ್ತ ಚುನಾವಣೆ
ವಿದೇಶ

ಬಾಂಬ್‌, ಬಂಧನ, ಭಯೋತ್ಪಾದನೆ; ಪಾಕಿಸ್ತಾನದ ರಕ್ತಸಿಕ್ತ ಚುನಾವಣೆ

ಪಾಕಿಸ್ತಾನದಲ್ಲಿ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಮೇಲಾಟಗಳ ಜತೆಗೆ ಉಗ್ರರ ಕೃತ್ಯಗಳೂ ಹೆಚ್ಚುತ್ತಿವೆ. ಶುಕ್ರವಾರ ನಡೆದ ಉಗ್ರರ ದಾಳಿಯಲ್ಲಿ 130 ಜನ ಮೃತಪಟ್ಟಿದ್ದಾರೆ.

Team Samachara

ಚುನಾವಣೆ ಸಮೀಪಿಸುತ್ತಿದ್ದಂತೆ ಪಾಕಿಸ್ತಾನ ಅನೀರಿಕ್ಷಿತ ಬೆಳವಣಿಗೆಗಳನ್ನು ಕಾಣುತ್ತಿದೆ. ಮಾಜಿ ಪ್ರಧಾನಿಗೆ ಜೈಲು ಶಿಕ್ಷೆ, ಬಾಂಬ್‌ ದಾಳಿಗಳು ಪಾಕಿಸ್ತಾನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಸುದ್ದಿ ಕೇಂದ್ರಕ್ಕೆ ತಂದು ನಿಲ್ಲಿಸಿವೆ.

ಈ ತಿಂಗಳ 25ಕ್ಕೆ ಪಾಕಿಸ್ತಾನದಲ್ಲಿ ಮತದಾನ ನಡೆಯಲಿದೆ. ಆದರೆ, ನೆರೆ ರಾಷ್ಟ್ರದಲ್ಲಿ ರಾಜಕೀಯ ದ್ವೇಷ, ಕೋರ್ಟ್‌ ಆದೇಶ, ಬಾಂಬ್‌ ದಾಳಿ, ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಮತ್ತು ಪುತ್ರಿ ಮರಿಯಮ್ ಬಂಧನ ಸಿನಿಮೀಯ ರೀತಿಯಲ್ಲಿ ಘಟಿಸುತ್ತಿದೆ.

ಪಾಕಿಸ್ತಾನದಲ್ಲಿ ಶುಕ್ರವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ ಸುಮಾರು 130 ಮಂದಿ ಮೃತಪಟ್ಟಿದ್ದಾರೆ. ಶುಕ್ರವಾರದ ಪ್ರಾರ್ಥನೆ ಹಾಗೂ ಚುನಾವಣಾ ರ್ಯಾಲಿಗಳನ್ನು ಗುರಿಯಾಗಿಸಿಕೊಂಡೇ ಈ ದಾಳಿಗಳು ನಡೆದಿವೆ.

ಬಲೂಚಿಸ್ತಾನದ ಬಿಎಪಿ ಪಕ್ಷದ ನಾಯಕ ಸಿರಾಜ್‌ ರೈಸಾನಿ ಅವರನ್ನು ಗುರಿಯಾಗಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಗಾಯಗೊಡಿದ್ದ ಸಿರಾಜ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಶುಕ್ರವಾರ ಎರಡು ಕಡೆಗಳಲ್ಲಿ ನಡೆದ ದಾಳಿಯಲ್ಲಿ ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

ಇನ್ನು ಲಂಡನ್‌ನಿಂದ ಹೊರಟು ಅಬುದಾಬಿ ಮಾರ್ಗವಾಗಿ ಶುಕ್ರವಾರ ಲಾಹೋರ್‌ಗೆ ಬಂದ ನವಾಜ್‌ ಷರೀಫ್‌ ಮತ್ತು ಮರಿಯಮ್‌ ಇಬ್ಬರನ್ನೂ ವಿಮಾನದಿಂದಲೇ ಬಂಧಿಸಲಾಗಿದೆ. ಲಾಹೋರ್‌ ವಿಮಾನ ನಿಲ್ದಾಣಕ್ಕೆ ಬಂದ ಈ ಇಬ್ಬರನ್ನೂ ಅರೆಸೇನಾ ಪಡೆಯ ಸಿಬ್ಬಂದಿ ವಿಮಾನದೊಳಕ್ಕೆ ತೆರಳಿ ವಶಕ್ಕೆ ಪಡೆದಿದ್ದಾರೆ.

ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ನವಾಜ್‌ ಷರೀಫ್‌ಗೆ 10 ವರ್ಷ ಮತ್ತು ಮರಿಯಮ್‌ಗೆ 7 ವರ್ಷ ಜೈಲು ಶಿಕ್ಷೆಯಾಗಿದೆ. ಬಂಧನದ ಬಳಿಕ ಇಬ್ಬರನ್ನೂ ರಾವಲ್ಪಿಂಡಿಯ ಅದಿಅಲಾ ಜೈಲಿನಲ್ಲಿ ಇರಿಸಲಾಗಿದೆ. ಇಬ್ಬರಿಗೂ ‘ಬಿ’ ದರ್ಜೆಯ ಸೌಕರ್ಯಗಳನ್ನು ಜೈಲಿನಲ್ಲಿ ಒದಗಿಸಲಾಗಿದೆ. ಆರೋಪಿಗಳ ಸ್ವಂತ ಖರ್ಚಿನಲ್ಲಿ ಎಸಿ, ಟಿವಿ ಸೌಕರ್ಯ ಹೊಂದಲು ಅವಕಾಶ ನೀಡಲಾಗಿದೆ.

ಹಿಂದಿನ ಚುನಾವಣೆಯಲ್ಲಿ ನವಾಜ್‌ ಷರಿಫ್‌ ನೇತೃತ್ವದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಭರ್ಜರಿ ಜಯ ಕಂಡಿತ್ತು. ಈ ಬಾರಿ ಷರೀಫ್‌ ಪುತ್ರಿಯನ್ನು ರಾಜಕೀಯವಾಗಿ ಮುನ್ನೆಲೆಗೆ ತರುವ ಪ್ರಯತ್ನ ನಡೆದಿತ್ತು. ಆದರೆ, ಪನಾಮಾ ಪೇಪರ್ಸ್‌ ಪ್ರಕರಣದಲ್ಲಿ ತಂದೆ- ಮಗಳು ಇಬ್ಬರೂ ಈಗ ಜೈಲು ಪಾರಾಗಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನವಾಜ್‌ ಷರೀಫ್‌ ಸೋದರ ಷಹಬಾಸ್‌ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ನ ಮುಂದಾಳತ್ವ ವಹಿಸಿದ್ದಾರೆ. ಆದರೆ, ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌-ಇ-ಇನ್ಸಾಫ್ (ಪಿಟಿಐ) ಪಕ್ಷದ ಅಬ್ಬರದ ಮಧ್ಯೆ ಮುಸ್ಲಿಂ ಲೀಗ್‌ ಗೆಲುವು ಈ ಬಾರಿ ಸುಲಭವಿಲ್ಲ.

ಕಳೆದ ಬಾರಿಯ ಚುನಾವಣೆಯಲ್ಲಿ ಪಿಟಿಐ ಪಂಜಾಬ್‌ ಪ್ರಾಂತ್ಯದಲ್ಲಿ ಮುನ್ನಡೆ ಸಾಧಿಸಿತ್ತು. ನವಾಜ್‌ ಷರೀಫ್‌ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡಿಕೊಂಡು ಬಂದ ಪಿಟಿಐ, ಈ ಬಾರಿ ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಚುನಾವಣೆಗೆ ಇಳಿದಿದೆ.

ಚುನಾವಣೆ ಸಮೀಪಿಸುತ್ತಿರುವುದರಿಂದ ಪಾಕಿಸ್ತಾನದಲ್ಲಿ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗಿದೆ. ಮತ್ತೊಂದೆಡೆ ನವಾಜ್‌ ಷರೀಫ್‌ ಬೆಂಬಲಿಗರನ್ನು ದಂಡುದಂಡಾಗಿ ಬಂಧಿಸಿ ಜೈಲಿಗೆ ತಳ್ಳುವ ಕೆಲಸವೂ ನಡೆದಿದೆ. ಚುನಾವಣೆ ಮುಗಿದು ಸರಕಾರ ರಚನೆಯಾಗುವ ವೇಳೆಗೆ ಪಾಕಿಸ್ತಾನದಲ್ಲಿ ಇನ್ನಷ್ಟು ರಕ್ತಪಾತವಾಗುವುದರಲ್ಲಿ ಅನುಮಾನವಿಲ್ಲ.