samachara
www.samachara.com
ಕಾರ್ಟಲ್‌ಗಳಿಂದ ಕಂಗೆಟ್ಟ ಮೆಕ್ಸಿಕೋ ಜನ ಎಡಪಂಥೀಯ ನಾಯಕನ ಕೈಗೆ ದೇಶ ಕೊಟ್ಟರು
ವಿದೇಶ

ಕಾರ್ಟಲ್‌ಗಳಿಂದ ಕಂಗೆಟ್ಟ ಮೆಕ್ಸಿಕೋ ಜನ ಎಡಪಂಥೀಯ ನಾಯಕನ ಕೈಗೆ ದೇಶ ಕೊಟ್ಟರು

ದಶಕಗಳ ಕಾಲದಿಂದಲೂ ಕೂಡ ಎಡಪಂತೀಯತೆಗೆ ವಿರುದ್ಧವಾಗಿ ನಿಂತಿರುವ ಅಮೆರಿಕಾದ ಮಗ್ಗಲ ರಾಷ್ಟ್ರ ಮೆಕ್ಸಿಕೋದಲ್ಲೇ ಈಗ ಎಡಪಂತೀಯ ಚಳವಳಿ ಹಿನ್ನೆಲೆಯ ಲೋಪೆಜ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

samachara

samachara

ಎಡಪಂಥೀಯ ಧೋರಣೆಯುಳ್ಳ ಆಂಡ್ರೆಸ್‌ ಮ್ಯಾನುಯೆಲ್‌ ಲೋಪೆಜ್‌ ಮೆಕ್ಸಿಕೋ ರಾಷ್ಟ್ರದ ಅಧ್ಯಕ್ಷೀಯ ಹುದ್ದೆಗೆ ಏರಿದ್ದಾರೆ. ಲೋಪೇಜ್‌ರ ಕಳೆದ 13 ವರ್ಷಗಳ ಸತತ ಪ್ರಯತ್ನದ ಫಲವಾಗಿ ಮೆಕ್ಸಿಕನ್‌ ಪ್ರಜೆಗಳು ಅಧ್ಯಕ್ಷೀಯ ಚುನಾವಣೆಯಲ್ಲಿ ಲೋಪೆಜ್‌ರ ಕೈ ಹಿಡಿದಿದ್ದಾರೆ. ಮೊದಲೇ ಡ್ರಗ್ ‘ಕಾರ್ಟಲ್‌’ಗಳಿಂದ ತುಂಬಿ ಹೋಗಿರುವ ದೇಶದಲ್ಲಿ ಕಮ್ಯುನಿಸ್ಟ್ ಚಿಂತನೆ ಹಿನ್ನೆಲೆಯ ಲೋಪೆಜ್‌ ಅಧಿಕಾರಕ್ಕೆ ಬಂದಿದ್ದಾರೆ. 

ಮೆಕ್ಸಿಕೋದಲ್ಲಿ ‘ಎಎಂಎಲ್‌ಓ’ ಎಂಬ ಹೆಸರಿನಿಂದ ಖ್ಯಾತರಾಗಿರುವ 64 ವರ್ಷ ಪ್ರಾಯದ ಆಂಡ್ರೆಸ್‌ ಮ್ಯಾನುಯೆಲ್‌ ಲೋಪೆಜ್‌, ಕಳೆದ ಎರಡು ಬಾರಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದರಾದರೂ ಗೆಲ್ಲಲು ಸಾಧ್ಯವಾಗಿರಲಿಲ್ಲ. 2013ರಲ್ಲಿ ಹೃದಯಾಘಾತಕ್ಕೂ ಒಳಗಾಗಿದ್ದರು. ಮೆಕ್ಸಿಕೋದಲ್ಲಿನ ಸಮಸ್ಯೆಗಳನ್ನು ನಿಭಾಯಿಸಲು ಲೋಪೆಜ್‌ ಅಸಮರ್ಥರು ಎಂಬ ವಿಮರ್ಶೆಗಳನ್ನೂ ತೇಲಿಬಿಡಲಾಗಿತ್ತು.

