samachara
www.samachara.com
‘ಪೆನ್ ವರ್ಸಸ್‌ ಗನ್’:  ಹೊರಬಂದ ‘ದಿ ಕ್ಯಾಪಿಟಲ್’ ಸಂಚಿಕೆ & ದುಬಾರಿ ಬೆಲೆ ತೆತ್ತ ವೈಯಕ್ತಿಕ ವರದಿ
ವಿದೇಶ

‘ಪೆನ್ ವರ್ಸಸ್‌ ಗನ್’: ಹೊರಬಂದ ‘ದಿ ಕ್ಯಾಪಿಟಲ್’ ಸಂಚಿಕೆ & ದುಬಾರಿ ಬೆಲೆ ತೆತ್ತ ವೈಯಕ್ತಿಕ ವರದಿ

ಮಾಧ್ಯಮಗಳ ವಿರುದ್ಧ ವ್ಯಕ್ತಿಗತ ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸುವವರು ಅಂತಿಮವಾಗಿ ಹತಾಶ ಸ್ಥಿತಿಯನ್ನು ತಲುಪಬಹುದು ಎಂಬ ಸಾಧ್ಯತೆಯನ್ನು ಈ ವಿದ್ಯಮಾನ ಮುಂದಿಡುತ್ತಿದೆ.

Team Samachara

ಗುರುವಾರ ಗುಂಡಿನ ದಾಳಿಗೆ ಒಳಗಾದ ‘ದಿ ಕ್ಯಾಪಿಟಲ್’ ಪತ್ರಿಕೆ, ತನ್ನ ಸಹೋದ್ಯೋಗಿಗಳ ಸಾವಿನ ಬೆನ್ನಿಗೇ ಹೊಸ ಸಂಚಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಅಮೆರಿಕಾದ ಅನ್ನಾಪೊಲೀಸ್ ಸ್ಥಳೀಯ ಪತ್ರಿಕೆ ಕಚೇರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು.

ದಾಳಿ ನಡೆದ ಕೆಲವೇ ಗಂಟೆಗಳಲ್ಲೇ, “ನಾಳೆ ನಾವು ಹೊಸ ಸಂಚಿಕೆಯನ್ನು ಹೊರತರುತ್ತಿದ್ದೇವೆ,’’ ಎಂದು ಅನ್ನಾಪೊಲೀಸ್‌ನ ‘ದಿ ಕ್ಯಾಪಿಟಲ್’ ಪತ್ರಿಕೆ ವರದಿಗಾರ ಚಾಝ್ ಕುಕ್ ಟ್ವೀಟ್ ಮಾಡಿದ್ದರು. ಇದೀಗ ಶುಕ್ರವಾರ ಮಧ್ಯಾಹ್ನ ಪತ್ರಿಕೆಯ ಹೊಸ ಸಂಚಿಕೆ ಮಾರುಕಟ್ಟೆಗೆ ಬಂದಿದೆ. ಈ ಮೂಲಕ ಮೃತ ಸಹೋದ್ಯೋಗಿಗಳಿಗೆ ಅಶೃತರ್ಪಣ ಅರ್ಪಿಸಿದೆ.

ಏನಿದು ಬೆಳವಣಿಗೆ?:

ಅಮೆರಿಕಾದ ಅನ್ನಾಪೊಲೀಸ್ ನಗರದಲ್ಲಿ ‘ಕ್ಯಾಪಿಟಲ್ ಗೆಝೆಟ್’ ಹೆಸರಿನಲ್ಲಿ ಸ್ಥಳೀಯ ಪತ್ರಿಕೆಯೊಂದು ಕಾರ್ಯನಿರ್ವಹಿಸುತ್ತಿತ್ತು. ಗುರುವಾರ ರಾತ್ರಿ ಶಾಟ್ ಗನ್ ಹಾಗೂ ಸ್ಮೋಕ್ ಗ್ರೆನೇಡ್‌ಗಳನ್ನು ಹಿಡಿದುಕೊಂಡು ಬಂದ ಜರ್ರಾಡ್ ರಾಮಾಸ್ ಎಂಬಾತ ಕಚೇರಿ ಪ್ರವೇಶಿಸಿದ. ನಂತರ ಏಕಾಏಕಿ ಗುಂಡು ನಡೆಸಿದ, ಸ್ಮೋಕ್ ಗ್ರೆನೇಡ್‌ಗಳನ್ನು ಹಾಕಿದ. ಘಟನೆಯಲ್ಲಿ ಐವರು ಮೃತಪಟ್ಟರೆ ಹಲವರು ಗಾಯಗೊಂಡಿದ್ದರು.

