ಗ್ವಾಟೆಮಾಲ ಜ್ವಾಲಾಮುಖಿ ಸ್ಪೋಟಕ್ಕೆ 69ಕ್ಕೂ ಹೆಚ್ಚು ಜನ ಬಲಿ
ವಿದೇಶ

ಗ್ವಾಟೆಮಾಲ ಜ್ವಾಲಾಮುಖಿ ಸ್ಪೋಟಕ್ಕೆ 69ಕ್ಕೂ ಹೆಚ್ಚು ಜನ ಬಲಿ

ಕಳೆದ ಭಾನುವಾರ ಸ್ಪೋಟಗೊಂಡ ಗ್ವಾಟೆಮಾಲ ಜ್ವಾಲಾಮುಖಿಗೆ ಕಡಿಮೆ ಎಂದರೂ 69 ಜನ ಬಲಿಯಾಗಿದ್ದಾರೆ. ಅಸಂಖ್ಯಾತ ಜನ ಕಾಣೆಯಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ ಹಲವು ನೂರುಗಳನ್ನು ಮುಟ್ಟಬಹುದಾದ ನಿರೀಕ್ಷೆಯಿದೆ.

“ನಾನಾಗ ಹತ್ತಿರದಲ್ಲೇ ಇದ್ದ ಅಂಗಂಡಿಯೊಂದರಲ್ಲಿ ಕೆಲವು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದೆ. ಇದಕ್ಕಿಂದಂತೆಯೇ ಜನ ಕಿರುಚುತ್ತಾ ಓಡುತ್ತಿರುವ ಸದ್ದು ಕೇಳಿಸಿತು. ತಿರುಗಿ ನೋಡಿದಾಗ ನನ್ನ ಸೋದರಳಿಯರು ನನ್ನ ತಾಯಿಯ ಮನೆಯತ್ತ ಓಡುತ್ತಿದ್ದರು,” ಎಂದು ಯುಫೇನಿಯಾ ಗಾರ್ಸಿಯಾ ಹೇಳುವಾಗ ಅವರ ಕಣ್ಣಂಚಿನಲ್ಲಿ ನೀರು ತುಂಬಿತ್ತು.

ಗ್ವಾಟಿಮಾಲದ ಫ್ಯುಗೋ ಜ್ವಾಲಾಮುಖಿ ಸ್ಪೋಟಗೊಳ್ಳುವುದಕ್ಕೂ ಮೊದಲು ಕೆಲ ನಿಮಿಷಗಳ ಹಿಂದೆ ಗಾರ್ಸಿಯಾ ತಮ್ಮ ಮಗಳನ್ನು ನೋಡಿದ್ದರು. ಕಂಕುಳಲ್ಲಿದ್ದ ತನ್ನ ಒಂದೂದುವರೆ ವರ್ಷದ ಪುಟ್ಟ ಕೂಸನ್ನು ನೀಲಿ ಶಾಲಿನಿಂದ ಮುಚ್ಚಿದ್ದ ಗಾರ್ಸಿಯಾರ ಮಗಳು, ಕೈಯಲ್ಲಿ ತನ್ನ ದೊಡ್ಡ ಮಗುವಿನ ಕೈಹಿಡಿದು ನಡೆಯುತ್ತಾ ಸಾಗಿದ್ದಳು. ಗಾರ್ಸಿಯಾ ತನ್ನ ಮಗಳ ಮುಖವನ್ನು ಕಂಡದ್ದು ಅದೇ ಕೊನೆಯ ಬಾರಿ.

ಯುಫೇನಿಯಾ ಗಾರ್ಸಿಯಾ.
ಯುಫೇನಿಯಾ ಗಾರ್ಸಿಯಾ.

ಭೀಕರ ಜ್ವಾಲಾಮುಖಿ ಸ್ಫೋಟದಿಂದಾಗಿ ಕಾಣೆಯಾದ ಗಾರ್ಸಿಯಾ ಕುಟುಂಬದ 20 ಮಂದಿಯಲ್ಲಿ ಅವರ ಮಗಳೂ ಕೂಡ ಒಬ್ಬಳು. ಇದುವರೆಗೂ ಇಪ್ಪತ್ತು ಜನರ ಪೈಕಿ ಗಾರ್ಸಿಯಾರ ಸಹೋದರ ಪೆಡ್ರೋರವರ ಮೃತದೇಹ ಮಾತ್ರವೇ ಪತ್ತೆಯಾಗಿದೆ.

