- ಸಾಂದರ್ಭಿಕ ಚಿತ್ರ
ವಿದೇಶ

ಮುಂದುವರಿದ ಅಮೆರಿಕ ಅಮಾನವೀಯತೆ; ಸುಮಾರು 100 ಭಾರತೀಯರು ವಶಕ್ಕೆ

ವಲಸಿಗರ ವಿರುದ್ಧ ಕಠಿಣ ಕ್ರಮದ ಹೆಸರಲ್ಲಿ ಅಮೆರಿಕ ತನ್ನ ಅಮಾನವೀಯತೆ ಮುಂದುವರಿಸಿದೆ. ಈ ಬಾರಿ ಅಮೆರಿಕದ ಕಪಿಮುಷ್ಟಿಗೆ ಸಿಲುಕಿರುವುದು ಭಾರತೀಯರು.

ವಲಸಿಗರ ವಿರುದ್ಧ ‘ಶೂನ್ಯ ಅಸಹಿಷ್ಣುತೆ’ ನೀತಿ ಅನುಸರಿಸುವ ಹೆಸರಿನಲ್ಲಿ ಅಮಾನವೀಯ ವರ್ತನೆ ತೋರುತ್ತಿರುವ ಅಮೆರಿಕ ಸೂಕ್ತ ದಾಖಲೆಗಳಿಲ್ಲದೆ ಅಮೆರಿಕ ಪ್ರವೇಶಿಸಿದ ಆರೋಪದ ಮೇಲೆ ಸುಮಾರು 100 ಮಂದಿ ಭಾರತೀಯರನ್ನು ವಶಕ್ಕೆ ತೆಗೆದುಕೊಂಡಿದೆ.

ನ್ಯೂ ಮೆಕ್ಸಿಕೊ ಮತ್ತು ಆರ್ಗನ್‌ನಿಂದ 42 ಭಾರತೀಯರನ್ನು ವಶಕ್ಕೆ ತೆಗೆದುಕೊಂಡಿರುವುದನ್ನು ಅಮೆರಿಕದ ವಲಸೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ದಾಖಲೆಗಳಿಲ್ಲ ಅಕ್ರಮ ವಲಸಿಗರು ಎಂಬ ಕಾರಣಕ್ಕೆ ಅಮೆರಿಕದ ಅಧಿಕಾರಿಗಳು ಭಾರತೀಯರನ್ನು ವಶಕ್ಕೆ ತೆಗೆದುಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ವಲಸೆ ಅಧಿಕಾರಿಗಳು ಆರ್ಗನ್‌ನ ಕಾರಾಗೃಹದಲ್ಲಿ 52 ಮಂದಿ ಭಾರತೀಯರನ್ನು ಬಂಧಿಸಿಟ್ಟಿದ್ದು ಇತ್ತೀಚೆಗೆ ಬೆಳಕಿಗೆ ಬಂದಿತ್ತು.

ಭಾರತೀಯರನ್ನು ವಶಕ್ಕೆ ಪಡೆದಿರುವ ಬಗ್ಗೆ ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಅಮೆರಿಕದ ವಲಸೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ವಲಸೆ ಅಧಿಕಾರಿಗಳ ವಶದಲ್ಲಿರುವ ಭಾರತೀಯರಿಗೆ ರಾಯಭಾರ ನೆರವು ಒದಗಿಸುವ ಪ್ರಯತ್ನ ನಡೆದಿದೆ. ಆದರೆ, ರಾಯಭಾರ ನೆರವಿಗೆ ಅಮೆರಿಕ ಅಧಿಕಾರಿಗಳು ಒಪ್ಪಿಗೆ ಸೂಚಿಸಿರುವ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.