ಮಾಧ್ಯಮ ಕಚೇರಿ ಒಳಗೆ ನಡೆದ ಇಂತಹದೊಂದು ದಾಳಿ ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಕೆಲವು ದಿನಗಳ ಹಿಂದೆ ಯೂ- ಟ್ಯೂಬ್ ಕಚೇರಿ ಮೇಲೆ ಯುವತಿಯೊಬ್ಬಳು ಇದೇ ಮಾದರಿಯಲ್ಲಿ ದಾಳಿ ನಡೆಸಿದ್ದಳು.

Also read: ‘ಸಿಡಿದ ಗುಂಡುಗಳ ಸುತ್ತ’; ದುರಂತ ಅಂತ್ಯ ಕಂಡ ನಾಸಿಮ್‌ ಯೂ-ಟ್ಯೂಬ್‌ ಬ್ಯುಸಿನೆಸ್‌ 

ಯಾರು ಈ ದಾಳಿಕೋರ?:

‘ಕ್ಯಾಪಿಟಲ್ ಗೆಝೆಟ್ ‘ ಪತ್ರಿಕೆ ಕಾರ್ಯಾಲಯದ ಮೇಲೆ ದಾಳಿ ನಡೆಸಿದ ಜರ್ರಾಡ್ ರಾಮಾಸ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಹಿಂದೆ ಪತ್ರಿಕೆಯ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ‘ಸಾಮಾನ್ಯ ಎಚ್ಚರಿಕೆ’ಗಳನ್ನು ನೀಡುತ್ತಲೇ ಬಂದಿದ್ದ. ಕೆಲವು ವರ್ಷಗಳ ಹಿಂದೆ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದ. ಆದರೆ ಅದನ್ನು ಗೆಲ್ಲುವಲ್ಲಿ ವಿಫಲವಾಗಿದ್ದ ಎಂದು ‘ನ್ಯೂ ಯಾರ್ಕ್‌ ಟೈಮ್ಸ್‌’ ವರದಿ ಹೇಳುತ್ತಿದೆ.

2012ರವರೆಗೂ ಫೆಡರಲ್ ಬ್ಯುರೋ ಆಫ್‌ ಲೇಬರ್ ಸ್ಟಾಟಿಸ್ಟಿಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರ. 2011ರಲ್ಲಿ ‘ದಿ ಕ್ಯಾಪಿಟಲ್’ ಪತ್ರಿಕೆ (ಕ್ಯಾಪಿಟಲ್ ಗೆಝೆಟ್ ಸೋದರ ಪತ್ರಿಕೆ)ಯಲ್ಲಿ ರಾಮೋಸ್ ವಿರುದ್ಧ ವರದಿಯೊಂದು ಪ್ರಕಟವಾಗಿತ್ತು.

ಆತ ತನ್ನ ಹೈಸ್ಕೂಲ್ ಸಹಪಾಠಿಯೊಬ್ಬರ ಜತೆಗೆ ಸ್ನೇಹ ಸಂಬಂಧದಲ್ಲಿ ಸಮಸ್ಯೆ ಮಾಡಿಕೊಂಡಿದ್ದ. ಅದು ನ್ಯಾಯಾಲಯದ ಮೆಟ್ಟಿಲೇರಿತ್ತು. ಅಲ್ಲಿ ರಾಮೋಸ್ ವಿರುದ್ಧವಾಗಿ ತೀರ್ಪು ಬಂದಿತ್ತು, ಅಷ್ಟೆ ಅಲ್ಲ ಕಿರುಕುಳ ನೀಡಿದ ಆರೋಪಕ್ಕೂ ಗುರಿಯಾಗಿದ್ದ. 90 ದಿನಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ ಮಾನಸಿಕ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಈ ವಿಚಾರ ‘ದಿ ಕ್ಯಾಪಿಟಲ್’ ಪತ್ರಿಕೆಯಲ್ಲಿ ಪ್ರಟಕವಾಗಿತ್ತು. ರಾಮೋಸ್ ಕುಪಿತಗೊಂಡಿದ್ದ ಎಂದು ಆತನ ಸುತ್ತ ಪ್ರಕಟವಾಗಿರುವ ಹಲವು ವರದಿಗಳು ಮಾಹಿತಿ ನೀಡುತ್ತಿವೆ.

ವ್ಯಕ್ತಿಗತ ವರದಿಗಳು:

ಮಾಧ್ಯಮಗಳು ಸರಕಾರಗಳಿಂದ ಹಾಗೂ ಪ್ರಬಲ ಲಾಭಿಗಳಿಂದ ತಮ್ಮ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಮೇಲ್ನೋಟಕ್ಕೆ ಕಾಣದ ವಿದ್ಯಮಾನ. ಆದರೆ ಮಾಧ್ಯಮಗಳ ವಿರುದ್ಧ ವ್ಯಕ್ತಿಗತ ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸುವವರು ಅಂತಿಮವಾಗಿ ಹತಾಶ ಸ್ಥಿತಿಯನ್ನು ತಲುಪಬಹುದು ಎಂಬ ಸಾಧ್ಯತೆಯನ್ನು ಈ ವಿದ್ಯಮಾನ ಮುಂದಿಡುತ್ತಿದೆ.