ಕಳೆದ ಭಾನುವಾರ ಸ್ಪೋಟಗೊಂಡ ಜ್ವಾಲಾಮುಖಿಗೆ ಕಡಿಮೆ ಎಂದರೂ 69 ಜನ ಬಲಿಯಾಗಿದ್ದಾರೆ. ಅಸಂಖ್ಯಾತ ಜನ ಕಾಣೆಯಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ ಹಲವು ನೂರುಗಳನ್ನು ಮುಟ್ಟಬಹುದಾದ ನಿರೀಕ್ಷೆಯಿದೆ.

ಗಾರ್ಸಿಯಾರ ಕುಟುಂಬ ಜ್ವಾಲಾಮುಖಿಗೆ ಅತಿ ಹತ್ತಿರದಲ್ಲಿದ್ದ ಸ್ಯಾನ್‌ ಮಿಗುಯೆಲ್‌ ಲಾಸ್‌ ಲೋಟೆಸ್‌ ಎಂಬ ಗ್ರಾಮದಲ್ಲಿ ವಾಸವಿತ್ತು. ಗಾರ್ಸಿಯಾ ಕುಟುಂಬದ ಜತೆ ಸುತ್ತಮುತ್ತ ವಾಸಿಸುತ್ತಿದ್ದ ಹಲವಾರು ಜನ ಜ್ವಾಲಾಮುಖಿಯ ಶಾಖಕ್ಕೆ ಜರ್ಜರಿತರಾಗಿದ್ದರು. ಬದುಕುಳಿದವರನ್ನು 15 ಕಿಲೋ ಮೀಟರ್‌ ದೂರದಲ್ಲಿದ್ದ ಎಸ್ಕುಂಟ್ಲಾ ನಗರದ ಚರ್ಚ್‌ನಲ್ಲಿ ವಾಸ್ತವ್ಯ ಹೂಡುವಂತೆ ಒತ್ತಾಯಿಸಲಾಯಿತು. ಸಾಕಷ್ಟು ಜನ ನಿರಾಕರಿಸಿದರೂ ಕೂಡ ಒತ್ತಾಯಪೂರ್ವಕವಾಗಿ ಚರ್ಚ್‌ಗೆ ಸಾಗಿಸಲಾಯಿತು.

ಇತ್ತ ಬೂದಿಯಿಂದ ಮುಚ್ಚಿಹೋದ ಊರಿನಲ್ಲಿ ಅಲ್ಲಲ್ಲಿ ಹಳದಿ ಗೋಡೆಗಳು ಕಾಣಿಸುತ್ತಿದ್ದವು. ಮತ್ತೆ ಕೆಲವೆಡೆ ಅರ್ಧಂಬರ್ಧ ಸುಟ್ಟ ಮೇಜು, ಕುರ್ಚಿ, ಪೀಠೋಪಕರಣಗಳಿದ್ದವು. ತಾವು ನಿತ್ಯ ತಿರುಗುತ್ತಿದ್ದ ಜಾಗ ಇದೇಯೇ ಎಂಬಂತೆ ನಾಯಿಗಳು ಎಲ್ಲೆಡೆ ಗಸ್ತು ತಿರುಗುತ್ತಿದ್ದವು.

ಗಾರ್ಸಿಯಾರ ಮನೆಯಿದ್ದ ರಸ್ತೆಯಲ್ಲಿ ಬೂದಿ ಬಿಟ್ಟು ಬೇರೇನೂ ಕಾಣುತ್ತಿರಲಿಲ್ಲ. ಅವರ ಮನೆಯೂ ಕೂಡ ಸಂಪೂರ್ಣವಾಗಿ ಬೂದಿಯಲ್ಲಿ ಮುಳುಗಿತ್ತು. ಅಗ್ನಿ ಪರ್ವತ ತನ್ನೊಳಗಿನ ಬೆಂಕಿಯನ್ನು ಉಗುಳಿ ಎರಡು ದಿನಗಳಾದ ನಂತರವೂ ಕೂಡ ಕಪ್ಪು ಹೊಗೆಯನ್ನು ಕಾರುತ್ತಿತ್ತು. ಆ ಹೊಗೆ ಮೋಡಗಳ ರೂಪವನ್ನು ತಾಳಿ ಎಲ್ಲೆಡೆಗೂ ಪಸರಿಸುತ್ತಿತ್ತು.