ಆದಾಗ್ಯೂ ಲೋಪೆಜ್‌ ತಮ್ಮ ನಂಬಿಕೆಯನ್ನು ಕಳೆದುಕೊಂಡಿರಲಿಲ್ಲ. ಚುನಾವಣೆಗೂ ಮುಂಚೆ ಮೆಕ್ಸಿಕೋದ ದಕ್ಷಿಣ ಭಾಗದಲ್ಲಿರುವ ಚಿಕ್ಕ ಪಟ್ಟಣ ಸಿಂಟಾಲಪಾದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ್ದ ಅವರು, “ಮೆಕ್ಸಿಕೋದಲ್ಲಿ ಭ್ರಷ್ಟಾಚಾರಕ್ಕೆ ಮಟ್ಟ ಹಾಕಲು ಸಾಧ್ಯವಾಗುವುದಾದರೆ ಅದು ನಮ್ಮಿಂದ ಮಾತ್ರ,” ಎಂದಿದ್ದರು. ಎಲ್ಲಾ ತರಹದ ರಾಜಕೀಯ ಪ್ರಯೋಗಳನ್ನು ಕಂಡ, ಅನ್ಯಾಯದ ಅಟ್ಟಹಾಸಗಳನ್ನು ಅನುಭವಿಸಿದ್ದ ಜನರಿಗೆ ಎಡಪಂಥೀಯ ಹಿನ್ನೆಲೆಯ ಲೋಪೆಜ್‌ರ ಈ ಮಾತು ಹೊಸ ಭರವಸೆ ಹುಟ್ಟುಹಾಕಿದ್ದವು.

ದೀರ್ಘ ರಾಜಕೀಯ ಪಯಣ:

ಲೋಪೆಜ್‌ ಜನಿಸಿದ್ದು 1953ರಲ್ಲಿ. ಮೆಕ್ಸಿಕೋದ ದಕ್ಷಿಣ ಭಾಗದ ರಾಜ್ಯ ಟಬಾಸ್ಕೋದಲ್ಲಿ ಹುಟ್ಟಿದ ಲೋಪೆಜ್‌, 1970ರಲ್ಲಿ ರಾಜ್ಯದ ಸ್ಥಳೀಯ ವ್ಯವಹಾರಗಳ ಕಚೇರಿಯಲ್ಲಿ ವೃತ್ತಿ ಬದುಕು ಆರಂಭಿಸಿದ್ದರು. ಪ್ರಾರಂಭದ ಹಂತದಲ್ಲಿ ಮೆಕ್ಸಿಕೋದ ಅಧ್ಯಕ್ಷರಾಗಿದ್ದ ಎನ್ರಿಕ್‌ ಪೇನಾ ನೈಟೋ ಸ್ಥಾಪಿಸಿದ ಇನ್ಸಿಸ್ಟಿಟ್ಯೂಷನಲ್ ರೆವೆಲ್ಯೂಷನರಿ ಪಾರ್ಟಿ (ಪಿಆರ್‌ಐ) ಯ ಸದಸ್ಯತ್ವವನ್ನು ಸ್ವೀಕರಿಸಿದ್ದ ಲೋಪೆಜ್‌, ಹಲವು ಭಿನ್ನಾಭಿಪ್ರಾಯಗಳಿಂದ 1980ರಲ್ಲಿ ಪಕ್ಷವನ್ನು ತೊರೆದಿದ್ದರು. ನಂತರದಲ್ಲಿ ಟೊಬಾಸ್ಕೋ ರಾಜ್ಯಕ್ಕೆ ರಾಜ್ಯಪಾಲರಾಗುವ ಪೈಪೋಟಿಯಲ್ಲಿ 2 ಬಾರಿ ಹಿನ್ನಡೆ ಅನುಭವಿಸಿದ್ದರು.

