ವಲಸಿಗರ ವಿರುದ್ಧ ಅಮೆರಿಕ ಅಮಾನವೀಯ ಕ್ರಮ; 2000 ಮಕ್ಕಳು ಪೋಷಕರಿಂದ ದೂರ
ವಿದೇಶ

ವಲಸಿಗರ ವಿರುದ್ಧ ಅಮೆರಿಕ ಅಮಾನವೀಯ ಕ್ರಮ; 2000 ಮಕ್ಕಳು ಪೋಷಕರಿಂದ ದೂರ

ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಅಮೆರಿಕ ಸುಮಾರು 2000 ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡುವ ಅಮಾನವೀಯ ಕ್ರಮಕ್ಕೆ ಮುಂದಾಗಿದೆ.

‘ಅಕ್ರಮ’ ವಲಸಿಗರ ವಿರುದ್ಧ ‘ಶೂನ್ಯ ಸಹಿಷ್ಣುತೆ’ ನೀತಿ ಅನುಸರಿಸುವುದಾಗಿ ಹೇಳುತ್ತಿದ್ದ ಅಮೆರಿಕ ವಲಸಿಗರ ವಿರುದ್ಧ ಅಮಾನವೀಯ ಕ್ರಮಕ್ಕೆ ಮುಂದಾಗಿದೆ. ಸುಮಾರು ಎರಡು ಸಾವಿರ ವಲಸಿಗರ ಮಕ್ಕಳನ್ನು ಅವರ ಪೋಷಕರಿಂದ ದೂರ ಮಾಡಲಾಗಿದೆ.

ತೀವ್ರ ವಿರೋಧದ ನಡುವೆಯೂ ವಲಸಿಗರ ವಿಚಾರದಲ್ಲಿ ತನ್ನ ಅಸಹಿಷ್ಣುತೆಯ ನೀತಿಯನ್ನು ಜಾರಿಗೊಳಿಸಿರುವ ಅಮೆರಿಕ ಮೆಕ್ಸಿಕೊ ಗಡಿಯಲ್ಲಿ ಸುಮಾರು ಎರಡು ಸಾವಿರ ಮಕ್ಕಳನ್ನು ಅವರ ತಂದೆ- ತಾಯಿ ಹಾಗೂ ಪೋಷಕರಿಂದ ಬೇರೆ ಮಾಡಿದೆ.

ಏಪ್ರಿಲ್‌ 19ರಿಂದ ಮೇ 31ರ ಅವಧಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅಮೆರಿಕ ಗಡಿ ದಾಟಿ ಒಳ ಬಂದ 1,940 ಮಂದಿ ವಯಸ್ಕರಿಂದ 1,995 ಮಕ್ಕಳನ್ನು ಬೇರೆ ಮಾಡಲಾಗಿದೆ ಎಂದು ಅಮೆರಿಕ ಆಂತರಿಕ ಭದ್ರತಾ ಇಲಾಖೆಯ ವಕ್ತಾರರು ತಿಳಿಸಿದ್ದಾರೆ.

ಸೂಕ್ತ ದಾಖಲೆಗಳಿಲ್ಲದೆ ಗಡಿ ದಾಟಿ ಒಳ ಬಂದ ಹಾಗೂ ಅಮೆರಿಕದ ವಲಸೆ ನೀತಿ ಉಲ್ಲಂಘಿಸಿದ ಆರೋಪದ ಮೇಲೆ ವಯಸ್ಕರನ್ನು ವಶಕ್ಕೆ ಪಡೆಯಲಾಗಿದೆ. ಅವರ ವಿರುದ್ಧ ಕಾನೂನು ಕ್ರಮದ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸೂಕ್ತ ದಾಖಲೆಗಳಿಲ್ಲದೆ ಅಮೆರಿಕ ಪ್ರವೇಶಿಸಿದ ಎಲ್ಲ ಪ್ರಕರಣಗಳನ್ನೂ ಕ್ರಿಮಿನಲ್‌ ಪ್ರಕರಣ ಎಂದು ದಾಖಲಿಸಿಕೊಳ್ಳಲಾಗಿದೆ. ವಯಸ್ಕರ ವಿರುದ್ಧ ಕಾನೂನು ಕ್ರಮ ಜರುಗಿಸುವ ಸಲುವಾಗಿ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡಲಾಗಿದೆ ಎಂದಿದ್ದಾರೆ ಅಧಿಕಾರಿಗಳು.