ರಾಮೋಸ್ ವಿಚಾರದಲ್ಲಿ ನಡೆದಿರುವುದು ವ್ಯಕ್ತಿಗತ ನೆಲೆಯಲ್ಲಿ ಹುಟ್ಟಿದ ಮಾಧ್ಯಮ ವಿರುದ್ಧದ ಆಕ್ರೋಶ. ಮಾಧ್ಯಮ ಸಂಸ್ಥೆ ಪ್ರಕಟಿಸಿದ ‘ಮಾನಹಾನಿ ವರದಿ’, ಅದರ ವಿರುದ್ಧ ನಡೆಸಿದ ವಿಫಲ ಕಾನೂನು ಹೋರಾಟ ಮತ್ತು ಅಂತಿಮವಾಗಿ ಬಂದೂಕು ಹಿಡಿದುಕೊಂಡು ಕಚೇರಿ ನುಗ್ಗಿದ ಹತಾಶ ಮನಸ್ಥಿತಿ; ಮಾಧ್ಯಮ ಸ್ವಾತಂತ್ರದ ಆಚೆಗೆ ಒಂದಷ್ಟು ಪಾಠಗಳನ್ನು ಹೇಳುತ್ತಿದೆ. ವ್ಯಕ್ತಿಗತ ನೆಲೆಯಲ್ಲಿ ಹಾನಿ ಎಸಗುವ ವರದಿಗಳೂ ಕೂಡ ಕೆಲವೊಮ್ಮೆ ದುಬಾರಿ ಬೆಲೆಯನ್ನೇ ತೆರವಂತೆ ಮಾಡುತ್ತವೆ ಎಂಬುದಕ್ಕೆ ಅನ್ನಾಪೊಲೀಸ್‌ನಲ್ಲಿ ನಡೆದ ಗುಂಡಿನ ದಾಳಿ ಸಾಕ್ಷಿಯಾಗಿದೆ.

ಇಂತಹ ಬೆಳವಣಿಗೆಗಳ ಆಚೆಗೂ ಗಮನ ಸೆಳೆಯುತ್ತಿರುವುದು, ದೊಡ್ಡ ಹಾನಿಗಳ ನಂತರವೂ ಮಾಧ್ಯಮ ಸಂಸ್ಥೆಗಳು ತನ್ನ ವೃತ್ತಿಪರತೆಯನ್ನು ಎತ್ತಿ ಹಿಡಿಯುತ್ತಿವೆ. ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ‘ದಿ ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಶುಜಾತ್ ಬುಖಾರಿ ಹತ್ಯೆ ನಂತರವೂ ಪತ್ರಿಕೆ ಹೊರಬಂದಿತ್ತು.

ಕರ್ನಾಟಕದಲ್ಲಿಯೇ ಹಂತಕನ ಗುಂಡೇಟಿಗೆ ಬಲಿಯಾದ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ನೆನಪಿನಲ್ಲಿ ‘ನಾನು ಗೌರಿ’ ಎಂಬ ವಾರ ಪತ್ರಿಕೆ ಹೊರಬರುತ್ತಿದೆ. ‘ಜನನುಡಿ ಮಾಧ್ಯಮ’ ಹೆಸರಿನಲ್ಲಿ ಗೌರಿ ಆಶಯಗಳ ನೆನಪಿನಲ್ಲಿ ‘ಡಿಜಿಟಲ್ ಮಾಧ್ಯಮ’ವೊಂದು ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡುತ್ತಿದೆ. ಇಂತಹ ಹಲವು ಉದಾಹರಣೆಗಳು, ಮಾಧ್ಯಮಗಳ ಆಶಯವನ್ನು ಯಾವುದೇ ಬಂದೂಕುಗಳು ನಿಯಂತ್ರಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತಿವೆ.

ಈ ನಡುವೆ, ಮೃತ ಸಹೋದ್ಯೋಗಿಗಳಿಗಾಗಿ ವಾಷಿಂಗ್ಟನ್ ಡಿಸಿ ಪತ್ರಕರ್ತರು ‘ಫಂಡ್ ಮಿ’ ಅಭಿಯಾನ ಆರಂಭಿಸಿದ್ದಾರೆ. ಒಟ್ಟು 70 ಸಾವಿರ ಡಾಲರ್ ಮೊತ್ತದ ಹಣವನ್ನು ಚಂದಾ ರೂಪದಲ್ಲಿ ಸಂಗ್ರಹಿಸುವ ಗುರಿಯನ್ನು ಇವರು ಹೊಂದಿದ್ದಾರೆ.