ಎರಡನೇ ಬಾರಿಯೂ ಕೂಡ ರಾಜ್ಯಪಾಲರಾಗುವ ಅವಕಾಶ ಕೈತಪ್ಪಿದಾಗ ಲೋಪೆಜ್‌ ಆಡಳಿತ ಪಕ್ಷ ಪಿಆರ್‌ಐ ವಿರುದ್ಧ ಹೋರಾಟ ಸಂಘಟಿಸಿದ್ದರು. ಈ ಹೋರಾಟ ಲೋಪೆಜ್‌ರ ಹೆಸರನ್ನು ಮೇಕ್ಸಿಕೋದಾದ್ಯಂತ ಹರಡಿತ್ತು. 2000ದಲ್ಲಿ ಲೋಪೆಜ್‌ ಮೆಕ್ಸಿಕೋ ನಗರದ ಮೇಯರ್‌ ಆಗಿ ಚುನಾಯಿತಗೊಂಡರು. ಆ ಸಮಯದಲ್ಲಿ ತಮ್ಮ ಆಡಳಿತವನ್ನು ಪ್ರಾಯೋಗಿಕವೆಂದು ಭಾವಿಸಿದ ಲೋಪೆಜ್‌, ಅಧ್ಯಕ್ಷೀಯ ಚುನಾವಣೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದರು.

ಚುನಾವಣಾ ಪ್ರಚಾರದ ವೇಳೆ ಲೋಪೆಜ್.
ಚುನಾವಣಾ ಪ್ರಚಾರದ ವೇಳೆ ಲೋಪೆಜ್.
ಚಿತ್ರಕೃಪೆ: ‘ಗ್ರೀನ್ ಲೆಫ್ಟ್‌ ವೀಕ್ಲಿ’

ಲೋಪೆಜ್‌ ಮೊದಲು ಅಧ್ಯಕ್ಷೀಯ ಚುನಾವಣೆಗೆ ನಿಂತಿದ್ದು 2006ರಲ್ಲಿ. ಬಡವರಿಗೆ ಮೊದಲ ಅದ್ಯತೆ ನೀಡುವುದಾಗಿ ಲೋಪೆಜ್ ಪ್ರಚಾರ ಆರಂಭಿಸಿದ್ದರು. ಆದರೆ ಲೋಪೆಜ್‌ರ ವಿರೋಧಿಗಳು ವೆನೆಜುವೆಲ್ಲಾದ ಅಧ್ಯಕ್ಷ ಹ್ಯೋಗೋ ಚಾವೇಜ್‌ ಜತೆ ಹೋಲಿಸಿ, ಲೋಪೆಜ್‌ರನ್ನು ‘ಡೇಂಜರ್‌ ಫಾರ್‌ ಮೆಕ್ಸಿಕೋ’ ಎಂದು ಸಾರಿದರು. ಮೆಕ್ಸಿಕೋದ ಉದ್ಯಮಿಗಳೂ ಕೂಡ ಲೋಪೆಜ್‌ ವಿರುದ್ಧ ನಿಂತಿದ್ದರು. ಪರಿಣಾಮ ಲೋಪೆಜ್‌ ಸೋಲು ಅನುಭವಿಸಬೇಕಾಯಿತು. ಈ ಸೋಲಿಗೆ ಪ್ರತಿಕ್ರಿಯೆಯಾಗಿ ಲೋಪೆಜ್‌, ‘ವ್ಯವಸ್ಥೆ ನನ್ನ ವಿರುದ್ಧ ಕತ್ತಿ ಮಸೆಯುತ್ತಿದೆ’ ಎಂದಿದ್ದರಷ್ಟೆ.

