samachara
www.samachara.com
‘ಬೀದಿಗಳಲ್ಲಿ ಶೆಲ್‌ ಬಂದು ಬೀಳುತ್ತಿವೆ’: ಯೆಮನ್‌ನ ರಂಜಾನ್‌ ಸ್ಥಿತಿ ಇದು
ವಿದೇಶ

‘ಬೀದಿಗಳಲ್ಲಿ ಶೆಲ್‌ ಬಂದು ಬೀಳುತ್ತಿವೆ’: ಯೆಮನ್‌ನ ರಂಜಾನ್‌ ಸ್ಥಿತಿ ಇದು

ರಂಜಾನ್‌ ಮಾಸ ಯೆಮನ್‌ ನಾಗರಿಕರ ಪಾಲಿಗೆ ಸಂಭ್ರಮ ತಂದಿಲ್ಲ. ಬಡತನ ಹಾಗೂ ಯುದ್ಧ ಭೀತಿಯಿಂದ ಯೆಮನ್‌ನ ಜನ ದಿನದೂಡುವಂತಾಗಿದೆ.

samachara

samachara

ಮೂರು ಮಕ್ಕಳ ತಂದೆ ಹಿಶಾಮ್‌ ಮೊಹಮದ್ ಸಲೇಹ್‌ಗೆ ತನ್ನ ಮಕ್ಕಳಿಗೆ ಇಫ್ತಾರ್‌ ಬಳಿಕ ಸಿಹಿತಿನಿಸು ಹಾಗೂ ಚಾಕೊಲೇಟ್‌ಗಳನ್ನು ಕೊಡಿಸುವ ಆಸೆ. ಮಕ್ಕಳಿಗೂ ಸಿಹಿ ತಿನಿಸು ಕೊಡಿಸುವುದಾಗಿ ಭಾಷೆ ನೀಡಿದ್ದರು. ರಂಜಾನ್ ಅಂಗವಾಗಿ ದಿನವಿಡೀ ಉಪವಾಸವಿರುವ ಮಕ್ಕಳು ಸಿಹಿ ತಿನಿಸಿಗಾಗಿ ಆಸೆಪಟ್ಟಿದ್ದರು. ಆದರೆ ಯೆಮನ್‌ನಲ್ಲಿ ಗಗನಕ್ಕೇರುತ್ತಿರುವ ಬೆಲೆಗಳು ಮತ್ತು ಯುದ್ಧ ಭೀತಿಯ ಬದುಕು ಆಸೆಪಟ್ಟಿದ್ದನ್ನು ಕೊಳ್ಳಲಾಗದ ಅಸಹಾಯಕತೆಗೆ ಅಲ್ಲಿನ ಜನರನ್ನು ದೂಡಿದೆ.

ಇದು ಸಲೇಹ್‌ ಒಬ್ಬರ ಮನೆಯ ಕತೆಯಲ್ಲ. ಯೆಮೆನ್‌ ದೇಶದ ಎರಡನೇ ಅತಿದೊಡ್ಡ ನಗರ ಎನಿಸಿರುವ ತೈಜ್‌ ನಗರದಲ್ಲಿರುವ ಸುಮಾರು ಎರಡು ಲಕ್ಷ ಜನರ ಮನೆ ಮನೆಗಳ ಕತೆ. ಹತ್ತಿರತ್ತಿರ ಮೂರು ವರ್ಷಗಳಿಂದ ತೈಜ್‌ ನಗರದ ಜನರು ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ತೈಜ್‌ ನಗರ ಹೌತಿ ಬಂಡುಕೋರರ ವಶದಲ್ಲಿರುವುದು ಹಾಗೂ ಸೌದಿ ಸರಕಾರದ ಯುದ್ಧದ ಭೀತಿ.