“ವಲಸೆ ಅಧಿಕಾರಿಗಳ ವಶದಲ್ಲಿರುವ ಭಾರತೀಯರನ್ನು ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರು ಭೇಟಿಯಾಗಿದ್ದಾರೆ. ಮತ್ತೊಮ್ಮ ರಾಜತಾಂತ್ರಿಕ ಅಧಿಕಾರಿ ಭೇಟಿಗೆ ಸಮಯ ನಿಗಧಿಯಾಗಿದೆ. ಇಲ್ಲಿನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

“ಸೂಕ್ತ ದಾಖಲೆಗಳಿಲ್ಲದ ಕಾರಣಕ್ಕೆ ಒಬ್ಬಂಟಿಗಳನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕುಟುಂಬಗಳು ಅಥವಾ ಮಕ್ಕಳಿರುವವರು ಯಾರೂ ಇವರ ಪೈಕಿ ಇಲ್ಲ” ಎಂದು ವಶಕ್ಕೆ ಪಡೆದವರನ್ನು ಭೇಟಿಯಾಗಿರುವ ಅಮೆರಿಕದ ಶಾಸಕರು ಹೇಳಿದ್ದಾರೆ.

ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿರುವವರ ಪೈಕಿ ಪಂಜಾಬ್‌ನ ಸಿಕ್ಕರು ಆಂಧ್ರಪ್ರದೇಶದ ಕ್ರಿಶ್ಚಿಯನ್ನರು ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಸೂಕ್ತ ದಾಖಲೆಗಳಿಲ್ಲದೆ ಅಮೆರಿಕ ಪ್ರವೇಶಿಸಿರುವ ಇವರಿಗೆ ಪೌರತ್ವ ನೀಡಬೇಕೆ, ಬೇಡವೇ ಎಂಬ ಬಗ್ಗೆ ಅಮೆರಿಕದ ಸರಕಾರ ನಿರ್ಧರಿಸಬೇಕಿದೆ ಎಂದು ವಲಸೆ ಅಧಿಕಾರಿಗಳು ಹೇಳಿದ್ದಾರೆ.

Also read: ವಲಸಿಗರ ವಿರುದ್ಧ ಅಮೆರಿಕ ಅಮಾನವೀಯ ಕ್ರಮ; 2000 ಮಕ್ಕಳು ಪೋಷಕರಿಂದ ದೂರ

ಈ ಹಿಂದೆ ನಿರಾಶ್ರಿತರ ಸುಮಾರು 2000 ಮಕ್ಕಳನ್ನು ಅವರ ಪೋಷಕರಿಂದ ದೂರ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಅಮೆರಿಕ ಬಳಿಕ ಮಕ್ಕಳನ್ನು ಪೋಷಕರಿಂದ ದೂರ ಮಾಡುವ ನಿರ್ಧಾರವನ್ನು ಕೈ ಬಿಟ್ಟಿತ್ತು. ನಿರಾಶ್ರಿತರ ಮಕ್ಕಳನ್ನು ಪೋಷಕರಿಂದ ದೂರ ಮಾಡಬಾರದು ಎಂಬ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ದಿನಗಳ ಹಿಂದೆ ಸಹಿ ಹಾಕಿದ್ದರು.

ಮಕ್ಕಳನ್ನು ದೂರ ಮಾಡುವ ಆದೇಶ ವಾಪಸ್‌ ಪಡೆದ ಬೆನ್ನಲ್ಲೇ ಅಮೆರಿಕ, ಭಾರತೀಯರನ್ನು ವಶಕ್ಕೆ ಪಡೆದಿದೆ. ಇದರಿಂದ ನಿರಾಶ್ರಿತರೊಂದಿಗೆ ಅಮೆರಿಕ ಅಮಾನವೀಯವಾಗಿ ನಡೆದುಕೊಳ್ಳುತ್ತಿದೆ ಎಂಬ ಆಕ್ರೋಶ ಜಗತ್ತಿನ ಎಲ್ಲೆಡೆಯಿಂದ ವ್ಯಕ್ತವಾಗುತ್ತಿದೆ.

ಆದರೆ, ಟ್ರಂಪ್‌ ಸರಕಾರ ವಲಸಿಗರ ವಿರುದ್ಧ ಕಠಿಣ ಕ್ರಮದ ಹೆಸರಿನಲ್ಲಿ ಅಮಾನವೀಯ ಕ್ರಮಕ್ಕೆ ಮುಂದಾಗಿದ್ದು, ನಿರಾಶ್ರಿತರು ಹಾಗೂ ಮಕ್ಕಳ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘಿಸುತ್ತಾ ಬರುತ್ತಿದೆ.

Also read: ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದಿಂದ ಹೊರಬಂದ ‘ಹಕ್ಕುಗಳ ಹಂತಕ ಅಮೆರಿಕ’