ತದನಂತರ ಅಪಾರ ಪ್ರಮಾಣದ ಹಣ ಸಂಗ್ರಹ ಮಾಡಿ ವಾರಗಟ್ಟಲೇ ಮೆರವಣಿಗೆಗಳನ್ನು ನಡೆಸಿದ ಲೋಪೆಜ್‌, ‘ನಾನು ಮೆಕ್ಸಿಕೋದ ಶಾಸನ ಬದ್ಧ ಅಧ್ಯಕ್ಷ’ ಎಂದು ಘೋಷಿಸಿಕೊಂಡರು. ಈ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ಮೆಕ್ಸಿಕೋದಲ್ಲಿ ಹೋರಾಟಗಳು ತೀವ್ರಗೊಂಡವು. ಮೆಕ್ಸಿಕೋದ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಆರಂಭಿಸಿದ ಲೋಪೆಜ್‌, ಹಲವಾರು ವರ್ಷಗಳ ಕಾಲ ರಾಜಕೀಯ ಮುಂಖಂಡರನ್ನೇ ಕಾಣದಿದ್ದ ಹಳ್ಳಿಗರ ಮುಂದೆ ನಿಂತು ಭಾಷಣ ಮಾಡಿದರು. 2003ರಿಂದ 2011ರವರೆಗೆ ಲೋಪೆಜ್‌ ಜತೆಗಿದ್ದ ಪೋಲಿಮ್ನಿಯಾ ರೊಮಾನಾ ಸಿಯೇರಾ ಹೇಳುವಂತೆ, “ಕೆಲವೊಮ್ಮೆ ನೂರಾರು ಜನರು ಲೋಪೆಜ್‌ ಮಾತುಗಳನ್ನು ಕೇಳುತ್ತಿದ್ದರು. ಆದರೆ ಕೆಲವೊಮ್ಮೆ ಕೆಲವೇ ಜನರಿಗೆ ಪ್ರಚಾರ ಮಾಡಬೇಕಾಗುತ್ತಿತ್ತು,”

ಪ್ರಚಾರ ಸಭೆಯೊಂದರಲ್ಲಿ ಲೋಪೆಜ್‌.
ಪ್ರಚಾರ ಸಭೆಯೊಂದರಲ್ಲಿ ಲೋಪೆಜ್‌.
ಚಿತ್ರ ಕೃಪೆ: ‘ಮದರ್ ಜೋನ್ಸ್’

“ಲೋಪೆಜ್‌ ದೊಡ್ಡ ಜನಸಮೂಹದ ಮುಂದೆ ಎಷ್ಟು ಶಕ್ತಿ ವ್ಯಯಿಸಿ ಮಾತನಾಡುತ್ತಿದ್ದರೋ ಆಷ್ಟೇ ಶ್ರಮವನ್ನು ಮರದ ಕೆಳಗೆ ನಿಂತು 10 ಜನರೊಟ್ಟಿಗೆ ಮಾತನಾಡುವಾಗಲೂ ವ್ಯಯಿಸುತ್ತಿದ್ದರು. ಆದರೂ ಕೂಡ 2012ರ ಅಧ್ಯಕ್ಷಿಯ ಚುನಾವಣೆಯಲ್ಲಿ ಮೆಕ್ಸಿಕನ್‌ ಜನರು ಲೋಪೆಜ್‌ ಪರವಾಗಿ ನಿಂತಿರಲಿಲ್ಲ,” ಎಂದು ಸಿಯೇರಾ ‘ಆಲ್‌ ಜಝೀರಾ’ಕ್ಕೆ ಪ್ರತಿಕ್ರಿಯಿಸಿದ್ದರು.

ಅಧ್ಯಕ್ಷೀಯ ಚುನಾವಣೆಯಲ್ಲಿ 2ನೇ ಬಾರಿ ಸೋಲನ್ನು ಅನುಭವಿಸಿದ ನಂತರ ‘ದಿ ನ್ಯಾಷನಲ್‌ ರೀಜನರೇಷನ್‌ ಮೂವ್‌ಮೆಂಟ್‌’ ಎಂಬ ಹೊಸ ಪಕ್ಷವೊಂದನ್ನು ಲೋಪೆಜ್‌ ಹುಟ್ಟುಹಾಕಿದರು. 2015ರ ವೇಳೆಗೆ ಲೋಪೆಜ್‌ 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲ್ಲಬಹುದೆಂಬ ನಿರೀಕ್ಷೆಗಳು ಮೂಡತೊಡಗಿದ್ದವು. ಭ್ರಷ್ಟಾಚಾರದ ಹಗರಣದಲ್ಲಿ ಪಿಆರ್‌ಐ ಪಕ್ಷದ ಪಾತ್ರ, ದಾಖಲೆ ಪ್ರಮಾಣದ ಹಿಂಸೆ ಮತ್ತು ಕುಸಿತಗೊಂಡ ಆರ್ಥಿಕ ಸ್ಥಿತಿಗತಿಗಳು ಲೋಪೆಜ್‌ ಪರಿಹಾರ ಎಂಬ ಅಲೋಚನೆಯಲ್ಲಿ ಜನರಲ್ಲಿ ಮೂಡಿಸಿದವು.