ತೈಜ್‌ ನಗರದಲ್ಲಿ ವಾಸಿಸುತ್ತಿರುವ ಬಹುಪಾಲು ಜನರು ಘೋರ ಬಡತನಕ್ಕೆ ದೂಡಲ್ಪಟ್ಟಿದ್ದಾರೆ. ಎಷ್ಟೋ ಜನಕ್ಕೆ ಅಗತ್ಯವಿರುವಷ್ಟು ನೀರು ಮತ್ತು ಅಹಾರ ಪದಾರ್ಥಗಳು ದೊರೆಯುತ್ತಿಲ್ಲ. ಆಸ್ಪತ್ರೆಗಳಲ್ಲಿ ಅತ್ಯಾವಶ್ಯಕವಾದ ಪರಿಕರಗಳಿಲ್ಲ. ಸೂಕ್ತ ಆರೋಗ್ಯ ಸೇವೆ ಎನ್ನುವುದು ಮರೀಚಿಕೆಯಾಗಿದೆ. ಔಷಧಿ ಮಾತ್ರೆಗಳಿಲ್ಲದೆ ರೋಗಿಗಳಿಗೆ ಅರೋಗ್ಯ ಸೇವೆಯನ್ನು ಒದಗಿಸಲು ಡಾಕ್ಟರ್‌ಗಳು ಪರದಾಡುವ ವ್ಯವಸ್ಥೆ ತೈಜ್‌ ನಗರದಲ್ಲಿ ನಿರ್ಮಾಣವಾಗಿದೆ.

“ಹೌತಿ ಬಂಡುಕೋರರ ಮುತ್ತಿಗೆ ಮತ್ತು ಉಸಿರಾಡಲೂ ಕಷ್ಟವಿರುವಂತಹ ಸಂಧರ್ಭವಿದ್ದರೂ ಕೂಡ ರಂಜಾನ್‌ ಹಬ್ಬ ಯಾವಾಗಲೂ ಸಂತೋಷವನ್ನೇ ನೀಡುತ್ತದೆ,” ಎಂದು ನೋವನ್ನು ಮರೆಯುವ ಪ್ರಯತ್ನ ಮಾಡುತ್ತಾರೆ ಹಿಶಾಮ್‌ ಮೊಹಮದ್ ಸಲೇಹ್‌ .

“ಹೌತಿ ಬಂಡುಕೋರರು ಸಿಡಿಸುವ ಶೆಲ್‌ಗಳು ನಮ್ಮ ಬೀದಿಗಳಲ್ಲಿ ಬೀಳುತ್ತಲೇ ಇರುತ್ತವೆ. ಆದರೂ ಕೂಡ ರಂಜಾನ್‌ನ ಒಂದು ತಿಂಗಳ ಅವಧಿಯಲ್ಲಿ ನಾವು ಮತ್ತು ನಮ್ಮ ಮಕ್ಕಳು ಸಂತಸವನ್ನು ಕಾಣುತ್ತೇವೆ,” ಎನ್ನುತ್ತಾರೆ ಸಲೇಹ್‌.

ಇಸ್ಲಾಂ ಸಂಪ್ರದಾಯವನ್ನು ಒಪ್ಪಿಕೊಂಡಿರುವ ಜನ ರಂಜಾನ್‌ ತಿಂಗಳನ್ನು ಹೆಚ್ಚಿನ ಸಂತಸದಿಂದ ಕಳೆಯುತ್ತಾರೆ. ದಿನವಿಡೀ ಉಪವಾಸ ನಡೆಸಿ, ಸೂರ್ಯ ಮುಳುಗುವ ವೇಳೆಗೆ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಮನೆ ಮಂದಿಯಲ್ಲಾ ಸವಿಯುತ್ತಾರೆ. ಇದೇ ಸಂಭ್ರಮವನ್ನು ಉಳಿಸಿಕೊಳ್ಳುವ ತವಕ ಸಲೇಹ್‌ ಕುಟುಂಬದ್ದು ಕೂಡಾ.