ಈಗ ಎಸ್ಕುಂಟ್ಲಾ ನಗರದ ಚರ್ಚ್‌ನ ನಿರಾಶ್ರಿತರ ಶಿಬಿರದಲ್ಲಿರುವ ಗಾರ್ಸಿಯಾರಿಗೆ ಮಲಗಿ ನಿದ್ದೆ ಮಾಡಲೆಂದು ಚಾಪೆಯೊಂದನ್ನು ನೀಡಲಾಗಿದೆ. ಆದರೆ, “ಬಿಸಿಯೇರಿದ ವಾತಾವರಣ, ನಿರಾಶ್ರಿತರ ಗದ್ದಲ ಮತ್ತು ಸಂಬಂಧಿಗಳನ್ನು ಕಳೆದುಕೊಂಡ ನೋವಿನ ಮಧ್ಯೆ ನಿದ್ದೆಯ ಮಾತೆಲ್ಲಿ” ಎನ್ನುತ್ತಾರೆ ಗಾರ್ಸಿಯಾ.

ಸ್ವಯಂ ಸೇವಕರು ಕಪ್ಪು ಬಣ್ಣದ ಚೀಲಗಳಲ್ಲಿ ಅಹಾರ ಪದಾರ್ಥಗಳನ್ನು ತಂದು ಹಂಚುತ್ತಾರೆ. ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡು ಅವರು ಕೊಟ್ಟದ್ದನ್ನು ತಿನ್ನುವುದಾದರೂ ಹೇಗೆ ಎಂಬ ದುಃಖ ಗಾರ್ಸಿಯಾರದ್ದು.

“ಹಲವಾರು ವರ್ಷಗಳ ಕಾಲ ಫ್ಯುಗೋ ಅಗ್ನಿ ಪರ್ವತದ ನೆರಳಿನಲ್ಲಿಯೇ ಬದುಕಿದ್ದೆವು. ಹಲವಾರು ಬಾರಿ ಪರ್ವತ ಕಪ್ಪು ಹೊಗೆ ಉಗುಳುವುದನ್ನು ಕಂಡಿದ್ದೆವು. ಆದರೆ ಇಷ್ಟು ಭೀಕರವಾಗಿ ಕೆಂಡ ಉಗುಳುತ್ತದೆಂದು ನಾವೆಂದೂ ಎಣಿಸಿರಲಿಲ್ಲ,” ಎಂದು ನಿರಾಶ್ರಿತರೊಬ್ಬರು ‘ಅಲ್‌ ಜಝೀರಾ’ ಸುದ್ದಿ ವಾಹಿನಿಯ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

‘ಅಲ್‌ ಜಝೀರಾ’ ಜತೆ ಮಾತನಾಡಿದ 54ರ ಪ್ರಾಯದ ಮತ್ತೊಬ್ಬ ನಿರಾಶ್ರಿತೆ ಜೂಲಿಯಾ ಗೋಂಜಲೇಜ್‌, “ಪರ್ವತದ ಸುತ್ತ ಮೋಡಗಳು ಆವರಿಸತೊಡಗಿದ ಪ್ರಾರಂಭದಲ್ಲಿ ನಾವು ಅದನ್ನು ಅಷ್ಟು ಗಂಭಿರವಾಗಿ ಪರಿಗಣಿಸಿರಲಿಲ್ಲ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಅನಿಸಿದ ಕೂಡಲೇ ಮನೆಗಳನ್ನು ಬಿಟ್ಟು ಓಡಲು ಆರಂಭಿಸಿದ್ದೆವು,” ಎಂದರು.

“ತನ್ನ ಮಗಳು ಜುಲೀಯಾ ಕ್ರಿಸ್ಟಿನಾ ಫೋನ್‌ ಕರೆಗೆ ಉತ್ತರವನ್ನೇ ನೀಡುತ್ತಿಲ್ಲ. ಬಹುಶಃ ಆಕೆಯೂ ಕೂಡ ಬೂದಿಯ ಮಧ್ಯೆ ಮೃತಳಾಗಿರಬೇಕು,” ಎಂದು ಗದ್ಗದಿತರಾದರು ಅವರು.

ಬೂದಿಯ ಮಧ್ಯೆ ಹೂತುಹೋಗಿರುವ ಹಲವಾರು ಜನರಲ್ಲಿ 26ರ ಪ್ರಾಯದ ಮರಿಯಾ ಕ್ರಿಸ್ಟಿನಾ, ಅವರ ಪತಿ ಮಿಗುಯೆಲ್‌ ಆಂಗೆಲ್‌ ಹಾಗೂ ಅವರ 8 ತಿಂಗಳ ಹಸುಗೂಸು ಕೂಡ ಸೇರಿದ್ದಾರೆ.