ಕಳೆದ ಏಪ್ರಿಲ್‌ ತಿಂಗಳಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮುಂದೆ ಭಾಷಣ ಮಾಡಿದ್ದ ಲೋಪೆಜ್‌, “ನಾನು ಈಗ ಕೊಳಕು ರಸ್ತೆಗಳನ್ನು ಸರಿಯಾಗಿ ನಿರ್ವಹಿಸಬಲ್ಲೆ,” ಎಂದು ನಕ್ಕಿದ್ದರು. ಸ್ತ್ರೀವಾದಿಯಾದ ಲೋಪೆಜ್‌ರ ಮಡದಿ ಬಿಯಾಟ್ರಿಝ್ ಗುಟೈರೆಝ್‌ರ ಮಾತಗಳು ಮೆಕ್ಸಿಕೋದ ಮಹಿಳಾ ಮತದಾರರನ್ನು ಲೋಪೆಜ್‌ ಕಡೆಗೆ ಸೆಳೆಯುವಲ್ಲಿ ಸಹಾಯ ಮಾಡಿವೆ.

ಲೋಪೆಜ್‌. 
ಲೋಪೆಜ್‌. 
ಚಿತ್ರ ಕೃಪೆ: ‘ಸಿಸಿ ನ್ಯೂಸ್‌’

ಲೋಪೆಜ್‌ ಮೆಕ್ಸಿಕೋದಲ್ಲಿ ಅಪಾರ ಪ್ರಮಾಣದ ಜನಮನ್ನಣೆ ಗಳಿಸಿದ್ದಾರಾದರೂ ಕೂಡ, ಅವು ಜನಪ್ರಿಯ ಘೋಷಣೆಗಳ ಹಿನ್ನೆಲೆಯಲ್ಲಿ ಹುಟ್ಟಿದ ಮನ್ನಣೆಯಂತೆ ಭಾಸವಾಗುತ್ತದೆ. ಎಡಪಂಥೀಯ ಹಿನ್ನೆಲೆಯಿಂದ ಬಂದರೂ, ಮೆಕ್ಸಿಕೋದ ಅಸ್ಮಿತೆ ಹೋರಾಟಕ್ಕೆ ಬೆಂಬಲ ನೀಡುತ್ತಾ ಬಂದವರು ಲೋಪೆಜ್‌ . ಹೀಗಾಗಿ, ಹೊಸ ಸರಕಾರದ ಅಡಿಯಲ್ಲಿ ರಾಷ್ಟ್ರೀಯತೆಯ ಗಾಳಿ ಕೊಂಚ ಜೋರಾಗಿಯೇ ಬೀಸಬಹುದು ಎಂಬ ನಿರೀಕ್ಷೆ ಇದೆ.

‘ನಾನು ಕೈಗೊಳ್ಳುವ ಜನ ಕಲ್ಯಾಣ ಕಾರ್ಯಗಳಿಗೆ ಭ್ರಷ್ಟಾಚಾರಿಗಳಿಂದ ವಶಪಡಿಸಿಕೊಂಡ ಹಣ ಸಾಕು. ಕಲ್ಯಾಣ ಕಾರ್ಯಕ್ರಮಗಳಿಗಾಗಿ ತೆರಿಗೆಯ ಪ್ರಮಾಣವನ್ನು ಹೆಚ್ಚಿಸುವುದಿಲ್ಲ’ ಎಂದು ಲೋಪೆಜ್‌ ಜನರಿಗೆ ವಾಗ್ದಾನ ನೀಡಿದ್ದರು. ಆದರೆ ಹಾಗೆ ದೇಶವೊಂದನ್ನು ಮುನ್ನಡೆಸಬಹುದಾ? ಎಂಬ ವಾಸ್ತವದ ಪ್ರಶ್ನೆಗಳೂ ಎದ್ದಿವೆ.