ಆದರೆ ಸಲೇಹ್‌ನಂತೆಯೇ ಕನಸು ಕಟ್ಟಿಕೊಂಡಿರುವ ಕಣ್ಣುಗಳಲ್ಲಿ ಭಯವೂ ಕೂಡ ತುಂಬಿದೆ. ಸರಿ ಸುಮಾರು ಶೇ.75ರಷ್ಟು, ಅಂದರೆ 2.2 ಕೋಟಿ ಯೆಮೆನ್‌ ನಾಗರಿಕರು ಎಲ್ಲಿಂದಾದರೂ ನೆರವು ದೊರೆಯಬಹುದೇ ಎಂದು ಹೊರಜಗತ್ತಿನ ಕಡೆಗೆ ನೋಡುತ್ತಿದ್ದಾರೆ. ಸುಮಾರು 70 ಲಕ್ಷದಷ್ಟು ಜನ ಭೀಕರ ಬರಗಾಲದಿಂದ ತತ್ತರಿಸಿದ್ದಾರೆ. ಇದೆಲ್ಲದರ ಮಧ್ಯೆಯೂ ಸಹೇಲ್‌, ಈ ಬಾರಿಯ ರಂಜಾನ್‌ ಹಿಂಸೆಯನ್ನು ತಗ್ಗಿಸಿ, ಸಹಸ್ರಾರು ಮಂದಿಯ ಸಾವನ್ನು ತಪ್ಪಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸಾಮಾನ್ಯವಾಗಿ, ರಂಜಾನ್‌ ಸಮಯದಲ್ಲಿ ಯೆಮನ್‌ ಮಂದಿ ದಿನದ ಕೊನೆಯಲ್ಲಿ ಆಹಾರ ಪದಾರ್ಥಗಳು ಮತ್ತು ಉಡುಗೊರೆಗಳನ್ನು ಕೊಳ್ಳಲು ಮುಂದಾಗುತ್ತಾರೆ. ಆದರೆ ಹಣದ ಕೊರತೆ ಎಲ್ಲರಲ್ಲೂ ಎದ್ದು ಕಾಣುತ್ತದೆ. ಜತೆಗೆ ನೆಲಕ್ಕೆ ಕುಸಿದಿರುವ ಆರ್ಥಿಕತೆಯ ಕಾರಣದಿಂದಾಗಿ ಬೆಲೆಗಳೂ ಕೂಡ ಗಗನ ಮುಟ್ಟಿವೆ. ಈ ಮಧ್ಯೆ ಇರುವ ಅಲ್ಪ ಹಣದಲ್ಲೇ ದೊರೆಯುವಷ್ಟನ್ನು ಕೊಂಡು ಅಷ್ಟರಲ್ಲೇ ರಂಜಾನ್‌ ಸಂಭ್ರಮವನ್ನು ಆಚರಿಸುವಂತಾಗಿದೆ.

ನಾಗರಿಕ ಸೇವೆಯಲ್ಲಿರುವ ಸುಮಾರು 12 ಲಕ್ಷದಷ್ಟು ಸಿಬ್ಬಂದಿಗೆ 14 ತಿಂಗಳಿಂದ ಸರಿಯಾಗಿ ಸಂಬಳ ಸಿಕ್ಕಿಲ್ಲ. ಹೌತಿ ಬಂಡುಕೋರರನ್ನು ನಿರ್ಣಾಮ ಮಾಡಲು ಪಣ ತೊಟ್ಟಿರುವ ಸೌದಿ ಸರಕಾರದ ಸೈನ್ಯಕ್ಕೆ ಸರಕಾರಿ ಸಿಬ್ಬಂದಿಯ ಸಂಬಳದ ನೆನಪಾಗುತ್ತಿಲ್ಲ.

“ಯುದ್ಧ ಮತ್ತು ಬಂಡುಕೋರರ ಮುತ್ತಿಗೆಗಳ ಪರಿಣಾಮ ದಿನ ಬಳಕೆ ವಸ್ತುಗಳ ಬೆಲೆ ಏರಿದೆ. ಜನರಿಗೆ ಸಂಬಳ ಕೂಡ ಸಿಗುತ್ತಿಲ್ಲ. ಅತಿಯಾದ ಕಷ್ಟದಿಂದ ಬದುಕು ಸಾಗಿಸುವ ಪರಿಸ್ಥಿತಿ ಬಂದೊದಗಿದೆ,” ಎನ್ನುತ್ತಾರೆ ತೈಜ್‌ ನಗರದ ನಾಗರಿಕರೊಬ್ಬರು.