ಸುಮಾರು 34 ವರ್ಷ ವಯಸ್ಸಿನ ನೋರ್ಮಾ ಅಸ್ಕೋನಾ, ಅದಾಗ ತಾನೇ ಪ್ರಾಯಕ್ಕೆ ಕಾಲಿಟ್ಟಿದ್ದ ತಮ್ಮ ಮಗ ಹಾಗೂ ಮಗಳು ಮತ್ತೆ ಸಿಗುವರೆಂಬ ಭರವಸೆಯಲ್ಲಿದ್ದಾರೆ. ತಮ್ಮ ಮಕ್ಕಳು ಯಾವುದಾದರೂ ನಿರಾಶ್ರಿತರ ಶಿಬಿರದಲ್ಲಿ ಇರಬಹುದೇ ಎಂದು ಎಲ್ಲಾ ಕೊಠಡಿಗಳನ್ನು ಹುಡುಕಿದ್ದಾರೆ. ಬೂದಿಯ ರಾಶಿಯ ಮಧ್ಯೆ ತನ್ನ ಮಕ್ಕಳು ಮುಳುಗಿ ಹೋಗಿರಬಹುದೆಂಬ ಭಯವಿದ್ದರೂ ಕೂಡ, ಬೂದಿಯಲ್ಲೇ ನನ್ನ ಮಕ್ಕಳು ಉಸಿರಿಡಿದುಕೊಂಡಿರುತ್ತಾರೆ ಎಂಬ ವಿಶ್ವಾಸವನ್ನು ನೋರ್ಮಾ ಪ್ರಕಟಿಸುತ್ತಾರೆ.

ನೋರ್ಮಾ ಅಸ್ಕೋನಾ.
ನೋರ್ಮಾ ಅಸ್ಕೋನಾ.

ನೋರ್ಮಾ ಅಸ್ಕೋನಾ, ಸ್ಯಾನ್‌ ಮಿಗುಯೆಲ್‌ ಲಾಸ್‌ ಲೊಟೆಸ್‌ ಗ್ರಾಮದಿಂದ ಸುಮಾರು 45 ನಿಮಿಷಗಳಷ್ಟು ಪ್ರಯಾಣದ ದೂರದಲ್ಲಿರುವ ಆಂಟಿಗುವಾ ನಗರದಲ್ಲಿ ಮನೆಗೆಲಸದವರಾಗಿ ದುಡಿಯುತ್ತಿದ್ದರು. ವಾರದಲ್ಲಿ ಎರಡು ಬಾರಿ ತಮ್ಮ ಗ್ರಾಮಕ್ಕೆ ಬಂದು ಮಕ್ಕಳ ಜತೆಯಿದ್ದು ಮತ್ತೆ ತೆರಳುತ್ತಿದ್ದರು.

ಭಾನುವಾರದ ದಿನ ಮಧ್ಯಾಹ್ನದ ವೇಳೆ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದರು. ತಮ್ಮ ಮಕ್ಕಳನ್ನು ನೋಡುವ ಬಯಕೆ ಅವರಲ್ಲಿತ್ತು. ಜತೆಗೆ ಮಗ ಇದೇ ಜೂನ್‌ 26ರಂದು 16ನೇ ವರ್ಷಕ್ಕೆ ಕಾಲಿಡುವವನಿದ್ದ. ಈ ಸಂಭ್ರಮವೂ ಕೂಡ ನೋರ್ಮಾರಲ್ಲಿತ್ತು.

ತಮ್ಮ ಮಕ್ಕಳು ಇನ್ನು ಬದುಕುಳಿದ್ದಿದ್ದಾರೆ ಎಂಬ ಕನಸನ್ನು ಹೊತ್ತಿಕೊಂಡಿರುವ ನೋರ್ಮಾ, “ನನ್ನ ಮಗ 1.6 ಮೀಟರ್‌ ಎತ್ತರವಿದ್ದ. ಅವನ ಮೈ ಬಣ್ಣ ತಿಳಿ ಕಂದು. ನನ್ನ ಮಗಳಿಗೆ ಉದ್ದವಾದ ಕೂದಲಿತ್ತು, ಮತ್ತು ತಿಳಿ ಬಣ್ಣವನ್ನು ಹೊಂದಿದ್ದಳು,” ಎಂದು ರಕ್ಷಣಾ ಸಿಬ್ಬಂದಿಗೆ ವಿವರಿಸುತ್ತಾರೆ.