ಜನಮನ್ನಣೆ ಪಡೆದ ನಾಯಕ ಲೋಪೆಜ್‌.
ಜನಮನ್ನಣೆ ಪಡೆದ ನಾಯಕ ಲೋಪೆಜ್‌.

ಈಗ ಮೆಕ್ಸಿಕನ್‌ರು ಲೋಪೆಜ್‌ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಡಪಂಥೀಯ ನಾಯಕನಿಗೆ ಆಳುವ ಅವಕಾಶ ಕೊಟ್ಟಿದ್ದಾರೆ. ಅಮೆರಿಕಾದ ಬಗಲಲ್ಲಿರುವ ಮೆಕ್ಸಿಕೋ ಹೊಸ ಹಾದಿಯತ್ತ ಹೊರಳಿಕೊಳ್ಳಲೇಬೇಕಿದೆ. ಅದರ ಅಗತ್ಯ ಅಮೆರಿಕಾಗೂ ಇದೆ. ಈಗಾಗಲೇ ಅಮೆರಿಕಾದಲ್ಲಿ ಮೆಕ್ಸಿಕನ್ ಡ್ರಗ್‌ ಕಾರ್ಟಲ್‌ಗಳು, ನಿರಾಶ್ರಿತರು ತಲೆನೋವಾಗಿದ್ದಾರೆ. ಹೊಸ ಸರಕಾರ ದೇಶದೊಳಗಿನ ಕಾರ್ಟಲ್‌ಗಳನ್ನು ಬಗ್ಗು ಬಡಿದು, ಇಂಧನ ಮೂಲಗಳ ಮೇಲೆ ಹತೋಟಿ ಪಡೆದುಕೊಳ್ಳಬೇಕಿದೆ. ಅದರಿಂದ ಸಾಕಷ್ಟು ಸಾಮಾಜಿಕ ಸಮಸ್ಯೆಗಳನ್ನು ಸರಿಪಡಿಸಲು ಆರ್ಥಿಕ ಮೂಲವೊಂದು ಮೆಕ್ಸಿಕೋಗೆ ದೊರೆತರೆ ಅಮೆರಿಕಾದ ಭಾರವೂ ಕಡಿಮೆಯಾಗಲಿದೆ. ಜತೆಗೆ, ಅಕ್ರಮ ವಲಸೆಗೂ ಕಡಿವಾಣ ಬೀಳಬಹುದಾಗಿದೆ. ಆದರೆ ಒಂದೇ ಸಮಸ್ಯೆ ಇರುವುದು ಸಂಪೂರ್ಣ ಹಳಿ ತಪ್ಪಿರುವ ವ್ಯವಸ್ಥೆಯನ್ನು ಹಳಿಗೆ ತರಲು ಎಡಪಂಥೀಯ ನಾಯಕನ ಅಗತ್ಯ ಬಿದ್ದಿದೆ. ಆತ ಅಥವಾ ಆತನ ಚಿಂತನೆ ಅಷ್ಟಕ್ಕೆ ನಿಲ್ಲುವುದಿಲ್ಲ ಎಂಬ ಅರಿವು ಅಮೆರಿಕಾಗೂ ಇದೆ . ಈ ಕಾರಣಕ್ಕೆ, ಮೆಕ್ಸಿಕೋದಲ್ಲಿ ನಡೆದ ಈ ಬೆಳವಣಿಗೆ, ರಾಜಕೀಯ ಚಿಂತಕರಲ್ಲಿ ಕುತೂಹಲ ಹುಟ್ಟುಹಾಕಿದೆ.