ಸೌದಿ ಸರಕಾರದ ಸೈನ್ಯ 2015ರ ಮಾರ್ಚ್‌ ತಿಂಗಳಿಂದಲೂ ಹೌತಿ ಬಂಡುಕೋರರನ್ನು ಸದೆಬಡಿಯಲು ಪ್ರಯತ್ನಿಸುತ್ತಲೇ ಇದೆ. ಆದರೆ ಹೌತಿ ಬಂಡುಕೋರರಿಗೆ ಇರಾನ್‌ ನೀಡುತ್ತಿರುವ ಕುಮ್ಮಕ್ಕು ಸಾಮಾನ್ಯ ಜನರ ಬದುಕನ್ನು ಕಣ್ಣಿರಲ್ಲಿ ಕೈತೊಳೆಯುವಂತೆ ಮಾಡಿದೆ.

ಯುದ್ಧ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೂ ಸುಮಾರು 10 ಸಾವಿರದಷ್ಟು ನಾಗರೀಕರು ಪ್ರಾಣ ಕಳೆದುಕೊಂಡಿದ್ದಾರೆ. 40 ಸಾವಿರದಷ್ಟು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಸಾವು ನೋವಿಗೆ ಹೌತಿ ಬಂಡುಕೋರರಿಗಿಂತ ಸೌದಿ ನಡೆಸಿದ ವೈಮಾನಿಕ ದಾಳಿಯೇ ಕಾರಣ ಎನ್ನಲಾಗಿದೆ.

ಸೈನ್ಯ ನಡೆಸುವ ದಾಳಿಗೆ ಪ್ರತಿಕಾರವಾಗಿ ಹೌತಿಗಳು ಕೂಡ ಕ್ಷಿಪಣಿಗಳನ್ನು ಹಾರಿಸುತ್ತಾರೆ. ಸೌದಿ ಅಧಿಕಾರಿಗಳು ಹೇಳುವ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಹೌತಿ ಬಂಡುಕೋರರು 90 ಕ್ಷಿಪಣಿಗಳನ್ನು ಸೌದಿ ಕಡೆಗೆ ಹಾರಿಸಿದ್ದಾರೆ.

ಕೇವಲ ನಾಗರಿಕರ ಸ್ಥಿತಿಯಷ್ಟೇ ಅಲ್ಲ ಮಾರಾಟಗಾರರ ಸ್ಥಿತಿ ಕೂಡಾ ಯೆಮನ್‌ನಲ್ಲಿ ಕಷ್ಟಕರವಾಗಿದೆ. ಹೆಚ್ಚಿನ ಬೆಲೆಯ ವಸ್ತುಗಳ ಕೊಂಡು ತಂದು ಮಾರುವ ಸ್ಥಿತಿಯಲ್ಲಿ ಯೆಮೆನ್‌ ವ್ಯಾಪಾರಿಗಳಿಲ್ಲ.

“ಬೆಲೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಇದು ನಮಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ನನಗೆ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಕೊಳ್ಳಬೇಕು ಎನಿಸುತ್ತದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ, “ ಎನ್ನುತ್ತಾರೆ ಯೆಮನ್‌ನ ವ್ಯಾಪಾರಿಯೊಬ್ಬರು.

ಇದು ಯೆಮೆನ್‌ ದೇಶದ್ದೊಂದೇ ಕತೆಯಲ್ಲ. ಯೆಮೆನ್‌ನಂತೆಯೇ ಬಂಡುಕೋರರ, ಉಗ್ರಗಾಮಿಗಳ, ಮೂಲಭೂತವಾದಿಗಳ ಕೈಗೆ ಸಿಕ್ಕಿ ನರಳುತ್ತಿರುವ ಬಹುತೇಕ ಇಸ್ಲಾಂ ದೇಶಗಳ ಕತೆ. ರಂಜಾನ್‌ನಿಂದ ಸಾವುಗಳ ಸಂಖ್ಯೆಯಾದರೂ ಕಡಿಮೆಯಾಗಲಿ ಎಂಬ ಆಶಯ ಬಿಟ್ಟರೆ, ಸಧ್ಯಕ್ಕೆ ಪರಿಸ್ಥಿತಿ ಬದಲಾಗಬಹುದಾದ ಯಾವುದೇ ಸೂಚನೆಗಳಿಲ್ಲ.