ವಲಸಿಗರ ವಿರುದ್ಧ ಅಮೆರಿಕ ಅಮಾನವೀಯ ಕ್ರಮ; 2000 ಮಕ್ಕಳು ಪೋಷಕರಿಂದ ದೂರ

ವಲಸಿಗರ ವಿರುದ್ಧ ಅಸಹಿಷ್ಣುತೆ ನೀತಿ ಅನುಸರಿಸಬಾರದೆಂದು ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ತಿಂಗಳ ಆರಂಭದಲ್ಲಿ ಅಮೆರಿಕದ ಪ್ರಮುಖ ನಗರಗಳಲ್ಲಿ ಜಮಾಯಿಸಿದ್ದ ಸಾವಿರಾರು ಜನ ಪ್ರತಿಭಟನಾಕಾರರು ವಲಸೆ ನೀತಿಯನ್ನು ಬದಲಿಸುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಒತ್ತಾಯಿಸಿದ್ದರು.

“ವಲಸಿಗರ ಕುಟುಂಬಗಳಲ್ಲಿ ಮಧ್ಯಪ್ರವೇಶ ಮಾಡುವುದು ಹಾಗೂ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಹೈಕಮಿಷನರ್‌ ಕಳೆದ ವಾರ ಹೇಳಿದ್ದರು.

“ವಲಸಿಗರ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡುವುದು ನಾಚಿಕೆಗೇಡು, ಇದು ಸಮರ್ಥಿಸಿಕೊಳ್ಳುವಂಥ ನೀತಿಯಲ್ಲ” ಎಂದು ಅಮೆರಿಕದ ಹೌಸ್ ಮೈನಾರಿಟಿ ನಾಯಕಿ, ಡೆಮಾಕ್ರಟಿಕ್‌ ಪಕ್ಷದ ನ್ಯಾನ್ಸಿ ಪೆಲೊಸಿ ಹೇಳಿದ್ದಾರೆ.

ವಲಸಿಗರ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕ್ಯಾಲಿಫೋರ್ನಿಯದ ಸೆನೆಟರ್ ಕಮಲಾ ಹ್ಯಾರಿಸ್, “ಟ್ರಂಪ್‌ ಆಡಳಿತ ಕೂಡಲೇ ಈ ಅನೈತಿಕ ನೀತಿಯನ್ನು ಕೊನೆಗಾಣಿಸಬೇಕು” ಎಂದು ಒತ್ತಾಯಿಸಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್‌ ಅಧಿಕಾರಕ್ಕೆ ಬಂದ ಬಳಿಕ ವಲಸಿಗರ ವಿರುದ್ಧ ಕಠಿಣ ನೀತಿ ಅನುಸರಿಸಲಾಗುತ್ತಿದೆ. ಸೂಕ್ತ ದಾಖಲೆಗಳಿಲ್ಲದ್ದ ವಲಸಿಗರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಟ್ರಂಪ್‌ ಆಡಳಿತ ಮುಂದಾಗಿದೆ.

ಅಮೆರಿಕದ ಈ ನೂತನ ವಲಸೆ ನೀತಿಯನ್ನು ರದ್ದು ಪಡಿಸುವಂತೆ ಮಾನವ ಹಕ್ಕುಗಳ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಟ್ರಂಪ್ ಆಡಳಿತ ಮಾತ್ರ ಅಕ್ರಮ ವಲಸಿಗರ ವಿರುದ್ಧ ಅಸಹಿಷ್ಣುತೆಯ ನೀತಿ ಅನುಸರಿಸುತ್ತಿದೆ. ಇದರ ಭಾಗವಾಗಿಯೇ ವಲಸಿಗರ ಮಕ್ಕಳನ್ನು ಅವರ ಪೋಷಕರಿಂದ ಬೇರೆ ಮಾಡಲಾಗಿದೆ.

ಮಾನವ ಹಕ್ಕುಗಳ ಹೋರಾಟಗಾರರು ಹಾಗೂ ಜನಪ್ರತಿನಿಧಿಗಳ ವಿರೋಧಕ್ಕೆ ಬೆಲೆ ಕೊಡದ ಟ್ರಂಪ್‌ ಆಡಳಿತ ಕೊನೆಗೂ ವಲಸಿಗರ ವಿರುದ್ಧ ಅಮಾನವೀಯತೆ ಪ್ರದರ್ಶಿಸಿದೆ.