“ನನ್ನ ಮಕ್ಕಳು ನಗಗೆ ಬೇಕು, ಅವರಿಲ್ಲದೇ ನಾನು ಬದುಕಲಾರೆ,” ಎಂದು ಗೋಳಿಡುತ್ತಾರೆ ನೋರ್ಮಾ.

“ನಾನು ಭಾನುವಾರ ಮಧ್ಯಾಹ್ನ ನನ್ನ ಮನೆಗೆ ಹೋದಾಗ ನನ್ನ ತಾಯಿ ಬಿಟ್ಟು ಬೇರೆ ಯಾರೂ ಅಲ್ಲಿರಲಿಲ್ಲ. ಆಕೆಯ ತೋಳು ಮತ್ತು ಕಾಲುಗಳು ಸುಟ್ಟುಹೋಗಿದ್ದವು, ಆದರೆ ಆಕೆಗೆ ಪ್ರಜ್ಞೆಯಿತ್ತು. ತಡ ಮಾಡದೆ ಗ್ವಾಟೆಮಾಲದ ಆಸ್ಪತ್ರೆಗೆ ಆಕೆಯನ್ನು ಸೇರಿಸಿದೆವು. ದೇವರು ಪವಾಡ ನಡೆಸಿದ, ನನ್ನ ತಾಯಿ ಬದುಕಿಕೊಂಡಳು,” ಎಂದು ನೋರ್ಮಾ ನಿಟ್ಟುಸಿರು ಬಿಡುತ್ತಾರೆ.

ಇದು ಎಸ್ಕುಂಟ್ಲಾ ನಗರದ ಚರ್ಚ್‌ನಲ್ಲಿ ತೆರೆದಿರುವ ನಿರಾಶ್ರಿತರ ಶಿಬಿರದಲ್ಲಿರುವ ಯುಫೆನಿಯಾ ಗಾರ್ಸಿಯಾ, ಜುಲಿಯಾ ಗೋಂಜಲೇಜ್‌ ಮತ್ತು ನೋರ್ಮಾ ಅಸ್ಕೋನಾರ ಕತೆಯಷ್ಟೇ ಅಲ್ಲ. ಇದೇ ರೀತಿ ತಮ್ಮ ಅಳಲನ್ನು ತೋಡಿಕೊಳ್ಳುವ 3,200 ಜನ ನಿರಾಶ್ರಿತರು ಇಲ್ಲಿದ್ದಾರೆ. ಅವರಲ್ಲಿ ಬಹಳಷ್ಟು ಜನ ತಮ್ಮ ಪ್ರೀತಿಪಾತ್ರರು ಜೀವ ಸಹಿತವಾಗಿ ಪತ್ತೆಯಾಗುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.

ಆದರೆ, ಜ್ವಾಲಾಮುಖಿ ಸ್ಪೋಟಿಸಿದ ಮೂರನೇ ದಿನವೂ ಕೂಡ ಶಾಖ ಕಡಿಮೆಯಾಗಿಲ್ಲ. ಗಾಳಿ ಬೀಸಿದ ಕಡೆಯಲ್ಲೆಲ್ಲಾ ಬೂದಿ ಆವರಿಸುತ್ತಿದೆ. ಉಸಿರಾಟಕ್ಕೆ ಶುದ್ಧ ಗಾಳಿ ಸಿಗದಂತಾಗಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಗಳು ಮತ್ತು ಪೊಲೀಸರು, ಅದೇ ಗಾಳಿಯ ಮಧ್ಯೆ ಮಾಸ್ಕ್‌ಗಳನ್ನು ಧರಿಸಿ ಕೆಲಸ ನಿರ್ವಹಿಸುವಂತಾಗಿದೆ.

ಜ್ವಾಲಾಮುಖಿ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಶೋಧ ಕಾರ್ಯ ಆರಂಭಿಸಿದ ರಕ್ಷಣಾ ಪಡೆಯ ಸಿಬ್ಬಂದಿಗಳಲ್ಲಿ ಹೆಚ್ಚಿನ ಜನರನ್ನು ಉಳಿಸುವ ಭರವಸೆಯಿತ್ತು. ಆದರೆ ಮಂಗಳವಾರ ಬೆಳಗಿನ ವೇಳೆಗೆ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರನ್ನು ಬದುಕಿಸಬೇಕೆಂಬ ಅವರ ಆಶಯ ಕುಂಟಿತಗೊಂಡಿದೆ.

ಮಾಹಿತಿ ಮೂಲ: ಅಲ್ ಜಝೀರಾ